ADVERTISEMENT

ಮತ್ತೆ ಬಂದಿದೆ ‘ಬನಾರಸ್‌’ ಸೀರೆ

ರೋಹಿಣಿ ಮುಂಡಾಜೆ
Published 19 ಸೆಪ್ಟೆಂಬರ್ 2017, 19:30 IST
Last Updated 19 ಸೆಪ್ಟೆಂಬರ್ 2017, 19:30 IST
ಮತ್ತೆ ಬಂದಿದೆ ‘ಬನಾರಸ್‌’ ಸೀರೆ
ಮತ್ತೆ ಬಂದಿದೆ ‘ಬನಾರಸ್‌’ ಸೀರೆ   

ಕಾಂಜೀವರಂ ಸೀರೆಗಳ ಅಬ್ಬರಕ್ಕೆ ನಲುಗಿಹೋಗಿದ್ದ ಬನಾರಸಿ ಸೀರೆಗಳು ಮತ್ತೆ ಟ್ರೆಂಡಿ ಮಹಿಳೆಯರ ವಾರ್ಡ್‌ರೋಬ್‌ಗಳಲ್ಲಿ ಜಾಗ ಪಡೆದುಕೊಳ್ಳುತ್ತಿವೆ. ಎರಡು ವರ್ಷಗಳಿಂದ ಆನ್‌ಲೈನ್‌ ಪೋರ್ಟಲ್‌ಗಳಲ್ಲಿ ಬನಾರಸ್‌ ಶಾಲು ಮತ್ತು ದುಪಟ್ಟಾಗಳಿಗೆ ಬೇಡಿಕೆ ಕುದುರಿತ್ತು. ಆದರೆ ಈಗ ಈ ಸೀರೆಗಳು ಮಾರುಕಟ್ಟೆಗೆ ಮತ್ತೆ ಲಗ್ಗೆಯಿಡುತ್ತಿವೆ. ಕೆಲವು ವಸ್ತ್ರ ವಿನ್ಯಾಸಕರಂತೂ ಬನಾರಸ್‌ನ ನೇಕಾರರ ಬಳಿ ತಮ್ಮ ಕನಸಿನ ನೇಯ್ಗೆಗಳನ್ನು ಸೀರೆಗಳಲ್ಲಿ ಪಡಿಮೂಡಿಸಿ ಗ್ರಾಹಕರ ಮೆಚ್ಚುಗೆ ಗಳಿಸುತ್ತಿದ್ದಾರೆ.

ಹಿಂದೆ ಮದುವೆ ಮನೆಗಳಲ್ಲಿ ಸರಬರ ಸದ್ದು ಮಾಡುತ್ತಿದ್ದರೂ, ಬನಾರಸಿ ಸೀರೆಗಳು ಭಾರವಿದ್ದ ಕಾರಣ ಯುವತಿಯರಿಗೆ ಮತ್ತು ಹೊಸದಾಗಿ ಸೀರೆ ಉಡುವವರಿಗೆ ಇಷ್ಟವಾಗಿರಲಿಲ್ಲ. ಕಾಂಜೀವರಂ ಸೀರೆಗಳು ಕಡಿಮೆ ತೂಕ ಮತ್ತು ವಿಭಿನ್ನ ಆಯ್ಕೆಯ ಅವಕಾಶದಿಂದಾಗಿ ಬಹಳ ಬೇಗನೆ ಮನೆಮಾತಾಗಿಬಿಟ್ಟವು.

