ADVERTISEMENT

ಮುಂದುವರಿದ ಭಾಗ ಕಾಳು, ಜೊಳ್ಳು!

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2015, 19:30 IST
Last Updated 22 ಏಪ್ರಿಲ್ 2015, 19:30 IST

ತಮಿಳಿನ ಸೂಪರ್‌ ಹಿಟ್‌ ಸಿನಿಮಾ ‘ಸಿಂಗಂ’ ಚಿತ್ರದ ಸೀಕ್ವಲ್‌ ‘ಸಿಂಗಂ 2’ ಮೂಲ ಚಿತ್ರದ ಖದರ್‌ ಅನ್ನೇ ಉಳಿಸಿಕೊಂಡಿತ್ತು. ಪವರ್‌ಫುಲ್‌ ಹೀರೊ ಸೂರ್ಯ ಅವರ ಚಾರ್ಮ್‌, ಮೈ ನವಿರೇಳಿಸುವ ಆ್ಯಕ್ಷನ್‌, ಗಟ್ಟಿಕತೆ ಸೀಕ್ವಲ್‌ ಸಿನಿಮಾದ ಯಶಸ್ಸಿನ ಗ್ರಾಫ್‌ ಅನ್ನು ಹಿಗ್ಗಾಮುಗ್ಗಾ ಏರಿಸಿತ್ತು. ಆದರೆ ಎಲ್ಲ ಸೂಪರ್‌ಹಿಟ್‌ ಸಿನಿಮಾಗಳ ಸೀಕ್ವಲ್‌ಗಳೂ ಈ ಮಟ್ಟದಲ್ಲೇ ಯಶಸ್ಸು ಕಂಡಿವೆ ಎಂಬುದು ಸುಳ್ಳು.

ಸೂಪರ್‌ಹಿಟ್‌ ಸಿನಿಮಾಗಳ ಮುಂದುವರಿದ ಭಾಗವನ್ನು (ಸೀಕ್ವಲ್‌) ತೆರೆಕಾಣಿಸುವ ಟ್ರೆಂಡ್‌ ಪ್ರಪಂಚದ ಎಲ್ಲ ಭಾಷೆಗಳಲ್ಲೂ ನಡೆದುಕೊಂಡು ಬರುತ್ತಿದೆ. ಸ್ಯಾಂಡಲ್‌ವುಡ್‌ನಲ್ಲೂ ಈ ಬಗೆಯ ಉದಾಹರಣೆಗಳು ಸಾಕಷ್ಟು ಸಿಗುತ್ತವೆ. ಕಳೆದ ಕೆಲವು ವರ್ಷಗಳ ಹಿಂದೆ ಸೂಪರ್‌ಹಿಟ್‌ ಆಗಿದ್ದ ಅನೇಕ ಬಾಲಿವುಡ್‌ ಸಿನಿಮಾ ಸೀಕ್ವಲ್‌ಗಳು ಈ ವರ್ಷಾಂತ್ಯದಲ್ಲಿ ತೆರೆಕಾಣಲಿವೆ.

ಇದೇ ವೇಳೆ, ಬಾಕ್ಸ್‌ ಆಫೀಸ್‌ನಲ್ಲಿ ಭರ್ಜರಿ ಹಣ ಗಳಿಸಿದ್ದ ಹಾಗೂ ಪ್ರೇಕ್ಷಕರಿಗೆ ಭರಪೂರ ಮನರಂಜನೆ ನೀಡಿದ್ದ ಸೂಪರ್‌ಹಿಟ್‌ ಚಿತ್ರಗಳ ಮುಂದುವರಿದ ಭಾಗವನ್ನು ಕಣ್ತುಂಬಿಕೊಳ್ಳಲು ಸಿನಿ ರಸಿಕರು ತುದಿಗಾಲಿನಲ್ಲಿ ನಿಂತಿದ್ದಾರೆ. ಬಾಲಿವುಡ್‌ನ ಸೂಪರ್‌ಹಿಟ್‌ ಕಾಮಿಡಿ ಸಿನಿಮಾಗಳಾದ ‘ಹೇರಾ ಪೇರಿ’ ಹಾಗೂ ‘ಹೌಸ್‌ಫುಲ್‌’ ಸಿನಿಮಾಗಳ ಮುಂದುವರಿದ ಭಾಗಗಳು ಸಿನಿಪ್ರಿಯರನ್ನು ರಂಜಿಸಲು ಬರುತ್ತಿವೆ.  ನಟಿ ನರ್ಗೀಸ್‌ ಫಕ್ರಿ  ‘ಹೇರಾ ಪೇರಿ 3’ (ಈ ಚಿತ್ರದ ಚಿತ್ರೀಕರಣ ದುಬೈನಲ್ಲಿ ನಡೆಯುತ್ತಿದೆ) ಮತ್ತು ‘ಹೌಸ್‌ಫುಲ್‌ 3’ ಈ ಎರಡೂ ಚಿತ್ರಗಳಲ್ಲಿ ನಟಿಸುತ್ತಿದ್ದಾರೆ.

ಈ ಚಿತ್ರಗಳನ್ನು ಹೊರತುಪಡಿಸಿದರೆ, ‘ರಾಕ್‌ಆನ್‌ 2’, ‘ವೆಲ್‌ಕಂ ಬ್ಯಾಕ್‌’, ‘ಘಾಯಲ್‌ ಒನ್ಸ್‌ ಎಗೇನ್’ ಮತ್ತು ‘ಕ್ಯಾ ಕೂಲ್‌ ಹೈ ಹಮ್‌ 3’ ಸಿನಿಮಾ ಸೀಕ್ವಲ್‌ಗಳ ಚಿತ್ರೀಕರಣವೂ ಭರದಿಂದ ಸಾಗಿದೆ. ಮೂಲ ಸಿನಿಮಾ ಸೂಪರ್‌ಹಿಟ್‌ ಆಗಿದ್ದರೆ, ಅದರ ಮುಂದುವರಿದ ಭಾಗ ನಿರ್ಮಾಣ ಮಾಡುವುದು ಎಷ್ಟು ಕಷ್ಟ ಎಂಬ ಪ್ರಶ್ನೆಯೂ ಇಲ್ಲಿ ಉದ್ಭವಿಸುತ್ತದೆ. ಕಳೆದ ವರ್ಷಗಳಲ್ಲಿ ತೆರೆಕಂಡ ಸೀಕ್ವಲ್‌ ಸಿನಿಮಾಗಳ ಗಳಿಕೆ ನೋಡಿದರೆ ಮೂಲ ಸಿನಿಮಾಗಳಿಗೆ ಸಿಕ್ಕ ಯಶಸ್ಸು ಮುಂದುವರಿದ ಸಿನಿಮಾಗಳಿಗೆ ದಕ್ಕಿಲ್ಲ ಎನ್ನುವುದೂ ಗೊತ್ತಾಗುತ್ತದೆ.

‘ಸೀಕ್ವಲ್‌ ಸಿನಿಮಾಗಳನ್ನು ನಿರ್ಮಾಣ ಮಾಡುವಾಗ ಚಿತ್ರ ನಿರ್ಮಾಪಕರಿಗೆ ಆಗುವ ಒಂದೇ ಒಂದು ಅನುಕೂಲವೆಂದರೆ, ಅವರ ಕೈಯಲ್ಲಿ ಒಂದು ಪಾಪ್ಯುಲರ್‌ ಬ್ರಾಂಡ್‌ ಇರುವುದು.  ಆದರೆ, ಅದೇ ಸಮಯದಲ್ಲಿ ಮೂಲ ಸಿನಿಮಾದೊಂದಿಗೆ ಮುಂದುವರಿದ ಸಿನಿಮಾವನ್ನು ಹೋಲಿಕೆ ಮಾಡಿ ನೋಡುವ ಅನಿವಾರ್ಯವೂ ಅವರಿಗೆ ಎದುರಾಗುತ್ತದೆ. ಮೊದಲ ಸಿನಿಮಾಕ್ಕಿಂತ ಹೊಸ ಸಿನಿಮಾ ಕತೆ ಒಂಚೂರು ದುರ್ಬಲ ಎನಿಸಿದರೂ ಚಿತ್ರ ಮಕಾಡೆ ಮಲಗಿಕೊಳ್ಳುವುದು ಗ್ಯಾರಂಟಿ’ ಎನ್ನುತ್ತಾರೆ ಚಿತ್ರ ಮಾರುಕಟ್ಟೆ ಪರಿಣತ ಅತುಲ್‌ ಮೋಹನ್‌.

‘ಒಂದು ಸೂಪರ್‌ಹಿಟ್‌ ಸಿನಿಮಾದ ಮುಂದುವರಿದ ಭಾಗವನ್ನು ನಿರ್ಮಾಣ ಮಾಡುವಾಗ ಸಹಜವಾಗಿಯೇ ಆ ಚಿತ್ರದ ಬಗ್ಗೆ ನಿರೀಕ್ಷೆಗಳು ಹೆಚ್ಚುತ್ತದೆ. ಮೂಲ ಚಿತ್ರದಲ್ಲಿದ್ದ ತಾರಾಗಣವೇ ಮುಂದುವರಿದ ಭಾಗದಲ್ಲಿದ್ದರೆ ಆ ಚಿತ್ರ ಜನರಿಗೆ ಬೇಗ ತಲುಪುತ್ತದೆ. ಈ ಅಂಶ ಚಿತ್ರದ ಯಶಸ್ಸಿಗೆ ಶಕ್ತಿವರ್ಧಕವಾಗಿ ಕೆಲಸ ಮಾಡುತ್ತದೆ. ಆದರೆ, ಹೊಸ ತಾರಾಗಣವಾದರೆ ಮೂಲ ಸಿನಿಮಾದಷ್ಟು ಪರಿಣಾಮಕಾರಿಯಾಗಿ ರೂಪಿಸುವುದು ಕಷ್ಟದ ಸಂಗತಿ’ ಎನ್ನುತ್ತಾರೆ ಮತ್ತೊಬ್ಬ ಪರಿಣತ ಅಮೋದ್‌ ಮೆಹ್ರಾ.

ಕಾರಣ–ಪರಿಣಾಮಗಳು ಏನೇ ಇದ್ದರೂ ಸೀಕ್ವಲ್‌ ಸಿನಿಮಾಗಳನ್ನು ನಿರ್ಮಿಸುವ ಟ್ರೆಂಡ್‌ ಮಾತ್ರ ಇದ್ದೇ ಇದೆ. ‘ಎಬಿಸಿಡಿ 2’ ಚಿತ್ರ ಜೂನ್‌ 19ಕ್ಕೆ ತೆರೆಕಾಣಲು ಸಿದ್ಧವಾಗಿದೆ. ‘ತನು ವೆಡ್ಸ್‌ ಮನು ರಿಟರ್ನ್ಸ್‌’ ಚಿತ್ರದ ಟ್ರೈಲರ್‌ ಸಿನಿಪ್ರಿಯರನ್ನು ಈಗಾಗಲೇ ಮೋಡಿ ಮಾಡಿದ್ದು, ಈ ಚಿತ್ರ ಮೇ 22ಕ್ಕೆ ಬಿಡುಗಡೆಯಾಗಲು ಸಜ್ಜಾಗಿದೆ. ಸಾಜಿದ್‌ ನಾಡಿಯಾದ್‌ವಾಲಾ ಅವರು ‘ಕಿಕ್‌’ ಸಿನಿಮಾದ ಮುಂದುವರಿದ ಭಾಗ ಬರಲಿದೆ ಎಂಬಂತಹ ಮಾತುಗಳನ್ನು ಕಳೆದ ವರ್ಷ ಆಡಿದ್ದರು.

ಆದರೆ, ಈ ಚಿತ್ರದ ಮುಂದುವರಿದ ಭಾಗ ಬರಲಿದೆಯೇ ಎಂಬ ಬಗ್ಗೆ ಸದ್ಯಕ್ಕೆ  ಯಾವುದೇ ಮಾಹಿತಿ ಇಲ್ಲ. ಇದೇ ಸಮಯದಲ್ಲಿ ‘ಬಾಜಿಗರ್‌’ (1993), ‘ಗಂಗಾಜಲ್‌’ (2003), ‘ಇಷ್ಕ್‌ ವಿಷ್ಕ್‌’ (2003), ‘ದಿಲ್‌’ (1990), ‘ಜುಡ್ವಾ’ (1997), ‘ಧಡ್‌ಕನ್‌’ (2000) ಚಿತ್ರಗಳ ಸೀಕ್ವಲ್‌ಗಳು ಬರಲಿವೆ ಎಂಬ ಸುದ್ದಿ ಬಾಲಿವುಡ್‌ ಅಂಗಳದಲ್ಲಿ ಜೋರಾಗಿ ಕೇಳಿಸುತ್ತಿದೆ.  

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT