ADVERTISEMENT

ಬನ್ನೂರು ಕುರಿಗೆ ಬಲು ಬೇಡಿಕೆ

ಸುಬ್ರಹ್ಮಣ್ಯ ಎಚ್.ಎಂ
Published 16 ಮಾರ್ಚ್ 2018, 19:30 IST
Last Updated 16 ಮಾರ್ಚ್ 2018, 19:30 IST
ಬನ್ನೂರು ಕುರಿಗೆ ಬಲು ಬೇಡಿಕೆ
ಬನ್ನೂರು ಕುರಿಗೆ ಬಲು ಬೇಡಿಕೆ   

ಯುಗಾದಿ ಹಬ್ಬದ ಮರುದಿನ ‘ವರ್ಷದ ತೊಡಕು’ ಆಚರಣೆ ಹಿನ್ನೆಲೆಯಲ್ಲಿ ಚಾಮರಾಜಪೇಟೆ ಈದ್ಗಾ ಮೈದಾನ, ಟ್ಯಾನರಿ ರಸ್ತೆ, ಕೆ.ಆರ್‌.ಮಾರುಕಟ್ಟೆ ಸೇರಿದಂತೆ ನಗರದ ನಾನಾ ಮಾರುಕಟ್ಟೆಗಳಲ್ಲಿ ನಾಟಿ ಮತ್ತು ಹೈಬ್ರಿಡ್ ತಳಿಯ ಕುರಿಗಳು ಮತ್ತು ಮೇಕೆಗಳ ಮಾರಾಟ ಬಿರುಸಾಗಿದೆ.

ಹಬ್ಬದ ಮರುದಿನ ಮಾಂಸ ಸೇವಿಸುವ ಮನೆಗಳಲ್ಲಿ ವರ್ಷ ತೊಡಕು ದಿನಕ್ಕಾಗಿ ಬಾಡೂಟ ಮಾಡುವುದು ವಾಡಿಕೆ. ಅದಕ್ಕಾಗಿ ಮಾಂಸ ಪ್ರಿಯರು 3–4 ದಿನ ಮುಂಚಿತವಾಗಿಯೇ ಕುರಿ, ಮೇಕೆ ಖರೀದಿಯಲ್ಲಿ ನಿರತರಾಗಿದ್ದಾರೆ.

‘ಪ್ರತಿವರ್ಷ ಹಬ್ಬಕ್ಕೆ ಒಂದೆರಡು ದಿನ ಮೊದಲೇ ಸಾರ್ವಜನಿಕರು ಖರೀದಿಗೆ ಬರುತ್ತಾರೆ. ಆದರೆ, ಆಯುಧ ಪೂಜೆ ಮತ್ತು ಬಕ್ರೀದ್ ಹಬ್ಬಗಳಲ್ಲಿ ಇರುವಷ್ಟು ಬೇಡಿಕೆ ಈ ಹಬ್ಬಕ್ಕೆ ಇಲ್ಲ. ಆದರೂ, ನಿತ್ಯ ವ್ಯಾಪಾರಕ್ಕೆ ಹೋಲಿಸಿದರೆ ವರ್ಷದ ತೊಡಕು ದಿನದಂದು ಹೆಚ್ಚಿನ ವ್ಯಾಪಾರವಾಗುತ್ತದೆ’ ಎಂದು ಮಡಿವಾಳದ ಪಾಪ್ಯುಲರ್ ಮಟನ್‌ ಸ್ಟಾಲ್‌ನ ಅಸ್ಲಾಂ ಪಾಷಾ ಹೇಳುತ್ತಾರೆ.

ADVERTISEMENT

ಮಂಡ್ಯ, ಚನ್ನಪಟ್ಟಣ, ಆನೇಕಲ್, ಬನ್ನೂರು, ಮಳವಳ್ಳಿ, ಚಿಂತಾಮಣಿ, ಇಂಡಿನಾಳ ಹಾಗೂ ಆಂಧ್ರಪ್ರದೇಶ ಮತ್ತು ತಮಿಳುನಾಡಿನ ವಿವಿಧೆಡೆಗಳಿಂದ ರೈತರು ಕುರಿಗಳನ್ನು ತಂದು ಮಾರಾಟ ಮಾಡುತ್ತಿದ್ದಾರೆ. ಬನ್ನೂರು ತಳಿಯ ಕುರಿಗಳಿಗೆ ಹೆಚ್ಚಿನ ಬೇಡಿಕೆ ಇದೆ. ಇವುಗಳೊಂದಿಗೆ ಗೆಣಸಿ, ಕಿರುಗಾವಲು, ಓತ, ಮೈಲಾರಿ, ಟಗರು ಜಾತಿಯ ಕುರಿಗಳು ಬೆಂಗಳೂರಿಗರಿಗೆ ಇಷ್ಟವಾಗುತ್ತಿವೆ.

‘ಹಿಂದೆಲ್ಲ ಹಳ್ಳಿಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕುರಿ ಸಾಕುತ್ತಿದ್ದರು. ಆದರೆ, ಇತ್ತೀಚಿನ ವರ್ಷಗಳಲ್ಲಿ ಕುರಿ ಸಾಕುವವರ ಸಂಖ್ಯೆ ಕಡಿಮೆಯಾಗುತ್ತಿದ್ದು, ಬೇಡಿಕೆ ಹೆಚ್ಚಾಗಿದೆ. ಇದರಿಂದಾಗಿ ಬೆಲೆ ಕೂಡ ಏರಿಕೆಯಾಗಿದೆ. ಬನ್ನೂರು ಕುರಿಗೆ ಹೆಚ್ಚು ಬೇಡಿಕೆಯಿದೆ. ಅದರಲ್ಲಿ ಮಾಂಸದ ಪ್ರಮಾಣ ಹೆಚ್ಚು, ರುಚಿಯೂ ಅದ್ಭುತ’ ಎನ್ನುತ್ತಾರೆ ವ್ಯಾಪಾರಿ ಮುನಿಯಪ್ಪ.

‘ಹಬ್ಬದ ಹಿನ್ನೆಲೆಯಲ್ಲಿ ಅಂಗಡಿಗಳಲ್ಲಿ ಜನ ಸಂದಣಿ ಹೆಚ್ಚಾಗಿರುತ್ತದೆ. ಹಾಗಾಗಿ ನಾಲ್ಕಾರು ಮನೆಯವರು ಸೇರಿ ಒಂದು ಕುರಿ ಖರೀದಿ ಮಾಡಿ, ಮಾಂಸವನ್ನು ಸಮವಾಗಿ ಹಂಚಿಕೆ ಮಾಡಿಕೊಳ್ಳುತ್ತೇವೆ. ಹೀಗೆ ಮಾಡುವುದರಿಂದ ಹಣದಲ್ಲಿ ಕೊಂಚ ಉಳಿತಾಯವಾಗುತ್ತದೆ’ ಎಂದು ಕುರಿ ಖರೀದಿಗೆ ಬಂದಿದ್ದ ಹೊಸಕೋಟೆ ನಿವಾಸಿ ರಾಮಣ್ಣ ಹೇಳಿದರು.

**

ಮಾಂಸದ ಬೆಲೆ ಹೆಚ್ಚಾಗಿದೆ. ಅಂಗಡಿಗಳಿಂದ ಕೊಳ್ಳಲು ಆಗುವುದಿಲ್ಲ. ಹಬ್ಬಕ್ಕೂ ಮೊದಲು ನೆರೆಹೊರೆ ಮಂದಿ ಸೇರಿ ಮಾಂಸಕ್ಕಾಗಿ ಚೀಟಿ ಹಾಕಿಕೊಳ್ಳುತ್ತೇವೆ. ವರ್ಷ ತೊಡಕಿಗೆ ಮುನ್ನಾ ದಿನ ಕುರಿ ಖರೀದಿಸಿ, ಗುಡ್ಡೆ ಲೆಕ್ಕದಲ್ಲಿ ಮಾಂಸ ಹಂಚಿಕೆ ಮಾಡಿಕೊಳ್ಳುತ್ತೇವೆ.

ಮುನಿರಾಜು, ಅತ್ತಿಬೆಲೆ

**

ಬೆಲೆ ವಿವರ

15 ಕೆ.ಜಿ. ತೂಗುವ ಕುರಿಯ ಬೆಲೆ: ₹7ರಿಂದ ₹8ಸಾವಿರ

ಮಾಂಸದ ಬೆಲೆ ಕೆ.ಜಿ.ಗೆ: ₹500ರಿಂದ 520

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.