ADVERTISEMENT

‘ಬೆಂಗಳೂರಿನಲ್ಲಿ ಹೊಸ ಬೆಳಕು ಕಂಡೆ’

ಸುಮನಾ ಕೆ
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಎಡ್ವಿನ್‌ ಚಾರ್ಲ್ಸ್‌
ಎಡ್ವಿನ್‌ ಚಾರ್ಲ್ಸ್‌   

ನನ್ನ ಹೆಸರು ಎಡ್ವಿನ್‌ ಚಾರ್ಲ್ಸ್‌. ವಯಸ್ಸು 36. ಎಂಟನೇ ತರಗತಿ ತನಕ ಮಾತ್ರ ಓದಿರುವುದು. ಊರಲ್ಲಿ  ಅಪ್ಪ, ಅಮ್ಮ, ಅಜ್ಜಿ, ತಮ್ಮ, ತಂಗಿ, ಇದ್ದ ಕೂಡು ಕುಟುಂಬ ನಮ್ಮದಾಗಿತ್ತು. ಊರು ತಮಿಳುನಾಡಿನ ತಿರುವಣ್ಣಾಮಲೈನ ಒಂದು ಪುಟ್ಟ ಹಳ್ಳಿ.

ಕೆಲಸಕ್ಕೆ ಹೋಗಿ, ಕೊಂಚ ಹಣ ಕೈಗೆ ಬಂದರೆ ಮನೆಯ ಬಡತನ ದೂರಾಗಬಹುದು ಎಂದು 18ನೇ ವಯಸ್ಸಿನಲ್ಲಿ ಚೆನ್ನೈಗೆ ಹೋದೆ. ಅಲ್ಲಿ ಒಂದು ಸಣ್ಣ ಕ್ಯಾಂಟೀನ್‌ನಲ್ಲಿ ಕೆಲಸಕ್ಕೆ ಸೇರಿದೆ. ಆದರೆ ಸಂಬಳ ಕಡಿಮೆ ಇತ್ತು.  ಬಳಿಕ ಫ್ಯಾಕ್ಟರಿಯೊಂದರಲ್ಲಿ ಕೆಲಸಕ್ಕೆ ಸೇರಿದೆ.ಆದರೆ ಅಲ್ಲಿ ಕೆಲಸ ಕಷ್ಟವಾಗಿತ್ತು. ಹೀಗಾಗಿ ವಾಪಸ್‌ ಮನೆಗೆ ಬಂದೆ.ಆಗ ನನ್ನ ಅಜ್ಜಿ ₹50 ಕೈಯಲ್ಲಿಟ್ಟು, ‘ಬೆಂಗಳೂರಿಗೆ ಹೋಗು, ಅಲ್ಲಿ ಕೆಲಸ ಸಿಗುತ್ತದೆ’ ಎಂದರು.

ಆದರೆ ನನಗೆ ಬೆಂಗಳೂರಿಗೆ ಬರಲು ಇಷ್ಟವಿರಲಿಲ್ಲ. ಚೆನ್ನೈಗೆ ವಾಪಸ್‌ ಹೋಗೋಣ, ಬೇರೆ ಏನಾದರೂ ಕೆಲಸ ನೋಡೋಣ ಅಂದುಕೊಂಡಿದ್ದೆ. ಆದರೆ ಅಜ್ಜಿ ಬೆಂಗಳೂರಿಗೇ ಹೋಗಬೇಕು ಎಂದು ಒತ್ತಾಯ ಮಾಡಿದರು. ಸಣ್ಣ ಸೂಟ್‌ಕೇಸ್‌,  ಬೈಬಲ್‌ ಹಿಡಿದುಕೊಂಡು ಬಸ್‌ ಹತ್ತಿದೆ.

ADVERTISEMENT

ಹಾಗೆ 2001ರಲ್ಲಿ ಕೇವಲ ₹50 ಹಿಡಿದುಕೊಂಡು ನಾನು ಹಾಗೂ ನನ್ನ ತಮ್ಮ ಬೆಂಗಳೂರಿಗೆ ಬಂದೆವು. ಆಗ ಡಿಸೆಂಬರ್‌ ತಿಂಗಳಾದ್ದರಿಂದ  ಇಲ್ಲಿ ಚಳಿ, ದಟ್ಟ ಮಂಜು. ಮೆಜೆಸ್ಟಿಕ್‌ನಲ್ಲಿ ಬಸ್‌ ಇಳಿದಾಗ ಚಳಿಗೆ ಮೈ ನಡುಗುತ್ತಿತ್ತು.  

ಆಗ ನನ್ನ ಮಾವ ಜೀವನಭಿಮಾನಗರದಲ್ಲಿದ್ದರು. ಅವರು ಇಲ್ಲಿ ಪೇಂಟಿಂಗ್‌ ಕೆಲಸ ಮಾಡುತ್ತಿದ್ದರು. ಅವರೂ ಸಹ ಶ್ರೀಮಂತರಲ್ಲ. ಆದರೂ ಅವರ ಪುಟ್ಟ ಮನೆಯಲ್ಲಿ ನಮ್ಮಿಬ್ಬರಿಗೆ ಜಾಗ ನೀಡಿದರು. ಮರುದಿನದಿಂದ ಮಾವನ ಜತೆ ಸೇರಿ ಕೆಲಸಕ್ಕೆ ಹುಡುಕಾಟ ಆರಂಭಿಸಿದೆ.

ಆಗ ಯಾರೋ ಒಬ್ಬರು ಹಲಸೂರಿನ ಅಕ್ಷಯ ರೆಸ್ಟೊರೆಂಟ್‌ನಲ್ಲಿ ಕೆಲಸ ಇರುವುದನ್ನು ತಿಳಿಸಿದರು. ಕೈಯಲ್ಲಿ ದುಡ್ಡು ಖಾಲಿಯಾಗಿತ್ತು. ಜೀವನಭಿಮಾನಗರದಿಂದ ಹಲಸೂರು ತನಕ ನಡೆದುಕೊಂಡೇ ಬಂದಿದ್ದೆ.

ಇಲ್ಲಿ ಬಂದು ಕೆಲಸ ಕೇಳಿದಾಗ   ರೆಸ್ಟೊರೆಂಟ್‌ ಮಾಲೀಕ ಸದಾನಂದ ಶೆಟ್ಟಿ ಅವರು ಕ್ಲೀನಿಂಗ್‌ ಕೆಲಸ ಕೊಟ್ಟರು. ಆಗ ಸಂಬಳ ₹ 750.ಹೋಟೆಲ್‌ನಲ್ಲಿ ಕ್ಲೀನರ್‌ ಆಗಿದ್ದೆ. ನಾನು ದೇವರ ಭಕ್ತ. ಏಸುಕ್ರಿಸ್ತನನ್ನು ತುಂಬ ನಂಬುತ್ತೇನೆ. ನನ್ನ ಪ್ರತಿ ಕಷ್ಟ– ಸುಖವನ್ನು ಆತನ ಬಳಿ ಹಂಚಿಕೊಳ್ಳುತ್ತೇನೆ.

ಬೆಂಗಳೂರಿಗೆ ಬಂದ ಬಳಿಕವೂ ಪ್ರತಿ ವಾರ ಚರ್ಚ್‌ಗೆ ಹೋಗುತ್ತಿದ್ದೆ. ಏಸುವಿನಲ್ಲಿ ನನ್ನ ಕಷ್ಟ ದೂರ ಮಾಡು ಎಂದು ಬೇಡುತ್ತಿದ್ದೆ. ಅಲ್ಲಿಯ ಫಾದರ್‌ ನನಗೆ ಧೈರ್ಯ ನೀಡುತ್ತಿದ್ದರು.

ಆಗ ನನ್ನ ಸಂಬಳ ಕಡಿಮೆಯಿತ್ತು. ಮನೆಗೆ ಅಪ್ಪ–ಅಮ್ಮನಿಗೆ ಕಳುಹಿಸುತ್ತಿದ್ದೆ.  ರೆಸ್ಟೊರೆಂಟ್‌ನಲ್ಲಿ ನಾನು ನನ್ನ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತಿದ್ದೆ. ಯಾರಿಗೂ ಎದುರುತ್ತರ ಕೊಡುತ್ತಿರಲಿಲ್ಲ. ಹೀಗಾಗಿ ಅಲ್ಲಿದ್ದ ಎಲ್ಲರೂ ನನಗೆ ಸ್ನೇಹಿತರಾದರು.

