ADVERTISEMENT

ಬಾಣಸಿಗರ ‘ಕೋಲ್ಡ್‌ ವಾರ್‌’

ರಮೇಶ ಕೆ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ಮೂವೆನ್‌ಪಿಕ್‌ ಹೋಟೆಲ್‌ನ ಬಾರ್ ವ್ಯವಸ್ಥಾಪಕ ಇತೇಶ್‌ ಜತೆ ಬಾರ್ ಟೆಂಡರ್ ವಿಜಯ್
ಮೂವೆನ್‌ಪಿಕ್‌ ಹೋಟೆಲ್‌ನ ಬಾರ್ ವ್ಯವಸ್ಥಾಪಕ ಇತೇಶ್‌ ಜತೆ ಬಾರ್ ಟೆಂಡರ್ ವಿಜಯ್   

ದಕ್ಷಿಣ ಭಾರತದ ಕರಿದ ತಿನಿಸುಗಳಾದ ಚಕ್ಕುಲಿ, ಕೋಡುಬಳೆ, ಖಾರ, ಅವರೆಕಾಳು, ಆಲೂಬೋಂಡ, ಬಾಳೆಕಾಯಿ ಬಜ್ಜಿ, ಮೂರು ಬಗೆಯ ವಡೆ ಸೇರಿದಂತೆ 20ಕ್ಕೂ ಹೆಚ್ಚಿನ ತಿನಿಸುಗಳು ಅಲ್ಲಿದ್ದವು. ಪಕ್ಕದಲ್ಲೇ ಫ್ರಾನ್ಸ್‌ ದೇಶದ ‘ಚಾಕಲೇಟ್‌ ಮೂವ್ಸ್’ ಹೆಸರಿನ ಪೇಸ್ಟ್ರಿಗೆ ಅಲಂಕಾರ ಮಾಡುತ್ತಿದ್ದ ಬಾಣಸಿಗ.

ಮತ್ತೊಂದು ಕೌಂಟರ್‌ನಲ್ಲಿ ಬಾರ್‌ ವ್ಯವಸ್ಥಾಪಕ, ಕಾಫಿಗೆ ಕಾಕ್‌ಟೇಲ್‌ ಮಿಶ್ರಣ ಮಾಡಿ ಅತಿಥಿಗಳಿಗೆ ಕುಡಿಯಲು ಕೊಡುತ್ತಿದ್ದರು. ಭಾರತ ಸೇರಿದಂತೆ ಜಗತ್ತಿನ ವಿವಿಧ ಭಾಗಗಳ ಸಿಹಿತಿನಿಸು ಹಾಗೂ ಪಾನಿಯಗಳು ಅಲ್ಲಿ ತಯಾರಾಗುತ್ತಿದ್ದವು.

‘ದಿ ಶೆಫ್‌ ಪೋಸ್ಟ್‌’ ವೆಬ್‌ಸೈಟ್‌ ಈಚೆಗೆ ಜೆ.ಡಬ್ಲ್ಯೂ ಮಾರಿಯಟ್‌ ಹೋಟೆಲ್‌ನಲ್ಲಿ ಆಯೋಜಿಸಿದ್ದ ‘ಕೋಲ್ಡ್‌ ವಾರ್‌’ ಕಾರ್ಯಕ್ರಮದಲ್ಲಿ ನಗರದ 11 ಹೋಟೆಲ್‌ಗಳ 11 ಬಾಣಸಿಗರು ಭಾಗವಹಿಸಿದ್ದರು. ಈ ಬಾಣಸಿಗರು ತಮ್ಮ ಸಿಗ್ನೇಚರ್‌ ಡೆಸರ್ಟ್‌, ಪಾನೀಯವನ್ನು ಸಿದ್ಧಪಡಿಸಿ, ಬಂದ ಅತಿಥಿಗಳಿಗೆ ರುಚಿ ನೋಡಲು ಕೊಡುತ್ತಿದ್ದರು.

‘ಕೋಲ್ಡ್‌ ವಾರ್‌’ ಥೀಮ್‌ನಲ್ಲಿ ಪಾನೀಯವನ್ನು ಮಾಡಿದ್ದೇವೆ. ಕಾಫಿ ಜೊತೆ ಕಾಕ್‌ಟೇಲ್‌ ಮಿಶ್ರಣ ಮಾಡಿ ಕೊಡುತ್ತೇವೆ. ಇದು ಇಲ್ಲಿಯ ವಿಶೇಷ ಎನ್ನುತ್ತಾರೆ ಮೂವೆನ್‌ಪಿಕ್‌ ಹೋಟೆಲ್‌ನ ಬಾರ್‌ ವ್ಯವಸ್ಥಾಪಕ ಇತೇಶ್‌.

‘ದೇವಯ್ಯ ಪಾರ್ಕ್‌ ಹತ್ತಿರ 25 ವರ್ಷಗಳಿಂದ ಶ್ರೀ ಆಂಡಾಳ್‌ ಕೇಟರರ್ಸ್‌ ನಡೆಸುತ್ತಿದ್ದೇವೆ. ದಕ್ಷಿಣ ಭಾರತೀಯ  ಶೈಲಿಯ ಕರಿದ ತಿನಿಸುಗಳನ್ನು ಇಲ್ಲಿ ಮಾಡಿದ್ದೇವೆ. ಮದುವೆ ಸೇರಿದಂತೆ ಇತರೆ ಸಮಾರಂಭಗಳಿಗೂ ಕೇಟರಿಂಗ್‌ ಮಾಡುತ್ತೇವೆ’ ಎಂದರು ಮನು ನರಸಿಂಹನ್‌.

ಯಶವಂತಪುರದ ತಾಜ್‌ ವಿವಾಂತ  ಹೋಟೆಲ್‌ನಿಂದ ಬಂದಿದ್ದ ಪೇಸ್ಟ್ರಿಶೆಫ್‌ ಮಂಜು ಅವರು ಫ್ರಾನ್ಸ್‌ ದೇಶದ ಪೇಸ್ಟ್ರಿ ಮಾಡಿದ್ದರು. ಹೀಗೆ ವಿವಿಧ ಪಂಚತಾರಾ ಹೋಟೆಲ್‌ಗಳ ಬಾಣಸಿಗರು ತಮ್ಮ ಸಿಗ್ನೇಚರ್‌ ತಿನಿಸುಗಳನ್ನು ಮಾಡಿ, ಅಂದವಾಗಿ ಪ್ರಸ್ತುತಪಡಿಸಿದ್ದರು. ಬಾಣಸಿಗ ಮಂಜುನಾಥ್‌ ಮುರಾಲ್‌, ನಟಿ ವಸುಂಧರಾದಾಸ್‌ ಅತಿಥಿಯಾಗಿ ಭಾಗವಹಿಸಿದ್ದರು.

ಬಾಣಸಿಗರ ಮಾಹಿತಿ ತಾಣ
ಪಂಚತಾರಾ ಹೋಟೆಲ್‌ಗಳ ಬಾಣಸಿಗರನ್ನು ಪರಿಚಯಿಸುವ ಜೊತೆಗೆ ಅವರು ಮಾಡುವ ಆಹಾರ, ಪಾನೀಯಗಳ ಮಾಹಿತಿಯನ್ನು ನೀಡುತ್ತಿದೆ ದಿ ಶೆಫ್‌ ಪೋಸ್ಟ್‌ ವೆಬ್‌ಸೈಟ್‌.

‘ನಗರದ ಪಂಚತಾರಾ ಹೋಟೆಲ್‌ ಸೇರಿದಂತೆ ಪ್ರಮುಖ ಹೋಟೆಲ್‌ಗಳ ಬಾಣಸಿಗರ ಮಾಹಿತಿ ನಮ್ಮ ವೆಬ್‌ಸೈಟ್‌ನಲ್ಲಿ ಸಿಗುತ್ತದೆ. ಈ ವೆಬ್‌ಸೈಟ್‌ ನೋಡಿಕೊಂಡು, ಯಾವ ಬಾಣಸಿಗ ಮಾಡುವ ಊಟ ಇಷ್ಟವಾಗುತ್ತದೆಯೋ ಆ ಹೋಟೆಲ್‌ಗೆ ಹೋಗಿ ರುಚಿ ನೋಡಬಹುದು.

ಅವರೊಂದಿಗೆ ಸಂವಹನ ನಡೆಸಲು ಅವಕಾಶವಿದೆ. ‘ಕೋಲ್ಡ್‌ ವಾರ್‌’ ಮೂಲಕ 11 ಬಾಣಸಿಗರನ್ನು ಒಟ್ಟುಗೂಡಿಸಿದ್ದೇವೆ. ಪ್ರತಿ ಕಾರ್ಯಕ್ರಮದಲ್ಲೂ ಬೇರೆ ಬೇರೆ ರೆಸ್ಟೊರೆಂಟ್‌ಗಳ ಬಾಣಸಿಗರನ್ನು ಒಂದೆಡೆ ಸೇರಿಸುತ್ತೇವೆ’ ಎನ್ನುತ್ತಾರೆ ದಿ ಶೆಫ್‌ ಪೋಸ್ಟ್‌ ಸಹ ಸಂಸ್ಥಾಪಕಿ ಸ್ನೇಹಾ ಚಂದ್ರಶೇಖರ್‌.
ಮಾಹಿತಿಗೆ:  www.thechefpost.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT