ADVERTISEMENT

ಮಕ್ಕಳಿಗೆ ಹಬ್ಬದುಡುಗೆ

ರೋಹಿಣಿ ಮುಂಡಾಜೆ
Published 22 ಸೆಪ್ಟೆಂಬರ್ 2017, 19:30 IST
Last Updated 22 ಸೆಪ್ಟೆಂಬರ್ 2017, 19:30 IST
ಮಕ್ಕಳಿಗೆ ಹಬ್ಬದುಡುಗೆ
ಮಕ್ಕಳಿಗೆ ಹಬ್ಬದುಡುಗೆ   

ಮಕ್ಕಳಿಗೆ ಈ ಹಬ್ಬಕ್ಕೆ ಯಾವ ಉಡುಪು ಹಾಕಿದರೆ ಚಂದ ಎಂದು ಹೆತ್ತವರು ಪ್ರತಿ ಹಬ್ಬಕ್ಕೂ, ವಿಶೇಷ ಸಂದರ್ಭಕ್ಕೂ ತಲೆಕೆಡಿಸಿಕೊಳ್ಳುವ ವಿಚಾರ. ಹೊಸ ಬಟ್ಟೆ ಹಾಕಿಕೊಂಡು ಮಕ್ಕಳು ಮನೆ ತುಂಬಾ ಓಡಾಡುತ್ತಿದ್ದರೆ ಸಂಭ್ರಮವೇ ಒಳಹೊರಗೆ ಜೀಕುವಂತೆ ಭಾಸವಾಗುತ್ತದೆ.

ಮಕ್ಕಳ ಉಡುಗೆ ತೊಡುಗೆ, ಅಪ್ಪ ಅಮ್ಮನ ಪ್ರತಿಷ್ಠೆಯ ಸಂಕೇತವಾಗಿ ಪ್ರದರ್ಶನಗೊಳ್ಳುತ್ತಿರುವುದು ಸುಳ್ಳಲ್ಲ. ಹಬ್ಬಗಳು ಇಂತಹ ಅಭಿಲಾಷೆಗಳಿಗೆ ಬಾಬತ್ತುಗಳು. ಹೆಣ್ಣು ಮಕ್ಕಳನ್ನು ಸಾಕ್ಷಾತ್‌ ಮದುಮಗಳಂತೆ ಸಿಂಗಾರ ಮಾಡುವ ಉಮೇದು ಅಮ್ಮಂದಿರಿಗೆ. ಹಾಗಂತ ಗಂಡು ಮಕ್ಕಳನ್ನು ಅಲಕ್ಷ್ಯ ಮಾಡುವುದುಂಟೇ? ಹುಡುಗರ ಉಡುಗೆ ತೊಡುಗೆಗಳು ಪ್ರತಿ ಹಬ್ಬಕ್ಕೂ ಬದಲಾಗದಿದ್ದರೂ ಹಬ್ಬಕ್ಕೆ ಸಜ್ಜಾಗುವ ಬಗೆ ಮಾತ್ರ ಹೊಸದೇ.

ಕುರ್ತಾ–ಪೈಜಾಮ, ಶೆರ್ವಾನಿ, ಮೋದಿ ಕೋಟು, ಜಾಕೆಟ್‌, ಓವರ್‌ಕೋಟ್‌, ವೇಸ್‌ಕೋಟ್‌, ಪಠಾಣ್‌, ರಜಪೂತ ಶೈಲಿಯ ಕೋಟುಗಳು, ಪಟಿಯಾಲ ಪ್ಯಾಂಟುಗಳು ಮಳಿಗೆಗಳ ಮಕ್ಕಳ ವಿಭಾಗದಲ್ಲಿ ಬೇಡಿಕೆ ಕುದುರಿಸಿಕೊಂಡಿವೆ.

ADVERTISEMENT

ಕಮರ್ಷಿಯಲ್‌ ಸ್ಟ್ರೀಟ್‌ನ ‘ಶೋ ಆಫ್‌’ ಮಳಿಗೆಯ ವ್ಯವಸ್ಥಾಪಕ ಮಂಜುನಾಥ್‌ ಅವರು ಈ ಮಾತಿಗೆ ಸಹಮತ ವ್ಯಕ್ತಪಡಿಸುತ್ತಾರೆ.