ವರ್ಷ ಕಳೆದಿರಬಹುದು. ಒಂದು ದಿನ ಮಾಲೀಕರು ಕರೆದು ನನ್ನನ್ನು ಅಕೌಂಟೆಂಟ್‌ ಆಗಿ ಕೆಲಸ ಮಾಡುವಂತೆ ತಿಳಿಸಿದರು. ನನಗೆ ಆಶ್ಚರ್ಯ. ನಾನು ಹೆಚ್ಚು ಓದಿಲ್ಲ. ಹೋಟೆಲ್‌ನಲ್ಲಿ ಬಿಲ್ಲಿಂಗ್‌, ಲೆಕ್ಕ ಎಲ್ಲಾ ಕಂಪ್ಯೂಟರ್‌ನಲ್ಲಿ ಮಾಡುವುದು.

ಹೇಗೆ ಮಾಡಲಿ ಎಂದು ನನಗೆ ಆತಂಕ. ಆದರೆ ನನ್ನ ಸಹೋದ್ಯೋಗಿಗಳ ನೆರವಿನಿಂದ ನಾನು ಹಠ ಹಿಡಿದು ಕಲಿತೆ. ಎರಡು– ಮೂರು ತಿಂಗಳಲ್ಲಿ ಕಂಪ್ಯೂಟರ್‌ ಕೆಲಸ ಕಲಿತುಕೊಂಡೆ. ಈಗ ಕಂಪ್ಯೂಟರ್‌ನ ಎಲ್ಲಾ ಕೀಗಳು ನನಗೆ ರೂಢಿಯಾಗಿವೆ. ಆಗ ನನ್ನ ಸಂಬಳ ₹6000ಕ್ಕೇರಿತು.

ಅದಾದ ನಂತರ ನಾನು ನರ್ಸ್‌ ಕೆಲಸ ಮಾಡುತ್ತಿದ್ದ ತಲವರಸಿಯನ್ನು ಮದುವೆಯಾದೆ. ಈಗ ನಮಗೆ ಮಗ ಇದ್ದಾನೆ. ಸಂಬಳವೂ ಜಾಸ್ತಿಯಾಗಿದೆ. ಗಂಡ–ಹೆಂಡತಿ ಇಬ್ಬರೂ ದುಡಿಯುತ್ತಿರುವುದರಿಂದ ಜೀವನ ನಿರ್ವಹಣೆಗೆ ಏನೂ ಕಷ್ಟವಾಗುತ್ತಿಲ್ಲ.

ಇನ್ನು ನನ್ನ ಜೊತೆ ಬೆಂಗಳೂರಿಗೆ ಬಂದಿದ್ದ ತಮ್ಮನೂ ಈಗ ಬೆಂಗಳೂರಿನಲ್ಲಿ ಶೆಫ್‌ ಆಗಿದ್ದಾನೆ. ಅವನೂ ಸಹ ಮೊದಲು ಹೋಟೆಲ್‌ನಲ್ಲಿ ಕ್ಲೀನಿಂಗ್‌ ಕೆಲಸಕ್ಕೆ ಸೇರಿಕೊಂಡಿದ್ದು. ಅಲ್ಲಿ  ಕಿಚನ್‌ನಲ್ಲಿ ಸಹಾಯ ಮಾಡುತ್ತಾ ಅಡುಗೆ ಬಗ್ಗೆ ಕಲಿಯುತ್ತಾ ಹೋದ.

ಬೆಂಗಳೂರಿಗೆ ಬಂದಾಗ ನನಗೆ ಕನ್ನಡ ಬರುತ್ತಿರಲಿಲ್ಲ. ಬಳಿಕ ಕನ್ನಡ ಸ್ವಲ್ಪಸ್ವಲ್ಪ ಕಲಿತೆ. ಈಗ ಕನ್ನಡ ಚೆನ್ನಾಗಿ ಮಾತನಾಡ್ತೀನಿ. ಆದರೆ ಬರೆಯಲು ಬರುವುದಿಲ್ಲ.  ಕನ್ನಡದಲ್ಲಿ ನನ್ನ ಹೆಸರು ಬರೆಯಬಲ್ಲೆ. ಬೆಂಗಳೂರು ನನ್ನ ಬದುಕಿಗೆ ಹೊಸ ಬೆಳಕು ನೀಡಿತು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.