ADVERTISEMENT

ಪಾರಂಪರಿಕ ವಿನ್ಯಾಸಕ್ಕೆ ಹೊಸ ಸ್ಪರ್ಶ

ವಿದ್ಯಾಶ್ರೀ ಎಸ್.
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ಪಾರಂಪರಿಕ  ವಿನ್ಯಾಸಕ್ಕೆ ಹೊಸ ಸ್ಪರ್ಶ
ಪಾರಂಪರಿಕ ವಿನ್ಯಾಸಕ್ಕೆ ಹೊಸ ಸ್ಪರ್ಶ   

ನಿಮ್ಮ ಓದು ಹಾಗೂ ವೃತ್ತಿಯ ಹಿನ್ನೆಲೆ ತಿಳಿಸಿ?
ದೆಹಲಿಯ ಎನ್‌ಐಎಫ್‌ಟಿಯಲ್ಲಿ ಆಕ್ಸಸರಿಸ್‌ ಡಿಸೈನ್‌ನಲ್ಲಿ ಪದವಿ ಪಡೆದಿದ್ದೇನೆ. ಅಮೆರಿಕದ ಜಿಯೊಮಾಜಿಕಲ್‌ ಇನ್‌ಸ್ಟಿಟ್ಯೂಷನ್‌ನಲ್ಲಿ ಉನ್ನತ ಅಧ್ಯಯನ ಮಾಡಿದ್ದೇನೆ. 2011ರ ಸೌತ್ ಇಂಡಿಯಾ ಜ್ಯುವೆಲ್ಲರಿ ಶೋದಲ್ಲಿ ಪ್ರತಿಷ್ಠಿತ ‘ದಿ ಬೆಸ್ಟ್ ಡಿಸೈನರ್’ ಪ್ರಶಸ್ತಿ ದೊರಕಿತ್ತು. ಲೀಲಾ ಪ್ಯಾಲೆಸ್‌ನಲ್ಲಿ ಪಲ್ಲವಿ ಫೊಲೆ ಬೋಟಿಕ್ ಜ್ಯುವೆಲ್ಸ್ ಮಳಿಗೆ ಪ್ರಾರಂಭಿಸಿದ್ದೇನೆ. ಈಗ ಬ್ಲೂಸ್ಟೋನ್‌ಗೆ ವಿನ್ಯಾಸ ಮಾಡುತ್ತಿದ್ದೇನೆ.

ನಿಮ್ಮ ವಿನ್ಯಾಸದ ವಿಶೇಷ?
ಸಾಂಪ್ರದಾಯಿಕ ಹಾಗೂ ಸಮಕಾಲೀನ ಶೈಲಿಗಳು ಸಮ್ಮಿಶ್ರಣಗೊಂಡ ಆಭರಣ ಶೈಲಿ ನನ್ನ ವಿಶೇಷ. ನಾವು ಭಾರತೀಯರು, ಬಾಲ್ಯದಿಂದಲೂ ಸಾಂಪ್ರದಾಯಿಕ ಮೌಲ್ಯಗಳ ಪ್ರಭಾವ ನಮ್ಮನ್ನು ಆವರಿಸಿಕೊಂಡಿರುತ್ತದೆ. ದೊಡ್ಡವರಾದಂತೆ ಪ್ರಾಯೋಗಿಕ ಅವಲೋಕನ ಆರಂಭಿಸುತ್ತೇವೆ. ಆದರೆ ಸಂಪ್ರದಾಯವನ್ನು ಮರೆಯುವುದಿಲ್ಲ. ಇವೆರಡರ ಪ್ರಭಾವಗಳನ್ನು ವಿನ್ಯಾಸದಲ್ಲಿ ಅಳವಡಿಸಿಕೊಂಡಿದ್ದೇನೆ.