‘ಯುಗಾದಿಯಿಂದ ದೀಪಾವಳಿವರೆಗೂ ಭಾರತೀಯ ಸಾಂಪ್ರದಾಯಿಕ ಶೈಲಿಯ ಉಡುಪುಗಳು ಅಧಿಕ ಪ್ರಮಾಣದಲ್ಲಿ ಮಾರಾಟವಾಗುತ್ತವೆ. ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ಬ್ಲೇಜರ್‌, ಸೂಟುಗಳಿಗೆ ಬೇಡಿಕೆ ಇರುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಶೆರ್ವಾನಿ, ಕುರ್ತಾ, ಪಟಿಯಾಲ ಪ್ಯಾಂಟು ಉಳ್ಳ ಕುರ್ತಾ, ಕುರ್ತಾ ಪೈಜಾಮ, ಓವರ್‌ಕೋಟ್‌, ವೇಸ್‌ಕೋಟ್‌, ಮೋದಿ ಕೋಟ್‌, ಜಾಕೆಟ್‌ಗಳಿಗೆ ಬೇಡಿಕೆ. ಕೆಲ ವರ್ಷಗಳಿಂದೀಚೆ ‘ಮೋದಿ ಕುರ್ತಾ’ ಮತ್ತು ‘ಮೋದಿ ಕೋಟ್‌’ ಮಕ್ಕಳಿಗೆ ಅಚ್ಚುಮೆಚ್ಚು. ಹತ್ತಿ, ಸಿಂಥೆಟಿಕ್‌, ಕ್ವಾಡ್ರಾಯ್‌ ಫ್ಯಾಬ್ರಿಕ್‌ನಲ್ಲಿ ತಯಾರಾದ ಈ ಬಗೆಯ ಉಡುಪುಗಳ ಬೇಡಿಕೆ ಹೆಚ್ಚಾಗಿದೆ. ‘ಬಂಡಿ’ ಎಂದು ಕರೆಯುವ ಕುರ್ತಾ–ಪೈಜಾಮ ಮತ್ತು ಓವರ್‌ಕೋಟ್‌ ಸಹ ಮಕ್ಕಲಿಗೆ ಇಷ್ಟವಾಗುತ್ತಿದೆ' ಎಂದು ವಿವರಿಸುತ್ತಾರೆ ಅವರು.

ಮಳಿಗೆಯ ಸಿಬ್ಬಂದಿ ಇಮ್ರಾನ್‌ ಅವರ ಪ್ರಕಾರ, 'ಹಬ್ಬದ ಸೀಸನ್‌ಗಳಲ್ಲಿ ಸಾಂಪ್ರದಾಯಿಕ ಉಡುಪುಗಳ ಜತೆಗೆ ಜೀನ್ಸ್‌ ಪ್ಯಾಂಟ್‌, ಟಿಶರ್ಟ್‌ ಮತ್ತು ಸಾದಾ ಶರ್ಟುಗಳ ಖರೀದಿಯೂ ಜೋರಾಗಿರುತ್ತದೆ. ಈ ಬಾರಿ ಮಕ್ಕಳ ವಿಭಾಗದಲ್ಲಿ ಹಿಂದೆಂದಿಗಿಂತಲೂ ವಿಭಿನ್ನ ಬಗೆಯ ಆಯ್ಕೆಗಳು ಲಭ್ಯ'.

ಸಾಂಪ್ರದಾಯಿಕ ಉಡುಪುಗಳನ್ನು ಬ್ರಾಂಡೆಡ್ ಮಳಿಗೆಗಳಲ್ಲಿ ಖರೀದಿಸಲು ಬಯಸುವವರಿಗೆ ‘ಮಾನ್ಯಾವರ್‌’ನಲ್ಲಿ ಉತ್ತಮ ಆಯ್ಕೆಗಳಿವೆ. ಮೂರರಿಂದ 13 ವರ್ಷದವರೆಗಿನ ಹುಡುಗರಿಗೆ ಮೇಲೆ ಹೇಳಿದ ಸಾಂಪ್ರದಾಯಿಕ ಉಡುಗೆ ತೊಡುಗೆಗಳು ಲಭ್ಯ. ಬೆಲೆ ₹1,500ರಿಂದ ₹4,500ರವರೆಗೂ ಇದೆ. ಚಿಕನ್‌ ವರ್ಕ್‌ ಮತ್ತು ಸಾದಾ ಕಸೂತಿಯುಳ್ಳ ಶುದ್ಧ ಹತ್ತಿಯ ಕುರ್ತಾಗಳೂ ಇಲ್ಲಿ ಸಿಗುತ್ತವೆ.

