ADVERTISEMENT

ಪ್ರಾಚೀನ ದೇವಾಲಯಗಳ ಬೆರಗು

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2014, 19:30 IST
Last Updated 29 ಸೆಪ್ಟೆಂಬರ್ 2014, 19:30 IST

ಬೆಂಗಳೂರು ಸುಮಾರು 9–10ನೇ ಶತಮಾನದಿಂದ 15–16ನೇ ಶತಮಾನದವರೆಗೆ ಗಂಗರು, ಚೋಳರು, ಕೆಲಕಾಲ ಹೊಯ್ಸಳರ ಆಳ್ವಿಕೆಯಲ್ಲಿತ್ತು. ಆ ಕಾಲದ ಜನರ ಧಾರ್ಮಿಕ ಮನೋಭಾವಕ್ಕೆ ಅನುಗುಣವಾಗಿ ಹಲವಾರು ದೇವಾಲಯಗಳು ನಿರ್ಮಾಣವಾಗಿದ್ದವು. ಅವುಗಳಲ್ಲಿ ಕೆಲವು ಇನ್ನೂ ಉಳಿದುಕೊಂಡು ಬಂದಿವೆ.

ಗ್ರಾಮವಾಗಿದ್ದ ಬೆಂಗಳೂರು ಕೆಂಪೇಗೌಡರ ಕಾಲದಲ್ಲಿ ನಗರವಾಗಿ ಮಾರ್ಪಾಡಾಯಿತು. ಆಗ ನವನಗರವನ್ನು ಸಿಂಗರಿಸಲು ದೊಡ್ಡ ಗಣಪತಿ ಗುಡಿ, ಬಸವಣ್ಣ ದೇವಾಲಯ, ಕಾರಂಜಿ ಆಂಜನೇಯ ದೇವಾಲಯ ಸೇರಿದಂತೆ ಹಲವು ದೇವಾಲಯಗಳ ನಿರ್ಮಾಣವಾಯಿತು. ಇದಕ್ಕೂ ಮುನ್ನವೇ ಬೆಂಗಳೂರಿನ ಸುತ್ತಮುತ್ತ ಹಲವಾರು ದೇವಾಲಯಗಳಿದ್ದವು. 20ನೇ ಶತಮಾನದಲ್ಲಿ ಬೆಂಗಳೂರು ಮಹಾನಗರವಾಗಿ ವಿಸ್ತಾರಗೊಂಡಿತು. ವಿಸ್ತರಣೆಗೆ ತಕ್ಕಂತೆ ದೇವಾಲಯಗಳ ಸಂಖ್ಯೆಯೂ ಹೆಚ್ಚಾಯಿತು.

ನಗರದಲ್ಲಿ ಅತ್ಯಂತ ಪ್ರಾಚೀನವಾದ ದೇವಾಲಯ ಎಂದರೆ, ಗುಟ್ಟಹಳ್ಳಿಯ ಗವಿಗಂಗಾಧರೇಶ್ವರ ದೇವಾಲಯ. ಸಹಜವಾದ ಗವಿಯೊಂದರ ಒಳಭಾಗದಲ್ಲಿ ಲಿಂಗವನ್ನು ಸ್ಥಾಪಿಸಿ, ಮುಂಭಾಗದಲ್ಲಿ ಪೂಜಿಸುತ್ತಿದ್ದ ಮುನಿಗಳಿದ್ದಿರಬೇಕು. ಈ ಗುಹಾಂತರ ದೇವಾಲಯವು ಸುಮಾರು 7–8ನೇ ಶತಮಾನದಲ್ಲೇ ನಿರ್ಮಾಣವಾಗಿರಬೇಕು.

ಈ ದೇವಾಲಯದ ಒಳಭಾಗದಲ್ಲಿ ಲಿಂಗವಿದ್ದು, ಮುಂದಿನ ಭಾಗವನ್ನು ಅಂತರಾಳವಾಗಿ ರೂಪಿಸಲಾಗಿದೆ. ಎರಡು ಕಂಬಗಳ ನಡುವೆ ನಂದಿಯ ಶಿಲ್ಪವಿದೆ. ಕಂಬಗಳು 9–10ನೇ ಶತಮಾನದ ಗಂಗರ ಶೈಲಿಯಲ್ಲಿವೆ. ಗುಹೆಯ ಉಳಿದ ವಿಶಾಲವಾದ ಭಾಗವನ್ನು ಮುಖ ಮಂಟಪದಂತೆ ಬಳಸಲಾಗುತ್ತಿದೆ. ಈ ರಚನೆಗಳು ಪ್ರಾಚೀನವಾಗಿದ್ದು, 12ನೇ ಶತಮಾನದಲ್ಲಿ ಜೀರ್ಣೋದ್ಧಾರಗೊಂಡಿದೆ. ಈ ಗುಹಾಲಯವು ಹಿಂದೆ ಕಾಳಾಮುಖಯತಿಗಳ, ನಾಥಪಂಥದ ಯೋಗಿಗಳ ಕೇಂದ್ರವಾಗಿತ್ತೆಂದು ತಿಳಿದುಬರುತ್ತದೆ. ಇಲ್ಲಿಯ ಗುಪ್ತಮಾರ್ಗವೊಂದು ಶಿವಗಂಗೆಯ ಗಂಗಾಧರೇಶ್ವರ ದೇವಾಲಯವನ್ನು ಸೇರುತ್ತದೆ ಎಂಬ ವದಂತಿಯೂ ಇದೆ.

