ADVERTISEMENT

ಮಕ್ಕಳಿಗಿಲ್ಲ ಸುರಕ್ಷತೆ

'ಪ್ರಜಾವಾಣಿ' ಮೆಟ್ರೊ ರಿಯಾಲಿಟಿ ಚೆಕ್

ಶಶಿಕಾಂತ್ ಎಸ್. ಶೆಂಬೆಳ್ಳಿ
Published 24 ಜುಲೈ 2014, 19:30 IST
Last Updated 24 ಜುಲೈ 2014, 19:30 IST

ವಿಬ್ಗಯೊರ್ ಶಾಲೆಯಲ್ಲಿ ನಡೆದ ಆರು ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಘಟನೆ ಪೋಷಕರನ್ನು ಸಹಜವಾಗಿಯೇ ಆತಂಕಕ್ಕೀಡು ಮಾಡಿದೆ. ಶಾಲೆಗಳಲ್ಲಿ ಮಕ್ಕಳ ಸುರಕ್ಷತೆ ಅವರನ್ನು ಅತಿಯಾಗಿ ಕಾಡುತ್ತಿದೆ.

ಘಟನೆಯ ನಂತರ ಪೋಷಕರ ಆಕ್ರೋಶ ಮತ್ತು ವ್ಯಾಪಕ ಟೀಕೆಗೆ ಗುರಿಯಾಗಿದ್ದ ಸರ್ಕಾರ ಶಾಲೆಗಳಲ್ಲಿ ಕೈಗೊಳ್ಳಬೇಕಾದ ಸುರಕ್ಷತೆಗೆ ಸಂಬಂಧಿಸಿ ತೋರಿಸಿದ್ದು ಆರಂಭಶೂರತ್ವ. ಈ ಸಂಬಂಧ ಶಾಲೆಗಳಿಗೆ ಮಾರ್ಗಸೂಚಿ ಹೊರಡಿಸಲಾಗುವುದು ಎಂದು ಗೃಹಸಚಿವ ಕೆ.ಜೆ. ಜಾರ್ಜ್‌ ಅವರು ಈಚೆಗೆ ವಿಧಾನಸಭೆಯಲ್ಲಿ ಹೇಳಿಕೆ ನೀಡಿದ್ದರು. ಅವರು ಹೇಳಿಕೆ ನೀಡಿ ಒಂದು ವಾರ ಕಳೆದ ಬಳಿಕ ಇದನ್ನು ಪರಿಶೀಲಿಸಲು ‘ಮೆಟ್ರೊ’ ಬುಧವಾರ ರಾಜಾಜಿನಗರದ ಕೆಲ ಆಯ್ದ ಶಾಲೆಗಳಿಗೆ ಭೇಟಿ ನೀಡಿತು. ಈ ವೇಳೆ ಅದು ಕಂಡುಕೊಂಡ ನೈಜ ಚಿತ್ರಣ ವಿವರ ಇಲ್ಲಿದೆ.

ಶಾಲೆ: ವಿದ್ಯಾವರ್ಧಕ ಸಂಘ. ಡಾ. ರಾಜ್‌ಕುಮಾರ್‌ ಮತ್ತು ಪಶ್ಚಿಮ ಕಾರ್ಡ್‌ ರಸ್ತೆಯನ್ನು ಕೂಡಿಸುವ  ರಾಜಾಜಿನಗರದ ಒಂದನೇ ಬ್ಲಾಕ್‌ನ ಮುಖ್ಯರಸ್ತೆಯಲ್ಲಿರುವ ಈ ಶಾಲೆಯ ಗೇಟ್‌ ಬಳಿ ತೆರಳಿದಾಗ ಸಮಯ ಬೆಳಿಗ್ಗೆ ೧೦.೩೦ ಆಗಿತ್ತು. ಗೇಟ್‌ ಬಳಿಯಲ್ಲೇ ಕೆಲ ನಿಮಿಷ ನಿಂತು ಒಳ ಪ್ರವೇಶಿಸಿದಾಗ ಇಬ್ಬರು ಸೆಕ್ಯುರಿಟಿ ಗಾರ್ಡ್‌ಗಳು ಅಲ್ಲಿಯೇ ಇದ್ದರೂ ಯಾರೊಬ್ಬರೂ ನನ್ನನ್ನು ಪ್ರಶ್ನಿಸುವ ಗೋಜಿಗೆ ಹೋಗಲಿಲ್ಲ. ಅವರು ಪರಸ್ಪರ ಮಾತನಾಡುತ್ತ ನಿಂತಿದ್ದರು. ಶಾಲೆ ಪ್ರವೇಶಿಸಿದ ನಾನು ಸುಮಾರು ೧೫ ನಿಮಿಷಗಳವರೆಗೆ ಅತ್ತಿಂದಿತ್ತ

ಕಮಿಷನರ್ ಏನೆನ್ನುತ್ತಾರೆ?
ಶಾಲೆಗಳಿಗೆ ಯಾವುದೇ ಮಾರ್ಗಸೂಚಿ ಕಳುಹಿಸಿಲ್ಲ. ಈ
ಕುರಿತು ನೀವು ಶಿಕ್ಷಣ ಇಲಾಖೆಯವರನ್ನು ಕೇಳಿ ಎಂದು ನಗರ ಪೊಲೀಸ್‌ ಕಮಿಷನರ್‌ ಎಂ.ಎನ್‌. ರೆಡ್ಡಿ ಅವರು ಹಾರಿಕೆಯ ಉತ್ತರ ನೀಡುವ ಮೂಲಕ ದೂರವಾಣಿ ಕರೆಯನ್ನು ಮಧ್ಯದಲ್ಲೆ ಕಟ್‌ ಮಾಡಿದರು.

ಒಳಗಡೆ ಓಡಾಡಿದೆ. ಆವರಣದಲ್ಲಿ ಕೆಲವು ಮಕ್ಕಳು ಆಡುತ್ತಿದ್ದರು. ಮತ್ತೊಂದೆಡೆ ತರಗತಿಗಳು ನಡೆಯುತ್ತಿದ್ದವು. ಅಲ್ಲಿಯೇ ನಿಂತಿದ್ದ ನನ್ನನ್ನು, ಒಳಗಿದ್ದ ಸಿಬ್ಬಂದಿ ನೋಡಿದರೂ ಪ್ರಶ್ನಿಸಲಿಲ್ಲ. ಆನಂತರ ಅದೇಕೊ ಒಳಗಡೆ ಬಂದಿದ್ದ ಸೆಕ್ಯುರಿಟಿ ಗಾರ್ಡ್‌ ಒಬ್ಬರು ‘ನಿಮಗೆ ಯಾರು ಬೇಕು?’ ಎಂದು ಕೇಳಿದರು. ಮುಖ್ಯಗುರುಗಳ ಜೊತೆ ಭೇಟಿ ಮಾಡುವುದಿದೆ ಎಂದಾಗ, ‘ಅದು ಅವರ ಕೋಣೆ, ಅಲ್ಲಿಗೆ ಹೋಗಿ’ ಎಂದು ಹೇಳಿ ಹೊರಟೇಬಿಟ್ಟರು. ಯಾವುದೇ ಕಾರಣ ಕೇಳಲಿಲ್ಲ.

ಬಳಿಕ ಶಾಲೆಯ ಮುಖ್ಯಗುರು ಗೀತಾ ವೆಂಕಟೇಶ್‌ ಅವರನ್ನು ಭೇಟಿ ಮಾಡಿ, ಪರಿಚಯ ಮಾಡಿಕೊಂಡೆ. ನಂತರ ಕೆಲ ಪ್ರಶ್ನೆಗಳನ್ನು ಕೇಳಲು ಮುಂದಾದೆ. ಆದರೆ, ನಿರಾಸೆ ಕಾದಿತ್ತು. ಭದ್ರತೆಗೆ ಸಂಬಂಧಿಸಿ ಸರ್ಕಾರದಿಂದ ಮಾರ್ಗಸೂಚಿ ಬಂದಿದೆಯಾ? ಎಂದು ಪ್ರಶ್ನಿಸಿದೆ. ‘ಸರ್‌, ನೀವು ಈ ಸಂಬಂಧ ನಮ್ಮ ಸೆಕ್ರೆಟರಿ ಜೊತೆ ಮಾತನಾಡಿದರೆ ಉತ್ತಮ. ನಾನೇನೂ ಹೇಳಲಾರೆ’ ಎಂದು ಒಂದೇ ಮಾತಿನಲ್ಲಿ ತೆರೆ ಎಳೆದರು.

‘ರಸ್ತೆಯ ಪಕ್ಕದಲ್ಲಿಯೇ ನಮ್ಮ ಶಾಲೆಗೆ ಸೇರಿದ ಇನ್ನೊಂದು ಕಟ್ಟಡವಿದೆ. ಅಲ್ಲಿ ನಮ್ಮ ಸೆಕ್ರೆಟರಿ ಸಿಗುತ್ತಾರೆ, ನೀವು ಮಾತನಾಡಿಸಿ’ ಎಂದರು.

ಮತ್ತೊಂದು ಕಟ್ಟಡಕ್ಕೆ ಹೊರಟೆ. ಅಲ್ಲಿ ವಯಸ್ಸಾಗಿದ್ದ ಸೆಕ್ಯುರಿಟಿ ಗಾರ್ಡ್‌ ಇದ್ದರು. ಅವರು ಪ್ರತಿಯೊಬ್ಬರನ್ನು ವಿಚಾರಿಸಿಯೇ ಒಳಗೆ

ಬಿಡುತ್ತಿದ್ದರು. ಅಲ್ಲಿಗೆ ಹೋದೊಡನೆ, ನನ್ನನ್ನು ತಡೆದು ‘ನೀವು ಯಾರು?, ಏನಾಗಬೇಕು?’ ಎಂದು ಪ್ರಶ್ನಿಸಿದರು. ವಿಷಯ ತಿಳಿಸಿದೆ. ಅದಕ್ಕೆ ಅವರು ‘ಸೆಕ್ರೆಟರಿ ಮೀಟಿಂಗ್‌ನಲ್ಲಿ ಇದ್ದಾರೆ. ಇನ್ನು ಒಂದು ಗಂಟೆ ಕಾಯಬೇಕು’ ಎಂದರು. ಇರಲಿ ಎಂದು ಹೇಳಿ ಅಲ್ಲಿಂದ ಹೊರಟೆ. ಎರಡೂ ಶಾಲೆಗಳು ಒಂದೇ ಸಂಸ್ಥೆಗೆ ಸೇರಿದ್ದರೂ ಪರಿಸ್ಥಿತಿ ಮಾತ್ರ ಕೊಂಚ ಭಿನ್ನವಾಗಿರುವುದು ಕಂಡು ಬಂತು.

ಬಳಿಕ ಮತ್ತೊಂದು ಶಾಲೆಯತ್ತ ಮುಖ ಮಾಡಿದೆ. ತುಸು ದೂರದಲ್ಲೇ ಇದ್ದ ಪಾಂಚಜನ್ಯ ಶಾಲೆ ಬಳಿ ಹೋದಾಗ ಸಮಯ ೧೧ ಗಂಟೆ. ಗೇಟ್‌ ಬಳಿ ಯಾರೂ ಇರಲಿಲ್ಲ. ಶಾಲೆ ಪ್ರವೇಶಿಸಿದೆ. ಇಕ್ಕಟ್ಟಿನಿಂದ ಕೂಡಿದ ಕೋಣೆಗಳಲ್ಲಿ ತರಗತಿಗಳು ನಡೆಯುತ್ತಿದ್ದವು. ಹಾಗೆಯೇ ಇನ್ನಷ್ಟು ಒಳಗಡೆ ಹೋದೆ. ಶಿಕ್ಷಕಿಯೊಬ್ಬರು ನನ್ನನ್ನು ಕಂಡು, ‘ಏನಾಗಬೇಕು ಸರ್‌?’ ಎಂದು ಪ್ರಶ್ನಿಸಿದರು. ಅದಕ್ಕೆ ನಾನು ವಿಷಯ ತಿಳಿಸಿದೆ. ಅದಕ್ಕೆ ಅವರು ನೇರವಾಗಿ ಅವರಿರುವ ಕೋಣೆಗೆ ಕರೆದುಕೊಂಡು ಹೋಗಿ ಭೇಟಿ ಮಾಡಿಸಿದರು. ‘ಸರ್ಕಾರದಿಂದ ಮಾರ್ಗಸೂಚಿ ಬಂದಿದೆಯಾ, ಮಕ್ಕಳ ಸುರಕ್ಷತೆಗೆ ಏನು ಕ್ರಮ ಕೈಗೊಂಡಿದ್ದಿರಿ’ ಎಂದು ಪ್ರಶ್ನಿಸಿದೆ. ಶಾಲೆಯ ಮುಖ್ಯಗುರು ಪುಟ್ಟಲಕ್ಷ್ಮಮ್ಮ ನನ್ನೆಲ್ಲ ಪ್ರಶ್ನೆಗಳಿಗೆ ನಗುಮುಖದಿಂದಲೇ ಉತ್ತರಿಸಿದರು.

