ADVERTISEMENT

ಬದುಕಿಗೆ ಸೂರು ಈ ನಾರು

‌ಬಿ.ಲಕ್ಷ್ಮಿಕಾಂತಸಾ
Published 31 ಅಕ್ಟೋಬರ್ 2014, 19:30 IST
Last Updated 31 ಅಕ್ಟೋಬರ್ 2014, 19:30 IST
ಮುಸುಕಿನ ಜೋಳದ ದಂಟುಗಳ ಜೋಪಡಿ
ಮುಸುಕಿನ ಜೋಳದ ದಂಟುಗಳ ಜೋಪಡಿ   

ಮುಸುಕಿನ ಜೋಳದ ದಂಟುಗಳನ್ನು ಒಪ್ಪವಾಗಿ ಜೋಡಿಸಿ ನಿರ್ಮಿಸಿದ್ದ ಜೋಪಡಿಗಳನ್ನು ಬಿಚ್ಚುತ್ತಿದ್ದ ಬಂಜಾರ ಜನಾಂಗದ ವಯೋವೃದ್ಧ ಚಂದ್ರಾನಾಯ್ಕ ನನ್ನನ್ನು ನೋಡಿದೊಡನೆ ಪರಿಚಿತ ನಗೆ ಬೀರಿ, ಬಂದ ಕೆಲಸಾ ಆತರೀ. ಇಗಾದಿ (ಉಗಾದಿ) ಅಮಾಸಿ (ಅಮವಾಸ್ಯೆ)ಗೆ ಊರಾಗ ಇರಬೇಕು. ದೀಪಾವ್ಳಿ ಮುಗಿಸಿ ಬರೋದು ಮತ್ತೆ ನಮ್ಮ ಕುಲಕಸುಬು ನಾರು ತೆಗೆಯೋದು ಐತಲ್ರೀ ಎಂದ.

ಬಳ್ಳಾರಿ ಜಿಲ್ಲೆಯ ಪ್ರಮುಖ ತಾಲ್ಲೂಕು ಕೇಂದ್ರವಾಗಿರುವ ಹಗರಿಬೊಮ್ಮನಹಳ್ಳಿಯಿಂದ 9 ಕಿ.ಮೀ ದೂರದ ಬ್ಯಾಸಿಗದೇರಿ ದುರುಗಮ್ಮನ ದೇಗುಲದ ಬಳಿ ಇರುವ ಹೊಲದಲ್ಲಿ ತನ್ನದೇ ಕುಟುಂಬದ ಇಪ್ಪತ್ತು ಜನರೊಂದಿಗೆ ಕತ್ತಾಳೆಯಿಂದ ನಾರು ತೆಗೆಯುವ ವೃತ್ತಿಯ ಸೂತ್ರಧಾರರೇ ಚಂದ್ರಾನಾಯ್ಕ. ಇಲ್ಲಿಗೆ ಒಂದೆರಡು ಬಾರಿ ಭೇಟಿ ನೀಡಿದ್ದ ಪರಿಣಾಮವಾಗಿ ನನಗೆ ಪರಿಚಿತರೂ ಆಗಿದ್ದರು.
ಇವರೆಲ್ಲರೂ ಚಿತ್ರದುರ್ಗದ ಕುರುಡಿಹಳ್ಳಿ ತಾಂಡಾ (ನಂದನಹಳ್ಳಿ)ಕ್ಕೆ ಸೇರಿದ್ದು, ಯುಗಾದಿಯಿಂದ ದೀಪಾವಳಿಯವರೆಗೂ ಊರಲ್ಲಿಯೇ ಇರುವ ಇವರಿಗೆ ಮಳೆಗಾಲವೇ ಶತ್ರು. ಏಕೆಂದರೆ ಇವರ ಚಟುವಟಿಕೆಗಳು ಗರಿಗೆದರುವುದು ನಮ್ಮ ಊರಿನಲ್ಲಿ ಮಳೆಗಾಲದ ದಿನಗಳು ಮುಗಿದ ನಂತರವೇ. ಅದೂ, ಕಬ್ಬಿನ ರಸ ಹಿಂಡುವಂತಹ ಪುಟ್ಟ ಯಂತ್ರದ ಮೂಲಕ.

ಬಂಜಾರರು ಎಂದಾಕ್ಷಣ ಕಬ್ಬು ಕಡಿಯುವ ಕಾರ್ಮಿಕರು, ಅವರ ಮುರುಕಲು ಗುಡಿಸಲುಗಳು, ಶಿಕ್ಷಣ, ಆರೋಗ್ಯ ಮತ್ತು ನಿರ್ಮಲ ಪರಿಸರದಿಂದ ವಂಚಿತರಾದ ಅವರ ಕರುಳ ಕುಡಿಗಳು ನೆನಪಾಗುತ್ತಾರೆ. ಇದಕ್ಕೆ ವ್ಯತಿರಿಕ್ತ ಎಂಬಂತೆ ಈ ತಾಂಡಾದವರು ಮಾತ್ರ ಈವರೆಗೂ ಕಬ್ಬು ಕಡಿಯುವುದಕ್ಕೆ ಮುಂದಾಗಿಲ್ಲ. ಬದಲಾಗಿ ತಮ್ಮ ಬದುಕಿಗೆ ಕತ್ತಾಳೆಯನ್ನು ನೆಚ್ಚಿಕೊಂಡಿದ್ದಾರೆ. ಕತ್ತಾಳೆಯಿಂದ ನಾರು ತೆಗೆದು ಜೀವನ ಸಾಗಿಸುತ್ತಿದ್ದಾರೆ. ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ, ಈ ಹಿಂದೆ ರೈತರೇ ಶ್ರಮವಹಿಸಿ ಕತ್ತಾಳೆಯಿಂದ ನಾರು ತೆಗೆಯುತ್ತಿದ್ದರು. ಕತ್ತಿಯಂತೆ ಚೂಪಾಗಿರುವ ಮೈ ತುದಿಯೆಲ್ಲಾ ಚಿಕ್ಕ ಚಿಕ್ಕ ಮುಳ್ಳುಗಳನ್ನು ಹೊಂದಿರುವ ಕಾರಣ ಜಾನುವಾರು ಗಳಿಂದ ಪೈರಿನ ರಕ್ಷಣೆ ಮತ್ತು ಮಣ್ಣಿನ ಸವಕಳಿ ತಡೆಯಲು ಹೊಲದ ಬದುವಿನ ಮೇಲೆ ಬೆಳೆಸುತ್ತಿದ್ದ ಕತ್ತಾಳೆ ಎಲೆಗಳನ್ನು ಕತ್ತರಿಸಿ 10 ರಿಂದ 15 ದಿನದವರೆಗೂ ನೀರಿನಲ್ಲಿ ನೆನೆಯಿಸಿ ನಂತರ ಬಡಿಗೆಯಿಂದ ಜಜ್ಜಿದರೆ ಸಿಗುವ ನಾರಿನ ಎಳೆಗಳನ್ನು ಬಿಸಿಲಿನಲ್ಲಿ ಒಣಗಿಸುತ್ತಿದ್ದರು. ಈಗ ಯಂತ್ರದ ಜೊತೆಗೆ ನಾರು ತೆಗೆಯುವವರೂ ಸಿಗುತ್ತಿರುವುದು ರೈತರ ಶ್ರಮ ತಗ್ಗಿದೆ.