‘ಮಗಳು ಪ್ರಣೀತಾಳಿಗೆ ಪ್ರತಿ ಹಬ್ಬಕ್ಕೂ ಹೊಸ ಬಟ್ಟೆ ಖರೀದಿಸಿದ ಮೇಲೆಯೇ ಮನೆಯಲ್ಲಿ ಹಬ್ಬದ ಮೂಡ್‌ ಬರುವುದು. ಅವಳಿಗಿನ್ನೂ ಏಳು ವರ್ಷ. ಹಾಗಾಗಿ ಆಯ್ಕೆಗಳು ಕಡಿಮೆಯೇ. ಹಬ್ಬವೆಂದರೆ ಲಂಗ ದಾವಣಿ, ಲೆಹೆಂಗಾ, ಹಾಫ್‌ ಸೀರೆಗಳಲ್ಲೇ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ. ಈ ಬಾರಿ ನವರಾತ್ರಿಗೆ ಹಾಫ್‌ ಸೀರೆ ಕೊಡಿಸಿದ್ದೇನೆ’ ಎನ್ನುತ್ತಾರೆ ದೊಡ್ಡಕಲ್ಲಸಂದ್ರದ ಹೇಮಾ.

ಬೇಗೂರು ರಸ್ತೆಯ ವಿಶ್ವಪ್ರಿಯ ನಗರದ ನಿವಾಸಿ ಶಿಲ್ಪಾ ಶ್ರೀಧರ್‌ ತಮ್ಮ ಮಗ ಕೆ.ಎಸ್.ಆರುಷ್‌ಗೆ ಈ ಬಾರಿ ‘ಮೋದಿ ಕುರ್ತಾ– ವೇಸ್‌ಕೋಟ್‌’ ಕೊಡಿಸುತ್ತಾರಂತೆ. ‘ಸಾಮಾನ್ಯವಾಗಿ ವಿಜಯದಶಮಿಯಂದು ಅವನಿಗೆ ಹೊಸ ಬಟ್ಟೆ ಹಾಕುತ್ತೇನೆ. ನಾನು ಸಣ್ಣವಳಿದ್ದಾಗಿನಿಂದಲೂ ಗಾಂಧಿ ಬಜಾರ್‌ನಲ್ಲೇ ಶಾಪಿಂಗ್‌ ಮಾಡುತ್ತಿದ್ದೆವು. ಈಗಲೂ ಅಲ್ಲಿಯೇ ನಮ್ಮ ಖರೀದಿ’ ಎಂದು ಶಿಲ್ಪಾ ಹೇಳುತ್ತಾರೆ.

ದುಬಾರಿ ಉಡುಪುಗಳನ್ನು ಖರೀದಿಸುವುದು ಎಲ್ಲರಿಗೂ ಸಾಧ್ಯವಿಲ್ಲದ ಮಾತು. ಹಾಗಾಗಿ ಅಗ್ಗದ ದರದ ಉಡುಪುಗಳನ್ನು ಖರೀದಿಸಲು ಕೆ.ಆರ್.ಮಾರುಕಟ್ಟೆ, ಅವೆನ್ಯೂ ರಸ್ತೆ ಮತ್ತು ಕಮರ್ಷಿಯಲ್‌ ಸ್ಟ್ರೀಟ್‌ನ ಬೀದಿಗಳು ಸೂಕ್ತ. ಮಲ್ಲೇಶ್ವರ ಎಂಟನೇ ಅಡ್ಡರಸ್ತೆ, ಗಾಂಧಿ ಬಜಾರ್‌ನ ಅಡ್ಡರಸ್ತೆಗಳಲ್ಲಿಯೂ ಎಂದಿನಂತೆ ಕಡಿಮೆ ದರದ ಬಟ್ಟೆಗಳು ಹುಡುಗರಿಗೂ, ಹುಡುಗಿಯರಿಗೂ ಸಿಗುತ್ತವೆ. ₹150ರಿಂದ ₹500ರೊಳಗಿನ ಉಡುಪುಗಳು ಇಲ್ಲಿ ಲಭ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.