ಆಧುನಿಕ ಉಡುಪಿಗೂ ಸಾಂಪ್ರದಾಯಿಕ ಆಭರಣ ಒಗ್ಗಿಸಿದ್ದೀರಿ...
ಆಧುನಿಕ ಉಡುಪಿಗೆ ಆಭರಣ ಧರಿಸುವುದು ಸೂಕ್ತವಲ್ಲ ಎಂಬ ಭಾವನೆ ನಮ್ಮಲ್ಲಿದೆ. ಇದು ಸರಿಯಲ್ಲ ಎಂಬ ಸಿದ್ಧಾಂತ ನನ್ನದು. ಹಾಗಾಗಿ ನಾನು ಎಲ್ಲಾ ಬಗೆಯ ಉಡುಪುಗಳಿಗೂ ಹೊಂದುವಂತಹ ಆಭರಣ ವಿನ್ಯಾಸ ಮಾಡುತ್ತೇನೆ. ಸಾಂಪ್ರದಾಯಿಕ ಶೈಲಿಯ ಆಭರಣವನ್ನೇ ಆಧುನಿಕವಾಗಿ ವಿನ್ಯಾಸ ಮಾಡುವುದರಿಂದಲೇ ಅದು ಬಹು ಜನರನ್ನು ಆಕರ್ಷಿಸಿದೆ. ಬೈತಲೆ ಬೊಟ್ಟು, ತೋಳು ಬಂಧಿಯನ್ನು ಸಾಮಾನ್ಯವಾಗಿ ಸಾಂಪ್ರದಾಯಿಕ ಉಡುಪಿಗಷ್ಟೇ ಹಾಕುತ್ತಾರೆ. ಆದರೆ ನಾನು ಇದನ್ನು ಆಧುನಿಕ ಉಡುಪಿಗೂ ಸರಿಹೊಂದುವಂತೆ ವಿನ್ಯಾಸ ಮಾಡಿದ್ದೇನೆ.

ADVERTISEMENT

ನಿಮ್ಮ ವಿನ್ಯಾಸಕ್ಕೆ ಸ್ಫೂರ್ತಿ?
ಪ್ರಕೃತಿಯೇ ಬಣ್ಣಗಳ ಸಂಯೋಜನೆಗೆ ನೆರವಾಗಿದೆ. ಉತ್ತರಾಖಂಡದ ಶೆರ್‌ವುಡ್‌ ಕಾಲೇಜಿನಲ್ಲಿ ಓದುತ್ತಿದ್ದಾಗ ಅಲ್ಲಿಯ ಪರಿಸರ ನನ್ನನ್ನು ಸೆಳೆಯಿತು. ಮೊದಲಿನಿಂದಲೂ ನನಗೆ ಕಲೆಯ ಬಗ್ಗೆ ಆಸಕ್ತಿ. ಕಲೆಯಿಲ್ಲದೆ ಆಭರಣಗಳಿಲ್ಲ. ದೇಸಿ ಸಂಸ್ಕೃತಿ, ಕುಶಲಕರ್ಮಿಗಳ ಚಾಕಚಕ್ಯತೆ ಎಂಥವರನ್ನೂ ಸೆಳೆಯುತ್ತದೆ. ಅವುಗಳ ಬಗ್ಗೆ ಅರಿವು ಹೆಚ್ಚಾದಂತೆ ನನ್ನ ಒಳಗಿದ್ದ ಆಭರಣ ವಿನ್ಯಾಸದ ಪರಿಕಲ್ಪನೆಗಳ ಅರಿವೂ ವಿಸ್ತಾರವಾಯಿತು. ಆಭರಣವನ್ನು ನಾನು ವಸ್ತುವಾಗಿ ಮಾತ್ರವೇ ನೋಡುವುದಿಲ್ಲ. ಭಾರತೀಯ ಸಂಸ್ಕೃತಿಯನ್ನು ಅದರಲ್ಲಿ ಕಂಡುಕೊಳ್ಳುತ್ತೇನೆ.

ನಿಮ್ಮಿಷ್ಟದ ವಿನ್ಯಾಸಕಾರರು...
ಇಟಲಿಯಾ ಒರ್ಲಾಡೊ ಒರ್ಲಾಂಡಿ. ಅವರ ವಿನ್ಯಾಸ ಸರಳವಾಗಿರುವುದರ ಜೊತೆಗೆ ಆಕರ್ಷಕವಾಗಿರುತ್ತವೆ.

‘ಆಭರಣ ಎನ್ನುವುದು ಒಂದು ಸ್ಟೈಲ್‌ ಸ್ಟೇಟ್‌ಮೆಂಟ್‌’ ಈ ಮಾತಿನ ಬಗ್ಗೆ ನಿಮ್ಮ ಅಭಿಪ್ರಾಯ...
ಇದನ್ನು ನಾನು ಒಪ್ಪುತ್ತೇನೆ. ಹಲವು ವರ್ಷಗಳ ಕಾಲ ನಮ್ಮೊಂದಿಗಿರುವ ವಸ್ತುವದು. ಒಬ್ಬ ವ್ಯಕ್ತಿಯನ್ನು ಕಂಡಾಗ ಅವರು ಧರಿಸಿದ ಆಭರಣದ ಕಡೆಗೆ ಕಣ್ಣು ಹೋಗುತ್ತದೆ. ಎಲ್ಲಿ ಕೊಂಡರು? ಬೆಲೆ ಎಷ್ಟಾಗಿರಬಹುದು? ಈ ಕಾರ್ಯಕ್ರಮಕ್ಕೆ ಹಾಕಲು ಕಾರಣ... ಹೀಗೆ ನಮ್ಮ ಮನಸ್ಸಿನಲ್ಲಿ ಹಲವು ಪ್ರಶ್ನೆಗಳು ಹುಟ್ಟಿಕೊಳ್ಳುತ್ತವೆ. ನಮ್ಮ ದೇಹ ಮತ್ತು ಕಾರ್ಯಕ್ರಮಗಳ ಸಂದರ್ಭಕ್ಕೆ ಒಪ್ಪುವಂತೆ ಆಭರಣ ಧರಿಸುವುದು ಒಂದು ನಿರ್ಧಾರ. ಅಷ್ಟು ಸಮಾಧಾನ, ವ್ಯವಧಾನ ಅದಕ್ಕೆ ಇರಬೇಕು. ತಮ್ಮ ವೈಯಕ್ತಿಕ ಅಭಿರುಚಿಯನ್ನು ಆಭರಣದ ಮೂಲಕ ಅಭಿವ್ಯಕ್ತಿಸಲು ಸಾಧ್ಯ ಎಂಬುದನ್ನು ಮಹಿಳೆಯರು ಕಂಡುಕೊಳ್ಳುತ್ತಿದ್ದಾರೆ.

‘ದಿ ಫ್ಲೇಮ್‌ ಆಫ್‌ ದಿ ಫಾರೆಸ್ಟ್‌’ ಸಂಗ್ರಹದ ಬಗ್ಗೆ ತಿಳಿಸಿ?
ಬ್ಲೂಸ್ಟೋನ್‌ ಜೊತೆಯಾಗಿ ಈ ಸಂಗ್ರಹವನ್ನು ಪರಿಚಯಿಸುತ್ತಿದ್ದೇನೆ. ಹದಿನೇಳು ವರ್ಷಗಳ ಹಿಂದೆ ನಗರದಲ್ಲಿ ಕಾರಿನಲ್ಲಿ ಹೋಗುತ್ತಿದ್ದಾಗ ಎಲ್ಲೆಡೆ ಮರ, ಹೂವುಗಳು ಕಾಣಿಸುತ್ತಿತ್ತು. ಅವುಗಳೇ ಈ ವಿನ್ಯಾಸಕ್ಕೆ ಸ್ಫೂರ್ತಿ.

ನಿಮ್ಮ ವಿನ್ಯಾಸದ ಸಿದ್ಧಾಂತ...
ಫ್ಯಾಷನ್ ಪ್ರತಿದಿನ ಬದಲಾಗುತ್ತದೆ. ಹೊಸತನ್ನು ಆಹ್ವಾನಿಸುವುದು ಅದರ ಗುಣ. ನವೀನ ವಿನ್ಯಾಸದ ಮೂಲಕ ಜನರನ್ನು ತಲುಪಬೇಕು. ಹಳೆಯ ಕುಶಲಕರ್ಮಿಗಳ ಪರಿಶ್ರಮವನ್ನು ಸಮಕಾಲೀನ ವಿನ್ಯಾಸಗಳ ಟ್ರೆಂಡ್‌ಗೆ ಒಗ್ಗಿಸಿ, ಜನರ ಬಳಿ ಕೊಂಡೊಯ್ಯಬೇಕು.

ನಿಮ್ಮಿಷ್ಟದ ನೀವೇ ವಿನ್ಯಾಸ ಮಾಡಿದ ಆಭರಣ?
ಗಾಯತ್ರಿ ಮಂತ್ರದಿಂದ ಸ್ಫೂರ್ತಿ ಪಡೆದು ವಿನ್ಯಾಸ ಮಾಡಿರುವ ಮಿನಿಯೇಚರ್‌ ಆಭರಣ. ಹನ್ನೆರಡು ವಿವಿಧ ಪ್ರಾರ್ಥನೆಗಳಿಂದ ಪ್ರೇರಣೆ ಪಡೆದು ಇದನ್ನು ತಯಾರಿಸಿದ್ದೇನೆ. ಜಪಾನ್, ಇಟಲಿ ಸೇರಿದಂತೆ ಹಲವು ದೇಶಗಳ ಗ್ರಾಹಕರಿಗೂ ಈ ವಿನ್ಯಾಸ ಇಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.