ADVERTISEMENT

ಮಕ್ಕಳಾಟಕ್ಕೆ ಸಾಕ್ಷಿಯಾದ ಕ್ಲಿಕ್‌

ಕೆ.ಎಸ್‌.ರಾಜರಾಮ್‌
Published 21 ಮೇ 2017, 19:30 IST
Last Updated 21 ಮೇ 2017, 19:30 IST
ಛಾಯಾಗ್ರಾಹಕರು: ದೀಪಕ್ ಈಶ್ವರ್ ಇಮೇಲ್: deepakeshwar@gmail.com
ಛಾಯಾಗ್ರಾಹಕರು: ದೀಪಕ್ ಈಶ್ವರ್ ಇಮೇಲ್: deepakeshwar@gmail.com   

ಬನ್ನೇರುಘಟ್ಟ ಬಳಿಯ ಶಿವನಹಳ್ಳಿಯಲ್ಲಿ ಶ್ರೀ ಶ್ರೀರಾಮಕೃಷ್ಣ ಮಿಶನ್‌ ನಡೆಸುತ್ತಿರುವ ಸರಕಾರಿ ಪ್ರಾಥಮಿಕ ಶಾಲೆಯ ಸುತ್ತಮುತ್ತ ವಿಶಾಲವಾದ ಕಾಡು ಇದೆ. ಸುತ್ತೆಲ್ಲ ದಾನಿಗಳಿಂದ ನೆರವು ಪಡೆದು 80 ಎಕರೆ ಬರಡು ಜಾಗದಲ್ಲಿ ನೂರೈವತ್ತಕ್ಕೂ ಮಿಗಿಲಾದ ವಿವಿಧ ಜಾತಿಯ ಸಾವಿರಾರು ಮರ, ಔಷಧೀಯ ಗಿಡಗಳನ್ನೂ ಇಲ್ಲಿ ಬೆಳೆಸಿರುವುದು ವಿಶೇಷ.

ಸುತ್ತಮುತ್ತಲಿನ ಶಾಲೆಗಳ ವಿದ್ಯಾರ್ಥಿಗಳಿಗೆ ಹಾಗೂ ಇತರರಿಗೆ  ಆಗಾಗ ಆ ಅರಣ್ಯದಲ್ಲಿ ನಡಿಗೆ ಕಾರ್ಯಕ್ರಮ ಏರ್ಪಡಿಸಿ ಮರಗಿಡ, ವೈವಿಧ್ಯಮಯ ಪಕ್ಷಿಗಳ ಸಾಂಗತ್ಯವನ್ನು ಪರಿಚಯಿಸುವುದರೊಂದಿಗೆ ಆ ಪರಿಸರದ ಅಧ್ಯಯನವನ್ನೂ ಮಾಡುವ ಅವಕಾಶ ನೀಡಲಾಗುತ್ತದೆ.

ಇತ್ತೀಚೆಗೊಂದು ಮುಂಜಾನೆ ಶ್ರೀ ರವಿಶಂಕರ ಗುರೂಜಿ ಆಶ್ರಮದ 50 ಮಕ್ಕಳು ಪರಿಸರ ಸಾಂಗತ್ಯಕ್ಕಾಗಿ ಬಂದಿದ್ದರು. ಆ ಮಕ್ಕಳು ಹೆಮ್ಮರವೊಂದರ ರೆಂಬೆ ಕೊಂಬೆಗಳ ಬಿಸಿ ಅಪ್ಪುಗೆ ಪಡೆಯುತ್ತಾ,  ಮರದ ವಾಸನೆ ಸವಿಯುತ್ತಾ ಮರಕೋತಿ ಆಡುವ ಪರಿಯಲ್ಲಿ ಅದನ್ನು ಹತ್ತಿ ಹಾರುತ್ತಾ ಸಂಭ್ರಮಿಸುತ್ತಿದ್ದರು. ಈ ಸನ್ನಿವೇಶವನ್ನು ದೀಪಕ್ ಈಶ್ವರ್ ಎಂಬ ಯುವಕ ತಮ್ಮ ಸ್ಮಾರ್ಟ್ ಫೋನಿನ  ಕ್ಯಾಮರಾದಲ್ಲಿ ಕ್ಲಿಕ್ಕಿಸಿದ್ದರು. 

ADVERTISEMENT

ಎರಡು ವರ್ಷಗಳಿಂದ ಛಾಯಾಗ್ರಹಣವನ್ನು ಗಂಭೀರವಾಗಿ ಪರಿಗಣಿಸಿರುವ ಈ ಹವ್ಯಾಸಿ, ವೃತ್ತಿಯಲ್ಲಿ  ಸಂಸ್ಥೆಯೊಂದರಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಅಧಿಕಾರಿ. ಇಲ್ಲಿ ಅವರು ಬಳಸಿರುವುದು, ಒಪ್ಪೋ F1 ಸ್ಮಾರ್ಟ್ ಫೋನ್‌ನ 13 ಮೆಗಾ ಪಿಕ್ಸೆಲ್ ಕ್ಯಾಮೆರಾ.

ಈ ಛಾಯಾಚಿತ್ರದ  ತಾಂತ್ರಿಕ ಹಾಗೂ ಕಲಾತ್ಮಕ ವಿಶ್ಲೇಷಣೆ ಇಂತಿವೆ:       
* ಇಲ್ಲಿಯ ಸಂದರ್ಭ ದಾಖಲೆಗಾಗಿ ಮಾತ್ರ  ಸೀಮಿತ ಎಂದೆನಿಸುತ್ತದೆ. ಸ್ಮಾರ್ಟ್ ಫೋನಿನ ವಿಸ್ತಾರ ಗ್ರಹಣ ಮಸೂರ (ವೈಡ್ ಆ್ಯಂಗಲ್ ಲೆನ್ಸ್)  ಉತ್ತಮ ಮಟ್ಟದ್ದಾಗಿದೆ.          ಹಾಗಾಗಿ ಯಾವುದೇ ಭಾಗವೂ  ವಿಕೃತಗೊಳ್ಳದೇ (ಡಿಸ್ಟಾರ್ಶನ್ ಇಲ್ಲದೇ)  ಮರದ ಬೇರು- ಕಾಂಡ, ರೆಂಬೆ ಕೊಂಬೆ ಎಲೆ, ಜೊತೆಗೆ ಮರದ ಮೇಲೆ ಹತ್ತಿ ಇಳಿಯುವ,            ವಿಹರಿಸುವ ಮಕ್ಕಳನ್ನೂ ಒಳಗೊಂಡು, ಕಣ್ಣಿಗೆ ಕಾಣುವ ಎಲ್ಲವೂ ಸಮರ್ಪಕವಾಗಿಯೇ  ಸೆರೆಯಾಗಿವೆ.

*  ಮರದ ಹೊರ ತೊಗಟೆಯ  ವಿನ್ಯಾಸ
   (ಟೆಕ್ಸ್‌ಚರ್),  ತುಂಬಾ ಚೆನ್ನಾಗಿ ಮೂಡಿಬಂದಿರುವುದು, ಸ್ಪರ್ಶದ ಸಂವೇದನೆಯನ್ನು ನೋಡುಗನ ಕಣ್ಣಿಗೆ ಇದು ನಾಟಿಸುವ ಗುಣ ಹೊಂದಿದೆ, ಕ್ಯಾಮೆರಾದ ತಾಂತ್ರಿಕ           ಸಾಧ್ಯತೆಯೊಂದಿಗೆ, ದೀಪಕ್ ಈಶ್ವರ್ ಅವರ ಪರಿಣತಿಗೂ ಸಾಕ್ಷಿಯಾಗಿದೆ.

*  ಕಲಾತ್ಮಕವಾಗಿ  ಹೆಚ್ಚೇನು ಹೇಳುವುದು ಉಚಿತವಲ್ಲದಿದ್ದರೂ, ಮಕ್ಕಳ ಹಾವಭಾವ, ಸಂಭ್ರಮ ಮತ್ತು ಆ್ಯಕ್ಷನ್‌ಗಳು ಸ್ಫುಟವಾಗಿ ಮೂಡದಿರುವುದು ಈ ಚಿತ್ರದ ನ್ಯೂನತೆ.

*  ಹೆಮ್ಮರದ ಆಧಾರವೇ ಅದರ  ಬೇರುಗಳು.   ಇಲ್ಲಿ,  ಮರದ  ಕಾಂಡಗಳ  ನೆಲದ ಭಾಗ ತುಂಡಾಗಿದೆ (ಕ್ರಾಪ್ ಆಗಿದೆ).   ಹಾಗಾಗಿ  ಮರ ಆಗಸದಲ್ಲಿ ತೇಲಾಡುವಂತೆ           ಭಾಸವಾಗುತ್ತದೆ!  ಅಂತೆಯೇ, ಜಿಗಿದಾಡಲು ಮಕ್ಕಳಿಗೆ ನೆಲದ ಭಾಗವೂ ಮುಖ್ಯವೇ.. ಆದ್ದರಿಂದ ಚೌಕಟ್ಟಿನಲ್ಲಿ  ಮರದ ಮುನ್ನೆಲೆಯಲ್ಲಿ  ಸ್ವಲ್ಪವಾದರೂ ನೆಲದ  ಭಾಗ         ಕಾಣಬೇಕಿತ್ತು.

ಛಾಯಾಚಿತ್ರದ ಕಲಾತ್ಮಕ ನಿರೂಪಣೆಯಲ್ಲಿ ವಸ್ತುವಿನ ಮೇಲೆ ಬೀಳುವ ಬೆಳಕಿನ ಕೋನ (ಡೈರೆಕ್ಷನ್), ಅದರ ಸಾಂದ್ರತೆ, ನೆರಳು ಬೆಳಕಿನ ಉತ್ತಮ ಉಪಯೋಗ,  ಚಿತ್ರದ ಚೌಕಟ್ಟಿನೊಳಗೊಂದು ಆಕರ್ಷಕ ಪ್ರವೇಶ ಬಿಂದು  (ಎಂಟ್ರಿ ಪಾಯಿಂಟ್), ಆ ಬಿಂದುವಿನೆಡೆಗೆ  ನೋಡುಗನ ಕಣ್ಣನ್ನು ಸೆಳೆಯುವಲ್ಲಿ  ಇತರ ಭಾಗಗಳ  ಸಮರಸ ರೂಪಗಳು ಮತ್ತು  ಬೆಳಕು ಮೂಡಿಸುವ ಒಟ್ಟಾರೆ ಚಿತ್ರ ಸಂಯೋಜನೆ ಬಹಳ ಮುಖ್ಯ. ಇಲ್ಲಿ ಆ ಬಗೆಯಲ್ಲಿ ಕತೆ ಹೇಳುವ ದೃಶ್ಯವೊಂದನ್ನು  ಸೆರೆಹಿಡಿಯಬಲ್ಲ ಅವಕಾಶವಿರುವುದಂತೂ ಸತ್ಯ. ಅದಕ್ಕೆ ಉತ್ತಮ ಕ್ಯಾಮರಾದ ಬಳಕೆಯೂ, ಸಾಧನೆಯೂ  ಮತ್ತು ಸೃಜನಶೀಲ ಅಭಿವ್ಯಕ್ತಿಯೂ ಅವಶ್ಯಕ.                          
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.