ಈ ಅಭಿಪ್ರಾಯವನ್ನು ಕಮರ್ಷಿಯಲ್‌ ಸ್ಟ್ರೀಟ್‌ನ ಸಫೀನಾ ಪ್ಲಾಜಾದಲ್ಲಿರುವ ‘ಭಾನವಿ ಕಲೆಕ್ಷನ್‌’ನ ಕೆ.ಎನ್‌.ಶ್ರೀಚಂದ್ರ ಅವರು ಒಪ್ಪುತ್ತಾರೆ. ‘ಹಿಂದೆ ಬರುತ್ತಿದ್ದ ಬನಾರಸಿ ಸೀರೆಗಳಲ್ಲಿ ಬಣ್ಣ ಮತ್ತು ಜರಿಯ ವಿನ್ಯಾಸದಲ್ಲಿ ವೈವಿಧ್ಯತೆ ಇದ್ದರೂ ಫ್ಯಾಬ್ರಿಕ್‌ನಲ್ಲಿ ಜಾರ್ಜೆಟ್‌ ಒಂದೇ ಬಳಕೆಯಾಗುತ್ತಿತ್ತು. ಅಂತಹುದೇ ಆಯ್ಕೆ ಅವಕಾಶಗಳು ಬನಾರಸಿ ಸೀರೆಗಳಲ್ಲಿ ಸಿಗಬೇಕು ಎಂಬ ಆಶಯದೊಂದಿಗೆ ನಾವು ಈ ಬಾರಿ ಬನಾರಸ್‌ನ ಸಾಂಪ್ರದಾಯಿಕ ಮಗ್ಗಗಳಲ್ಲೇ ಬಗೆ ಬಗೆಯ ಫ್ಯಾಬ್ರಿಕ್‌ನಲ್ಲಿ ಬನಾರಸಿ ವಿನ್ಯಾಸಗಳನ್ನು ನೇಯ್ಗೆ ಮಾಡಿಸಿದ್ದೇವೆ. ಬನಾರಸಿ ಸೀರೆಗಳಲ್ಲಿ ಇಷ್ಟೊಂದು ವೈವಿಧ್ಯತೆ ಸಾಧ್ಯವೇ ಎಂದು ಅಚ್ಚರಿಗೊಳ್ಳುವಷ್ಟು ವೈವಿಧ್ಯಮಯ ಸಂಗ್ರಹ ನಮ್ಮಲ್ಲಿದೆ’ ಎಂದು ಅವರು ಹೇಳುತ್ತಾರೆ.

ADVERTISEMENT

ವಸ್ತ್ರ ವಿನ್ಯಾಸಕಿ, ಇಂದಿರಾ ನಗರದ ಭಾನು ಅವರು ಉದ್ಯಮದ ಇನ್ನೊಂದು ಮುಖವನ್ನು ತೆರೆದಿಡುತ್ತಾರೆ. ‘ಬನಾರಸಿ ಸೀರೆಗಳ ಸಾಂಪ್ರದಾಯಿಕ ವಿನ್ಯಾಸಗಳ ನೇಯ್ಗೆಗೆ ಮೀಸಲಾದ ಮಗ್ಗಗಳು ಬನಾರಸ್‌ನಲ್ಲಿ ಈಗಲೂ ಕಡಿಮೆಯೇ. ಆದರೆ ಕಂಚಿಯಲ್ಲಿ ಕಾಂಜೀವರಂ ಸೀರೆಗಳಿಗೆ ಕೈಮಗ್ಗ ಮತ್ತು ವಿದ್ಯುತ್‌ ಮಗ್ಗಗಳಲ್ಲಿ ನೇಕಾರರು ಸಾಕಷ್ಟು ಪ್ರಮಾಣದಲ್ಲಿದ್ದಾರೆ. ಬನಾರಸ್‌ನಲ್ಲಿ ಬನಾರಸಿ ಸೀರೆಗಳ ಉದ್ಯಮ ಈಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಹಾಗಾಗಿ ಅಲ್ಲಿಗೆ ಹೋಗಿ ಬನಾರಸಿ ಸೀರೆಗಳನ್ನು ವಿನ್ಯಾಸ ಮಾಡಿಸುವ ಮೂಲಕ ‘ಕಸ್ಟಮೈಸ್ಡ್‌ ಡಿಸೈನ್’ಗಳನ್ನು ನಗರದ ಗ್ರಾಹಕರಿಗೆ ಪರಿಚಯಿಸಲಾಗುತ್ತಿದೆ’ ಎಂದು ಅವರು ಹೇಳುತ್ತಾರೆ.

ಭಾನು ಅವರು ವಿನ್ಯಾಸ ಮಾಡಿಸಿರುವ ‘ಕಸ್ಟಮೈಸ್ಡ್‌’ ಸೀರೆಗಳ ಸಂಗ್ರಹ ಬನಾರಸ್‌ ಸೀರೆಗಳ ವೈವಿಧ್ಯತೆ ಮತ್ತು ಸಾಧ್ಯತೆಗೆ ಸಾಕ್ಷಿಯಂತಿದೆ. ಟಸ್ಸಾರ್‌, ಲಿನನ್‌, ಟಿಶ್ಯೂ ಲಿನನ್, ಖಾದಿ, ಕ್ರೇಪ್‌, ಮಟ್ಕಾ ಮತ್ತು ಪಠಾಣ್‌ ಸೀರೆಗಳಿವೆ. ಖಾದಿ ಬನಾರಸಿ ಸೀರೆಗಳು ಟಸ್ಸಾರ್‌ ಮತ್ತು ರೇಷ್ಮೆಯ ಕಸೂತಿಯೊಂದಿಗೆ ವಿಶಿಷ್ಟವಾಗಿ ಮೂಡಿಬಂದಿವೆ.

‘ರೇಖಾ ಸೀರೆ’ ಎಂದೇ ಗುರುತಿಸಿಕೊಳ್ಳುವ ಬಂಗಾರದ ಬಣ್ಣದ ಮತ್ತು ಕೆನೆ ಬಣ್ಣದ ಸೀರೆಗಳನ್ನು ವಿಭಿನ್ನವಾಗಿ ವಿನ್ಯಾಸ ಮಾಡಿಸಿರುವುದು ವಿಶೇಷ. ಸೀರೆಯದೇ ಬಣ್ಣದ ಸೆಲ್ಫ್‌ ಕಸೂತಿ ಮತ್ತು ಟಸ್ಸಾರ್‌ ನೂಲಿನ ಕಸೂತಿಯುಳ್ಳ ‘ರೇಖಾ ಸೀರೆ’, ಅಂತಹುದೇ ಕಸೂತಿಯ ಮಧ್ಯೆ ಕಡುಗುಲಾಬಿ ಮತ್ತು ತಿಳಿನೀಲಿ ಕಸೂತಿಯುಳ್ಳದ್ದು ಗಮನ ಸೆಳೆಯುತ್ತವೆ. ಹಳೆಯ ಶೈಲಿಯ ಜಾರ್ಜೆಟ್‌ ಬನಾರಸ್‌ ಸೀರೆಗಳ ಆರಂಭಿಕ ಬೆಲೆ ₹7,500 ಇದೆ. ಪ್ಯೂರ್‌ ಸಿಲ್ಕ್‌ ಬನಾರಸ್‌ ಸೀರೆಗಳು ‘ಏಕ್‌ ಖಡಿಕಾ ವೀವ್‌’ನಲ್ಲಿ ಸಿಗುತ್ತವೆ. ಒಂದೇ ದಾರದಲ್ಲಿ ಇಡೀ ಸೀರೆಗೆ ಕೈಯಲ್ಲಿ ಕಸೂತಿ ಮಾಡಿ ಕೊನೆಗೆ ಕತ್ತರಿಯಲ್ಲಿ ಕತ್ತರಿಸುವ ಕಾರಣ ಸೀರೆಯ ಒಳಭಾಗದಲ್ಲಿ ಕಸೂತಿಯ ಸ್ಪಷ್ಟ ಅಚ್ಚು ಕಾಣುತ್ತದೆ.

ಕ್ರೇಪ್‌ ಫ್ಯಾಬ್ರಿಕ್‌ನಲ್ಲಿ ಅಂಚು ಮತ್ತು ಸೆರಗಿಗೆ ಬನಾರಸಿ ಕಸೂತಿ ಮಾಡಿರುವ ಕ್ರೇಪ್‌ ಬನಾರಸ್‌ ಸೀರೆಗಳು ಹಳೆಯ ಶೈಲಿಯ ಸೀರೆಗಳ ಪಡಿಯಚ್ಚಿನಂತಿವೆ. ಕಾಟನ್‌ ಲಿನನ್‌ ಸೀರೆಗಳೂ ಈ ಸಂಗ್ರಹದಲ್ಲಿವೆ. ‘ಮೂಂಗಾ ಬನಾರಸ್‌’ ಎಂಬ ವಿನೂತನ ಶೈಲಿಯ ಸೀರೆ ಸ್ವಲ್ಪ ದುಬಾರಿಯೆನಿಸಿದರೂ ಅತ್ಯಾಕರ್ಷಕವಾಗಿದೆ. ಈ ಸೀರೆಯ ವಿಶೇಷವೇನೆಂದರೆ, ಇವುಗಳಿಗೆ ಡೈ ಮತ್ತು ಪೇಂಟಿಂಗ್‌ ಮಾಡಬಹುದು. ರವಿಕೆ ಕಣಕ್ಕೆ ಮಾತ್ರ ಡೈ ಮತ್ತು ಪೇಂಟಿಂಗ್‌ ಮಾಡಿಸಿಕೊಂಡರೂ ಚೆನ್ನಾಗಿರುತ್ತದೆ.

ಒಟ್ಟಿನಲ್ಲಿ, ದಸರಾ ಮತ್ತು ದೀಪಾವಳಿ ಹಬ್ಬಗಳ ನೆಪದಲ್ಲಿ ವಿಭಿನ್ನವಾದ ದುಬಾರಿ ಸೀರೆಗಳನ್ನು ಖರೀದಿಸಲು ಬನಾರಸ್‌ ಅತ್ಯುತ್ತಮ ಆಯ್ಕೆಯಾಗಬಲ್ಲದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.