ADVERTISEMENT

ಪ್ರೇಮಿಗಳ ದಿನ ಜಾವೇದ್‌ ಗಾಯನ

ಸುರೇಖಾ ಹೆಗಡೆ
Published 12 ಫೆಬ್ರುವರಿ 2016, 19:30 IST
Last Updated 12 ಫೆಬ್ರುವರಿ 2016, 19:30 IST
ಪ್ರೇಮಿಗಳ ದಿನ ಜಾವೇದ್‌ ಗಾಯನ
ಪ್ರೇಮಿಗಳ ದಿನ ಜಾವೇದ್‌ ಗಾಯನ   

ಜೋಧಾ ಅಕ್ಬರ್‌ ಚಿತ್ರದ ‘ಜಶ್ನ್‌ ಎ ಬಹಾರಾ’, ನಕಾಬ್‌ ಚಿತ್ರದ ‘ಏಕ್‌ ದಿನ್‌ ತೇರಿ ರಹೂ ಮೈ’, ಯುವರಾಜ ಚಿತ್ರದ ‘ತೂ ಮುಸ್ಕುರಾ’, ಗಜನಿ ಚಿತ್ರದ ‘ಗುಜಾರಿಶ್‌’, ದಿಲ್ಲಿ 6 ಚಿತ್ರದ ‘ಅರ್ಜಿಯಾ’, ರಾವಣ್ ಚಿತ್ರದ ‘ರಾಂಜಾ ರಾಂಜಾ’, ರಾಕ್‌ ಸ್ಟಾರ್‌ ಚಿತ್ರದ ‘ಕುಂ ಫಾಯಾ ಕುಂ’... ಹೀಗೆ ಒಂದಾದ ಮೇಲೊಂದರಂತೆ ಹಿಟ್‌ ಗೀತೆಗಳನ್ನು ಕೊಟ್ಟವರು ಗಾಯಕ ಜಾವೇದ್‌ ಅಲಿ.

ದೆಹಲಿಯ ಸಂಗೀತ ಮನೆತನದಲ್ಲಿ ಹುಟ್ಟಿದ ಜಾವೇದ್‌ಗೆ ಎಂದಿಗೂ ಹಿನ್ನೆಲೆ ಗಾಯಕನಾಗುವ ಕನಸಿರಲಿಲ್ಲ. ಅಪ್ಪ ಉಸ್ತಾದ್‌ ಹಮೀದ್‌ ಹುಸೇನ್‌ ಹಾಡುತ್ತಿದ್ದ ಕವ್ವಾಲಿ ಹಾಗೂ ಸೂಫಿ ಹಾಡುಗಳನ್ನು ಕೇಳುತ್ತಾ ಬೆಳೆದ ಜಾವೇದ್‌ಗೆ ಸಂಗೀತ ತಾನಾಗಿಯೇ ಒಲಿದು ಬಂದಿತ್ತು. ಆದರೆ ಅಪ್ಪನ ಆಸೆಯಂತೆ ಅವರು ಅನೇಕ ಗುರುಗಳಿಂದ ಸಂಗೀತ ಪಾಠ ಹೇಳಿಸಿಕೊಂಡರು.  ಜಾವೇದ್‌ಗೆ ಗುಲಾಮ್‌ ಅಲಿ ಮನಮೆಚ್ಚಿದ ಗುರು. ಹೀಗಾಗಿಯೇ ಜಾವೇದ್‌ ಹುಸೇನ್‌ ಬದಲು ಜಾವೇದ್‌ ಅಲಿ ಎಂದು ಹೆಸರಿಸಿಕೊಂಡಿದ್ದಾರೆ ಅವರು.

