ADVERTISEMENT

ರಟ್ಟು... ಕಲಾವಂತಿಕೆಯ ಗುಟ್ಟು!

ಅನಿತಾ ಈ.
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ತೆಂಗಿನ ಕಾಯಿಯ ಚಿಪ್ಪು, ಹಳೆಯ ಪಾತ್ರೆ, ಪ್ಲೇಟು, ಥರ್ಮಾಕೋಲ್‌, ಚಿಂದಿ ಬಟ್ಟೆ, ಊದು ಕಡ್ಡಿಯ ರಟ್ಟಿನ ರೋಲ್‌, ಹೊಸ ಬಟ್ಟೆಯೊಂದಿಗೆ ಬರುವ ಬಾಕ್ಸ್‌ನ ರಟ್ಟುಗಳು ಸೇರಿದಂತೆ ರದ್ದಿಗೆ ಎಸೆಯುವ ವಸ್ತುಗಳನ್ನು ಸಂಗ್ರಹಿಸುವುದು ವಿಜಯನಗರದ ಅನ್ನಪೂರ್ಣ ಅವರು ಬಹಳ ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರುವ ಹವ್ಯಾಸ. 

ಮನೆಯಲ್ಲಿ ಇರುವ ಹಳೆಯ ಪಾತ್ರೆಗಳು, ಪ್ಲೇಟುಗಳನ್ನು ಗುಜರಿಗೆ ಹಾಕದೆ ಅವುಗಳನ್ನು ಬಳಸಿಕೊಂಡು ದೇವರ ವಿಗ್ರಹ, ಫ್ಯಾನ್ಸಿ ಆರತಿ ತಟ್ಟೆಗಳನ್ನು ಮಾಡುತ್ತಾರೆ. ಹಳೆಯದಾದ ಪುಟಾಣಿ ನೀರಿನ ಚೊಂಬು ಸಿಕ್ಕರೆ, ಅದಕ್ಕೆ ಬಣ್ಣ ಬಳಿದು ಅದರ ಮೇಲೆ ನಾನಾ ಬಣ್ಣದ ಮಣಿಗಳಿಂದ ಅಂದವಾದ ವಿನ್ಯಾಸ ಮಾಡುತ್ತಾರೆ. ಇಲ್ಲವಾದಲ್ಲಿ ಬಣ್ಣ ಬಣ್ಣದ ಕಾಗದ ಅಂಟಿಸಿ ಅದನ್ನು ಅಲಂಕಾರಕ್ಕೆ ಇಡುವ ಕಲಶವನ್ನಾಗಿ ಮಾಡುತ್ತಾರೆ.

ಇದಕ್ಕೆ ಬಳಸುವ ಫೆವಿಕಾಲ್‌ ಹಾಗೂ ಮಣಿಗಳಿಗೆ ಖರ್ಚಾಗುವುದು 10ರಿಂದ 20 ರೂಪಾಯಿ ಮಾತ್ರ. ಮನೆಯಲ್ಲೇ ಸಿಗುವ ತೆಂಗಿನ ಚಿಪ್ಪನ್ನು ಬಳಸಿ ಗಣೇಶ, ಪಾರ್ವತಿ, ಬಾತುಕೋಳಿಯ ವಿಗ್ರಹಗಳನ್ನು ಮಾಡುತ್ತಾರೆ. ತಮಗೆ ಬೇಕಾದ ಆಕಾರದ ತೆಂಗಿನ ಚಿಪ್ಪುಗಳು ಸ್ನೇಹಿತರ ಮನೆಯಲ್ಲಿ ಕಂಡರೆ ಅದನ್ನೂ ತಂದು ಅದರಿಂದ ವಾದ್ಯಗಳು, ತೂಗುಹಾಕುವ ವಾಲ್‌ ಹ್ಯಾಂಗಿಂಗ್ಸ್‌ ಮಾಡುತ್ತಾರೆ. ಒಳ್ಳೆಯ ಆಕಾರದ ಚಿಪ್ಪುಗಳು ಸಿಕ್ಕರೆ ಅದಕ್ಕೆ ಬಣ್ಣಬಣ್ಣದ ಬಟ್ಟೆ ಅಂಟಿಸಿ, ಗಣಪನ ಮೂರ್ತಿಗಳು, ಫ್ಲವರ್‌ ವಾಸ್ಗಳನ್ನು ಮಾಡುತ್ತಾರೆ.

ಮನೆಗೆ ಮಿಕ್ಸಿ, ಫ್ರಿಡ್ಜ್‌, ವಾಷಿಂಗ್‌ ಮಷಿನ್‌ ತಂದಾಗ ಜತೆಗೆ ಬರುವ ಥರ್ಮಾಕೋಲ್‌ ಬಳಸಿ ಆನೆಯ ಮೂರ್ತಿ, ದೇವರ ಮೂರ್ತಿಗಳನ್ನು ಸಿದ್ಧಪಡಿಸುತ್ತಾರೆ. ಐಸ್‌ಕ್ರೀಮ್‌ ಶಾಪ್‌ಗಳಿಂದ ಥರ್ಮಾಕೋಲ್‌ ತಂದು ಅದನ್ನು ತಮಗೆ ಬೇಕಾದ ಆಕಾರಕ್ಕೆ ಕತ್ತರಿಸಿ, ಅದಕ್ಕೆ ದರ್ಜಿಯಿಂದ ತಂದಿರುವ ಹೊಸ ಚಿಂದಿ ಬಟ್ಟೆಗಳಿಂದ ಅಲಂಕಾರ ಮಾಡುತ್ತಾರೆ. ನಂತರ ಫೆವಿಕಾಲ್‌ ಬಳಸಿ ಕೈಯಲ್ಲಿ ಹೊಲಿಗೆ ಹಾಕಿರುವ ಬಟ್ಟೆಗಳನ್ನು ಥರ್ಮಾಕೋಲ್‌ಗೆ ಅಂಟಿಸಲಾಗುತ್ತದೆ. ನಂತರ ಅದರ ಮೇಲೆ ನಾನಾ ರೀತಿಯ ಲೇಸ್‌ ಹಾಗೂ ಮಣಿಗಳಿಂದ ವಿವಿಧ ರೀತಿಯ ವಿನ್ಯಾಸಗಳನ್ನು ಮಾಡುತ್ತಾರೆ.   

ಊದುಕಡ್ಡಿಯ ರಟ್ಟಿನ ರೋಲ್‌, ಹೊಸ ಬಟ್ಟೆಯೊಂದಿಗೆ ಬರುವ ಬಾಕ್ಸ್‌ನ ರಟ್ಟುಗಳನ್ನು ಸಂಗ್ರಹಿಸಿ ಅವುಗಳನ್ನು ಬಳಸಿ ಕುಂಕುಮ ನೀಡುವ ಟ್ರೇ, ದೇವರ ಮುಂದೆ ಹೂ ಇಡಲು ಬಳಸುವ ಫ್ಯಾನ್ಸಿ ತಟ್ಟೆಗಳನ್ನು ಮಾಡುತ್ತಾರೆ. ಗಟ್ಟಿ ಇರುವ ರಟ್ಟಿನ ಮೇಲ್ಭಾಗಕ್ಕೆ ಬಣ್ಣ ಬಣ್ಣದ ಕಾಗದಗಳನ್ನು ಅಂಟಿಸಿ, ಅವುಗಳ ಮೇಲೆ ಬಣ್ಣಗಳಿಂದ ಚಿತ್ರ ಬಿಡಿಸುವುದು ಇನ್ನೊಂದು ವಿಶೇಷ. ನಂತರ ಅದರ ತಳಭಾಗಕ್ಕೆ ಚಿಂದಿ ಬಟ್ಟೆ ಅಥವಾ ಇತರೆ ಕಾಗದವನ್ನೇ ಬಳಸಿ ಆರ್ಕಷವಾಗಿ ಕಾಣುವಂತೆ ಮಾಡುತ್ತಾರೆ.

‘ನಾನು ಮೂಲತಃ ಚಳ್ಳಕೆರೆಯ ನಿವಾಸಿ. ನನ್ನ ತಾಯಿ ತಮ್ಮ ಮನೆಯಲ್ಲಿ ಸಿಗುತ್ತಿದ್ದ ಹಳೇ ವಸ್ತುಗಳ್ನು ಬಳಸಿ ನಾನಾ ರೀತಿಯ ಆಟಿಕೆ, ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು. ಇದನ್ನು ನೋಡುತ್ತಲೇ ಬೆಳೆದ ನಾನು ಅದನ್ನೇ ಮುಂದುವರೆಸಿಕೊಂಡು ಬಂದಿದ್ದೇನೆ. ಸದ್ಯಕ್ಕೆ ವಿಜಯನಗರದಲ್ಲಿ ನಮ್ಮ ಮನೆ ಸುತ್ತಮುತ್ತ ಇರುವ ಕೆಲ ಸ್ನೇಹಿತರು ತಮಗೆ ಸಿಗುವ ನಿರುಪಯುಕ್ತ ವಸ್ತುಗಳನ್ನು ತಂದು ಕೊಡುತ್ತಾರೆ.

ಅದರಿಂದ ನಾನು ಗೊಂಬೆಗಳು, ಫ್ಯಾನ್ಸಿ ಟ್ರೇ ಸೇರಿದಂತೆ ಇತರೆ ಅಲಂಕಾರದ ವಸ್ತುಗಳನ್ನು ತಯಾರಿಸುತ್ತೇನೆ. ಜತೆಗೆ ಇಷ್ಟಪಡುವವರು ನನ್ನ ಬಳಿ ಅವನ್ನು ಮಾಡುವ ಬಗೆಯನ್ನು ಕಲಿಯುತ್ತಾರೆ. ಹಲವಾರು ಸಂಘ ಸಂಸ್ಥೆಗಳಿಗೆ ಹೋಗಿ ಉಚಿತವಾಗಿ ತರಬೇತಿ ಸಹ ನೀಡುತ್ತೇನೆ’ ಎನ್ನುತ್ತಾರೆ ಅನ್ನಪೂರ್ಣ.

ನಾನು ಯಾವುದೇ ವಸ್ತುವನ್ನು ತಯಾರಿಸಿದರೂ ಅದಕ್ಕೆ ಹೆಚ್ಚೆಂದರೆ ₨ 50 ಖರ್ಚಾಗಬಹುದು. ಹೀಗೆ ತಯಾರಿಸಿದ ವಸ್ತುಗಳನ್ನು ಮನೆಗೆ ಬರುವ ಸ್ನೇಹಿತರು, ಬಂಧು ಬಳಗದವರಿಗೆ ಉಡುಗೊರೆಯಾಗಿ ನೀಡುತ್ತೇನೆ. ಎಲ್ಲೇ ಏನೇ ಸಮಾರಂಭವಾದರೂ ನಾನು ಉಡುಗೊರೆ ಖರೀದಿಸುವುದೇ ಇಲ್ಲ. ಹಬ್ಬಗಳಲ್ಲಿ ಮನೆ ಬಳಿ ಇರುವ ದೇವಾಲಯದ ಬಳಿ ನಾವು ತಯಾರಿಸಿರುವ ವಸ್ತುಗಳ ಪ್ರದರ್ಶನವನ್ನೂ ಏರ್ಪಡಿಸುತ್ತೇನೆ ಎನ್ನುತ್ತಾರೆ ಅವರು. 

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.