ADVERTISEMENT

ಬೆಟ್ಟದ ಮೇಲೆ ಮಂಜಿನ ತೆರೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2017, 19:30 IST
Last Updated 18 ಸೆಪ್ಟೆಂಬರ್ 2017, 19:30 IST
ಬೆಟ್ಟದ ಮೇಲೆ ಮಂಜಿನ ತೆರೆ
ಬೆಟ್ಟದ ಮೇಲೆ ಮಂಜಿನ ತೆರೆ   

ಮಲ್ಲಿಕಾರ್ಜುನ ಡಿ.ಜಿ.

ಜಿಟಿಜಿಟಿ ಜಿನುಗುವ ಹನಿಗಳ ಸಖ್ಯ, ಬಿಳಿಯ ಪರದೆಯಂತೆ ನಮ್ಮನ್ನು ಸವರಿ ಹೋಗುವ ಮೋಡ, ಮುಂದೇನೂ ಕಾಣದಂತೆ ಆವರಿಸಿಕೊಳ್ಳುವ ಮಂಜು ಮತ್ತು ತೊಟ್ಟಿಕ್ಕುವ ಇಬ್ಬನಿ...

ನಿಮಗೂ ಅಂಥ ಜಾಗದಲ್ಲಿರಬೇಕು ಅಂತ ಇಷ್ಟ ಆಯ್ತಾ? ಹಾಗಿದ್ರೆ ಇನ್ನೇಕೆ ತಡ, ಇದೇ ವೀಕ್‌ಎಂಡ್‌ಗೆ ನಂದಿಬೆಟ್ಟಕ್ಕೆ ಹೊರಡಿ.

ADVERTISEMENT

ಹೇಳಿಕೇಳಿ ಈಗ ಚಳಿಗಾಲ. ನಂದಿಬೆಟ್ಟವು ಬೆಂಗಳೂರಿನ ಸೆರಗಿನಲ್ಲೇ ಇದ್ದರೂ ಮಾಲಿನ್ಯದಿಂದ ದೂರ. ಸುಮಾರು ಐದು ಸಾವಿರ ಅಡಿಗಳಷ್ಟು ಎತ್ತರದಲ್ಲಿ ಮೋಡಗಳೊಂದಿಗೆ ನಾವೂ ತೇಲುವ ಸುಖ. ಮರಗಳ ಎಲೆಗಳಿಂದ ತೊಟ್ಟಿಕ್ಕುವ ಇಬ್ಬನಿಯ ಸದ್ದನ್ನೂ ನಮ್ಮ ಕಿವಿ ಗ್ರಹಿಸುವಷ್ಟು ಮೌನ. ಮಳೆಗೆ ನೆನೆದ ಹಸಿರಿನಿಂದ ಬರುವ ವಿಶಿಷ್ಟ ಸುವಾಸನೆ. ಬಹುಶಃ ಅದಕ್ಕೇ ಇರಬೇಕು ‘ನಂದಿಬೆಟ್ಟದ ಮೇಲೆ ಪ್ರಾಣಾಯಾಮ ಮಾಡಿದರೆ ಆಯಸ್ಸು ಹೆಚ್ಚಾಗುತ್ತೆ’ ಅಂತ ಸುತ್ತಮುತ್ತಲ ಊರುಗಳ ಹಿರಿಯರು ಹೇಳ್ತಾರೆ.

ಈಗ ಬೆಟ್ಟದ ಮೇಲೆ ಮಳೆ ಸುರಿಯುತ್ತಿದೆ. ಪ್ರತಿ ಮಳೆಗೂ ಬೆಟ್ಟದ ಚಹರೆ ಬದಲಾಗುತ್ತೆ. ಪಾಚಿಕಟ್ಟಿದ ಟಿಪ್ಪುಸುಲ್ತಾನ್ ಬೇಸಿಗೆ ಅರಮನೆ ಎತ್ತರೆತ್ತರದ ಮರಗಳು, ಸುಯ್ಯನೆ ಬೀಸುವ ಗಾಳಿ ಎಲ್ಲರನ್ನೂ ಕೈಬೀಸಿ ಕರೆಯುತ್ತಿದೆ.

ಬೆಟ್ಟದ ಮೇಲಿನ ನಂದಿ ದೇಗುಲದಲ್ಲಿರುವ ದೇವರನ್ನು ಯೋಗಾನಂದೀಶ್ವರ ಎನ್ನುತ್ತಾರೆ. ದ್ರಾವಿಡ ಶೈಲಿಯಲ್ಲಿ ನಿರ್ಮಿಸಿರುವ ದೇಗುಲ ಸುಂದರವಾಗಿದೆ. ಮಕ್ಕಳ ಮನರಂಜನೆಗಾಗಿ ಆಟದ ಮೈದಾನವಿದೆ. ಇಲ್ಲಿನ ಹವೆಯ ಮಹಿಮೆಯೋ ಏನೋ, ತಲೆಕೂದಲು ಹಣ್ಣಾದ ಹಿರಿಯರೂ ಬೆಟ್ಟದ ಮೇಲೆ ಮಕ್ಕಳಂತೆಯೇ ಆಗಿಬಿಡುತ್ತಾರೆ.

ಬೆಟ್ಟದ ಮೇಲೆ ಹಲವು ಅಪರೂಪದ ಹಕ್ಕಿಗಳು ಕಾಣಿಸುತ್ತವೆ. ಭೂದೃಶ್ಯಗಳಂತೂ (ಲ್ಯಾಂಡ್‌ಸ್ಕೇಪ್‌) ಅದ್ಭುತ. ಬೆಟ್ಟದ ಮೇಲಿನ ಸಂಜೆ ಮಂಜು ಮತ್ತು ಮುಂಜಾನೆಯ ಮಬ್ಬುಗತ್ತಲಿನ ಇಬ್ಬನಿ, ತಿಳಿ ಬೆಳಗಿನ ಸೊಬಗನ್ನು ಪದಗಳಲ್ಲಿ ಕಟ್ಟಿಕೊಡುವುದು ಕಷ್ಟಕಷ್ಟ. ಅದನ್ನು ಅನುಭವಿಸಿಯೇ ತೀರಬೇಕು.

ನಂದಿಯ ಶಿಲ್ಪಕಲೆ: ಬೆಟ್ಟದ ಕೆಳಗಿರುವ ನಂದಿ ದೇಗುದಲ್ಲಿ ಭೋಗಾನಂದೀಶ್ವರನಿದ್ದಾನೆ. ಸುಮಾರು 1400 ವರ್ಷಗಳಷ್ಟು ಹಳೆಯದಾದ ಈ ದೇಗುಲವನ್ನು ಬಾಣರು, ಚೋಳರು, ಹೊಯ್ಸಳರು ಮತ್ತು ವಿಜಯನಗರದ ಅರಸರು ಅಭಿವೃದ್ಧಿಪಡಿಸಿದ್ದಾರೆ. ವಿವಿಧ ಶೈಲಿಯ ಶಿಲ್ಪಕಲೆಗಳು ಇಲ್ಲಿ ಮೈದಳೆದಿವೆ.

ಕೊಕ್ಕಿನಲ್ಲಿ ಗೂಡು ಕಟ್ಟುವ ಸಾಮಗ್ರಿ ಹಿಡಿದಿರುವ ಹಂಸ, ರೆಕ್ಕೆ ಬಿಚ್ಚಿರುವ ಹಂಸ, ತಲೆಯ ಮೇಲೆ ಜುಟ್ಟಿರುವ ಗಂಡು ಹಂಸ, ಜುಟ್ಟಿಲ್ಲದ ಹೆಣ್ಣು ಹಂಸ, ಹೀಗೆ ವಿವಿಧ ಶೈಲಿಯ ಹಂಸಗಳು ಕಲ್ಲಿನ ಕಂಬದಲ್ಲಿ ಚಿತ್ರಿತವಾಗಿವೆ. ಗಂಡಭೇರುಂಡ, ಗಿಳಿಗೆ ಆಹಾರ ತಿನ್ನಿಸುತ್ತಿರುವ ಸುಂದರಿ, ಮನುಷ್ಯನ ಮುಖವಿರುವ ಹಕ್ಕಿ, ಎರಡು ಮುಖಗಳಿರುವ ಹಕ್ಕಿ ಹೀಗೆ ವಿವಿಧ ಹಕ್ಕಿಗಳನ್ನು ಅವುಗಳ ರೆಕ್ಕೆಪುಕ್ಕಗಳೊಂದಿಗೆ ಶಿಲ್ಪಿಗಳು ಸುಂದರವಾಗಿ ನಿರೂಪಿಸಿದ್ದಾರೆ. ಎಷ್ಟೋ ಚಲನಚಿತ್ರಗಳ ಶೂಟಿಂಗ್‌ ಇಲ್ಲಿ ನಡೆದಿವೆ. ದೇಗುಲ ಆವರಣದಲ್ಲಿರುವ ಕಲ್ಯಾಣಿ ಪ್ರವಾಸಿಗರ ಮುಖ್ಯ ಆಕರ್ಷಣೆ ಎನಿಸಿದೆ.

ಸರ್‌ ಎಂ.ವಿ. ಜನ್ಮಸ್ಥಳ: ಭಾರತರತ್ನ ಸರ್.ಎಂ.ವಿಶ್ವೇಶ್ವರಯ್ಯ ಅವರ ಜನ್ಮಸ್ಥಳ ಮುದ್ದೇನಹಳ್ಳಿ. ಇದು ನಂದಿಬೆಟ್ಟದ ಸನಿಹದಲ್ಲಿದೆ. ಅವರು ಹುಟ್ಟಿ ಬೆಳೆದ ಮನೆಯನ್ನು ಈಗ ವಸ್ತು ಸಂಗ್ರಹಾಲಯ ಮಾಡಲಾಗಿದೆ. ಸರ್‌ ಎಂ.ವಿ. ಅವರು ದೇಶ ವಿದೇಶಗಳಲ್ಲಿ ಪಡೆದ ಪ್ರಶಸ್ತಿಗಳು, ಪುರಸ್ಕಾರಗಳು, ಅವರ ಜೀವನದ ಪ್ರಮುಖ ಘಟನೆಗಳಿಗೆ ಸಂಬಂಧಿಸಿದ ಚಿತ್ರಗಳನ್ನು ಇಲ್ಲಿ ನೋಡಬಹುದು. ಅವರ ಹಸ್ತಾಕ್ಷರ ಹಾಗೂ ಭಾರತರತ್ನ ಪದಕವನ್ನೂ ಇಲ್ಲಿ ಪ್ರದರ್ಶಿಸಲಾಗಿದೆ. ಅವರಸಮಾಧಿಯ ಸುತ್ತ ಸುಂದರ ಹೂದೋಟವಿದೆ. ವಾಸ್ತುಶಿಲ್ಪ, ಸಂಗ್ರಹಾಲಯ, ಪ್ರಕೃತಿಯ ಸೊಬಗು, ಇತಿಹಾಸ ಇಷ್ಟಪಡುವವರಿಗೆ ಈ ಸ್ಥಳಗಳು ಪ್ರೇಕ್ಷಣೀಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.