ದುರುಗಮ್ಮನ ದೇಗುಲದ ಬಳಿ ಕುಟುಂಬದ ಸದಸ್ಯರೊಂದಿಗೆ ಠಿಕಾಣಿ ಹೂಡುವ ಚಂದ್ರಾನಾಯ್ಕ, ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಲ್ಲಿ ಸುತ್ತಾಡಿ ಲಭ್ಯವಾಗುವ ಕತ್ತಾಳೆಯ ಲೆಕ್ಕಾಚಾರ ಹಾಕುತ್ತಾರೆ. ಸಾಮಾನ್ಯವಾಗಿ ಸಿಸಿಲಾನ್ ಜಾತಿಯ ಕತ್ತಾಳೆಯಿಂದ ನಾರು ತೆಗೆಯಲು ಸೂಕ್ತ. ಈ ಭಾಗದಲ್ಲಿ ವಿಪುಲವಾಗಿ ಬೆಳೆಯುವ ಈ ಕತ್ತಾಳೆ ಗಟ್ಟಿತನ, ಬಾಳಿಕೆ ಮತ್ತು ಬಣ್ಣದ ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಹಾಗಾಗಿ ಈ ತಳಿಯ ಕತ್ತಾಳೆಯಿಂದ ತೆಗೆದ ನಾರಿಗೆ ಬೇಡಿಕೆ ಹೆಚ್ಚು ಎನ್ನುತ್ತಾರೆ ಇವರು.

5 ವರ್ಷದ ಹಿಂದೆ ತಮಿಳುನಾಡಿಗೆ ತೆರಳಿ ಕತ್ತಾಳೆಯಿಂದ ನಾರು ತೆಗೆಯುವ ಅನುಭವ ಪಡೆದುಕೊಂಡಿರುವ ಚಂದ್ರಾನಾಯ್ಕ, ಕಸುಬಿನ ಅನುಭವ ನೀಡಿರುವ ಖರೀದಿದಾರರೂ ಆಗಿರುವ ಚಂಗಮಣಿ ಅವರಿಂದ ಕತ್ತಾಳೆ ಖರೀದಿಗಾಗಿ ಮಾತ್ರ ಮುಂಗಡ ಹಣ ಪಡೆದು ಕೆಲಸ ಆರಂಭಿಸುತ್ತಾರೆ. ಇವರಿಗೇನಿದ್ದರೂ ದಿನಕ್ಕೆ ಇನ್ನೂರು ರೂಪಾಯಿ ಕೂಲಿ ಮಾತ್ರ. ಉದ್ಯಮ ಸ್ವರೂಪ ಪಡೆದಿದ್ದರೂ ಎಲ್ಲಾ ಲಾಭ ಇವರಿಗೆ ಸೇರುವುದಿಲ್ಲ. ದಿನಕ್ಕೆ ಎರಡು ಟ್ರ್ಯಾಕ್ಟರ್ ಕತ್ತಾಳೆ ಲೋಡ್ ಎಂದರೂ ತಿಂಗಳಿಗೆ 60 ಲೋಡ್ ಕತ್ತಾಳೆ ಕಚ್ಚಾ ಸಾಮಾಗ್ರಿ ಸಂಗ್ರಹಿಸುವ ಜೊತೆಗೆ ಕನಿಷ್ಠ ಐದು ತಿಂಗಳಿಗಾಗುವಷ್ಟು ಬೇಡಿಕೆಯನ್ನು ರೈತರಿಗೆ ಸಲ್ಲಿಸುತ್ತಾರೆ. ಒಂದು ದಿನಕ್ಕೆ ಒಂದು ಟನ್ ಎಂದರೂ ತಿಂಗಳಿಗೆ 30 ಟನ್ ನಾರು ಸಿದ್ಧಪಡಿಸಿ ಖರೀದಿದಾರರಿಗೆ ನೀಡುವುದು ಈ ತಂಡದ ಜವಾಬ್ದಾರಿ. ಒಟ್ಟು ವರ್ಷದ ಆವಧಿಯಲ್ಲಿ 150 ಟನ್ ಪೂರೈಸುವಲ್ಲಿ ಯಶಸ್ವಿಯಾಗುತ್ತಾರೆ.

