ADVERTISEMENT

ಫಿಯೆಟ್ ಪ್ರೀತಿಯ ಮೋಹಕ ಕೆಫೆ

ಸತೀಶ ಬೆಳ್ಳಕ್ಕಿ
Published 2 ಮಾರ್ಚ್ 2015, 19:30 IST
Last Updated 2 ಮಾರ್ಚ್ 2015, 19:30 IST

ಫಿಯೆಟ್‌ ಥೀಮ್‌ ಹೊಂದಿರುವ ಏಕೈಕ ಕೆಫೆ ಬೆಂಗಳೂರಿನಲ್ಲಿದೆ ಎನ್ನುವುದು ವಿಶೇಷ.

ಹಲವು ವರ್ಷಗಳಿಂದ ರಸ್ತೆಯಲ್ಲಿ ಮೋಡಿ ಮಾಡುತ್ತಿರುವ ಫಿಯೆಟ್ ಕಾರಿನ ಚೆಲುವಿಗೆ ಮನಸೋಲದವರಿಲ್ಲ. ಈ ಕಾರಿನ ನೋಟವೂ ಚೆಂದ; ಓಟವೂ ಚೆಂದ. ಫಿಯೆಟ್‌ ಕಾರಿನ ಸೊಗಸಿನಂತೆ ನ್ಯೂಯಾರ್ಕ್‌, ಚೈನಾ, ಜರ್ಮನಿ, ಇಟಲಿ, ಹಾಂಗ್‌ಕಾಂಗ್‌ ಹಾಗೂ ವಿಶ್ವದ ವಿವಿಧೆಡೆ ಫಿಯೆಟ್‌ ಥೀಮ್‌ (ಷೋ ರೂಂ ಮತ್ತು ಬಾರ್‌ ಅಂಡ್‌ ರೆಸ್ಟೋರೆಂಟ್‌)ನೊಂದಿಗೆ ಮೈದಳೆದಿರುವ ಕೆಫೆಗಳು ಜನರನ್ನು ಆಕರ್ಷಿಸುತ್ತಿವೆ. ಫಿಯೆಟ್‌ ಥೀಮ್‌ ಹೊಂದಿರುವ 14 ಕೆಫೆಗಳು ಮಾತ್ರ ವಿಶ್ವದಲ್ಲಿವೆ. ಅದರಲ್ಲೊಂದು ನಮ್ಮ ದೇಶದಲ್ಲಿದ್ದು, ಅದು ಬೆಂಗಳೂರಿನಲ್ಲಿದೆ ಎನ್ನುವುದು ವಿಶೇಷ. 

ಫಿಯೆಟ್ ಕೆಫೆ ಎಂಬುದು ಫಿಯೆಟ್‌ ಕಂಪೆನಿಯ ಒಂದು ಕ್ರಿಯೇಟಿವ್‌ ಪರಿಕಲ್ಪನೆ. ಆಟೋಮೊಬೈಲ್‌ ಥೀಮ್‌ನೊಂದಿಗೆ ಆರಂಭಗೊಂಡಿರುವ ಈ ಕೆಫೆ, ಈಗ ಬೆಂಗಳೂರಿಗರ ಹೊಸ ಆಕರ್ಷಣೆ. ಹೊರಗಿನಿಂದ ನೋಡಿದರೆ ಕಾರ್ ಷೋ ರೂಂನಂತೆ ಕಾಣಿಸುವ ಇದರೊಳಗೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಕೂಡ ಇದೆ. ಇಲ್ಲಿ ಕಾರಿನ ಬ್ರಾಂಡ್‌ ಪ್ರಚಾರ ಮತ್ತು ಮಾರಾಟದ ಜೊತೆಗೆ ಊಟ ಮತ್ತು ಮದ್ಯದ ಜುಗಲ್‌ಬಂದಿಯೂ ಇದೆ. ಇವೆಲ್ಲದರ ಜೊತೆಗೆ ವಾರಾಂತ್ಯದಲ್ಲಿ ಲೈವ್‌ ಬ್ಯಾಂಡ್‌, ಡಿಜೆ ನೈಟ್‌, ಕಾಮಿಡಿ ಷೋಗಳು ನಡೆಯುತ್ತಿರುತ್ತದೆ. ಹಾಗಾಗಿ, ಫಿಯೆಟ್‌ ಕೆಫೆ ಈಗ ಜನರ ಅಚ್ಚುಮೆಚ್ಚಿನ ಲೈಫ್‌ಸ್ಟೈಲ್‌ ತಾಣವಾಗಿ ಗುರ್ತಿಸಿಕೊಳ್ಳುತ್ತಿದೆ.

ಕೆಫೆಯ ಸೊಬಗು
ಫಿಯೆಟ್‌ ಕೆಫೆಯ ಊಟಕ್ಕಿಂತಲೂ ಅಲ್ಲಿನ ಒಳಾಂಗಣ ವಿನ್ಯಾಸ ವಿಭಿನ್ನವೂ ಆಕರ್ಷಣೀಯವೂ ಆಗಿದೆ. ಇದು ಆಟೊಮೊಬೈಲ್‌ ಥೀಮ್‌ನೊಂದಿಗೆ ವಿನ್ಯಾಸಗೊಂಡಿರುವ ಕೆಫೆ ಆದ್ದರಿಂದ ಇಲ್ಲಿ ಫಿಯೆಟ್‌ ಕಾರುಗಳು ಮತ್ತು ಅವುಗಳ ಬಿಡಿಭಾಗಗಳನ್ನು ಸಾಕಷ್ಟು ಕಡೆ ಬಳಸಿಕೊಳ್ಳಲಾಗಿದೆ. ಪ್ರೀಮಿಯರ್‌ ಪದ್ಮಿನಿ ಕಾರಿನ ಹಿಂಭಾಗ ಮತ್ತು ಮುಂಭಾಗ ಬಳಸಿ ತಯಾರಿಸಿರುವ ವಿಂಟೇಜ್‌ ಲಾಂಜ್‌ ಸೋಫಾಗಳು ಇಲ್ಲಿನ ಪ್ರಮುಖ ಆಕರ್ಷಣೆ. ಸೋಫಾದಲ್ಲಿ ಬಳಕೆಯಾಗಿರುವ ಕಾರಿನ ಬಿಳುಪು ಹಾಗೂ ಕುಷನ್ನಿನ ಕೆಂಪು ಬಣ್ಣ ನೋಡುಗರಿಗೆ ರಾಯಲ್‌ ಫೀಲ್‌ ಕೊಡುತ್ತದೆ. ವಿಂಟೇಜ್‌ ಸೋಫಾ ಇರಿಸಿರುವ ಹಿಂಬದಿಯ ಗೋಡೆಯನ್ನು ಸಂಪೂರ್ಣವಾಗಿ ವಾಲ್‌ಪೇಪರ್‌ಗಳು ಆಕ್ರಮಿಸಿಕೊಂಡಿವೆ. ಫಿಯೆಟ್‌ ಕಾರಿನ ಇತಿಹಾಸ, ಫಿಯೆಟ್‌ ಆರ್ಕೈವ್ಸ್‌ನಿಂದ ಹೆಕ್ಕಿದ ಅಪರೂಪದ ಚಿತ್ರಗಳು ಹಾಗೂ ವಿಶ್ವದ ವಿವಿಧ ಪತ್ರಿಕೆಗಳಲ್ಲಿ ಫಿಯೆಟ್‌ ಕುರಿತು ಪ್ರಕಟಗೊಂಡ ಲೇಖನಗಳನ್ನು ಬಳಸಿ ಸಿಂಗರಿಸಿದ್ದಾರೆ. ಕಪ್ಪು–ಬಿಳುಪಿನ ಅಕ್ಷರ ಹಾಗೂ ಚಿತ್ರಗಳ ಸೊಗಸಿನಿಂದ ಕಂಗೊಳಿಸುವ ಈ ಗೋಡೆಯ ತುಂಬೆಲ್ಲಾ ಫಿಯೆಟ್‌ ಕಾರಿನ ಗತವೈಭವದ ಸೆಳಕಿದೆ.

ಇನ್ನು ಕಾರಿನ ನಂಬರ್‌ ಪ್ಲೇಟ್‌ ಮೇಲೆ ರಮ್‌, ಜಿನ್, ಬಿಯರ್‌ನ ಹೆಸರುಗಳು ಮತ್ತು ಯಾವ ಖಾದ್ಯಕ್ಕೆ ಯಾವ ಮದ್ಯ ಹೊಂದುತ್ತದೆ ಎಂಬ ಬರಹಗಳು ರಾರಾಜಿಸುತ್ತವೆ. ಫಿಯೆಟ್‌ ಪುಂಟೊ ಕಾರನ್ನು ಲಂಬವಾಗಿ ಸೀಳಿ ಅದನ್ನು ಗೋಡೆಗೆ ಚಮತ್ಕಾರಿಯಾಗಿ ಅಂಟಿಸಿದ ರೀತಿ ಅದ್ಭುತವಾಗಿದೆ. ನೋಡಲು ಮಜವಾಗಿದೆ. ಇವಿಷ್ಟೇ ಅಲ್ಲದೇ ಡಿಜೆ ಸಂಗೀತ ಕೇಳಿಸುವ ಸ್ಥಳವನ್ನು ಫಿಯೆಟ್‌ ಕಾರಿನ ಬಾನೆಟ್‌ ಬಳಸಿ ಮಾಡಿರುವುದು ಮತ್ತೊಂದು ವಿಶೇಷ. ಉಳಿದಂತೆ, ವಾಷ್‌ ಬೇಸಿನ್‌ ಅನ್ನು ಕಾರಿನ ಟೈಯರ್‌ ಬಳಕೆ ಮಾಡಿ ರೂಪಿಸಿರುವುದು ನೋಡುಗರಿಗೆ ಖುಷಿ ಕೊಡುತ್ತವೆ.

ಕಾರೂ ಇದೆ ಬಾರೂ ಇದೆ

ಫಿಯೆಟ್‌ ಕೆಫೆಯಲ್ಲಿ ಕಾರೂ ಇದೆ ಬಾರೂ ಇದೆ. ಬೆಳಗಿನ ಸಮಯದಲ್ಲಿ ಇಲ್ಲಿನ ಡೌನ್‌ಸ್ಟೇರ್‌್ಸ ಕಾರಿನ ಷೋರೂಂ ಆಗಿದ್ದರೆ, ಮೇಲ್ಮಹಡಿ ಬಾರ್‌ ಅಂಡ್‌ ರೆಸ್ಟೋರೆಂಟ್‌ ಆಗಿರುತ್ತದೆ. ಸಂಜೆ ಷೋ ರೂಂ ಮುಚ್ಚಿದ ನಂತರ ಕೆಳಮಹಡಿ ಮತ್ತು ಮೇಲ್ಮಹಡಿ ಎರಡೂ ಬಾರ್‌ ಅಂಡ್‌ ರೆಸ್ಟೋರೆಂಟ್‌ ಆಗುತ್ತದೆ. ವಿನ್ಯಾಸದಿಂದ ಗಮನಸೆಳೆಯುವ ಕೆಫೆಯಲ್ಲಿ ಹೇರಳ ಬಾರ್‌ಫುಡ್‌ಗಳ ಆಯ್ಕೆ ಇದೆ. ‘ಈಸಿ ಟು ಈಟ್‌’ ಎನಿಸುವಂತಹ ತಿನಿಸುಗಳಾದ ಕೇರಳ ಶೈಲಿಯ ಪ್ರಾನ್ಸ್, ಪಾಸ್ತಾ, ಥಾಯ್‌ ಕರಿ ರೈಸ್‌, ಬರ್ಗರ್‌, ನಾಚೋಸ್‌ ಹೀಗೆ ವಿವಿಧ ಬಗೆಯ ಸ್ನಾಕ್ಸ್‌ ಲಭ್ಯವಿದೆ. ಆರ್ಡರ್‌ ಮಾಡಿ ಅರ್ಧ ತಾಸು ಕಾಯುವಂತಹ ಖಾದ್ಯಗಳ್ಯಾವು ಇಲ್ಲಿನ ಮೆನುವಿನಲ್ಲಿ ಇಲ್ಲ. ಆರ್ಡರ್‌ ಮಾಡಿದ ಕೆಲವೇ ನಿಮಿಷಗಳಲ್ಲಿ ಸಿಗುವಂತಹ ಕ್ವಿಕ್‌ ಮೆನು ಇಲ್ಲಿಯದ್ದು.

‘ಭಾರತೀಯರ ರಸಾಸ್ವಾದ ಸಂವೇದನೆಗೆ ಕಚಗುಳಿ ಇಡುವ ರೀತಿಯಲ್ಲಿ ವಿನ್ಯಾಸಗೊಂಡಿದೆ ‘ಫಿಯೆಟ್‌ ಕೆಫೆ’. ಹೊರಗಿನಿಂದ ನೋಡುವವರಿಗೆ ಇದು ಫಿಯೆಟ್‌ ಷೋ ರೂಂ ಅನಿಸುತ್ತದೆ. ಆದರೆ, ಇದರ ಒಳಗಡೆ ಬಾರ್‌ ಅಂಡ್‌ ರೆಸ್ಟೋರೆಂಟ್‌ ಕೂಡ ಇದೆ. ಬೆಳಿಗ್ಗೆ ಕಾರು ಪ್ರದರ್ಶನಗೊಳ್ಳುವ ಸ್ಥಳ ಕತ್ತಲಾದ ನಂತರ ಲೈವ್‌ ಸಂಗೀತಕ್ಕೆ ತಾವು ನೀಡುತ್ತದೆ. ನಮ್ಮ ಡಿಜೆ ಕೇಳಿಸುವ ಸಂಗೀತ ಜನರಲ್ಲಿ ಕುಣಿಯುವ ಹುಮ್ಮಸ್ಸು ಮೂಡಿಸುತ್ತದೆ. ವಿಭಿನ್ನ ಪರಿಕಲ್ಪನೆಯೊಂದಿಗೆ ವಿಶಿಷ್ಟ ಸ್ಥಳದಲ್ಲಿ ರೂಪುಗೊಂಡಿರುವ ಕೆಫೆ ತನ್ನ ಗ್ರಾಹಕರಿಗೆ ವಿಭಿನ್ನ ಅನುಭವ ದೊರಕಿಸಿಕೊಡುತ್ತದೆ.

ಇಲ್ಲಿಗೆ ಬಂದವರು ಅನುಭವಿಸುವ ಥ್ರಿಲ್‌, ರೋಮಾಚನ ಬೇರೆಲ್ಲೂ ಸಿಗದು. ಇಂತಹದ್ದೊಂದು ಪರಿಕಲ್ಪನೆ ಶುರುವಾಗಿರುವುದು ಇದೇ ಮೊದಲು. ಹಾಗಾಗಿ, ಈ ಪರಿಕಲ್ಪನೆ ಗ್ರಾಹಕರನ್ನು ನಿಧಾನವಾಗಿಯಾದರೂ ತನ್ನತ್ತ ಸೆಳೆಯುತ್ತಿದೆ. ಈಗ ಪ್ರತಿದಿನ ಏನಿಲ್ಲವೆಂದರೂ 40–50 ಜನ ಬರುತ್ತಿದ್ದಾರೆ. ವೀಕೆಂಡ್‌ನಲ್ಲಿ 120–130 ಜನ ಸೇರುತ್ತಾರೆ’ ಎನ್ನುತ್ತಾರೆ ಫಿಯೆಟ್‌ ಕೆಫೆಯ ವ್ಯವಸ್ಥಾಪಕ ನಿರ್ದೇಶಕ ಅದಿತ್‌ ಮಾರ್ಜಾರಿಯ.

ಆಟೋಮೊಬೈಲ್‌ ಥೀಮ್‌ ಇರಿಸಿಕೊಂಡು ರೂಪುಗೊಂಡ ದೇಶದ ಮೊದಲ ರೆಸ್ಟೋರೆಂಟ್‌ ಇದು. ಗಮನಸೆಳೆಯುವ ಪರಿಕಲ್ಪನೆಯೊಂದಿಗೆ ವಿನ್ಯಾಸಗೊಂಡಿರುವ ಈ ಕೆಫೆಯ ಊಟವೂ ಸೊಗಸಾಗಿದೆ. ಬೆಲೆಯೂ ಹೆಚ್ಚಿಗೆ ಇಲ್ಲ. ಇಲ್ಲಿ ಹೆವಿ ಫುಡ್‌ ಸಿಗುವುದಿಲ್ಲ. ಆದರೆ, ಬಾರ್‌ ಫುಡ್‌ನ ರುಚಿ ಸೊಗಸಾಗಿದೆ. ಇಲ್ಲಿ ಸಿಗುವ ಪೋರ್ಕ್‌ ರಿಬ್ಸ್‌ ಮತ್ತು ಲ್ಯಾಂಬ್‌ ಬರ್ಗರ್‌ ಅನ್ನು ತಪ್ಪದೇ ಟೇಸ್ಟ್‌ ಮಾಡಬೇಕು. ಪೋರ್ಕ್‌ ರಿಬ್ಸ್‌ಗೆ ರಮ್‌ ಅತ್ಯುತ್ತಮ ಕಾಂಬಿನೇಷನ್‌. ಹಾಗೆಯೇ, ಬರ್ಗರ್‌ ಮತ್ತು ಥಾಯ್‌ ಥಾಯ್‌ ಫಿಶ್‌ಗೆ ಇಲ್ಲಿನ ಕಾಕ್‌ಟೇಲ್‌ಗಳು ವಿಶೇಷ ರುಚಿ ಕೊಡುತ್ತವೆ. ಈ ರೆಸ್ಟೋರೆಂಟ್‌ನಲ್ಲಿ 45–50 ಜನರ ಆರಾಮವಾಗಿ ಕುಳಿತುಕೊಳ್ಳಬಹುದು. ವಾರಾಂತ್ಯದಲ್ಲಿ ನಡೆಯುವ ಕಾರ್ಯಕ್ರಮಕ್ಕೆ 150 ಜನ ಸೇರುವಷ್ಟು ಸ್ಥಳಾವಕಾಶವಿದೆ. ಭಿನ್ನತೆ ಬಯಸುವವರು ಹಾಗೂ ವಾರಾಂತ್ಯವನ್ನು ಮಜವಾಗಿ ಕಳೆಯಲು ಇಚ್ಛಿಸುವವರು ತಪ್ಪದೇ ಭೇಟಿ ನೀಡಬೇಕಾದ ಸ್ಥಳವಿದು.

ಸ್ಥಳ: ಫಿಯೆಟ್‌ ಕೆಫೆ ಕಾರ್–ಒ–ಬಾರ್, 92, ಅಮರ್‌ಜ್ಯೋತಿ ಲೇಔಟ್‌, ದೊಮ್ಮಲೂರು. ಸೋಮವಾರದಿಂದ ಗುರುವಾರ ಹಾಗೂ ಭಾನುವಾರ: ಬೆಳಿಗ್ಗೆ 11.30ರಿಂದ ರಾತ್ರಿ 11.30. ಶುಕ್ರವಾರ ಮತ್ತು ಶನಿವಾರ ಬೆಳಿಗ್ಗೆ 11.30ರಿಂದ ರಾತ್ರಿ 1. ಟೇಬಲ್ ಕಾಯ್ದಿರಿಸಲು: 080–6568 4444, 4259 4444.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.