ADVERTISEMENT

ಪುಸ್ತಕಗಳನ್ನು ಖರೀದಿಸಿಯೇ ಓದಿ, ಜೊತೆಗಿರಿಸಿಕೊಳ್ಳಿ

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST
ಪುಸ್ತಕದಂಡಗಿ ಕಿರುಚಿತ್ರದ ದೃಶ್ಯ
ಪುಸ್ತಕದಂಡಗಿ ಕಿರುಚಿತ್ರದ ದೃಶ್ಯ   

ಜೀವನ ಇರೋದೇ ಮಜಾ ಮಾಡೋಕೆ ಅನ್ನುವುದು ಕೆಲವರ ಮಾತು. ಅದನ್ನು ಸಿದ್ದಾಂತವೆಂಬಂತೆ ಭಾವಿಸಿಯೇ ಬದುಕುವವರಿದ್ದಾರೆ. ದೇಹದ ಅಂದ ಹೆಚ್ಚಿಸುವ ವಸ್ತುಗಳಿಗಾಗಿ ಸಾವಿರಾರು ರೂಪಾಯಿ ವ್ಯಯಿಸುವ ಜನರು, ಜ್ಞಾನ ಹೆಚ್ಚಿಸುವ ಪುಸ್ತಕಗಳನ್ನು ಕೊಂಡುಕೊಳ್ಳಲು ಸಾವಿರ ಸಲ ಯೋಚಿಸುತ್ತಾರೆ.

ಇಂತಹದೊಂದು ಮನಸ್ಥಿತಿಯನ್ನು ವಿಷಯವಾಗಿರಿಸಿಕೊಂಡು ತಯಾರಾದ ‘ಪುಸ್ತಕದಂಗಡಿ’ ‘ವಿಶ್ವ ಪುಸ್ತಕ ದಿನ’ದಂದು ಬಿಡುಗಡೆಯಾಗಿದೆ. ‘ಕಟ್ಟುಕತೆ ಕ್ರಿಯೇಷನ್ಸ್‌’ ನಿರ್ಮಿಸಿರುವ ಈ ಚಿತ್ರ 4 ನಿಮಿಷಗಳ ಅವಧಿಯದ್ದು. ಹೊಸವರ್ಷದ ಪಾರ್ಟಿ ಮುಗಿಸಿ ವಾರ ಕಳೆದರೂ ಗೋವಾ ಗುಂಗಿನಲ್ಲೇ ಇರುವ ಸ್ನೇಹಿತ ಶರತ್‌ ಪುಸ್ತಕ ಪ್ರೇಮಿಯ ಮನೆಗೆ ಬಂದಾಗ ನಡೆಯುವ ಸಣ್ಣ ಸಂಭಾಷಣೆ ಚಿತ್ರದಲ್ಲಿದೆ.

ಬದುಕನ್ನು ರಸಮಯವಾಗಿ ಕಳೆಯಬೇಕು ಎಂಬುದು ಶರತ್‌ ಆಲೋಚನೆ. ಪಾರ್ಟಿ ಖರ್ಚಿಗಾಗಿ ಲಕ್ಷ ರೂ ಕಳೆದು ಬಂದಿದ್ದ ಆಸಾಮಿ ಆತ. ಲಕ್ಷವೆಂದಾಕ್ಷಣ ಅಚ್ಚರಿಗೊಂಡ ಪುಸ್ತಕಪ್ರೇಮಿಯೆದುರು ಆತನದು ಸಾರ್ಥಕ ಭಾವದ ನಗು. ಗಂಟೆಗಟ್ಟಲೆ ಹರಟಿ, ಮಾತು ಮುಗಿಸಿ ಹೊರಡುವ ವೇಳೆ ಓದಿ ವಾಪಸ್‌ ಕೊಡುವುದಾಗಿ ಕೆಲವು ಪುಸ್ತಕಗಳನ್ನು ಕೇಳುವ ಶರತ್‌ಗೆ ಪುಸ್ತಕ ಪ್ರೇಮಿ ಹೇಳುವ ಮಾತು ಮನ ಮುಟ್ಟುತ್ತದೆ.

ADVERTISEMENT

ಕೂಡಿಟ್ಟಿದ್ದ ಹುಂಡಿ ಒಡೆದು ಅದರಲ್ಲಿದ್ದ ಚಿಲ್ಲರೆಯನ್ನೆಲ್ಲ ಬೊಗಸೆಯಲ್ಲಿ ಹಿಡಿದು, ’... ತಿಂದು ಕುಡಿದು ಪಾರ್ಟಿ ಮಾಡೋ ದೊಡ್‌ದೊಡ್‌ ಆಸೆಗಳು ನನಗಿಲ್ಲ. ನಾನು ಒಂದೊಂದು ರುಪಾಯಿ ಜೋಡ್ಸಿ ತಕೊಂಡಿರೋ ಈ ಎಲ್ಲಾ ಪುಸ್ತಕಗಳೂ ನನ್‌ ಜೊತೆನೇ ಇರಬೇಕು ಅನ್ನೋ ಬಯಕೆ ನಂದು’ ಎನ್ನುತ್ತಾನೆ. ಮುಂದುವರಿದು, ಈ ಹಣವನ್ನೆಲ್ಲ ಕೊಂಡೊಯ್ದು ಪುಸ್ತಕಕೊಳ್ಳುವ ಸಲಹೆ ನೀಡುತ್ತಾನೆ. ಅಷ್ಟರಲ್ಲಿ ಮೌನ ಆವರಿಸಿ ಕತ್ತಲು ಕವಿಯುತ್ತದೆ.

ನಾಡಿನ ಕೆಲವು ಹೆಸರಾಂತ ಪುಸ್ತಕ ಮಳಿಗೆಗಳ ಚಿತ್ರಗಳು ಪರದೆ ಮೇಲೆ ಮೂಡುತ್ತಾ ಸಾಗಿದಂತೆ, ಇನ್ನೊಬ್ಬರಿಂದ ಪಡೆಯಬಹುದಾದ ಎಲ್ಲ ಪುಸ್ತಕಗಳೂ ಪುಸ್ತಕದಂಗಡಿಗಳಲ್ಲಿ ದೊರೆಯುತ್ತವೆ. ಓದಿ ವಾಪಸ್‌ ಕೊಡುವುದರ ಬದಲು ಕೊಂಡು ಜೊತೆಗಿರಿಸಿಕೊಳ್ಳಿ ಎಂಬ ಸಂದೇಶ ಕಿವಿಗಪ್ಪಳಿಸುತ್ತದೆ.ಈ ಚಿತ್ರದಲ್ಲಿ ಸ್ನೇಹಿತರಾಗಿ ಶ್ಯಾಮ್‌ ಹಾಗೂ ಶರತ್‌ ಪಾತ್ರ ನಿರ್ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.