ADVERTISEMENT

ಬಿಎಂಎಸ್‌ ಕಾಲೇಜಿನ ಹೊಸ ಚಿಗುರು, ಹಳೆ ಬೇರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2015, 19:30 IST
Last Updated 3 ಆಗಸ್ಟ್ 2015, 19:30 IST

ಬೆಂಗಳೂರಿನ ಅನೇಕ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣಕ್ಕಾಗಿ ರಾಷ್ಟ್ರ–ಅಂತರರಾಷ್ಟ್ರೀಯ ಮಟ್ಟದಲ್ಲಿ ಹೆಸರುವಾಸಿಯಾಗಿವೆ. ಬಸವನಗುಡಿಯಲ್ಲಿರುವ ಬಿಎಂಎಸ್‌ ಸ್ವಾಯತ್ತ ಎಂಜಿನಿಯರಿಂಗ್‌ ಕಾಲೇಜ್‌ ಕೂಡ ಇಂಥ ಶಿಕ್ಷಣ ಸಂಸ್ಥೆಗಳಲ್ಲೊಂದು. ಈ ಸಂಸ್ಥೆ ವಿಟಿಯು ಅಡಿಯಲ್ಲಿ ಸಂಜೆ ಕಾಲೇಜನ್ನೂ ನಡೆಸುತ್ತಿರುವುದು ವಿಶೇಷ.

ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜ್‌ ನಗರದ ಪ್ರಮುಖ ವೃತ್ತಿಪರ ಶಿಕ್ಷಣ ಕಾಲೇಜುಗಳಲ್ಲಿ ಒಂದು. ಈ ಕಾಲೇಜು ಪ್ರಾರಂಭವಾದದ್ದು ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಹಿಂದಿನ ವರ್ಷ, 1946ರಲ್ಲಿ.  ಭಾರತದಲ್ಲಿ ತಾಂತ್ರಿಕ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭವಾದ ಮೊದಲ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಬಿಎಂಎಸ್‌ ಕಾಲೇಜು ಕೂಡ ಒಂದು.

ಬುಸನಯನ ಮುಕುಂದದಾಸ್‌ ಶ್ರೀನಿವಾಸಯ್ಯ (ಬಿಎಂಎಸ್‌) ಈ ಕಾಲೇಜನ್ನು ಪ್ರಾರಂಭಿಸಿದಾಗ ಮೈಸೂರು ಮಹಾರಾಜರು ‘ರಾಜಕಾರ್ಯ ಪ್ರಸಕ್ತ’ ಎಂಬ ಹೆಸರಿನಲ್ಲಿ ಗೌರವಿಸಿದ್ದರು. ಸ್ವಾತಂತ್ರ್ಯ ಪೂರ್ವ ಕಾಲದಿಂದಲೂ ಭಾರತದಲ್ಲಿ ಗುಣಮಟ್ಟದ ತಾಂತ್ರಿಕ ಶಿಕ್ಷಣದ ಮಹತ್ವವನ್ನು ಪ್ರತಿಪಾದಿಸುತ್ತಲೇ ಬಂದಿದ್ದವರು ಬಿ.ಎಂ.ಶ್ರೀನಿವಾಸಯ್ಯ. ಬಿಎಂಎಸ್‌ ಎಂಜಿನಿಯರಿಂಗ್‌ ಕಾಲೇಜ್‌ ಕೂಡ ಅವರ ಈ ಕನಸಿನ ಭಾಗವೇ ಆಗಿತ್ತು.

ಶ್ರೀನಿವಾಸಯ್ಯ ಅವರ ಮರಣದ ನಂತರ ಅವರ ಮಗ ಬಿ.ಎಸ್‌. ನಾರಾಯಣನ್ ಕಾಲೇಜಿನ ಆಡಳಿತ ವಹಿಸಿಕೊಂಡರು. ಅವರ ಮಾರ್ಗದರ್ಶನದಲ್ಲಿಯೇ ಈ ಶಿಕ್ಷಣ ಸಂಸ್ಥೆ ಉನ್ನತಿ ಕಂಡಿತು. ಇಂದು ಬಿಎಂಎಸ್‌ ಕಾಲೇಜಿನ ಆಡಳಿತವನ್ನು ಬಿಎಂಎಸ್‌ ಎಜುಕೇಶನ್‌ ಟ್ರಸ್ಟ್‌ ನೋಡಿಕೊಳ್ಳುತ್ತದೆ.