‘ಸರ್‌, ಸರ್ಕಾರದಿಂದ ಇದುವರೆಗೆ ನಮಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ನಾವೇ ಮಕ್ಕಳನ್ನು ಕೇರ್‌ ಮಾಡುತ್ತೇವೆ. ಶೌಚಾಲಯಕ್ಕೆ ಬಿಟ್ಟರೂ ಮಕ್ಕಳನ್ನು ನಾವೇ ನಿಗಾ ವಹಿಸುತ್ತೇವೆ. ಶಾಲೆ ಬಿಟ್ಟಾಗ ಪೋಷಕರನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ಮಕ್ಕಳನ್ನು ಕಳುಹಿಸುವುದಿಲ್ಲ’ ಎಂದರು.

ನಂತರ ಅದೇ ಕಟ್ಟಡದ ಇನ್ನೊಂದು ಭಾಗದಲ್ಲಿದ್ದ  ಪ್ರೌಢಶಾಲೆಯ ಮುಖ್ಯಗುರು ಉಮಾದೇವಿ ಅವರನ್ನು ಕಂಡೆ. ಅವರಿಗೆ ಮತ್ತದೇ ಪ್ರಶ್ನೆಗಳನ್ನು ಕೇಳಿದೆ.

‘ಇಲ್ಲಿಯವರೆಗೆ ಸರ್ಕಾರದಿಂದ ಯಾವುದೇ ಗೈಡ್‌ಲೈನ್ಸ್‌ ಬಂದಿಲ್ಲ. ಆದರೆ, ಕಮಿಷನರ್‌ ಕಚೇರಿಯಿಂದ ಸಭೆ ಇರುವುದರ ಕುರಿತು ಕರೆ ಬಂದಿತ್ತು. ಸಭೆಗೆ ಹೋದರೆ, ಅದನ್ನು ಕಡೆ ಗಳಿಗೆಯಲ್ಲಿ ಮುಂದೂಡಲಾಯಿತು. ಅತ್ತಿಂದಿತ್ತ ಓಡಾಡಿಸಿದ ಬಳಿಕ ಅಂತಿಮವಾಗಿ ಸಭೆಯನ್ನೇ ರದ್ದುಪಡಿಸಲಾಯಿತು. ಕೊನೆಗೆ ನಮ್ಮ ಶಾಲೆಯಲ್ಲೆ ಸಿಬ್ಬಂದಿಯ ಜೊತೆ ಸಭೆ ನಡೆಸಿ ಸುರಕ್ಷತೆಗೆ ಸಂಬಂಧಿಸಿದಂತೆ ಚರ್ಚಿಸಿದೆವು’ ಎಂದು ತಿಳಿಸಿದರು.

‘ಶಾಲಾ ಅವಧಿಯ ಮಧ್ಯದಲ್ಲಿ ಪೋಷಕರನ್ನು ಹೊರತುಪಡಿಸಿ ಬೇರೆ ಯಾರೊಂದಿಗೂ ಮಕ್ಕಳನ್ನು ಬಿಡದಿರಲು ನಿರ್ಧರಿಸಲಾಯಿತು. ಅಲ್ಲದೇ ವಾಚ್‌ಮನ್‌ಗಳನ್ನು ಕರೆಸಿ, ಕಟ್ಟುನಿಟ್ಟಿನ ಸೂಚನೆ ನೀಡಿದ್ದೇವೆ. ಇದೇ ಕಟ್ಟಡದಲ್ಲಿ ವಸತಿ ನಿಲಯ ಕೂಡ ಇರುವುದರಿಂದ ಟೆನ್ಸ್‌ ಹೆಚ್ಚಾಗಿದೆ. ಒಬ್ಬ ವಾಚ್‌ಮೆನ್‌ ಇಡೀ ಕಟ್ಟಡಕ್ಕೆ ಸೆಕ್ಯುರಿಟಿ ಕೊಡಲು ಆಗುವುದಿಲ್ಲ. ಮಾರ್ಗಸೂಚಿ ಬಂದ ನಂತರ ಆಡಳಿತ ಮಂಡಳಿ ಜೊತೆ ಸಭೆ ನಡೆಸಿ ಕ್ರಮ ಕೈಗೊಳ್ಳುತ್ತೇವೆ’ ಎಂದರು.

