ADVERTISEMENT

ಮಹಿಳೆಯರ ಸುರಕ್ಷೆಗೆ ‘ಶೀ ಕ್ಯಾಬ್’

ರೇಖಾ ಚವ್ಹಾಣ್‌ ಆರ್.ಇ.
Published 25 ಜುಲೈ 2016, 19:30 IST
Last Updated 25 ಜುಲೈ 2016, 19:30 IST
ಮಹಿಳೆಯರ ಸುರಕ್ಷೆಗೆ ‘ಶೀ ಕ್ಯಾಬ್’
ಮಹಿಳೆಯರ ಸುರಕ್ಷೆಗೆ ‘ಶೀ ಕ್ಯಾಬ್’   

ಇದೀಗ ಬೆಂಗಳೂರು ನಗರದಲ್ಲಿ ರಾತ್ರಿ ಪಾಳಿ ಕೆಲಸ ಮಾಡುವ ಮಹಿಳೆಯರು ಹೆದರುವ ಅಗತ್ಯವಿಲ್ಲ. ತಡರಾತ್ರಿ ಮನೆ ಸೇರುವ ದುಡಿಯುವ ಮಹಿಳೆಯರಿಗೆಂದೇ ಇನ್ನು ಮುಂದೆ ‘ಶೀ ಕ್ಯಾಬ್‌’ಗಳು (ಸ್ತ್ರೀ ಕ್ಯಾಬ್‌) ಕಾರ್ಯ ನಿರ್ವಹಿಸಲಿವೆ.

ಮಹಿಳೆಯರ ಸುರಕ್ಷತೆ ದೃಷ್ಟಿಯಿಂದ ನಗರದ ಲಯನ್ಸ್‌ ಕ್ಲಬ್ ಬ್ರೈಟ್– 317 ಎ ತನ್ನ ನೂರನೇ ವರ್ಷದ ಮುನ್ನೋಟ ಸಿದ್ಧಪಡಿಸಿದೆ. ಆರ್ಥಿಕವಾಗಿ ಹಿಂದುಳಿದ ವಿದ್ಯಾವಂತ ಯುವತಿಯರು, ಅಬಲೆಯರು, ವಿಧವೆಯರು ಈ ಯೋಜನೆಯಲ್ಲಿ ಒಳಪಡಲಿದ್ದಾರೆ. 101 ಶೀ ಕ್ಯಾಬ್‌ಗಳು 2017ರ ಜನವರಿಯಿಂದ ಕಾರ್ಯ ನಿರ್ವಹಿಸಲಿವೆ.

ಪ್ರಾಯೋಗಿಕವಾಗಿ ಜುಲೈ 23ರಂದು ನಾಲ್ಕು ಕ್ಯಾಬ್‌ಗಳಿಗೆ ಚಾಲನೆ ನೀಡಲಾಗುವುದು. ನಂತರ ಹಂತಹಂತವಾಗಿ ಎಲ್ಲ ಕ್ಯಾಬ್‌ಗಳು ಕೆಲಸ ಆರಂಭಿಸಲಿವೆ. ‘ನಗರದಲ್ಲಿ ದಿನೆದಿನೆ ಅಪಹರಣ ಪ್ರಕರಣ ಹೆಚ್ಚುತ್ತಿವೆ. ಹಾಗಾಗಿ, ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಉದ್ದೇಶದಿಂದ ಈ ನಿರ್ಧಾರಕ್ಕೆ ಬಂದಿದ್ದೇವೆ. ಇದರಿಂದ ವಿದ್ಯಾವಂತ ನಿರುದ್ಯೋಗಿ ಮಹಿಳೆಯರಿಗೆ ಆರ್ಥಿಕ ಸ್ವಾವಲಂಬನೆ ಹೊಂದಲು ಅನುಕೂಲವಾಗುತ್ತದೆ. ಅಷ್ಟೇ ಅಲ್ಲ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳಿಗೆ ಭದ್ರತೆ ಕಲ್ಪಿಸಿದಂತಾಗುತ್ತದೆ’ ಎನ್ನುತ್ತಾರೆ ಕ್ಲಬ್‌ನ ನೂತನ ರಾಜ್ಯಪಾಲ ಲಯನ್ಸ್‌ ಎಂ. ಅನಿಲ್‌ಕುಮಾರ್.