ಕರ್ನಾಟಕದ ವಿವಿಧ ಪ್ರದೇಶಗಳಿಂದಷ್ಟೇ ಅಲ್ಲ, ದೇಶದ ವಿವಿಧ ರಾಜ್ಯಗಳಿಂದ, ವಿದೇಶಗಳಿಂದ ಬಂದಿರುವ ವಿದ್ಯಾರ್ಥಿಗಳೂ ಇಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ಇದು ಕರ್ನಾಟಕದ ಅತಿ ಹಳೆಯ ಎಂಜಿನಿಯರಿಂಗ್‌ ಕಾಲೇಜುಗಳಲ್ಲಿ ಒಂದು. 2006ರಲ್ಲಿ ವಜ್ರ ಮಹೋತ್ಸವ ಆಚರಿಸಿಕೊಂಡಿದೆ.

ಮೂರರಿಂದ ಆರಂಭಿಸಿ...
ಕೇವಲ ಮೂರು ಪದವಿಪೂರ್ವ ಕೋರ್ಸ್‌ಗಳೊಂದಿಗೆ ಆರಂಭವಾದ ಈ ಕಾಲೇಜಿನಲ್ಲಿ ಇಂದು 13 ಪದವಿ ಪೂರ್ವ ಕೋರ್ಸ್‌ಗಳು ಇವೆ. 16 ಸ್ನಾತಕೋತ್ತರ ಕೋರ್ಸ್‌ಗಳಿವೆ. ಈ ಕಾಲೇಜಿನ 15 ವಿಭಾಗಗಳು ಸಂಶೋಧನಾ ಕೇಂದ್ರಗಳಾಗಿಯೂ ಗುರ್ತಿಸಿಕೊಂಡಿವೆ. ಅಮೆರಿಕದ ಮೆಲ್ಟನ್‌ ಫೌಂಡೇಶನ್ ಈ ಸಂಸ್ಥೆಯನ್ನು ದತ್ತು ತೆಗೆದುಕೊಂಡಿದೆ. ಮೆಲ್ಟನ್‌ ಫೌಂಡೇಶನ್‌ ದತ್ತು ತೆಗೆದುಕೊಂಡಿರುವ ಭಾರತದ ಏಕೈಕ ಸಂಸ್ಥೆ ಇದು ಎನ್ನುವುದು ವಿಶೇಷ.

ಪ್ರಸ್ತುತ 5000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಉನ್ನತ ವ್ಯಾಸಂಗ ಮಾಡುತ್ತಿದ್ದಾರೆ. ಬಿಎಂಎಸ್‌ ಆರ್‌ ಅಂಡ್‌ ಡಿ ಸೆಂಟರ್‌ ಅನೇಕ ಕ್ಷೇತ್ರಗಳಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೊಂಡಿದೆ. ಆ ಯೋಜನೆಯ ವರದಿಗಳನ್ನು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪತ್ರಿಕೆಗಳಲ್ಲಿ ಪ್ರಕಟಿಸಿ ಜಾಗತಿಕ ಗಮನವನ್ನೂ ಸೆಳೆದಿವೆ.

ಸಾಂಸ್ಕೃತಿಕ ಉತ್ಸವ
ಬಿಎಂಎಸ್‌ ಕಾಲೇಜಿನಲ್ಲಿ ಪ್ರತಿವರ್ಷ ‘ಉತ್ಸವ್’ (UTSAV) ಎಂಬ ಹೆಸರಿನಲ್ಲಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾಗುವ ಅಂತರ ಕಾಲೇಜು ಟೆಕ್ನೋ–ಕಲ್ಚರಲ್‌ ಹಬ್ಬ ರಾಷ್ಟ್ರಮಟ್ಟದಲ್ಲಿ ಹೆಸರುವಾಸಿಯಾದದ್ದು.  ಈ ಹಬ್ಬ ಬಿಎಂಎಸ್‌ ಕಾಲೇಜಿನ ಹೆಸರನ್ನು ಸಾಂಸ್ಕೃತಿಕವಾಗಿಯೂ ಉಳಿಸಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT