ADVERTISEMENT

ಬಿಸಿಲಿಗೆ ಕೂಲ್‌...ಕಲಂಕರಿ ಗೌನ್

ಹೇಮಾ ವೆಂಕಟ್
Published 24 ಏಪ್ರಿಲ್ 2017, 19:30 IST
Last Updated 24 ಏಪ್ರಿಲ್ 2017, 19:30 IST
ಬಿಸಿಲಿಗೆ ಕೂಲ್‌...ಕಲಂಕರಿ ಗೌನ್
ಬಿಸಿಲಿಗೆ ಕೂಲ್‌...ಕಲಂಕರಿ ಗೌನ್   
ವಸ್ತ್ರವಿನ್ಯಾಸಕರು ಕಲಂಕರಿಯಲ್ಲಿ  ಮಾಡಿರುವ ಪ್ರಯೋಗ ಅಂತಿಂಥದ್ದಲ್ಲ. ಈಗ ಎಲ್ಲ ಬಗೆಯ ಉಡುಗೆಗಳೂ ಕಲಂಕರಿಯಲ್ಲಿ ಸಿಗುತ್ತಿವೆ. ಸೀರೆ, ರವಿಕೆ, ಕುರ್ತಾ, ಜಾಕೆಟ್‌, ದುಪಟ್ಟಾ, ಪೈಜಾಮ, ಲಂಗ, ಪಲಾಜೊ, ಲೆಹೆಂಗಾ ಎಲ್ಲವೂ ಆಯಿತು. ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಕಲಂಕರಿ ಗೌನ್‌ಗಳು ಬಂದಿವೆ.
 
ಕಲಂಕರಿ ಗೌನ್‌ಗಳನ್ನು ಬೇರೆ ಬಟ್ಟೆಗಳ ಜೊತೆ ಮಿಕ್ಸ್‌ ಮಾಡಿಯೂ ಹೊಲಿಯಲಾಗುತ್ತಿದೆ. ಒಂದೇ ಬಣ್ಣದ ಬಟ್ಟೆಗಳಿಗೆ ಕೆಳಭಾಗದಲ್ಲಿ ಮಾತ್ರ ಕಲಂಕರಿ ಬಟ್ಟೆಯ ಪ್ಯಾಚ್ ನೀಡಲಾಗುತ್ತದೆ. ತೋಳುಗಳನ್ನು ಪ್ರತ್ಯೇಕ ಬಟ್ಟೆಯಿಂದ ಹೊಲಿಯಲಾಗುತ್ತದೆ. ಹೀಗೆ ವಿನ್ಯಾಸಕರು ತಮ್ಮದೇ ಕಲ್ಪನೆಯಂತೆ ಕಲಂಕರಿ ಗೌನ್‌ಗಳನ್ನು ಅಂದಗಾಣಿಸುತ್ತಿದ್ದಾರೆ.  
 
ಕಲಂಕರಿ ವಿನ್ಯಾಸದ ಬಟ್ಟೆಗಳು ಕಾಟನ್‌ ಮತ್ತು ರೇಷ್ಮೆ ಎರಡರಲ್ಲೂ ಲಭ್ಯವಿವೆ. ನಗರದ ವಿವಿಧ ಶಾಪಿಂಗ್‌ ತಾಣಗಳಲ್ಲಿ ಕಲಂಕರಿ ಬಟ್ಟೆಗಳು ಮೀಟರ್‌ಗೆ ₹130ರಿಂದ ₹180ರ ಬೆಲೆಯಲ್ಲಿ ಸಿಗುತ್ತಿವೆ. ಕಲಂಕರಿ ರೇಷ್ಮೆ ಬಟ್ಟೆಗಳ ದರ ₹350ರಿಂದ ಆರಂಭವಾಗುತ್ತದೆ.
 
ಸ್ಥಳೀಯವಾಗಿ ಸಿಗುವ ಬಟ್ಟೆಗಳ ಬೆಲೆ ಕಡಿಮೆ. ಆದರೆ ಬಣ್ಣ ಹೋಗುವ ಸಾಧ್ಯತೆ ಇರುತ್ತದೆ. ಒಗೆದ ಮೇಲೆ ಸುಕ್ಕಾಗುವುದು, ಬಣ್ಣ ಮಸುಕಾಗುವುದೂ ಸಾಮಾನ್ಯ.
 
