ADVERTISEMENT

ಬಿಎಂಡಬ್ಲ್ಯೂಗೆ ‘ಶ್ರೀರಾಮ’ನ ಸರಿಗಮಪ...

​ಪ್ರಜಾವಾಣಿ ವಾರ್ತೆ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಶ್ರೀರಾಮ್‌
ಶ್ರೀರಾಮ್‌   

ಹಾಲಿವುಡ್‌, ಸ್ಯಾಂಡಲ್‌ವುಡ್‌ ಸೇರಿದಂತೆ ಎಲ್ಲ ಭಾಷೆ ಸಿನಿಮಾಗಳಲ್ಲೂ ಕಾರು, ಬೈಕ್‌ಗಳ ಹೆಸರಿನಲ್ಲಿ ತೆರೆಕಂಡ ಸಾಕಷ್ಟು ಸಿನಿಮಾಗಳಿವೆ. ಇದೇ ಸಾಲಿಗೆ ಹೊಸ ಸೇರ್ಪಡೆ ಸ್ಯಾಂಡಲ್‌ವುಡ್‌ನ ‘ಬಿಎಂಡಬ್ಲ್ಯೂ’ ಸಿನಿಮಾ.

‘ಫನ್‌ ಅನ್‌ಲಿಮಿಟೆಡ್‌...’ ಬಾಟಮ್‌ಲೈನ್ ಹೊಂದಿರುವ ಚಿತ್ರ ಸಾಕಷ್ಟು ನಿರೀಕ್ಷೆ ಹುಟ್ಟುಹಾಕಿದೆ. ಶ್ರೀರಾಮ್‌ ಗಂಧರ್ವ ಎಂಬ ಯುವ ಸಂಗೀತ ನಿರ್ದೇಶಕ ಈ ಸಿನಿಮಾದ ಮೂಲಕ ಬೆಳ್ಳಿತೆರೆಗೆ ಪದಾರ್ಪಣೆ ಮಾಡುತ್ತಿದ್ದಾರೆ.

‘ಒಂದು ಪ್ರೀತಿಯ ಕಥೆ’, ‘ಕಾಲ್ಗೆಜ್ಜೆ’ಯಂಥ ಸದಭಿರುಚಿಯ ಚಿತ್ರಗಳಿಗೆ ಸಂಗೀತ ನಿರ್ದೇಶಕರಾಗಿ, ‘ಭೂಮಿ’ ಹಾಗೂ ‘ಸೌಗಂಧಿಕ ಪುಷ್ಪ’ ಎಂಬ ಸಿನಿಮಾಗಳ ನಿರ್ದೇಶಕರಾಗಿ ಕೆಲಸ ಮಾಡಿರುವ ಅನುಭವ ಗಂಧರ್ವ ಅವರ ಬೆನ್ನಿಗಿದೆ. ಸಿನಿಮಾದಷ್ಟೇ ಸಂಗೀತಕ್ಕೂ ಉತ್ತಮ ಪ್ರತಿಕ್ರಿಯೆ ಸಿಗಲಿದೆ ಎಂಬುದು ನಿರ್ದೇಶಕರ ವಿಶ್ವಾಸದ ನುಡಿ.

ಬೆಂಗಳೂರಿನವರಾದ ಶ್ರೀರಾಮ್‌ ತಮ್ಮ ಮೊದಲ ಗುರುವಾದ ತಂದೆ ಗಂಧರ್ವ ಅವರಿಂದ ಸಂಗೀತದ ಪಟ್ಟುಗಳನ್ನು ಕಲಿತರು. ತಮ್ಮ ತಂದೆಯ ಸಂಗೀತ ನಿರ್ದೇಶನದ ಸಿನಿಮಾಗಳಿಗೂ ಕೈ ಜೋಡಿಸುತ್ತಿದ್ದರು. ಬಳಿಕ ಬೆಂಗಳೂರಿನ ಫಿಲ್ಮ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಮೂರು ವರ್ಷ ಸೌಂಡ್‌ ಎಂಜಿನಿಯರಿಂಗ್‌ ಕೋರ್ಸ್ ಮುಗಿಸುವ ಜತೆಗೆ ಪಿಯಾನೊ, ಗಿಟಾರ್ ಹಾಗೂ ಗಾಯನದಲ್ಲಿ 2 ವರ್ಷಗಳ ತರಬೇತಿ ಪಡೆದು, ಈಗ ಸಂಗೀತ ಕ್ಷೇತ್ರಕ್ಕೆ ಕಾಲಿಟ್ಟಿದ್ದಾರೆ.

ಸಿನಿಮಾದಲ್ಲಿ ಮೆಲೋಡಿ, ಪಾಶ್ಚಿಮಾತ್ಯ, ಭಾರತೀಯ, ವಾಣಿಜ್ಯ ದೃಷ್ಟಿಕೋನದ ಹಾಗೂ ಯುವಪ್ರೇಕ್ಷಕರನ್ನು ದೃಷ್ಟಿಯಲ್ಲಿಟ್ಟುಕೊಂಡ ‘ಟಪಾಂಗುಚ್ಚಿ’ ಶೈಲಿಯ ಹಾಡುಗಳಿವೆ.

ಗಾಯಕರಾದ ಶ್ರೇಯಾ ಘೋಷಲ್‌, ಸೋನು ನಿಗಮ್, ವಿಜಯ್‌ ಪ್ರಕಾಶ್ ಹಾಗೂ ಶಶಾಂಕ್‌ ಅವರ ಕಂಠ ಸಿರಿ ಚಿತ್ರದ ಮತ್ತೊಂದು ಮುಖ್ಯ ಅಂಶ.
ಹಾಸ್ಯನಟ ಚಿಕ್ಕಣ್ಣ ಅವರಿಗಾಗಿ ಎಂಟ್ರಿ ಹಾಡನ್ನು ಹೊಸೆಯಲಾಗಿದೆ. ಪ್ರವೀಣ್‌ ತೇಜ್‌, ರಂಗಾಯಣ ರಘು, ಅವಿನಾಶ್‌, ಆಕಾಶ್‌, ಪ್ರಿಯಾಂಕಾ ಮಲ್ನಾಡ್ ಮುಖ್ಯಭೂಮಿಕೆಯಲ್ಲಿದ್ದಾರೆ. ಶ್ರೀರಾಮ್‌ ಕೂಡಾ ಮುಖ್ಯ ಪಾತ್ರವೊಂದರಲ್ಲಿ ನಟಿಸಿದ್ದಾರೆ. ತಮ್ಮ ಮೊದಲ ಸಿನಿಮಾದಲ್ಲೇ ನಟನೆ, ಸಂಗೀತ ನಿರ್ದೇಶನ ವಿಭಾಗಗಳಲ್ಲಿ ಕೆಲಸ ಮಾಡಿರುವುದರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

ನೀಲ್‌ ಟಾಪ್‌ ಪ್ರೊಡಕ್ಷನ್‌ ನಿರ್ಮಾಣದ ಈ ಚಿತ್ರಕ್ಕೆ ರಾಜು ಪುರುಷೋತ್ತಮ್‌ ಮತ್ತು ಮಯೂರ್‌ ಪಟೇಲ್‌ ಹಣ ಹೂಡಿದ್ದಾರೆ.
ಸಿನಿಮಾ ಮಾರ್ಚ್‌ ವೇಳೆಗೆ ಸಿನಿಮಾ ತೆರೆ ಕಾಣವ ನಿರೀಕ್ಷೆಯಲ್ಲಿದೆ.
-ಲೋಕೇಶ್‌ ಡಿ.

ವಿಡಿಯೊ ನೋಡಲು ಲಿಂಕ್‌:  http://bit.ly/2le2H1l

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT