ADVERTISEMENT

‘ಬ್ಯಾಡ್ಮಿಂಟನ್‌ ನನ್ನುಸಿರು’

ಮಂಜುನಾಥ ರಾಠೋಡ
Published 21 ಮೇ 2017, 19:30 IST
Last Updated 21 ಮೇ 2017, 19:30 IST
‘ಬ್ಯಾಡ್ಮಿಂಟನ್‌ ನನ್ನುಸಿರು’
‘ಬ್ಯಾಡ್ಮಿಂಟನ್‌ ನನ್ನುಸಿರು’   

‘ಆಟ ಆಡ್ತಾ ಇದ್ದರೆ ಪರೀಕ್ಷೆಯಲ್ಲಿ ಪಾಸ್ ಆದಂಗೆ...’ ಬಹುತೇಕ ಪೋಷಕರು ಮಕ್ಕಳಿಗೆ ಹೇಳುವ ಮಾತಿದು.ಆದರೆ ಬಸವನಗುಡಿಯ ಅರ್ಚನಾ ಪೈ ಅವರ ತಂದೆ ಅನಂತ ಪೈ ತಮ್ಮ ಮಗಳಿಗೆ ಹೇಳಿದ್ದು ಮಾತ್ರ ಇದಕ್ಕೆ ತದ್ವಿರುದ್ಧ. ‘ಮನಸ್ಸಿಟ್ಟು ಆಡು, ಅಷ್ಟೆ ಮನಸಿಟ್ಟು ಓದು’.

ಅಪ್ಪನ ಮಾತಿನಂತೆ ನಡೆದ ಮಗಳು ಶ್ರಮಪಟ್ಟು ಆಡಿ, ರಾಷ್ಟ್ರೀಯ ಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿ ಗುರುತಿಸಿಕೊಂಡರು. ಈಗ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಕಾಲೇಜಿಗೇ ಅಗ್ರಶ್ರೇಯಾಂಕ ಪಡೆದ ವಿದ್ಯಾರ್ಥಿನಿಯಾಗಿಯೂ ಹೊರಹೊಮ್ಮಿದ್ದಾರೆ.

ನಗರದ ಜೈನ್ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿರುವ ಅರ್ಚನಾ ಅತ್ಯುತ್ತಮ ಬ್ಯಾಡ್ಮಿಂಟನ್ ಪಟು, ರಾಜ್ಯ ಮತ್ತು ರಾಷ್ಟ್ರಮಟ್ಟದ ಕ್ರೀಡಾಕೂಟಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳನ್ನು ಗೆದ್ದು ತಂದಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ವಾಣಿಜ್ಯ ವಿಷಯ ಆರಿಸಿಕೊಂಡ ಇವರು ಬರೋಬ್ಬರಿ 98.5 ಅಂಕ ಗಳಿಸಿ ಓದಿಗೆ ಆಟ ಪೂರಕವೇ ಹೊರತು ಅಡ್ಡಗಾಲಲ್ಲ ಎಂಬುದನ್ನು ಸಾಬೀತು ಮಾಡಿದ್ದಾರೆ.

ADVERTISEMENT

ಎಳವೆಯಿಂದಲೇ ಆಟೋಟಗಳ ಬಗ್ಗೆ ಆಸಕ್ತಿ ಹೊಂದಿದ್ದ ಮಗಳನ್ನು ತಂದೆ ಅನಂತ ಪೈ  ಮತ್ತು ತಾಯಿ ಚಿತ್ರಾ ಪೈ ಬಲವಂತವಾಗಿ ಓದಿನ ಕಡೆ ಎಳೆಯದೆ ಆಕೆಯ ಇಷ್ಟಕ್ಕೆ ನೀರೆರೆಯುವ ಕಾರ್ಯಮಾಡಿದರು. ಮಗಳನ್ನು ಆಕೆಯ ಇಷ್ಟದ ಬ್ಯಾಡ್ಮಿಂಟನ್ ತರಬೇತಿಗೆ ಸೇರಿಸಿದರು.

ಪ್ರಕಾಶ್ ಪಡುಕೋಣೆ ಬ್ಯಾಡ್ಮಿಂಟನ್ ಅಕಾಡೆಮಿಯಲ್ಲಿ ಹಲವು ವರ್ಷ ತರಬೇತಿ ಪಡೆದ ಅರ್ಚನಾ ಈಗ ವಿನಯ್ ಸಿದ್ದರಾಜು ಅವರ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ. ದಿನಕ್ಕೆ ಪ್ರತಿ ದಿನ 3 ಗಂಟೆ ತಪ್ಪದೆ  ಅಭ್ಯಾಸ ಮಾಡುವ ಅರ್ಚನಾ ಟೂರ್ನಿ ಇದ್ದಾಗ ಇನ್ನೂ ಒಂದು ಗಂಟೆ ಹೆಚ್ಚಿಗೆ ಅಭ್ಯಾಸ ಮಾಡುತ್ತಾರೆ. ಆದರೆ ಯಾವುದೇ ಕಾರಣಕ್ಕೂ ಓದುವುದನ್ನು ತಪ್ಪಿಸುವದಿಲ್ಲ. ದಿನಕ್ಕೆ ಕನಿಷ್ಟ 1 ಗಂಟೆಯಾದರೂ ಓದುವುದಕ್ಕೆ ಮೀಸಲಿಡುತ್ತಾರೆ. ಪರೀಕ್ಷೆ ಹತ್ತಿರವಾದಾಗ ಮಾತ್ರ ಓದಿನ ಅವಧಿಯನ್ನು 2 ಗಂಟೆಗೆ ವಿಸ್ತರಿಸಿಕೊಂಡಿದ್ದರಂತೆ.

‘5–6 ಗಂಟೆ ಕಷ್ಟಪಟ್ಟು ಉರು ಹೊಡೆಯುವ ಬದಲಿಗೆ ಮನಸ್ಸಿಟ್ಟು ಒಂದು ಗಂಟೆ ಓದಿದರೆ ಸಾಕು’ ಎಂದು  ಅರ್ಚನಾ ನಗುತ್ತಾರೆ.  ಶೇ 95% ಅಂಕ ಬರಬಹುದೆಂದು ಊಹಿಸಿದ್ದ ಅರ್ಚನಾಗೆ ಊಹೆಗಿಂತಲೂ ಹೆಚ್ಚಿಗೆ ಅಂಕ ಬಂದಿರುವುದು ಖುಷಿ ಕೊಟ್ಟಿದೆ. ತನ್ನ ಈ ಸಾಧನೆಯ ಹಿಂದಿರುವ ವ್ಯಕ್ತಿಗಳನ್ನು ಈ ಸಂದರ್ಭದಲ್ಲಿ ಮರೆಯದೇ ಸ್ಮರಿಸುತ್ತಾರೆ ಅವರು.

‘ನನ್ನ ಮೇಲೆ ವಿಶ್ವಾಸವಿಟ್ಟು, ನನಗೆ ಆಡಲು ಅನುಮತಿ ನೀಡಿದ ಕಾಲೇಜಿಗೆ ಧನ್ಯವಾದ ಹೇಳಲೇಬೇಕು, ಎಲ್ಲ ಶಿಕ್ಷಕರು ಮತ್ತು ವಿಶೇಷವಾಗಿ ದೈಹಿಕ ಶಿಕ್ಷಕರಾದ ಶಂಕರ್‌ ಸರ್ ಅವರಿಗೆ ನಾನು ಕೃತಜ್ಞಳು’ ಎಂದು ವಿನಮ್ರದಿಂದ ನೆನೆಯುತ್ತಾರೆ ಅರ್ಚನಾ.ಮುಂದೆ ಚಾರ್ಟರ್ಡ್‌ ಅಕೌಂಟೆಂಟ್‌ ಆಗುವ ಕನಸು ಕಟ್ಟಿಕೊಂಡಿರುವ ಅರ್ಚನಾ ಅವರು ಅದಕ್ಕಾಗಿ ಈಗಿನಿಂದಲೇ ತರಬೇತಿ ಪಡೆಯುತ್ತಿದ್ದಾರೆ.

ಇನ್ನು ಮುಂದಿನ ಶಿಕ್ಷಣ, ಬದುಕಿನ ದಿಕ್ಕು ನಿರ್ಧರಿಸುವಂತಹುದು. ಹಾಗಾಗಿ ಆಟಕ್ಕೆ ಹಿನ್ನಡೆಯಾದೀತೇ ಎಂಬ ಪ್ರಶ್ನೆಯನ್ನು ಸಂಪೂರ್ಣ ಅಲ್ಲಗಳೆಯುತ್ತಾರೆ ಅವರು.
‘ಆಟದಿಂದಲೇ ನಾನು ಉತ್ತಮವಾಗಿ ಓದಲು ಸಾಧ್ಯವಾಗುತ್ತಿದೆ, ಆಟದಿಂದ ನನಗೆ ಚೈತನ್ಯ ಬರುತ್ತದೆ, ಏಕಾಗ್ರತೆ ದೊರಕುತ್ತದೆ ಅದೇ ನಾನು ಉತ್ತಮ ಅಂಕ ಗಳಿಸಲು ಕಾರಣ’ ಎಂದು ದೃಢನಿರ್ಧಾರದಿಂದ ಹೇಳುತ್ತಾರೆ.

ಬ್ಯಾಡ್ಮಿಂಟನ್‌ ತಮ್ಮ ಉಸಿರು ಎನ್ನುವ ಅರ್ಚನಾ ರಾಷ್ಟ್ರೀಯ ಮಟ್ಟದ ಜ್ಯೂನಿಯರ್ ಬ್ಯಾಡ್ಮಿಂಟನ್‌ ಸ್ಪರ್ಧೆಯಲ್ಲಿ 1 ಚಿನ್ನ 2 ಬೆಳ್ಳಿ ಪದಕಗಳನ್ನು ಜಯಿಸಿದ್ದಾರೆ. ರಾಜ್ಯ ಮಟ್ಟದ ಅನೇಕ ಕ್ರೀಡಾಕೂಟಗಳಲ್ಲಿ ಆಡಿ ಗೆಲುವು ಸಾಧಿಸಿದ್ದಾರೆ. ಇನ್ನಷ್ಟು ಸಾಧನೆಯ ಗುರಿ ಅವರ ಮುಂದಿದೆ. ಹಾಗಂತ ಶಿಕ್ಷಣವನ್ನೂ ಕಡೆಗಣಿಸುವುದಿಲ್ಲಪ್ಪಾ ಎಂದು ಮುಗ್ಧ ನಗೆ ಬೀರುತ್ತಾರೆ. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.