ADVERTISEMENT

ಪ್ಯಾರಿಸ್ ಪ್ರಣಯ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:30 IST
Last Updated 28 ಜುಲೈ 2014, 19:30 IST
ಪ್ಯಾರಿಸ್ ಪ್ರಣಯ
ಪ್ಯಾರಿಸ್ ಪ್ರಣಯ   

ಬಾಲಿವುಡ್‌ ಪ್ರಣಯಪಕ್ಷಿಗಳಾದ ಕುನಾಲ್‌ ಖೇಮು ಮತ್ತು ಸೋಹಾ ಅಲಿಖಾನ್‌ ಅವರ ಪ್ರೇಮ ರೋಮಾಂಚಕನಗರಿ ಪ್ಯಾರಿಸ್‌ನಲ್ಲಿ ನವೀಕರಣಗೊಂಡಿದೆಯಂತೆ.!

ಇತ್ತೀಚೆಗೆ ಒಂದು ತಿಂಗಳ ಯುರೋಪ್‌ ಪ್ರವಾಸದಲ್ಲಿದ್ದಾಗ ಪ್ಯಾರಿಸ್‌ನಲ್ಲಿ ಕುನಾಲ್‌ ತನ್ನ ಪ್ರೇಯಸಿ ಸೋಹಾ ಅಲಿ ಖಾನ್‌ ಅವರ ಮುದ್ದಾದ ಬೆರಳಿಗೆ ಉಂಗುರ ತೊಡಿಸಿ ಅನಿರೀಕ್ಷಿತವಾಗಿ ಮರು ಪ್ರೇಮನಿವೇದನೆ ಮಾಡಿಕೊಂಡರಂತೆ.

‘ಪ್ಯಾರಿಸ್‌ನಲ್ಲಿರುವ ನನ್ನ ಗೆಳೆಯರ ಸಹಾಯದಿಂದ ಉಂಗುರ ತರಿಸಿಕೊಂಡೆ. ಆದರೆ ಈ ವಿಷಯವನ್ನು ಸೋಹಾಳಿಂದ ಪೂರ್ತಿಯಾಗಿ ಮುಚ್ಚಿಟ್ಟಿದ್ದೆ’ ಎಂದು ಕುನಾಲ್‌ ಹೇಳಿದ್ದಾರೆ.

‘ಒಂದು ತಿಂಗಳ ನಮ್ಮ ಪ್ರವಾಸದಲ್ಲಿ ಲಂಡನ್‌, ರೋಮ್‌ ಸೇರಿದಂತೆ ಅನೇಕ ನಗರಗಳನ್ನು ಸುತ್ತಾಡಿದೆವು. ಪ್ಯಾರಿಸ್‌ ನಮ್ಮ ಪ್ರವಾಸದ ಭಾಗವಾಗಿರಲಿಲ್ಲ. ಆದರೆ, ಪ್ರಪಂಚದ ಅತ್ಯಂತ ರೊಮ್ಯಾಂಟಿಕ್‌ ನಗರದಲ್ಲಿ ಪ್ರೇಮನಿವೇದನೆ ಮಾಡಿ ಸೋಹಾಳಲ್ಲಿ  ಅಚ್ಚರಿ ಹುಟ್ಟಿಸಬೇಕು ಎಂಬುದು ನನ್ನ ಆಸೆಯಾಗಿತ್ತು. ಅದಕ್ಕೇ ನಾನು ಪ್ಯಾರಿಸ್‌ ಅನ್ನು ನಮ್ಮ ಪ್ರವಾಸದ ಪಟ್ಟಿಯಲ್ಲಿ ಸೇರಿಸಿದೆ’ ಎಂದು ಕುನಾಲ್‌ ಖುಷಿಯಿಂದ ಹೇಳಿಕೊಂಡಿದ್ದಾರೆ. ಪ್ಯಾರಿಸ್‌ಗೆ ಹೋಗುವಾಗ ಕುನಾಲ್‌ ಪದೇ ಪದೇ ಮುಗುಳುನಗುತ್ತಿರುವುದು ಸೋಹಾ ಅವರ ಗಮನಕ್ಕೂ ಬಂದಿತ್ತಂತೆ.

‘ನನ್ನ ಈ ಯೋಜನೆಯನ್ನು ಸೋಹಾಳಿಂದ ಮುಚ್ಚಿಡಲು ನನ್ನೆಲ್ಲ ಅಭಿನಯ ಕೌಶಲವನ್ನೂ ಬಳಸಿಕೊಳ್ಳಬೇಕಾಯ್ತು. ಈ ಪ್ರಯತ್ನದಲ್ಲಿ ನಾನು ತುಂಬ ಪ್ರಯಾಸಪಟ್ಟೆ. ಆದರೆ ನಾನು ಪ್ರೇಮನಿವೇದನೆ ಮಾಡಿಕೊಂಡ ನಂತರ ಸೋಹಾಳ ಮುಖದಲ್ಲಿನ ಭಾವನೆಯನ್ನು ನೋಡಿದಾಗ ನನ್ನೆಲ್ಲ ಪರಿಶ್ರಮ ಸಾರ್ಥಕ ಅನ್ನಿಸಿತು’ ಎಂದು ತಮ್ಮ ಪ್ರಯತ್ನ ಯಶಸ್ವಿಯಾದ ಬಗ್ಗೆ ಸಂತಸ ವ್ಯಕ್ತಪಡಿಸುತ್ತಾರೆ. ತಮ್ಮ ಮದುವೆಗೆ ಮನೆಯವರು ಒತ್ತಾಯಿಸುತ್ತಿದ್ದಾರೆ ಎಂಬ ಸಂಗತಿಯನ್ನೂ ಕುನಾಲ್‌ ಇದೇ ಸಮಯದಲ್ಲಿ ನಿರಾಕರಿಸಿದ್ದಾರೆ.

 ಸೋಹಾಳ ಅಮ್ಮ ಅಥವಾ ನನ್ನ ಪಾಲಕರು ನಮ್ಮ ಸಂಬಂಧದ ಕುರಿತು ಎಂದೂ ಅಸಮಾಧಾನ ವ್ಯಕ್ತಪಡಿಸಿಲ್ಲ.ನಾವು ಸಂತೋಷದಿಂದ ಇರುವುದನ್ನು ನೋಡಲು ಅವರು ಇಷ್ಟಪಡುತ್ತಾರೆ’ ಎಂದಿದ್ದಾರೆ.

‘ನನಗೆ ಏನನ್ನಿಸಿತೋ ಅದನ್ನು ನಾನು ಮಾಡಿದ್ದೇನೆ. ಈ ಪ್ರೇಮ ನಿವೇದನೆಯಿಂದ ನಮ್ಮ ಸಂಬಂಧ ಇನ್ನೊಂದು ಹಂತಕ್ಕೆ ತಲುಪಿದೆ ಎಂದೇ ನನಗನ್ನಿಸುತ್ತದೆ’ ಎಂದಿರುವ ಕುನಾಲ್‌ ಸದ್ಯ ಮದುವೆಯಾಗುವ ಆಲೋಚನೆ ಇಲ್ಲ ಎಂದೂ ಹೇಳಿದ್ದಾರೆ.

‘ಸೋಹಾ ಮತ್ತು ನಾನು ದಂಪತಿಗಳಂತೆಯೇ ಇದ್ದೇವೆ. ಮಾನಸಿಕವಾಗಿ ನಾವೀಗಾಗಲೇ ಮದುವೆಯಾಗಿ ಆಗಿದೆ. ಒಟ್ಟಿಗೇ ಇರುತ್ತೇವೆ ಮತ್ತು ಎಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತೇವೆ. ನಮ್ಮ ಸಂಬಂಧವನ್ನು ವಿವಾಹದ ಚೌಕಟ್ಟಿನೊಳಗೆ ಇಡುವ ಅವಶ್ಯಕತೆ ಸದ್ಯಕ್ಕೆ ಕಾಣುವುದಿಲ್ಲ’ ಎಂದು ಅವರು ಮನದಾಳದ ಮಾತನ್ನು ಹಂಚಿಕೊಂಡಿದ್ದಾರೆ.

‘ಆದರೆ ನಮ್ಮ ಈ ನಿರ್ಧಾರ ಯಾವುದೇ ಕ್ಷಣದಲ್ಲಿ ಬದಲಾಗಬಹುದು. ಪ್ಯಾರಿಸ್‌ನಲ್ಲಿ ಸೋಹಾಳಿಗೆ ಪ್ರಪೋಸ್‌ ಮಾಡುತ್ತೇನೆ ಎಂದು ಮೊದಲು ನಾನು ಅಂದುಕೊಂಡಿರಲಿಲ್ಲ. ಅನಿರೀಕ್ಷಿತವಾಗಿಯೇ ಎಲ್ಲವೂ ನಡೆದುಹೋಯಿತು. ಅಷ್ಟೇ ಅನಿರೀಕ್ಷಿತವಾಗಿಯೇ ನಾವು ಮದುವೆಯಾಗಿಬಿಡಬಹುದು’ ಎಂದು ಅಡ್ಡಗೋಡೆಯ ಮೇಲೆ ದೀಪವಿಡುವ ಕುನಾಲ್‌ ‘ಆದರೆ ನಮ್ಮ ಮದುವೆಗೆ ಕುಟುಂಬದ ಹಿರಿಯರಿಂದ ಯಾವುದೇ ಒತ್ತಡವಿಲ್ಲ’ ಎಂದು ಪುನರುಚ್ಚರಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.