ಮಹಾಲಕ್ಷ್ಮಿ ಬಡಾವಣೆಯ ಆಂಜನೇಯಸ್ವಾಮಿ ದೇವಾಲಯ ಇನ್ನೊಂದು ಮುಖ್ಯ ದೇವಸ್ಥಾನ. ಮೊದಲು ಸಹಜವಾದ ಬಂಡೆಯಲ್ಲಿ  22 ಅಡಿ ಎತ್ತರದ ಆಂಜನೇಯನ ಭವ್ಯವಾದ ಶಿಲ್ಪವನ್ನು ನಿರ್ಮಿಸಿದ ನಂತರ ಈ ದೇವಾಲಯವನ್ನು ಕಟ್ಟಲಾಗಿದೆ. 1977ರ ಸುಮಾರಿಗೆ ನಿರ್ಮಿಸಲಾಗಿ ರುವ ಈ ದೇವಾಲಯದಲ್ಲಿ ಬೇರೆಡೆ ಇರುವಂತೆ ಚೌಕಾಕಾರದ ಗರ್ಭಗುಡಿಯ ಬದಲಾಗಿ ತೆರೆದ ಆಯತಾಕಾರದ ಗರ್ಭಗುಡಿಯನ್ನು ಕಾಣಬಹುದು. ಇಲ್ಲಿ ಗರ್ಭಗುಡಿಯನ್ನು ಮುಖ ಮಂಟಪದಿಂದ ಬೇರ್ಪಡಿಸಲು ಕಬ್ಬಿಣದ ಸರಳು, ಸರಪಳಿಗಳಿಂದ ತಡೆಕಟ್ಟನ್ನು ನಿರ್ಮಿಸಲಾಗಿದೆ. ಗರ್ಭಗುಡಿಯ ಮೇಲಿರುವ ಶಿಖರವು ಉತ್ತರ ಭಾರತದ ಶೈಲಿಯಂತಹ ಮಿಶ್ರ ರಚನೆಯಿಂದ ಕೂಡಿದೆ.

ಕಟ್ಟಡ ನಿರ್ಮಾಣ, ಅದರ ನಿರ್ಮಾರ್ತೃ, ಕಟ್ಟಿದ ಕಾಲ, ದಾನ ಮಾಡಿದವರ ವಿವರವನ್ನು ಖಚಿತ ಪಡಿಸುವ ಶಾಸನವೂ ಇರುವ ಏಕೈಕ ದೇವಾಲಯ ಎಂದರೆ ಕೋಟೆ ವೆಂಕಟರಮಣಸ್ವಾಮಿ ದೇವಾಲಯ. ಇದು ಕೆಂಗೇರಿ ಹೋಬಳಿ ಕೊತ್ತನೂರು ಗ್ರಾಮದ ಊರ ಬಾಗಿಲ ಬಳಿ ನೆಟ್ಟಿರುವ 6 ಅಡಿಗಳ ಪ್ರಮಾಣದ ಶಿಲಾಶಾಸನವಾಗಿದೆ. ಕೋಟೆ ವೆಂಕಟರಮಣಸ್ವಾಮಿ ದೇವಾಲಯವನ್ನು ಕ್ರಿ.ಶ. 1690–95ರ ಸುಮಾರಿಗೆ ಕಟ್ಟಿಸಿದ್ದು ಚಿಕ್ಕದೇವರಾಜ ಒಡೆಯರು. ದ್ರಾವಿಡ ಶಿಲ್ಪಕ್ಕೆ ಕಳಶವಿಟ್ಟಂತಿರುವ ಈ ದೇವಾಲಯದ ಮುಖಮಂಟಪ ನೋಡಲು ಅಂದವಾಗಿದೆ. ಕಂಸ, ಸಿಂಹಗಳಿಂದ ಅಲಂಕೃತವಾಗಿರುವ ಕಲ್ಲುಮಂಟಪಗಳು, ಕೆಳಗಿನ ಶಿಲಾಹಸ್ತಿಗಳನ್ನು ತುಳಿದು, ಮುಂದಿನ ಕಾಲುಗಳನ್ನು ಮೇಲೆತ್ತಿ, ನೆಗೆದೆದ್ದ ಸಿಂಹಗಳ ಮೇಲೆ ಕಡಿವಾಣ ಹಿಡಿದು ಸವಾರಿ ಮಾಡುತ್ತಿರುವ ಮೂರ್ತಿಗಳನ್ನು ಇಕ್ಕೆಲದ ಕಂಬಗಳಲ್ಲಿ ಕಾಣಬಹುದು.

ಒಂಬತ್ತು ಅಂಕಣಗಳುಳ್ಳ ಮುಖಮಂಟಪ ನವರಂಗ ಮಂಟಪವೇ ಆಗಿದೆ. ಎರಡು ಸುಖನಾಸಿಗಳಿವೆ. ಅವುಗಳಿಗೆ ಲಗತ್ತಾಗಿ ಗರ್ಭಗುಡಿ ಇದೆ. ಒಂದೇ ಕಲ್ಲಿನಲ್ಲಿ ಕೆತ್ತಲಾದ ತೋರಣ ಮತ್ತು ಕಿರೀಟ ಮುಕುಟದಿಂದ ಶೋಭಿಸುವ ವೆಂಕಟರಮಣನ ಮೂರ್ತಿ ಇದೆ. ಹೊರಗಿನ ಗೋಡೆಗಳ ಮೇಲೆ ರಥಾರೂಢ ವಿಷ್ಣು, ಬ್ರಹ್ಮ, ಶಿವಮೂರ್ತಿಗಳನ್ನು ಕೆತ್ತಲಾಗಿದೆ. ಮೇಲ್ಭಾಗದಲ್ಲಿ ಸಪ್ತ ಋಷಿಗಳು, ಸಪ್ತಮಾತೃಕೆಯರು ಹಾಗೂ ಗಿರಿಜಾಕಲ್ಯಾಣದ ಶಿಲಾ ಚಿತ್ರಣಗಳಿವೆ.      
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.