ಖರೀದಿಸಿದ ಕತ್ತಾಳೆ ಪಟ್ಟಿಯ ಅಂಚನ್ನು ಕತ್ತರಿಸಿ ಡೀಸೆಲ್ ಮೂಲಕ ಚಲಿಸುವ ಯಂತ್ರದ ಬಾಯಿಗೆ ಇಡುತ್ತಾರೆ. ಅದು, ಕಬ್ಬನ್ನು ಹಿಂಡುವಂತೆ ಕತ್ತಾಳೆಯ ರಸ ಹೀರಿ ಹಸಿ ನಾರನ್ನು ಮಾತ್ರ ಹೊರಹಾಕುತ್ತದೆ. ಈ ಹಸಿ ನಾರನ್ನು ಬಿಸಿಗೆ ಮೈಯೊಡ್ಡಿಸಿ ಒಣಗಿಸುವುದನ್ನು ಹೆಣ್ಣು ಮಕ್ಕಳು ಮಾಡುತ್ತಾರೆ. ಮೂರು ದಿನ ಒಣಗಿಸಿದರೆ ಸಿದ್ಧವಾಗುವ ನಾರನ್ನು ಪೆಂಡಿ ಕಟ್ಟಿ ಲಾರಿಯ ಮೂಲಕ ತಮಿಳುನಾಡಿಗೆ ಕಳುಹಿಸುತ್ತಾರೆ.

ನಾಲ್ಕು ವರ್ಷಗಳಿಂದ ದಿನಗೂಲಿ ಆಧಾರದಲ್ಲಿ ನಾರು ಉತ್ಪಾದನೆಯಲ್ಲಿ ತೊಡಗಿಕೊಂಡಿದ್ದರೂ ಈ ಅಲೆಮಾರಿ ಕುಂಟುಂಬ ನಾರು ತೆಗೆಯುವ ಯಂತ್ರದ ಹೊರತಾಗಿ ಬೇರೇನನ್ನೂ ಖರೀದಿಸಿಲ್ಲ ಎಂಬ ಕೊರಗಿದೆ. ಉತ್ಪಾದನೆಯಲ್ಲಿ ತೊಡಗಿಸಿಕೊಂಡಷ್ಟೂ ದಿನ ಇವರ ಕರುಳ ಕುಡಿಗಳು ಅಕ್ಷರ ಭಾಗ್ಯ, ನಿರ್ಮಲ ಪರಿಸರ, ಪೌಷ್ಠಿಕ ಆಹಾರ ಮತ್ತು ವಸತಿಯಿಂದ ಅಕ್ಷರಶಃ ವಂಚಿತರಾಗುತ್ತಾರೆ.

ಒಂದು ವರ್ಷದ ಅವಧಿಯಲ್ಲಿ ತಾಲ್ಲೂಕಿನಿಂದಲೇ ₨20 ಲಕ್ಷಕ್ಕೂ ಹೆಚ್ಚು ಮೌಲ್ಯದ ನಾರು ರವಾನಿಸಲಾಗಿದ್ದರೂ ಕುರುಡನಹಳ್ಳಿಯ ಶ್ರಮ ಜೀವಿಗಳ ವೃತ್ತಿ ಉದ್ಯಮದ ಸ್ವರೂಪ ಪಡೆದಿಲ್ಲ. ರಾಜ್ಯದಲ್ಲಿ ನಾರು ಅಭಿವೃದ್ಧಿ ಮಂಡಳಿ ಇದೆ. ಆದರೆ, ಅದು ತೆಂಗಿನ ನಾರು ಉತ್ಪಾದಕರ ಹಿತಾಸಕ್ತಿಯನ್ನು ಕಾಪಾಡಲೂ ಆಗದಷ್ಟು ನಿಶ್ಶಕ್ತವಾಗಿದೆ ಎಂದು ನಿಟ್ಟುಸಿರು ಬಿಡುವ ಚಂದ್ರಾನಾಯ್ಕ, ಇಲ್ಲಿನ ನಾರಿನ ಸಾಮಾಗ್ರಿ ಆಧರಿಸಿ ಉತ್ಪನ್ನಗಳನ್ನು ತಯಾರಿಸುವ ಸಣ್ಣ ಅಥವಾ ಗುಡಿ ಕೈಗಾರಿಕೆ ಸ್ಥಾಪನೆಯಾದರೆ ಲಾಭ ಹೆಚ್ಚಾಗುತ್ತದೆ ಎಂಬ ನಿರೀಕ್ಷೆಯಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.