ಈಗಾಗಲೇ ಬೇರೆ ರಾಜ್ಯಗಳಲ್ಲಿನ ‘ಶೀ ಕ್ಯಾಬ್‌’ಗಳು ಕಾರ್ಯನಿರ್ವಹಿಸುತ್ತಿವೆ. ನಮ್ಮ ರಾಜ್ಯದಲ್ಲಿ ಇದೇ ಮೊದಲ ಬಾರಿ  ‘ಶೀ ಕ್ಯಾಬ್‌’ಗಳನ್ನು ಪರಿಚಯಿಸಲಾಗುತ್ತಿದೆ.
ವಿಜಯನಗರದ ಬಾಲಾಜಿ ಡ್ರೈವಿಂಗ್ ಸ್ಕೂಲ್‌ನ ಶ್ರೀನಿವಾಸ್‌ ಹಾಗೂ ರಾಯಲ್ ಟ್ರಾನ್ಸ್‌ಪೋರ್ಟ್ಸ್‌ನ ಮಾಲೀಕ ನಾಗರಾಜ್‌ ಅವರು ತಲಾ 50 ಮಂದಿಗೆ ಉಚಿತವಾಗಿ ಚಾಲನಾ ತರಬೇತಿ ನೀಡಿ ಪರವಾನಗಿ ಪಡೆಯಲು ನೆರವಾಗಲಿದ್ದಾರೆ.

‘ಶೀ ಕ್ಯಾಬ್‌’ಗಾಗಿ ಕಾರ್‌ ಮೊತ್ತದ ಶೇ 80ರಷ್ಟು ಹಣವನ್ನು ರಾಷ್ಟ್ರೀಕೃತ ಬ್ಯಾಂಕ್‌ಗಳು ಸಾಲದ ರೂಪದಲ್ಲಿ ಒದಗಿಸುತ್ತಿವೆ. ಉಳಿದ ಶೇ 20ರಷ್ಟು ಹಣದಲ್ಲಿ ಮುಂಗಡ ಠೇವಣಿಯಾಗಿ ಕ್ಲಬ್‌ನ ವತಿಯಿಂದ ಶೇ 10ರಷ್ಟು ಮೌಲ್ಯವನ್ನು ನೀಡಲಾಗುತ್ತದೆ. ಚಾಲಕಿಯಾಗಿ ಕಾರ್ಯ ನಿರ್ವಹಿಸುವ ಮಹಿಳೆ ಶೇ 10ರಷ್ಟು ಮೊತ್ತವನ್ನು ಭರಿಸಬೇಕಾಗುತ್ತದೆ.

ಚಾಲಕಿಯರ ಪಾಲುದಾರಿಕೆ ಇದ್ದರೆ ಮಾತ್ರ ಯೋಜನೆ ಯಶಸ್ವಿಯಾಗುತ್ತದೆ. ಸಂಪೂರ್ಣ ಉಚಿತವಾಗಿ ಕ್ಯಾಬ್‌ಗಳನ್ನು ನೀಡಿದರೆ ದುರುಪಯೋಗ ಆಗಬಹುದು. ಬ್ಯಾಂಕ್ ಸಾಲ ಪೂರ್ಣ ಪ್ರಮಾಣದಲ್ಲಿ ಮರುಪಾವತಿಯಾಗುವವರೆಗೆ ಅಗತ್ಯ ಇರುವ ಕಂಪೆನಿಗಳಿಗೆ ಕ್ಯಾಬ್‌ಗಳನ್ನು ಜೋಡಣೆ ಮಾಡಲಾಗುವುದು. ಆದಾಯದ ಖಾತ್ರಿ ಇರುವುದರಿಂದ ಸಾಲ ಮರುಪಾವತಿ ಸುಲಭವಾಗುತ್ತದೆ ಎಂದು ಅವರು ವಿವರಿಸುತ್ತಾರೆ.

‘ಈ ವರ್ಷ ನಮ್ಮ ಕ್ಲಬ್‌ಗೆ 99ನೇ ಸಂಭ್ರಮ. ಮುಂದಿನ ವರ್ಷ ಶತಮಾನೋತ್ಸವದ ಸಂಭ್ರಮಾಚರಣೆ. ಈ ಹಿನ್ನೆಲೆಯಲ್ಲಿ ಹಲವು ಯೋಜನೆಗಳನ್ನು ರೂಪಿಸಲಾಗಿದೆ.ಯುರೇಕಾ ಪೋರ್ಬ್ಸ್‌ ಸಹಯೋಗದೊಂದಿಗೆ ಶಾಲೆಗಳಿಗೆ ಜಲ ಶುದ್ಧೀಕರಣ ಯಂತ್ರಗಳನ್ನು ಅಳವಡಿಸುವುದು, ಇಸ್ಕಾನ್‌ ಸಹಯೋಗದೊಂದಿಗೆ ಅಕ್ಷಯ ಪಾತ್ರೆಗೆ ಮಧ್ಯಾಹ್ನದ ಊಟಕ್ಕೆ ಒಂದು ಮಗುವಿಗೆ ₹ 750ರಂತೆ ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಊಟಕ್ಕೆ ನೆರವು ನೀಡಲಾಗುವುದು’ ಎಂದು ಪ್ರತಿಕ್ರಿಯಿಸಿದರು. ಮೊಬೈಲ್‌ 9742201122ಗೆ ಸಂಪರ್ಕಿಸಬಹುದು.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.