ADVERTISEMENT

ಬಾಹುಬಲಿ ಫ್ಯಾಷನ್

​ಪ್ರಜಾವಾಣಿ ವಾರ್ತೆ
Published 23 ಮೇ 2017, 19:30 IST
Last Updated 23 ಮೇ 2017, 19:30 IST
ಅನುಷ್ಕಾ ಶೆಟ್ಟಿ
ಅನುಷ್ಕಾ ಶೆಟ್ಟಿ   

-ಅನಂತರಾಜು ವಿ.ಕೆ

**

‘ಬಾಹುಬಲಿ 2’ ಸಿನಿಮಾ ನೋಡಿದವರಿಗೆ ಇದರಲ್ಲಿ ನಟಿಯರು ಧರಿಸಿರುವ ಆಭರಣಗಳ ಮೇಲೂ ಕಣ್ಣು ಬಿದ್ದಿದೆ.

ADVERTISEMENT

‘ಅಬ್ಬಾ ಎಷ್ಟು ಚೆನ್ನಾಗಿದೆ ಅಲ್ವಾ… ಅನುಷ್ಕಾಳ ಸರ ನೋಡು, ತಮ್ಮನ್ನಾ ಹಾಕಿರುವ ಸೊಂಟದ ಡಾಬು ನೋಡು, ರಮ್ಯಕೃಷ್ಣ ಧರಿಸಿರುವ ಮೂಗುತಿ ನೋಡಿದ್ಯಾ.. ಎಷ್ಟು ಚೆನ್ನಾಗಿತ್ತು ಅಲ್ವಾ… ಒಳ್ಳೊಳ್ಳೆ ಡಿಸೈನ್ಸ್ ಇತ್ತು…’ ಎಂದು ಸಹಜವಾಗಿಯೇ ಹೆಂಗಳೆಯರು ಮಾತನಾಡಿಕೊಳ್ಳುತ್ತಿದ್ದಾರೆ.

‘ಬಾಹುಬಲಿ 2’ ಸಿನಿಮಾದಲ್ಲಿ ದೇವಸೇನಾ ಪಾತ್ರ ಮಾಡಿರುವ ಅನುಷ್ಕಾ ಶೆಟ್ಟಿ ಹಾಗೂ ಶಿವಗಾಮಿಯಾಗಿ ನಟಿಸಿರುವ ರಮ್ಯಕೃಷ್ಣ ಧರಿಸಿರುವಂತಹ ಆಭರಣಗಳ ಟ್ರೆಂಡ್ ಈಗ ಶುರುವಾಗಿದೆ.

ಈ ಅದ್ದೂರಿ ಸಿನಿಮಾದಲ್ಲಿ ದೇವಸೇನಾ, ಶಿವಗಾಮಿ ಧರಿಸಿರುವ ಆಭರಣಗಳು ಮಹಿಳೆಯರ ಹಾಗೂ ಹುಡುಗಿಯರ ಮನಸೆಳೆಯುತ್ತಿವೆ. ಅದರಲ್ಲೂ ಅನುಷ್ಕಾ ಶೆಟ್ಟಿಯ ಮೂಗುತಿ, ತಮ್ಮನ್ನಾ ಡಾಬು ಕಣ್ಣುಕುಕ್ಕುತ್ತಿವೆ. ಈ ಆಭರಣಗಳು ಚಿನ್ನ, ಬೆಳ್ಳಿ, ಕುಂದನ್, ಮಲ್ಟಿ ಕಲರ್ ಸ್ಟೋನ್, ಮುತ್ತುಗಳಲ್ಲಿ ಲಭ್ಯ ಇವೆ. ಬಳೆ, ಸರ, ಮೂಗುತಿ, ಸೊಂಟದ ಪಟ್ಟಿ, ಕಾಲ್ಗೆಜ್ಜೆ, ಕಾಲುಂಗುರ, ಬ್ರೇಸ್‌ಲೆಟ್‌, ಓಲೆ, ಉಂಗುರ ಸೇರಿದಂತೆ ಇನ್ನೂ ಹಲವು ಆಭರಣಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ.
ಸಿಲಿಕಾನ್‌ ಸಿಟಿಯ ಮಾರುಕಟ್ಟೆಗೂ ‘ಬಾಹುಬಲಿ ಫ್ಯಾಷನ್’ ಕಾಲಿಟ್ಟಿದೆ. ಈ ಪುರಾತನ ಶೈಲಿಯ ಆಭರಣ ಹುಡುಕಿಕೊಂಡು ಫ್ಯಾನ್ಸಿ
ಅಂಗಡಿಗಳಿಗೆ ಎಡತಾಕುವ ಹೆಂಗಳೆಯರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

