ADVERTISEMENT

ಮೂರು ಮಾಧ್ಯಮಗಳ ಸಮಾಗಮ

ಕಲಾಪ

ಶೋಭಾ ವಿ.
Published 26 ಮಾರ್ಚ್ 2017, 19:30 IST
Last Updated 26 ಮಾರ್ಚ್ 2017, 19:30 IST
ವುಡ್‌ವಿನೀರ್ ಕಲಾಕೃತಿ
ವುಡ್‌ವಿನೀರ್ ಕಲಾಕೃತಿ   

‘ರೇನ್‌ಬೋ ಇನ್ ಫ್ಲೈಟ್’ ಎಂಬ ಶೀರ್ಷಿಕೆಯಡಿ ಕಲಾವಿದ ಜಯಂತ್ ಬಿ. ಹುಬ್ಳಿ ಅವರ  ಏಕವ್ಯಕ್ತಿ ಚಿತ್ರಕಲಾ ಪ್ರದರ್ಶನ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ನೋಡುಗರ ಗಮನ ಸೆಳೆಯುತ್ತಿದೆ.

ಚಾರ್ಕೋಲ್, ಆಕ್ರಿಲಿಕ್ ಮತ್ತು ವುಡ್ ವಿನೀರ್‌ನ ಮೂರು ಮಾಧ್ಯಮ ಮಿಶ್ರಣದ  ಸುಮಾರು 50ಕ್ಕೂ ಹೆಚ್ಚು ಗಮನಾರ್ಹ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಈ ಪ್ರದರ್ಶನದಲ್ಲಿ ಅವಕಾಶ ಸಿಕ್ಕಿದೆ.

ಕಾಲೇಜು ಮಟ್ಟದಿಂದಲೇ ಕಲೆಯನ್ನು ಜೀವಾಳವಾಗಿ ರೂಢಿಸಿಕೊಂಡು ಬಂದಿರುವ ಜಯಂತ್ ಅವರು 20 ವರ್ಷಗಳ ಕಾಲ ತಾವು ಕುಂಚಗಳಿಂದ ಮೂಡಿಸಿರುವ ಚಿತ್ರಗಳನ್ನು ಪ್ರದರ್ಶನದಲ್ಲಿ ಪ್ರಸ್ತುತಪಡಿಸಿದ್ದಾರೆ. 

ಗ್ಯಾಲರಿಗೆ ಕಾಲಿಡುತ್ತಿದ್ದಂತೆಯೇ ಅಲ್ಲಿನ ಕೆಲವು ಕಲಾಕೃತಿಗಳು ಮೊದಲ ನೋಟಕ್ಕೆ ಗೊಂದಲ ಮೂಡಿಸಿದರೂ, ಆಳವಾಗಿ ಅವುಗಳನ್ನು ನೋಡಿದಾಗ ಮಾತ್ರ ಅವುಗಳ ಅರ್ಥ ತಿಳಿಯುತ್ತಾ ಹೋಗುತ್ತದೆ.

ಚಾರ್ಕೋಲ್‌ ಕಲಾ ಕೃತಿಯೊಂದರಲ್ಲಿ  ಹೆಣ್ಣುಮಗಳು  ಧ್ಯಾನ ಮಾಡುವ ಚಿತ್ರ ಶಾಂತತೆಯಿಂದ ಮನಸೆಳೆಯುತ್ತದೆ. ಹಾಗೆ ಮುಂದೆ ಸಾಗುತ್ತಾ ಹೋದಂತೆ  ಪೆನ್ಸಿಲ್ ರೇಖೆಗಳಿಂದ ಗೀಚಿರುವ  ಮನುಷ್ಯನ ರೂಪು ಲಯ ಬದ್ಧವಾಗಿ ತೋರುತ್ತದೆ. ಮನುಷ್ಯನ ಅಂತರಾಳದ  ಕೋಪದ ಮತ್ತೊಂದು ಮುಖವನ್ನು ಈ ಕೆಲವು ಚಿತ್ರಗಳಿಂದ ತಿಳಿಯಬಹುದು.

ಮನುಷ್ಯನ ಚಿತ್ರಕ್ಕೆ ಪ್ರಾಣಿ, ಪಕ್ಷಿಗಳ ರೂಪ ನೀಡಿ ಆತನ ಒಳ ಮನಸ್ಸಿನ ಪ್ರತಿಬಿಂಬವನ್ನು ಈ ಚಿತ್ರಗಳಲ್ಲಿ ನಿರೂಪಿಸಿದ್ದಾರೆ. ಏಳು ಬಣ್ಣಗಳ ಮಿಶ್ರಣದಿಂದ ಕೂಡಿರುವ ಮನುಷ್ಯ ಹಾಗೂ ಪ್ರಾಣಿಗಳ ಜಗತ್ತು ಸುಂದರವಾಗಿ ಕಾಣುತ್ತದೆ.

ಮತ್ತೊಂದು ಕ್ಯಾನ್ವಾಸ್‌ನಲ್ಲಿ ಮನುಷ್ಯನ ರೂಪವಿದೆ. ಕಲಾವಿದ, ವ್ಯಕ್ತಿಯ ಕಣ್ಣನ್ನು ಮೀನಿನ ಆಕಾರದಲ್ಲಿ ಮೂಡಿಸಿದ್ದಾರೆ.  ಇದು ಬಿಲ್ಲು, ಬಾಣದೊಂದಿಗೆ ಸಜ್ಜಾಗಿರುವ ಯುದ್ಧದ ಪ್ರಸಂಗವನ್ನು ನೆನಪಿಸುವಂತಿದೆ.

ವುಡ್‌ವಿನೀರ್‌ ಮೋಡಿ
ವಿವಿಧ ಆಕಾರಗಳ ಮರದ ತೊಗಟೆಗಳನ್ನು   ಜೋಡಿಸಿ ಅವುಗಳಿಗೆ ಒಂದು ಆಕೃತಿ ನೀಡುವುದು  ವುಡ್‌ ವಿನೀರ್ ಕಲಾಕೃತಿಗಳ ಹಾಗೂ ಇವರ ವಿಶೇಷತೆ ಎನ್ನಬಹುದು. 18 ವರ್ಷಗಳಿಂದ ವುಡ್ ವಿನೀರ್ ಕಲಾಕೃತಿಯನ್ನು ಮಾಡುತ್ತಿದ್ದು, ಪ್ರಕೃತಿಯ ಸೊಬಗು, ಹಳ್ಳಿ ಹೆಣ್ಣು ಮಗಳ ಕಾಯಕವನ್ನು ಹಾಗೂ ಪ್ರಾಣಿ ಪಕ್ಷಿಗಳ ಜಗತ್ತನ್ನು ಇವರು ಇದರಲ್ಲಿ ಜೋಡಿಸಿದ್ದಾರೆ.

ಮರದಲ್ಲಿನ  ಗಂಟುಗಳಿಂದ ಸ್ವಾಭಾವಿಕವಾಗಿ ಮೂಡಿರುವ ಚಿತ್ರಕ್ಕೆ ಮತ್ತಷ್ಟು ಮೆರುಗು ನೀಡಿ ವಿವಿಧ ಆಕಾರದ ಚುಕ್ಕೆಗಳನ್ನು ಅಂಟಿಸಿ ರೂಪ ನೀಡಿದ್ದಾರೆ.  ಇಂತಹ ಚಿತ್ರಗಳು ಕಲಾಸಕ್ತರಿಗೆ ಅಚ್ಚರಿ ಮೂಡಿಸುತ್ತವೆ.

‘ವುಡ್‌ ವಿನೀರ್‌ನಿಂದ ಚಿತ್ರಗಳ ರಚನಾ ಪ್ರಕ್ರಿಯೆ ಬಹಳ ಕಷ್ಟದ ಕೆಲಸವೆನ್ನಬಹುದು. ಏಕೆಂದರೆ ಟಿಂಬರ್‌ ಯಾರ್ಡ್‌ಗಳಿಗೆ ಹೋಗಿ ನಿರುಪಯುಕ್ತವಾಗಿರುವ  ಮರದ ತೊಗಟೆ ತಂದು ಅವುಗಳಿಗೆ ಆಕಾರ ನೀಡಿ ಪ್ರಸ್ತುತ ಪಡಿಸುವುದು ಬಹಳ ಕಷ್ಟವಾದರೂ ನನಗೆ ಬಹಳ ಸಂತೋಷ ನೀಡಿದೆ. ಇದು ಕಸದಿಂದ ರಸ ತೆಗೆದಂತೆ’ ಎನ್ನುತ್ತಾರೆ ಜಯಂತ್‌.

