ADVERTISEMENT

ನಿಮ್ಮ ನಗೆಯೇ ನನ್ನ ತೃಪ್ತಿ

ಅಮೃತ ಕಿರಣ ಬಿ.ಎಂ.
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ನಿಮ್ಮ ನಗೆಯೇ ನನ್ನ ತೃಪ್ತಿ
ನಿಮ್ಮ ನಗೆಯೇ ನನ್ನ ತೃಪ್ತಿ   

ಹಲೋ ಓದುಗರೇ...

ನನ್ನ ಹೆಸರು ಕಾರ್ತಿಕ್ ಪತ್ತಾರ್. ವಿಪ್ರೋದಲ್ಲಿ ಹಾರ್ಡ್‍ವೇರ್ ಎಂಜಿನಿಯರ್. ಕಲಬುರ್ಗಿ ಜಿಲ್ಲೆಯ ಕೆಂಬಾವಿ ನಮ್ಮೂರು. ಚಿಕ್ಕ ವಯಸ್ಸಿನಲ್ಲೇ ಮಿಮಿಕ್ರಿ ಮಾಡುವ ಉಮೇದು ಇತ್ತು. ನನ್ನ ಉತ್ಸಾಹಕ್ಕೆ ನೇರು ಎರೆದದ್ದು ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ. ಶಾಲೆಯಲ್ಲಿ ನಾನು ಮಾಡುತ್ತಿದ್ದ ಹಾಸ್ಯ, ಹಾರಿಸುತ್ತಿದ್ದ ನಗೆ ಚಟಾಕಿ, ಎಲ್ಲರನ್ನೂ ನಗಿಸಿ- ನಾನು ಬೆರಗಾಗುತ್ತಿದ್ದ ಪರಿಗೇ ಸ್ಟಾಂಡಪ್ ಕಾಮಿಡಿ ಎನ್ನುತ್ತಾರೆ ಎನ್ನುವುದು ನನಗೆ ಆಗ ಗೊತ್ತಿರಲಿಲ್ಲ. ಎಂಟನೇ ತರಗತಿ ಇದ್ದಾಗ ಹಾಸ್ಯ ಕಾರ್ಯಕ್ರಮದಲ್ಲಿ ರಾಜ್ಯಕ್ಕೆ ಮೊದಲಿಗನಾಗಿ ಪ್ರಶಸ್ತಿ ಪಡೆದಿದ್ದೆ. ರಾಜ್ಯೋತ್ಸವ, ಗಣೇಶೋತ್ಸವಗಳಲ್ಲಿ ಕಾರ್ಯಕ್ರಮ ಕೊಡಲು ಆಹ್ವಾನ ಬರುತ್ತಿದ್ದವು.

ಜೀ ಕನ್ನಡದಲ್ಲಿ ಆರಂಭದಲ್ಲಿ ಬಂದ ‘ಕಾಮಿಡಿ ಕಿಲಾಡಿ ಚಿಲ್ಡ್ರನ್ ಸ್ಪೆಷಲ್’ ನನ್ನ ಮೊದಲ ಟಿ.ವಿ. ಕಾರ್ಯಕ್ರಮ. ಬಳಿಕ ಕಸ್ತೂರಿ ಟಿ.ವಿಯಲ್ಲಿ 'ಕಿರಿಕ್ ಪಾರ್ಟಿ' ಪ್ರಸಾರಾಯಿತು. ಈಗ 'ಲೋಲ್‍ಬಾಗ್‍'ನಲ್ಲಿ ತೊಡಗಿಸಿಕೊಂಡಿದ್ದೇನೆ. ನಮ್ಮ ಕಾಮಿಡಿಗಳು ಶೀಘ್ರ ಯುಟ್ಯೂಬ್‌ಗೆ ಬರಲಿವೆ.

ADVERTISEMENT

ಸ್ಟ್ಯಾಂಡಪ್ ಕಾಮಿಡಿ ಕನ್ನಡಕ್ಕೆ ಹೊಸದೇನಲ್ಲ. ಗಂಗಾವತಿ ಪ್ರಾಣೇಶ್ ಸೇರಿದಂತೆ ಹಲವು ಹಿರಿಯರು ಈ ಪರಿಕಲ್ಪನೆಗೆ ಹೊಸ ಸ್ಪರ್ಶ ಕೊಟ್ಟು ಜನಪ್ರಿಯಗೊಳಿಸಿದರು. ಅವರ ಹಾಸ್ಯವು ಸಾಹಿತ್ಯದೊಂದಿಗೆ ಹೊಸೆದಿರುತ್ತದೆ. ಬೆಂಗಳೂರಿನಲ್ಲಿ ಈಚೆಗೆ ನಗರದ ನಿತ್ಯ ಬದುಕಿನ ಸನ್ನಿವೇಶಗಳಿಗೆ ಹಾಸ್ಯದ ಲೇಪನ ನೀಡಿ ಸಾದರಪಡಿಸುವ ಕಲೆ ಜನಪ್ರಿಯವಾಗುತ್ತಿದೆ. ಇಂಥ ಕಲಾವಿದರನ್ನು ಸ್ಟ್ಯಾಂಡಪ್ ಕಾಮಿಡಿಯನ್‌ಗಳು ಎನ್ನುತ್ತಾರೆ.

ನಮ್ಮ ಹಾಸ್ಯದಲ್ಲಿ ಕಾಲೇಜಿನ ತರಲೆ ಇರುತ್ತೆ. ಐಟಿ ಕ್ಷೇತ್ರದ ಜಂಜಡದಲ್ಲೂ ಹಾಸ್ಯದ ಹೊಳಹು ತೋರಿಸಲಾಗುತ್ತದೆ. ನಗರದ ಜನರಿಗೆ ಇವು ನೇರಾನೇರ ಹೊಂದುತ್ತವೆ. ನಗರ ಜೀವನ ಹಾಗೂ ಪ್ರಚಲಿತ ಘಟನೆಗಳಿಂದಲೇ ನಾವು ನಮ್ಮ ಹಾಸ್ಯ ಸನ್ನಿವೇಶಗಳಿಗೆ ಹೂರಣ ಹುಡುಕಿಕೊಳ್ಳುತ್ತೇವೆ.

ಬೆಂಗಳೂರಿನಲ್ಲಿ ನಾವು ಒಂದಿಷ್ಟು ಮಂದಿ ಆಸಕ್ತರು ಲೋಲ್‍ಬಾಗ್ ಎಂಬ ಸ್ಟ್ಯಾಂಡಪ್ ಕಾಮಿಡಿ ತಂಡ ಕಟ್ಟಿಕೊಂಡು ಈವರೆಗೆ 35ಕ್ಕೂ ಹೆಚ್ಚು ಕಾರ್ಯಕ್ರಮ ನೀಡಿದ್ದೇವೆ. ಕಳೆದ ಡಿಸೆಂಬರ್‍ನಲ್ಲಿ ಆರಂಭವಾದ ನಮ್ಮ ತಂಡಕ್ಕೆ ಹಾಸ್ಯಾಸಕ್ತರಿಂದ ಭಾರಿ ಮೆಚ್ಚುಗೆ ಸಿಕ್ಕಿದೆ. ನಾನು ಈ ತಂಡಕ್ಕೆ ಸೇರಿಕೊಂಡ ಸಂದರ್ಭವೂ ವಿಶಿಷ್ಟ. 'ಓಪನ್ ಮೈಕ್' ಎಂಬ ಚಿಕ್ಕ ಆಡಿಷನ್ ನಲ್ಲಿ ನಾನು ಉಣಬಡಿಸಿದ ಹಾಸ್ಯವನ್ನು ಮೆಚ್ಚಿಕೊಂಡ ‘ಕನ್ನಡ ಗೊತ್ತಿಲ್ಲ ಡಾಟ್ ಕಾಮ್’ನ ಅನೂಪ್ ಮಯ್ಯ ನನ್ನನ್ನು ತಂಡಕ್ಕೆ ಆಹ್ವಾನಿಸಿದರು. ಈಗ ನಾನು ತಂಡದ ಭಾಗವೇ ಆಗಿಹೋಗಿದ್ದೇನೆ.

(ಲೋಲ್‌ಬಾಗ್ ತಂಡ)

ಪ್ರೇಕ್ಷಕರಿಗೆ ಪಂಚ್

ಸಿನಿಮಾಗಳಲ್ಲಿ ಬರುವ ಹಾಸ್ಯವು ಸನ್ನಿವೇಶಕ್ಕೆ ತಕ್ಕಂತೆ ಇರುತ್ತದೆ. ರೀಟೇಕ್ ಮಾಡಿಯೇ ಅದನ್ನು ಕಟ್ಟಿಕೊಡುತ್ತಾರೆ. ಆದರೆ ಸ್ಟಾಂಡಪ್‌ ಕಾಮಿಡಿ ಹಾಗಲ್ಲ. ಇಲ್ಲಿ ಪ್ರೇಕ್ಷಕನ ಎದುರು ನೇರವಾಗಿ ಸಂವಾದಕ್ಕಿಳಿಯಬೇಕು. ಅವರ ನಗುವೇ ನಮಗೆ ಸ್ಪೂರ್ತಿ. ನಮ್ಮ ಒಂದು ಪಂಚ್‍ಗೆ ಜನರು ನಗುವಿನಲ್ಲಿ ತೇಲುತ್ತಾರೆ. ಅದು ಮುಗಿಯುವ ಮೊದಲೇ ಮತ್ತೊಂದು ಪಂಚ್ ಕೊಟ್ಟು ಅವರನ್ನು ಚಕಿತಗೊಳಿಸುತ್ತೇವೆ. ಇದು ನಾವು ಎದುರಿಸುವ ದೊಡ್ಡ ಸವಾಲು ಇರುತ್ತದೆ.

ಕೆಲವೊಮ್ಮೆ ಇದು ಸಂವಾದ ರೂಪಕ್ಕೂ ತಿರುಗಿಬಿಡುತ್ತದೆ. ಜನರು ಪ್ರಸ್ತಾಪಿಸಿದ್ದನ್ನು ಹಾಸ್ಯದ ಮೂಲಕವೇ ಅವರಿಗೆ ಹಿಂದಿರುಗಿಸಬೇಕು. ಜನರು ಸಂತಸಪಡುವುದನ್ನು ನೋಡಿದಾಗ ನಿಜಕ್ಕೂ ನಮ್ಮ ಶ್ರಮ ಸಾರ್ಥಕ ಎನಿಸುತ್ತದೆ.

ಯುಟ್ಯೂಬ್ ನೋಡಿ ವೆಂಟ್ರಿಲಾಕಿಸಮ್ (ಗೊಂಬೆ ಮಾತು, ಎಲ್ಲಿಂದಲೋ ಧ್ವನಿ ಬಂದಂತೆ ಮಾಡುವ ಕಲೆ) ಕಲಿತೆ.  ಐದಾರು ತಿಂಗಳ ಪರಿಶ್ರಮದಿಂದ ಇದು ಒಲಿದಿದೆ. ಸ್ಟಾಂಡಪ್ ಕಾಮಿಡಿ ಜೊತೆ ಅದನ್ನೂ ಪ್ರದರ್ಶಿಸುತ್ತೇನೆ. ಗಂಟಲನ್ನು ಒಂದಿಷ್ಟು ದುಡಿಸಿದರೆ ಇದು ಏನೂ ಕಷ್ಟವಲ್ಲ.

ಕಾರ್ತಿಕ್ ಪತ್ತಾರ್ ಸಂಪರ್ಕ ಸಂಖ್ಯೆ- 96326 50741

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.