‘ದಿನಕ್ಕೆ ಕನಿಷ್ಠ 100 ಮಹಿಳೆಯರು ಬಾಹುಬಲಿ ಸಿನಿಮಾದಲ್ಲಿ ಬಳಸಿರುವ ಶೈಲಿಯ ಆಭರಣ ಕೇಳಿಕೊಂಡು ಬರುತ್ತಾರೆ. ಅದರಲ್ಲೂ ಹಸೆಮಣೆಯೇರಲಿರುವ ಹುಡುಗಿಯರು ಹಾಗೂ ಮದುವೆ ಸಂಭ್ರಮದಲ್ಲಿ ಭಾಗವಹಿಸಲು ಸಿದ್ಧತೆ ನಡೆಸಿದ ಮಹಿಳೆಯರೇ ಹೆಚ್ಚು. ಅನುಷ್ಕಾ ಶೆಟ್ಟಿ ಧರಿಸಿರುವಂಥ ಶೈಲಿಯ ಆಭರಣಗಳಿಗೆ ಬೇಡಿಕೆ ಹೆಚ್ಚಿದೆ.

ಈ ಆಭರಣಗಳಿಗೆ ₹ 2,300ರಿಂದ ₹ 35 ಸಾವಿರದವರೆಗೆ ಬೆಲೆ ಇದೆ. ಖರೀದಿಸಲು ಶಕ್ತಿ ಇಲ್ಲದ ಕೆಲವು ಮಹಿಳೆಯರು ದಿನದ ಆಧಾರದ ಮೇಲೆ ಬಾಡಿಗೆಗೆ ಕೂಡ ತೆಗೆದುಕೊಂಡು ಹೋಗುತ್ತಾರೆ. ನಗರದಲ್ಲಿ ಈ ರೀತಿಯ ಅಂಗಡಿಗಳು ಸುಮಾರು 200 ಇವೆ’ ಎಂದು ಕಮರ್ಷಿಯಲ್‌ ಸ್ಟ್ರೀಟ್‌ನ ಫ್ಯಾನ್ಸಿ ಅಂಗಡಿ ಮಾಲೀಕ ಅಬ್ದುಲ್ ಹೇಳುತ್ತಾರೆ.

ಹೈದರಾಬಾದ್‌ನ ಅಮರಪಲ್ಲಿ ಜ್ಯುವೆಲ್ಸ್ ‘ಬಾಹುಬಲಿ ಆಭರಣ’ ಎಂಬ ಹೊಸ ಸಂಗ್ರಹವನ್ನು ಮಾರುಕಟ್ಟೆಗೆ ಪರಿಚಯಿಸಿದೆ. ‘ಬಾಹುಬಲಿ’ ಚಿತ್ರಕ್ಕೆ ಇವರೇ ಆಭರಣ ಡಿಸೈನ್ ಮಾಡಿಕೊಟ್ಟವರು. ಈ ಸಿನಿಮಾಕ್ಕಾಗಿ 1,500 ಆಭರಣ ಸಿದ್ಧಪಡಿಸಿದ್ದರು. ಈಗ ನೀವೂ ಈ ಆಭರಣ ಕೊಂಡುಕೊಳ್ಳಬಹುದು.  ಸಣ್ಣ ಮೂಗುತಿಗೆ ₹ 600 ಇದ್ದರೆ, ನೆಕ್ಲೆಸ್ ಬೆಲೆ ಸುಮಾರು ₹ 58 ಸಾವಿರ ಇದೆ. ಇನ್ನು ಆನ್‌ಲೈನ್‌ನಲ್ಲೂ ಆಭರಣ ಲಭ್ಯವಾಗುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.