‘ಕಲಂಕರಿ ಗೌನ್‌ ಎಲ್ಲ ವಯಸ್ಸಿನವರಿಗೂ ಒಪ್ಪುತ್ತದೆ.   ಹಾಗೆಯೇ  ವಸ್ತ್ರ ವಿನ್ಯಾಸಕರಿಗೂ ಹಲವು ಆಯ್ಕೆಗಳಿವೆ.  ಈಗ ಬೇಸಿಗೆಯಾದ ಕಾರಣ ಸ್ಲೀವ್‌ಲೆಸ್‌, ತೆರೆದ ನೆಕ್‌, ಮುಕ್ಕಾಲು ಉದ್ದದ ಗೌನ್‌ಗಳು ಈ ಕಾಲಕ್ಕೆ ಹೊಂದುತ್ತವೆ.
 
ಕಾಲೇಜು ಯುವತಿಯರು ಇಂಥ ಉಡುಗೆಗಳನ್ನು ಹೆಚ್ಚು ಇಷ್ಟಪಡುತ್ತಿದ್ದಾರೆ. ಕೆಲವರು ಮೊಣಕಾಲಿನವರೆಗಿನ ಕಲಂಕರಿ ಫ್ರಾಕ್‌ಗಳನ್ನೂ ಇಷ್ಟಪಡುತ್ತಾರೆ’ ಎಂದು ವಿಜಯನಗರದ ವಸ್ತ್ರ ವಿನ್ಯಾಸಕಿ ದಿವ್ಯಾ ಹೇಳುತ್ತಾರೆ. 
 
ನಗರದ ಮಹಿಳೆಯರು ಗೌನ್‌ ಮಾದರಿಯಲ್ಲಿಯೇ ಕುರ್ತಾಗಳನ್ನೂ ಹೊಲಿಸುತ್ತಿದ್ದಾರೆ. ಅವುಗಳಿಗೆ ಲೆಗ್ಗಿನ್ಸ್‌ ಕೂಡಾ ತೊಡಬಹುದು.  ಕಲಂಕರಿ ಗೌನ್‌ಗಳು ಸಾಂಪ್ರದಾಯಿಕ ಮತ್ತು ಆಧುನಿಕ ಮನಸ್ಥಿತಿಯುಳ್ಳ ಮಹಿಳೆಯರನ್ನು ಮೋಡಿ ಮಾಡಿವೆ.
 
ಪ್ರಸಿದ್ಧ ಬ್ರಾಂಡ್‌ನ ಮಳಿಗೆಗಳಲ್ಲೂ ರೆಡಿ ಗೌನ್‌ಗಳು ಸಿಗುತ್ತಿವೆ. ಆನ್‌ಲೈನ್‌ ಸ್ಟೋರ್‌ನಲ್ಲೂ ನೂರಾರು ಬಗೆಯ ಗೌನ್‌ಗಳು ಲಭ್ಯವಿವೆ. ಆದರೆ, ಬೆಲೆ ಸ್ವಲ್ಪ ದುಬಾರಿ. ಬಟ್ಟೆಯ ಗುಣಮಟ್ಟದಲ್ಲಿಯೂ ವ್ಯತ್ಯಾಸವಿರುತ್ತದೆ. ಗುಣಮಟ್ಟದ ಬಟ್ಟೆ ಕೊಂಡು ನಮಗೆ ಬೇಕಾದಂತೆ  ವಿನ್ಯಾಸ ಮಾಡಿಕೊಳ್ಳುವುದೇ ಉತ್ತಮ.
 
