ADVERTISEMENT

ಮಾಡೆಲಿಂಗ್‌ ರೀತಿ, ಸಿನಿಮಾ ಪ್ರೀತಿ

ರಮೇಶ ಕೆ
Published 5 ಮೇ 2016, 19:30 IST
Last Updated 5 ಮೇ 2016, 19:30 IST
ವಿದ್ಯಾಶ್ರೀ
ವಿದ್ಯಾಶ್ರೀ   

ಕಳೆದ ವಾರ ನಗರದಲ್ಲಿ ನಡೆದ ಮಿಸ್ಟರ್ ಅಂಡ್‌ ಮಿಸಸ್‌ ಕರ್ನಾಟಕ ಫ್ಯಾಷನ್‌ ಷೋನಲ್ಲಿ ಮೊದಲ ರನ್ನರ್‌ಅಪ್‌ ಸ್ಥಾನ ಪಡೆದವರು ರೂಪದರ್ಶಿ ವಿದ್ಯಾಶ್ರೀ. ದಾವಣಗೆರೆ ಮೂಲದ ಇವರು ವೃತ್ತಿಯಲ್ಲಿ ಟೈಲರ್‌ ಆಗಿದ್ದವರು. ಉಡುಪುಗಳ ವಿನ್ಯಾಸ ಮಾಡುವತ್ತ ಇವರು ಗಮನ ನೀಡುತ್ತಾರೆ.

ಕಳೆದ ವರ್ಷದಿಂದಷ್ಟೇ ಮಾಡೆಲಿಂಗ್‌ ಮಾಡುತ್ತಿದ್ದು, ಕೆಲವು ಮುದ್ರಣ ಜಾಹೀರಾತುಗಳಿಗೂ ರೂಪದರ್ಶಿಯಾಗಿದ್ದಾರೆ. ಮಿಸ್‌ ಸೌತ್‌ ಇಂಡಿಯಾ ಸ್ಪರ್ಧೆಯಲ್ಲಿ ‘ಬೆಸ್ಟ್‌ ಸ್ಮೈಲ್‌’ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದರು. ಇದೀಗ ಮತ್ತೊಂದು ಪ್ರಶಸ್ತಿಯ ಪುಳಕದಲ್ಲಿದ್ದಾರೆ. ಮಾಡೆಲಿಂಗ್‌ ಕ್ಷೇತ್ರವನ್ನು ಪ್ರೀತಿಸುವ, ಸಿನಿಮಾದಲ್ಲಿ ಹೆಸರು ಮಾಡಬೇಕೆಂಬ ಗುರಿ ಹೊಂದಿರುವ ವಿದ್ಯಾಶ್ರೀ ತಮ್ಮ ಮಾಡೆಲಿಂಗ್‌ ಪ್ರೀತಿಯನ್ನು ‘ಮೆಟ್ರೊ’ದೊಂದಿಗೆ ಹಂಚಿಕೊಂಡಿದ್ದಾರೆ.

* ಮಿಸ್ಟರ್ ಅಂಡ್‌ ಮಿಸಸ್‌ ಕರ್ನಾಟಕ ಫ್ಯಾಷನ್‌ ಷೋ ಬಗ್ಗೆ ಹೇಳಿ?
ಇನ್‌ಫ್ಯಾಂಟ್‌ ಫ್ಯಾಷನ್‌ ಸ್ಕೂಲ್‌ ಈ ಷೋ ಆಯೋಜಿಸಿತ್ತು. ಡಾ.ವಿಲಿಯಮ್ಸ್‌ ಅವರು ನಿರ್ದೇಶನ ಮಾಡಿದ್ದರು. ನಕ್ಷತ್ರಾ, ನಾನು ಮತ್ತು ವಂದನಾ ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದೆವು.

ಒಟ್ಟು 20 ಯುವಕರು, 25 ಯುವತಿಯರು ಭಾಗವಹಿಸಿದ್ದರು. ಮಿಸ್ಟರ್‌ ಕರ್ನಾಟಕ ಕಿರೀಟ ಎಸ್.ರೋಷನ್‌ ಅವರ ಮುಡಿಗೇರಿತು. ಮಕ್ಕಳ ಫ್ಯಾಷನ್‌ ಷೋ ಸಹ ನಡೆಯಿತು.
ಸ್ಪರ್ಧೆಗಳಲ್ಲಿ ವಿಜೇತರಾದವರೆಲ್ಲರೂ ಕನ್ನಡಿಗರು ಎನ್ನುವುದು ಮತ್ತೊಂದು ವಿಶೇಷ.

* ಫ್ಯಾಷನ್‌ ಷೋಗೆ ತಯಾರಿ ಹೇಗಿತ್ತು?
ಈ ಸ್ಪರ್ಧೆಗಾಗಿಯೇ ಡಯೆಟ್‌ ಮಾಡಿದೆ. ಸೌತೆಕಾಯಿ ಫೇಸ್‌ಪ್ಯಾಕ್‌ ಮಾಡಿಕೊಂಡೆ. ಜಂಕ್‌ಫುಡ್‌, ಅತಿಯಾದ ಎಣ್ಣೆ ಆಹಾರ ನಿಯಂತ್ರಿಸಿದೆ. ಹೆಚ್ಚು ಎಳನೀರು ಕುಡಿಯುತ್ತಿದ್ದೆ. ಬೆಳಿಗ್ಗೆ 10ರಿಂದ ಸಂಜೆ 5ರ ನಡುವೆ ಬಿಸಿಲಿಗೆ ಹೋಗುತ್ತಿರಲಿಲ್ಲ.

ಎರಡು ತಿಂಗಳು ಗ್ರೂಮಿಂಗ್‌ ತರಬೇತಿ ಪಡೆದೆ. ಫಾರ್ಮಲ್‌, ಕ್ಯಾಷ್ಯುವಲ್‌ ಹಾಗೂ ಎಥ್ನಿಕ್‌ ಉಡುಪುಗಳನ್ನು ಧರಿಸಿ ತಾಲೀಮು ಮಾಡಿದೆವು. ನಡೆಯುವ ಶೈಲಿ, ಕ್ಯಾಮೆರಾ ಎದುರಿಸುವ ಬಗೆ... ಹೀಗೆ ಅನೇಕ ವಿಷಯಗಳಿಗೆ ಪೂರ್ವ ತಯಾರಿ ಮಾಡಿಕೊಂಡೆ.

* ಈ ಮುಂಚೆ ಯಾವ್ಯಾವ ಷೋಗಳಲ್ಲಿ ಪಾಲ್ಗೊಂಡಿದ್ದಿರಿ?
ಮಿಸ್ಟರ್‌ ಅಂಡ್‌ ಮಿಸಸ್‌ ಸೌತ್‌ ಇಂಡಿಯಾ, ಮೈ ಮೀಡಿಯಾಸ್‌ ಷೋಗಳಲ್ಲಿ ರ್‌್ಯಾಂಪ್‌ ವಾಕ್‌ ಮಾಡಿದ್ದೇನೆ.

* ದಂಡುಪಾಳ್ಯ ಭಾಗ 2ರಲ್ಲಿ ನಿಮ್ಮ ಪಾತ್ರ?
ಪೂಜಾಗಾಂಧಿ ಅವರನ್ನು ಜೈಲಿಗೆ ಹಾಕಿದಾಗ ಅವರೊಂದಿಗೆ ಸಹಕೈದಿಯಾಗಿರುತ್ತೇನೆ. ಸದ್ಯ ಒಂದು ದಿನದ ಚಿತ್ರೀಕರಣ ಮುಗಿದಿದೆ. ಈ ಮುಂಚೆ ‘ತಿಪ್ಪಜ್ಜಿ ಸರ್ಕಲ್‌’ ಸಿನಿಮಾದಲ್ಲೂ ಸಣ್ಣ ಪಾತ್ರ ಮಾಡಿದ್ದೆ.

* ಮಾಡೆಲಿಂಗ್‌ ಅನುಭವ ಅಭಿನಯಕ್ಕೆ ಹೇಗೆ ಸಹಕಾರಿ ಆಯಿತು?
ಫ್ಯಾಷನ್‌ ಷೋ ನಟನೆಗೆ ತಳಪಾಯ ಇದ್ದಂತೆ. ಡ್ರೆಸ್‌ ಸೆನ್ಸ್‌, ಸ್ಟೇಜ್‌ ಫಿಯರ್‌, ಕ್ಯಾಮೆರಾ ಎದುರಿಸುವ ಬಗೆ, ಆಡಿಷನ್‌ನಲ್ಲಿ ಪಾಲ್ಗೊಳ್ಳುವ ರೀತಿ... ಹೀಗೆ ಅನೇಕ ಸಂಗತಿಗಳನ್ನು ಸುಲಭವಾಗಿ ಎದುರಿಸಲು ಸಹಕಾರಿ ಆಗುತ್ತದೆ.

* ಸಿನಿಮಾದಲ್ಲಿ ನಿಮಗೆ ಕಷ್ಟ ಅನ್ನಿಸಿದ್ದು?
ಅಳುವ ದೃಶ್ಯಗಳಲ್ಲಿ ಅಭಿನಯಿಸುವುದು ಕಷ್ಟವಾಗುತ್ತಿತ್ತು. ಇಷ್ಟಪಟ್ಟು ಈ ಕ್ಷೇತ್ರಕ್ಕೆ ಬಂದಿರುವುದರಿಂದ ಎಂಥಾ ಪಾತ್ರವಾದರೂ ಮಾಡಲೇಬೇಕು.

* ಬಿಡುವಿನ ವೇಳೆಯಲ್ಲಿ ಏನು ಮಾಡ್ತೀರಾ?
ಟೈಲರ್‌ ಆಗಿರುವುದರಿಂದ ಬಿಡುವಿನ ವೇಳೆಯಲ್ಲಿ ವಸ್ತ್ರವಿನ್ಯಾಸದತ್ತ ಗಮನಹರಿಸುತ್ತೇನೆ.

* ಮುಂದಿನ ಯೋಜನೆ?
ಸಿನಿಮಾ ಕ್ಷೇತ್ರದಲ್ಲಿ ಒಳ್ಳೇ ಹೆಸರು ಮಾಡಬೇಕು ಅಂದುಕೊಂಡಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.