ADVERTISEMENT

‘ನೀನಿರುವಾಗ ನನ್ನನ್ನು ಕೊಲ್ಲೋರು ಯಾರು ಮಾವ’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2017, 19:30 IST
Last Updated 17 ಮಾರ್ಚ್ 2017, 19:30 IST
‘ನೀನಿರುವಾಗ ನನ್ನನ್ನು ಕೊಲ್ಲೋರು ಯಾರು ಮಾವ’
‘ನೀನಿರುವಾಗ ನನ್ನನ್ನು ಕೊಲ್ಲೋರು ಯಾರು ಮಾವ’   

ಉತ್ತರ ಪ್ರದೇಶ ಚುನಾವಣೆ ಪ್ರಚಾರ ಭಾಷಣವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರೂ ‘ಬಾಹುಬಲಿಯನ್ನು ಕಟ್ಟಪ್ಪ ಕೊಂದನೇಕೆ?’ ಕಥನವನ್ನು ಉಲ್ಲೇಖಿಸಿದ್ದರು. ಇದು ರಾಷ್ಟ್ರೀಯ ಮಾಧ್ಯಮಗಳಲ್ಲಿ ಸುದ್ದಿಯಾದ ಬೆನ್ನಿಗೇ ಬುದ್ಧಿವಂತ ನಿರ್ದೇಶಕ ರಾಜಮೌಳಿ ‘ಬಾಹುಬಲಿ–2’ ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ಟ್ರೇಲರ್‌ ಮಾರ್ಚ್‌ 15ರಂದು ಯುಟ್ಯೂಬ್‌ಗೆ ಅಪ್‌ಲೋಡ್ ಆಗುವುದರ ಜತೆಗೆ ಈಗಾಗಲೇ ಥಿಯೇಟರ್‌ಗಳಲ್ಲಿಯೂ ಸ್ಕ್ರೀನಿಂಗ್‌ ಆಗುತ್ತಿದೆ. ಯುಟ್ಯೂಬ್‌ನಲ್ಲಿ ಈವರೆಗೆ 2.5 ಕೋಟಿ ಮಂದಿ ನೋಡಿದ್ದಾರೆ. ಸುಮಾರು 5.5 ಲಕ್ಷ ಮಂದಿ ಲೈಕ್ ಮಾಡಿದ್ದಾರೆ.

‘ಬಾಹುಬಲಿ–1’ರ ಕ್ಲೈಮ್ಯಾಕ್ಸ್‌ ಇಂದಿಗೂ ಜನರ ಮನದಿಂದ ಮಾಸಿಲ್ಲ. ನಟಿ ತಮನ್ನಾರ ಮುದ್ದು ಮುಖ, ಮೋಡಿ ಮಾಡುವ ಗ್ರಾಫಿಕ್ಸ್‌ ಮತ್ತು ಮುದ ನೀಡುವ ಸಂಗೀತದ ಹಿನ್ನೆಲೆಯಲ್ಲಿಯೇ ‘ಬಾಹುಬಲಿ–2’ರ ಟ್ರೇಲರ್‌ಗೆ ಜನರು ಕಾಮೆಂಟ್‌ ಹಾಕುತ್ತಿದ್ದಾರೆ.

ಪ್ರತಿನಾಯಕನಾಗಿ ಮಿಂಚಿರುವ ರಾನಾ ದಗ್ಗುಬಾಟಿಯ ಆಕರ್ಷಕ ಮೈಕಟ್ಟು, ನಾಯಕನ ಪಾತ್ರದಲ್ಲಿ ಮಿಂಚಿರುವ ಪ್ರಭಾಸ್‌ ಪರಸ್ಪರ ಪೈಪೋಟಿಗೆ ಬಿದ್ದಂತೆ ನಟಿಸಿರುವುದನ್ನು ಕಣ್ತುಂಬಿಕೊಂಡಿರುವ ಪ್ರೇಕ್ಷಕರು ಪೂರ್ಣ ಚಿತ್ರ ನೋಡಲು ತುದಿಗಾಲಲ್ಲಿ ನಿಂತಿದ್ದಾರೆ.

‘ಅರುಂಧತಿ’, ‘ರುದ್ರಮಾದೇವಿ’ಯಲ್ಲಿ ರಾಜಕುಮಾರಿಯಾಗಿ ಅನುಷ್ಕಾ ಶೆಟ್ಟಿಯನ್ನು ಒಪ್ಪಿಕೊಂಡಿದ್ದ ಅಭಿಮಾನಿಗಳಿಗೆ ‘ಬಾಹುಬಲಿ–1’ ನಿರಾಸೆ ಮಾಡಿತ್ತು. ಆದರೆ ‘ಬಾಹುಬಲಿ –2’ ಅದನ್ನು ತುಂಬಿಕೊಟ್ಟಿರುವ ಸಾಧ್ಯತೆಯನ್ನು ಟ್ರೇಲರ್ ಬಿಂಬಿಸಿದೆ.

ಫ್ಯಾಂಟಸಿಗಂತೂ ಏನೇನೂ ಕಡಿಮೆಯಿಲ್ಲ. ‘ನೀನಿರುವಾಗ ನನ್ನನ್ನು ಕೊಲ್ಲೋರು ಯಾರು ಮಾವ’ ಎಂದು ಅಮರೇಂದ್ರ ಬಾಹುಬಲಿಯಾಗಿ ಪ್ರಭಾಸ್ ಕೂಗಿ ಹೇಳುವ ಡೈಲಾಗ್‌ ಪ್ರೇಕ್ಷಕರ ಮನದಲ್ಲಿ ಅಚ್ಚೊತ್ತುವಂತಿದೆ. ಏಪ್ರಿಲ್‌ 28ಕ್ಕೆ ಚಿತ್ರ ಬಿಡುಗಡೆಯಾಗಲಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.