ರೆಡಿಮೇಡ್‌ ಕಲಂಕರಿ ಗೌನ್‌ ಕೊಳ್ಳುವುದಕ್ಕಿಂತ ನಿಮ್ಮದೇ ಕಲ್ಪನೆಗೆ ಅನುಗುಣವಾಗಿ ಚಂದವಾಗಿ ಹೊಲಿಸಿಕೊಳ್ಳಬಹುದು.  ಆನ್‌ಲೈನ್‌ ಗೌನ್‌ಗಳ ಮಾದರಿಯಲ್ಲಿಯೇ ರೆಡಿಮೇಡ್‌ಗಿಂತ ಕಡಿಮೆ ದರದಲ್ಲಿ  ಗೌನ್‌ ಸಿದ್ಧಪಡಿಸಿಕೊಳ್ಳಬಹುದು.  
 
ಪ್ಲೇನ್‌ ಬಟ್ಟೆಗೆ ಕಲಂಕರಿ ಬಟ್ಟೆಯಿಂದ ತೋಳು, ಕೆಳಭಾಗದಲ್ಲಿ ಫ್ರಿಲ್‌ ಇಡಬಹುದು. ಇದೇ ರೀತಿ ಕಲಂಕರಿ ಬಟ್ಟೆಗೆ ಪ್ಲೇನ್‌ ಬಟ್ಟೆಯಿಂದ ತೋಳು ಅಥವಾ ಎದೆ ಭಾಗವನ್ನು ವಿನ್ಯಾಸ ಮಾಡಬಹುದು. ಫ್ರಿಲ್‌ಗೆ ದೊಡ್ಡ ಪ್ರಿಂಟ್‌ಗಳಿರುವ ಕಲಂಕರಿ ಬಟ್ಟೆ ಸುಂದರವಾಗಿ ಕಾಣುತ್ತದೆ. 
 
ಒಂದೇ ಬಟ್ಟೆ ಬಳಸುವುದಿದ್ದರೆ ಚಿಕ್ಕ ಪ್ರಿಂಟ್‌ ಇರುವ ಕಲಂಕರಿ ಬಟ್ಟೆ ಬಳಸಿದರೆ  ಆಕರ್ಷಕವಾಗಿರುತ್ತದೆ. ತುಂಬಾ ತೆಳ್ಳಗಿರುವವರು ದೊಡ್ಡ ದೊಡ್ಡ ಹೂವಿನ ವಿನ್ಯಾಸವಿರುವ ಗೌನ್‌ ತೊಟ್ಟರೆ ದಪ್ಪಗಾಗಿ ಕಾಣುತ್ತಾರೆ. ದಪ್ಪಗಿರುವವರು ಚಿಕ್ಕ ಚಿಕ್ಕ ಹೂಗಳಿರುವ ಬಟ್ಟೆ ಆಯ್ಕೆ ಮಾಡಿಕೊಳ್ಳುವುದು ಉತ್ತಮ.  
 
ಮೈತುಂಬ ಬಳ್ಳಿ, ಎಲೆಯ ಚಿತ್ರವಿರುವ ಗೌನ್‌ಗಳು ಸರಳ ಮತ್ತು ಅಷ್ಟೇ ಸುಂದರವಾಗಿ ಕಾಣುತ್ತವೆ.  ಸದ್ಯ ಬುದ್ಧನ  ಮುಖದ ಚಿತ್ರವಿರುವ ಕಲಂಕರಿ ವಿನ್ಯಾಸ ಹೆಚ್ಚು ಜನಪ್ರಿಯವಾಗಿದೆ.  
 
ನೂರಾರು ವಿನ್ಯಾಸದ ಕಲಂಕರಿ ಬಟ್ಟೆಗಳು  ಮಾರುಕಟ್ಟೆಯಲ್ಲಿ ಸಿಗುತ್ತಿವೆ. ಶಿವಾಜಿನಗರ, ಕಮರ್ಷಿಯಲ್‌ ಸ್ಟ್ರೀಟ್‌, ಇಬ್ರಾಹಿಂ ಸ್ಟ್ರೀಟ್‌ ಸೇರಿದಂತೆ ನಗರದ ಎಲ್ಲ ಪ್ರಮುಖ ಶಾಪಿಂಗ್‌ ತಾಣಗಳಲ್ಲೂ  ಕಲಂಕರಿ ಬಟ್ಟೆಗಳು ಸಿಗುತ್ತಿವೆ.  
ಚಿತ್ರಕೃಪೆ: fabindia.com
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.