‘ಗೆಳತಿ’
‘ಮಕ್ಕಳ ಕುಂದು ಕೊರತೆ ಆಲಿಸಲು ಗೆಳತಿ ಹೆಸರಿನಲ್ಲಿ ಆಪ್ತ ಸಲಹಾ ಕೇಂದ್ರ ಆರಂಭಿಸಲಾಗಿದೆ. ದೂರು ಪೆಟ್ಟಿಗೆಯನ್ನೂ ಇಡಲಾಗಿದೆ. ಪ್ರಾರ್ಥನೆ ಸಂದರ್ಭದಲ್ಲಿ ಮಕ್ಕಳಿಗೆ ಜಾಗೃತರಾಗಿರಲು ಸೂಚಿಸಿದ್ದೇವೆ. ಯಾವುದೇ ರೀತಿಯ ತೊಂದರೆ, ಸಮಸ್ಯೆ ಇದ್ದಲ್ಲಿ ಹೆಸರನ್ನು ಉಲ್ಲೇಖಿಸದೆ ದೂರು ಪೆಟ್ಟಿಗೆಯಲ್ಲಿ ಪತ್ರ ಬರೆದು ಹಾಕಲು ತಿಳಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ನಂತರ ರಾಜಾಜಿನಗರದ ಎರಡನೇ ಬ್ಲಾಕ್‌ನಲ್ಲಿರುವ ಕೆಎಲ್‌ಇ ಶಾಲೆಯತ್ತ ಮುಖ ಮಾಡಿದೆ. ಶಾಲೆಯ ಬಳಿ ಹೋದಾಗ ಸಮಯ

ADVERTISEMENT

೧೧.೪೫. ಈಗಾಗಲೇ ಭೇಟಿ ನೀಡಿದ ಶಾಲೆಗಳಿಗೆ ಹೋಲಿಸಿದರೆ ಇಲ್ಲಿನ ಪರಿಸ್ಥಿತಿ ಕೊಂಚ ಭಿನ್ನವಾಗಿತ್ತು. ಗೇಟ್‌ ಬಳಿ ಹೋಗುತ್ತಿದ್ದಂತೆ ಸೆಕ್ಯುರಿಟಿ ಗಾರ್ಡ್‌ ‘ಏನಾಗಬೇಕು?’ ಎಂದು ಪ್ರಶ್ನಿಸಿದರು. ಮುಖ್ಯಗುರುಗಳನ್ನು ಭೇಟಿ ಮಾಡಬೇಕು ಎಂದೆ. ಅದಕ್ಕವರು, ಗೇಟ್‌ ಒಳಗೆ ಕರೆದು, ‘ನಿಮ್ಮ ವಿವರವನ್ನು ಬರೆಯಿರಿ’ ಎಂದು ರಿಜಿಸ್ಟರ್‌ ಕೊಟ್ಟರು. ವಿವರ ಬರೆದೆ. ಅದನ್ನು ನೋಡಿ ‘ಒಳಹೋಗಿ’ ಎಂದರು.

ರಿಸೆಪ್ಷನಿಸ್ಟ್‌ ನನ್ನನ್ನು ಕಂಡು ಪ್ರಶ್ನಿಸಿದರು. ಬಂದ ಕಾರಣ ಹೇಳಿದೆ. ಅದಕ್ಕವರು, ಮುಖ್ಯಗುರುಗಳು ರಜೆ ಮೇಲಿದ್ದಾರೆ. ಇನ್‌ಚಾರ್ಜ್‌ ಮೇಡಂ ಇದ್ದಾರೆ ಎಂದರು. ಸರಿ ಆಯ್ತು ಎಂದೆ. ಅವರನ್ನು ಕಂಡು ಮತ್ತದೇ ಪ್ರಶ್ನೆಗಳನ್ನೆ ಕೇಳಿದೆ.

ಸಿಸಿಟಿವಿ ಕ್ಯಾಮೆರಾ
‘ಸರ್ಕಾರದಿಂದ ಇದುವರೆಗೆ ಯಾವುದೇ ಗೈಡ್‌ಲೈನ್ಸ್‌ ಬಂದಿಲ್ಲ. ಸಿಬ್ಬಂದಿ ಮತ್ತು ಪೋಷಕರ ಸಭೆ ನಡೆಸಿದ್ದೇವೆ. ಶಾಲೆ ಬಿಟ್ಟ ನಂತರ ಪೋಷಕರೇ ಬಂದು ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಸೂಚಿಸಿದ್ದೇವೆ. ಎಲ್ಲ ತರಗತಿ, ಕಾರಿಡಾರ್‌ನಲ್ಲಿ ಕ್ಯಾಮೆರಾ ಅಳವಡಿಸಿದ್ದೇವೆ. ಪ್ರತಿಯೊಂದು ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಶಾಲೆಯ ಬಸ್‌ನಲ್ಲಿ ಲೇಡಿ ಟೀಚರ್‌ ತೆರಳುತ್ತಾರೆ.

ಖಾಸಗಿ ವ್ಯಾನ್‌ಗಳಲ್ಲಿ ಹೋಗುವ ಮಕ್ಕಳ ಬಗ್ಗೆ ನಾವು ಜವಾಬ್ದಾರರಲ್ಲ ಎಂದು ಪೋಷಕರಿಗೆ ತಿಳಿಸಿದ್ದೇವೆ. ಶಾಲೆ ಬಿಡುವುದು ಮಧ್ಯಾಹ್ನ ೨.೪೫ಕ್ಕೆ. ಆದರೆ, ಕೆಲ ಮಕ್ಕಳು ೪ ಗಂಟೆವರೆಗೆ ಇರುತ್ತಾರೆ. ಇಲ್ಲಿಯವರೆಗೆ ಅವರನ್ನು ಸೆಕ್ಯುರಿಟಿ ಗಾರ್ಡ್‌ಗಳೇ ನೋಡಿಕೊಳ್ಳುತ್ತಿದ್ದರು. ಈಗ, ಅದು ಆಗುವುದಿಲ್ಲ ಎಂದು ತಿಳಿಸಿದ್ದೇವೆ’ ಎಂದು ಮಾಹಿತಿ ನೀಡಿದ ಅವರು, ಕೊನೆಯಲ್ಲಿ ತಮ್ಮ ಹೆಸರು ಬರೆಯಬೇಡಿ ಎಂದು ಕೇಳಿಕೊಂಡರು.

ಮೂರು ಖಾಸಗಿ ಶಾಲೆಗಳ ಬಳಿಕ ಸರ್ಕಾರಿ ಶಾಲೆಗೆ ಭೇಟಿ ನೀಡುವ ಯೋಚನೆ ಬಂತು. ಥಟ್ಟನೆ ರಾಜಾಜಿನಗರದ ಒಂದನೇ ಬ್ಲಾಕ್‌ನಲ್ಲಿರುವ ಸರ್ಕಾರಿ ಶಾಲೆಗೆ ಕಾಲಿಟ್ಟೆ. ಆಗ ಸಮಯ ೧೨.೨೦. ಗೇಟ್‌ ಬಳಿ ಯಾರೊಬ್ಬರೂ ಇರಲಿಲ್ಲ. ಅಲ್ಲಿ ಹೋದಾಗಲೂ ಯಾರೊಬ್ಬರೂ ನನ್ನನ್ನು ಪ್ರಶ್ನಿಸಲಿಲ್ಲ. ನೇರವಾಗಿ ಮುಖ್ಯಗುರುಗಳ ಕೋಣೆ ಪ್ರವೇಶಿಸಿ ವಿಷಯ ತಿಳಿಸಿದೆ. ಅದಕ್ಕವರು, ‘ಸರ್‌, ನನ್ನನ್ನು ಏನು ಕೇಳಬೇಡಿ. ನೀವು ಏನಿದ್ದರೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರನ್ನು ಕೇಳಿ. ಕೆಲ ದಿನಗಳ ಹಿಂದೆ ಶಿಕ್ಷಕರೊಬ್ಬರು ಮೀಡಿಯಾದವರ ಜೊತೆ ಮಾತನಾಡಿ ಅಮಾನತಾಗಿದ್ದಾರೆ’ ಎಂದರು. ಅವರಿಗೆ ಎಷ್ಟೇ ಮನವರಿಕೆ ಮಾಡಿದರೂ ಪ್ರಯೋಜನವಾಗಲಿಲ್ಲ. ‘ಇದು ಸರ್ಕಾರಿ ಶಾಲೆ, ಸರ್ಕಾರದಿಂದ ಮಾರ್ಗಸೂಚಿ ಏನಾದರೂ ಬಂದಿದೆಯಾ?’ ಎಂದು ಮತ್ತೆ ಕೇಳಿದೆ. ಅದಕ್ಕವರು, ‘ಬಂದಿಲ್ಲ’ ಎಂದಷ್ಟೇ ಹೇಳಿ ಜಾರಿಕೊಂಡರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.