ಜಯಂತ್ ಬಿ. ಹುಬ್ಳಿ ಅವರು ಮೈಸೂರಿನ ‘ಕಾವಾ’ದಲ್ಲಿ ಬಿಎಫ್ಎ ಹಾಗೂ ಕಲಾನಿಕೇತನದಲ್ಲಿ ಎಂಎಫ್ಎ ಶಿಕ್ಷಣವನ್ನು ಮುಗಿಸಿದ್ದಾರೆ.
ಮೂಲತಃ ಬೆಳಗಾವಿಯವರಾದ ಜಯಂತ್‌ಗೆ ಚಿತ್ರಕಲೆ ತಮ್ಮ ತಂದೆ ವಿ.ಕೆ.ಹುಬ್ಳಿ ಅವರಿಂದ ಬಳುವಳಿಯಾಗಿ ಬಂದಿದೆ.

‘ನಾನು ಬಿಎಫ್ಎ ಎರಡನೇ ಸೆಮಿಸ್ಟರ್‌ನಲ್ಲಿ ಇದ್ದಾಗ ಕೊಲಾಜ್ ವರ್ಕ್ ಇತ್ತು, ಆಗ ಉಪನ್ಯಾಸಕರು ನನ್ನ ಕಲೆ ನೋಡಿ ತುಂಬಾ ಮೆಚ್ಚುಗೆ ವ್ಯಕ್ತಪಡಿಸಿದರು. ‘ನಿನ್ನನ್ನು ಒಂದು ಫ್ಯಾಕ್ಟರಿಗೆ ಕರೆದುಕೊಂಡು ಹೋಗುತ್ತೇನೆ. ಅಲ್ಲಿ ಕೆಲವು ವಸ್ತುಗಳಿವೆ. ಅದು ನಿನಗೆ ಉಪಯುಕ್ತವಾಗಬಹುದು’ ಎಂದು ಅಲ್ಲಿಗೆ ಕರೆದುಕೊಂಡು ಹೋದರು.

ಅಲ್ಲಿನ ವಸ್ತುಗಳನ್ನು ತಂದು ಒಂದು ರೂಪ ನೀಡಿ ನನ್ನ ಚಿತ್ರಕಲೆಗೆ ಉಪಯೋಗಿಸಿಕೊಂಡೆ.  ಅಂದಿನಿಂದ ವುಡ್‌ವಿನೀರ್ ಕಲೆಯನ್ನು ಶುರುಮಾಡಿದೆ’ ಎಂದು ಮೆಲುಕುಹಾಕುತ್ತಾರೆ. ಜಲವರ್ಣದಿಂದ ಚಿತ್ರ ಬಿಡಿಸುವುದು ಎಂದರೆ ಅವರಿಗೆ ಹೆಚ್ಚು ಖುಷಿಯಂತೆ.

ಮೊದಲ ಪ್ರದರ್ಶನ
ಅಲಯನ್ಸ್ ಫ್ರಾನ್ಸೆಯಲ್ಲಿ ಮೊದಲ ಪ್ರದರ್ಶನ ನೀಡಿದ ಅವರು ನಂತರ ಮುಂಬೈ, ಹೈದರಾಬಾದ್, ಮೈಸೂರು, ಬೆಳಗಾವಿ, ಕೊಲ್ಲಾಪುರದಲ್ಲಿ ಪ್ರದರ್ಶನ ನೀಡಿದ್ದಾರೆ. 2003ರಲ್ಲಿ  ಇವರಿಗೆ  ಕರ್ನಾಟಕ ಲಲಿತ ಕಲಾ ಅಕಾಡೆಮಿ ಪ್ರಶಸ್ತಿ ಲಭಿಸಿದೆ.

ADVERTISEMENT

ಕಲಾವಿದರು: ಜಯಂತ್ ಬಿ. ಹುಬ್ಳಿ
ಪ್ರಕಾರ: ಚಾರ್ಕೋಲ್, ಆಕ್ರಿಲಿಕ್, ವುಡ್ ವಿನೀರ್‌
ಸ್ಥಳ: ವೆಂಕಟಪ್ಪ ಆರ್ಟ್ ಗ್ಯಾಲರಿ, ಕಸ್ತೂರಬಾ ರಸ್ತೆ
ಸಮಯ: ಬೆಳಗ್ಗೆ 10ರಿಂದ ಸಂಜೆ 5
ದಿನಾಂಕ: ಮಾ. 30 ಕೊನೆಯ ದಿನ.
ಪ್ರವೇಶ: ಉಚಿತ

ಇ–ಮೇಲ್: jbhubli@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.