ಸಂಗೀತ ಪ್ರೀತಿ
ಸಂಗೀತ ಕುಟುಂಬದಿಂದಲೇ ಬಂದ ಅವರಿಗೆ ಆ ಬಗ್ಗೆ ತುಂಬ ಖುಷಿ ಇದೆ. ಮುಂಬೈಗೆ ಬಂದ ಮೇಲೆ ಹಿನ್ನೆಲೆ ಗಾಯಕನಾಗುವ ಆಸೆ ಅವರಲ್ಲಿ ಚಿಗುರಿತು. ಸಂಬಂಧಿಗಳು ಅವರ ಸಹಾಯಕ್ಕೆ ನಿಂತರು. ಮೊದಲಿನಿಂದಲೂ ಬೇರೆ ಬೇರೆ ಶೈಲಿಯ ಸಂಗೀತದ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಅವರು ಸದಾ ಪ್ರಯೋಗಾತ್ಮಕವಾಗಿರುವ ಸಿನಿಮಾ ಕ್ಷೇತ್ರ ಉತ್ತಮ ಆಯ್ಕೆ ಎಂದುಕೊಂಡರು. 2000ರಲ್ಲಿ ‘ಬೇಟಿ ನಂಬರ್‌ ಒನ್‌’ ಸಿನಿಮಾದಲ್ಲಿ ಹಾಡುವ ಅವಕಾಶ ದಕ್ಕಿಸಿಕೊಂಡರು. ಆದರೆ ಆ ಹಾಡು ಅಷ್ಟೊಂದು ಸದ್ದು ಮಾಡಲಿಲ್ಲ.  ನಂತರದ ಕೆಲವು ಹಾಡುಗಳು ಅಂಥ ಜನಪ್ರಿಯತೆ ಕಾಣಲಿಲ್ಲ. ಆದರೆ 2007ರಲ್ಲಿ ‘ನಖಾಬ್‌’ ಸಿನಿಮಾದ ‘ಏಕ್‌ ದಿನ್‌ ತೇರಿ ರಹೂ ಮೈ’ ಹಾಡು ಜಾವೇದ್‌ಗೆ ಹೆಸರು ತಂದುಕೊಟ್ಟಿತು. ನಂತರ ಅನೇಕ ಉತ್ತಮ ಹಾಡುಗಳಿಗೆ ಅವರು ದನಿಯಾದರು. ‘ಅಲ್ಲಿಂದಲೇ ನನ್ನ ನಿಜವಾದ ಸಂಗೀತ ಪಯಣ ಪ್ರಾರಂಭವಾಗಿದ್ದು. ಹೀಗಾಗಿ ನಾನು ಈ ಕ್ಷೇತ್ರಕ್ಕೆ ಬಂದು ಎಂಟು ವರ್ಷ ಆಯಿತೆಂದೇ ಭಾವಿಸುತ್ತೇನೆ’ ಎಂದು ತಮ್ಮ ಹಿನ್ನೆಲೆ ಗಾಯನದ ಪ್ರಾರಂಭಿಕ ದಿನಗಳನ್ನು ನೆನಪಿಸಿಕೊಳ್ಳುತ್ತಾರೆ ಜಾವೇದ್‌.

ಬಹು ಭಾಷಾ, ಶೈಲಿ ಗಾಯಕ
ಹಿಂದಿ, ತಮಿಳು, ತೆಲುಗು, ಮಲಯಾಳಂ, ಕನ್ನಡ ಹೀಗೆ ವಿವಿಧ ಭಾಷೆಗಳಲ್ಲಿ ಹಾಡಿ ಜನಪ್ರಿಯಗೊಂಡಿರುವ ಜಾವೇದ್‌ ಅಲಿ, ಮಾಡುವ ಕೆಲಸದಲ್ಲಿ ಹೃದಯದಾಳದಿಂದ ತೊಡಗಿಸಿಕೊಳ್ಳುತ್ತಾರೆ. ಬೇರೆ ಬೇರೆ ಭಾಷೆಯ ಉಚ್ಚಾರ ವಿಭಿನ್ನವಾಗಿರುವುದರಿಂದ ಮೊದಲು ಅವುಗಳನ್ನು ತಮ್ಮ ಭಾಷೆಯಲ್ಲಿ ಬರೆದುಕೊಂಡು ನಂತರ ಅವುಗಳ ಉಚ್ಚಾರ ಸರಿಯಿದೆಯೇ ಎಂದು ಭಾಷಾ ಸಹಾಯಕರ ಸಹಾಯದಿಂದ ಪರಿಶೀಲಿಸುತ್ತಾರೆ.
‘ಕನ್ನಡಕ್ಕಿಂತ ತಮಿಳು ತುಂಬಾ ಕಷ್ಟ’ ಎನ್ನುವುದು ಅವರ ಅಭಿಪ್ರಾಯ. ಅಲ್ಲದೆ ತಮ್ಮ ಸಂಗೀತ ಪಯಣದಲ್ಲಿ ವಿವಿಧ ಪ್ರಕಾರದ ಗೀತೆಗಳನ್ನು ಪ್ರಯತ್ನಿಸಿ ಗೆದ್ದಿದ್ದಾರೆ. ಪ್ರತಿ ಬಾರಿ ಹಾಡಿದಾಗಲೂ ಅಲ್ಲೊಂದು ವಿಶೇಷ ಸಂಗೀತ ಪ್ರಕಾರದ ಚೆಲುವು ಇಣುಕುವಂತೆ ಮಾಡಿದ್ದಾರೆ ಜಾವೇದ್‌.

ಪ್ರೇಮಿಗಳ ದಿನ ಜಾವೇದ್‌
ಫೆಬ್ರುವರಿ 14ರಂದು ನಗರದಲ್ಲಿ ಜಾವೇದ್‌ ಗಾಯನ ಮೋಡಿ ಹರಿಸುವ ತಯಾರಿಯಲ್ಲಿದ್ದಾರೆ. ‘ಉತ್ತಮ ಪರಿಸರ, ಪ್ರೀತಿಭರಿತ ಜನ, ಸಂಗೀತ ಪ್ರಿಯರು, ಬಾಯಲ್ಲಿ ನೀರೂರಿಸುವ ಆಹಾರ ವೈವಿಧ್ಯ ಇರುವ ಈ ನಗರ ನಾನು ಪ್ರತಿ ಬಾರಿ ಬಂದಾಗಲೂ ಪ್ರೀತಿಯ ಸ್ವಾಗತ ಕೋರುತ್ತದೆ’ ಎನ್ನುತ್ತಾರೆ ಜಾವೇದ್‌. ಹೀಗಾಗಿ ಅವರು ಇಲ್ಲಿ ಲೈವ್‌ ಕಾರ್ಯಕ್ರಮ ನೀಡಲು  ಕಾತುರರಾಗಿರುತ್ತಾರೆ.

ಈ ಬಾರಿ ಎಲ್ಲ ಪ್ರಕಾರದ ಹಾಡುಗಳನ್ನು ಹಾಡುವ ಯೋಚನೆಯಲ್ಲಿದ್ದಾರೆ ಅವರು. ಸೂಫಿ, ಮ್ಯಾಂಡೇಟ್‌ ಮ್ಯೂಸಿಕ್‌, ರಾಕ್‌, ಘಜಲ್‌, ರೆಟ್ರೊ ಪ್ರಕಾರದ ಹಾಡುಗಳನ್ನೂ ಅವರು ಹಾಡಲಿದ್ದಾರೆ. ಜನರಿಗೆಂದೇ ನೀಡುತ್ತಿರುವ ಈ ಕಾರ್ಯಕ್ರಮದಲ್ಲಿ ಜನರು ಅವರಿಷ್ಟದ ಹಾಡು ಹಾಡುವಂತೆ ಕೇಳಿದರೆ ಅವುಗಳನ್ನೂ ಹಾಡುವ ಆಸೆ ಅವರಲ್ಲಿದೆ. ತನ್ನ ಸಂಗೀತದ ಬಗ್ಗೆ ಜನರ ಭಾವನೆ ಹೇಗಿದೆ ಎನ್ನುವುದು ಅವರವರ ಮುಖಭಾವದಲ್ಲಿ ಕಾಣುವ ಅವಕಾಶ ಸಿಗುತ್ತದೆ ಎನ್ನುವ ಕಾರಣಕ್ಕೆ ಲೈವ್‌ ಕಾರ್ಯಕ್ರಮಗಳಲ್ಲಿ ಹಾಡುವುದು ಎಂದರೆ ಅವರಿಗೆ ಹೆಚ್ಚು ಖುಷಿ.

‘ರೆಕಾರ್ಡಿಂಗ್‌ ಸಂದರ್ಭದಲ್ಲಿ ತಪ್ಪು ಮಾಡಿದರೆ ಮತ್ತೆ ಮತ್ತೆ ತಿದ್ದಿಕೊಳ್ಳುವ ಅವಕಾಶವಿರುತ್ತದೆ.  ಜೊತೆಗೆ ಕಂಪ್ಯೂಟರ್‌ನಲ್ಲಿ ಅನೇಕ ತಾಂತ್ರಿಕ ತಪ್ಪುಗಳನ್ನು ಸರಿಮಾಡಿಕೊಳ್ಳಬಹುದು. ಆದರೆ ಲೈವ್‌ ಕಾರ್ಯಕ್ರಮದಲ್ಲಿ ಹಾಡುಗಾರನ ಪ್ರತಿಭೆ ನಿಜವಾದ ಸ್ಪರ್ಧೆಗೆ ನಿಲ್ಲುತ್ತದೆ. ಒಂದೇ ಬಾರಿಗೆ ಸರಿಯಾಗಿ ಹಾಡಬೇಕು, ಮುಂದಿರುವ ಜನರ ಚಪ್ಪಾಳೆ ನೋಡಿ ಖುಷಿಯಾಗಬೇಕು, ಹಾಡುಗಳಿಗೆ ದನಿಯಾಗುತ್ತಾ ಎಂಜಾಯ್‌ ಮಾಡುವ ತನ್ನನ್ನು ನೋಡಿ ಮನತುಂಬಿಕೊಳ್ಳಬೇಕು’ ಈ ಎಲ್ಲ ಕಾರಣಗಳಿಂದ ಅವರು ಲೈವ್‌ ಕಾರ್ಯಕ್ರಮಗಳನ್ನು ಹೆಚ್ಚಾಗಿ ಪ್ರೀತಿಸುತ್ತಾರೆ.

ರಿಯಾಲಿಟಿ ದಾರಿದೀಪ
ಜೀ ಟೀವಿಯಲ್ಲಿ ಪ್ರಸಾರವಾಗುತ್ತಿದ್ದ ‘ಸಾರೆಗಮಪ ಲಿಟಲ್‌ ಚಾಂಪ್ಸ್‌’ ಕಾರ್ಯಕ್ರಮದಲ್ಲೂ ತೀರ್ಪುಗಾರರಾಗಿ ಕಾರ್ಯನಿರ್ವಹಿಸಿದ ಅನುಭವ ಜಾವೇದ್‌ ಅವರದ್ದು. ಪುಟ್ಟ ಮಕ್ಕಳಿಗೆ ಹಾಡಿನ ಪಾಠ ಹೇಳುತ್ತಾ ಮಾರ್ಗದರ್ಶನ ನೀಡಿದ ಅವರಿಗೆ ರಿಯಾಲಿಟಿ ಷೋಗಳು ದಾರಿದೀಪವಾಗಿ ಕಂಡಿವೆ.

ಕುಟುಂಬ ಬೆಂಬಲ
‘ಮನೆಯ ಎಲ್ಲರೂ ನನ್ನ ಪ್ರೀತಿಯ ಸಂಗೀತ ದಾರಿಗೆ ಬೆಂಬಲವಾಗಿಯೇ ನಿಂತಿದ್ದಾರೆ. ಹೆಂಡತಿ ಯಾಸ್ಮಿನ್‌ ಬಂದಮೇಲೆ ನನ್ನ ಅದೃಷ್ಟ ಬದಲಾಗಿದೆ ಎನಿಸುತ್ತೆ. ಈಗ ನನ್ನ ಪುಟ್ಟ ಮಗುವೂ ಸಾಥ್‌ ನೀಡುತ್ತಿದೆ. ಕೇಳುಗರೇ ನನ್ನ ಬಹುದೊಡ್ಡ ಕುಟುಂಬ. ಅವರು ನನ್ನ ಹಾಡನ್ನು ಪ್ರೀತಿಯಿಂದ ಕೇಳುತ್ತಾರೆ, ಹಿಗ್ಗುತ್ತಾರೆ, ಆಶೀರ್ವದಿಸುತ್ತಾರೆ. ಹೀಗಾಗಿಯೇ ಇಂದು ಈ ಮಟ್ಟಕ್ಕೆ ನಾನು ಬೆಳೆದಿದ್ದೇನೆ’ ಎಂದು ವಿನಮ್ರರಾಗುತ್ತಾರೆ ಜಾವೇದ್‌.
*
"ಪ್ರತಿಭೆ, ನಿರಂತರ ಪ್ರಯತ್ನ, ಪ್ರಾಮಾಣಿಕತೆ ಹಾಗೂ ಅದೃಷ್ಟ ಒಬ್ಬ ಕಲಾವಿದನನ್ನು ಯಶಸ್ಸಿನ ಹಾದಿಗೆ ಕೊಂಡೊಯ್ಯಬಲ್ಲುದು. ಭಾರತದಲ್ಲಿ ಸಾಕಷ್ಟು ಪ್ರತಿಭಾನ್ವಿತರಿದ್ದಾರೆ. ಆದರೆ ಎಲ್ಲರೂ ಗುರುತಿಸಿಕೊಳ್ಳುವುದಿಲ್ಲ, ಗೆಲ್ಲುವುದಿಲ್ಲ. ಆ ದೃಷ್ಟಿಯಲ್ಲಿ ನೋಡಿದರೆ ನಮ್ಮಂಥ ಕೆಲವರಿಗೆ ದೇವರ ಆಶೀರ್ವಾದ ಸಿಕ್ಕಿದೆ ಎಂಬ ಖುಷಿಯಿದೆ. ಹೀಗಾಗಿಯೇ ಹಾಡುಗಳ ಅವಕಾಶ, ಕೇಳುಗರ ಪ್ರೀತಿ ನಮಗೆ ಲಭಿಸಿದೆ." 
*
ಪ್ರದರ್ಶನದ ವಿವರ
ಫೆಬ್ರುವರಿ 14ರಂದು ಜಾವೇದ್‌ ನಗರದ ಕೋರಮಂಗಲದ ಪೋರಂ ಮಾಲ್‌ನಲ್ಲಿ ಕಾರ್ಯಕ್ರಮ ನೀಡಲಿದ್ದಾರೆ. ಸಂಜೆ 6ಕ್ಕೆ ಕಾರ್ಯಕ್ರಮ ಪ್ರಾರಂಭವಾಗಲಿದ್ದು ಪ್ರವೇಶ ಉಚಿತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.