ADVERTISEMENT

ರಸಿಕತೆ ರಹದಾರಿಯಲ್ಲಿ ಐಶಾನಿ

ಪವಿತ್ರ ಶೆಟ್ಟಿ
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

‘ಸೌಂದರ್ಯ ಎನ್ನುವುದು ದೇಹಕ್ಕೆ ಸಂಬಂಧಪಟ್ಟಿದ್ದಲ್ಲ. ನೋಡಲು ತುಂಬಾ ಚೆನ್ನಾಗಿದ್ದು ಮನಸ್ಸು ಚೆನ್ನಾಗಿಲ್ಲವೆಂದರೆ ಏನು ಉಪಯೋಗ? ಮುಖಕ್ಕೆ ಪೇಶಿಯಲ್, ಬ್ಲೀಚ್‌ ಮಾಡಿಕೊಂಡು ಚೆಂದವಾಗುವುದಕ್ಕಿಂತ ಒಳ್ಳೆಯ ಆಲೋಚನೆಗಳು, ಕಲ್ಮಶವಿಲ್ಲದ ನಗುವಿನ ಮೂಲಕ ಮನಸ್ಸನ್ನು ಅಂದವಾಗಿ ಇಟ್ಟುಕೊಳ್ಳಬೇಕು. ಆಗ ನಮ್ಮ ಸೌಂದರ್ಯಕ್ಕೆ, ವ್ಯಕ್ತಿತ್ವಕ್ಕೆ ಒಂದು  ಬೆಲೆ ಸಿಗುತ್ತದೆ’– ಇದು ಐಶಾನಿ ಶೆಟ್ಟಿ ಅವರ ಸೌಂದರ್ಯ ಮೀಮಾಂಸೆ.
ಯೋಗರಾಜ್‌ ಭಟ್‌ ಅವರ ‘ವಾಸ್ತುಪ್ರಕಾರ’ದಲ್ಲಿ ನಾಯಕಿಯಾಗಿ ನಟಿಸುತ್ತಿರುವ ಐಶಾನಿ ಮೂಲತಃ ಮಂಗಳೂರಿನವರು. ಹುಟ್ಟಿ ಬೆಳೆದಿದ್ದೆಲ್ಲ ಉದ್ಯಾನನಗರಿಯಲ್ಲಿಯೇ.

ಈ ಮೊದಲು ಐಶಾನಿ ‘ಜ್ಯೋತಿ ಅಲಿಯಾಸ್‌ ಕೋತಿರಾಜ್‌’ ಸಿನಿಮಾದಲ್ಲಿ ಬಣ್ಣ ಹಚ್ಚಿದ್ದರು. ಈಗ ‘ವಾಸ್ತುಪ್ರಕಾರ’ದ ಮೂಲಕ ಭಟ್ಟರ ಗರಡಿಯಲ್ಲಿ ರಕ್ಷಿತ್‌ ಶೆಟ್ಟಿಗೆ ಜೋಡಿಯಾಗಿದ್ದಾರೆ. ಅವರು ಮೆಟ್ರೊದೊಂದಿಗೆ ಮಾತನಾಡಿದರು.

ನಾಟಕವೇ ಅಭಿನಯಕ್ಕೆ ಪೂರಕ
ಅಂತಿಮ ವರ್ಷದ ಪದವಿ ಕಲಿಯುತ್ತಿರುವ ಐಶಾನಿಗೆ ನಾಟಕವೆಂದರೆ ತುಂಬಾ ಪ್ರೀತಿ. ಕಾಲೇಜಿನಲ್ಲಿ ಸಾಕಷ್ಟು ನಾಟಕಗಳಲ್ಲಿ ಅಭಿನಯಿಸಿರುವ ಅವರು ‘ಬಹುರೂಪಿ’ ಎಂಬ ರಂಗ ತಂಡದ ಸದಸ್ಯರೂ ಹೌದು. ‘ಒಂದೊಳ್ಳೆ ನಾಟಕವಿದ್ದರೆ ನಾನು ಹೋಗಿ ನೋಡುತ್ತೇನೆ. ನಟನೆಯ ಪಟ್ಟುಗಳನ್ನು ಅರಿಯಲು ನಾಟಕದಿಂದ ಸಹಾಯವಾಗುತ್ತದೆ’ ಎನ್ನುತ್ತಾರೆ ಈ ಬೆಡಗಿ.

ಸೌಂದರ್ಯಕ್ಕೆ ಮನೆಮದ್ದು
‘ಮನಸ್ಸು ಶುದ್ಧವಾಗಿದ್ದರೆ ಮುಖದ ಮೇಲೆ ಒಂದು ಮಾಸದ ನಗುವಿರುತ್ತದೆ. ಅದೇ ನನ್ನ ಸೌಂದರ್ಯದ ಗುಟ್ಟು’ ಎಂದು ಚೆಂದದ ನಗು ಚೆಲ್ಲುತ್ತಾರೆ ಐಶಾನಿ.
ಕಾಲೇಜಿಗೆ ಹೋಗುತ್ತಿರುವುದರಿಂದ ಇವರು ಯಾವುದೇ ಫಿಟ್‌ನೆಸ್‌ ತರಗತಿಗಳಿಗೆ ಸೇರಿಕೊಂಡಿಲ್ಲ. ಅದು ತಿನ್ನಬಾರದು, ಇದು ತಿನ್ನಬಾರದು ಎಂಬ ಡಯೆಟ್‌ ನಿಯಮಗಳು ಕೂಡ ಈ ನಟಿಗೆ ಒಗ್ಗುವುದಿಲ್ಲ. ‘ಅಮ್ಮ ಮಾಡುವ ಎಲ್ಲಾ ತಿನಿಸುಗಳನ್ನು ಬಾಯಿ ಚಪ್ಪರಿಸಿಕೊಂಡು ತಿನ್ನುತ್ತೇನೆ. ಅಮ್ಮ ಯೋಗ ಮಾಡುವುದರಿಂದ ನಾನೂ ಒಂದಷ್ಟು ಹೊತ್ತು ಯೋಗ ಮಾಡುತ್ತೇನೆ’ ಎನ್ನುವ ಐಶಾನಿಗೆ ಜಿಮ್‌ ಸೇರಿಕೊಳ್ಳುವ ಇರಾದೆ ಇಲ್ಲ. ‘ಜಿಮ್‌ನಲ್ಲಿ ವ್ಯಾಯಾಮ ಮಾಡುವದಕ್ಕಿಂತ ಪಾರ್ಕ್‌ನಲ್ಲಿ ಓಡಿ ಬೆವರಳಿಸುವುದು ನನಗೆ ಇಷ್ಟ. ತಿನ್ನುವಾಗ ಹಿತಮಿತವಾಗಿ ತಿಂದರೆ ದೇಹ ಚೆನ್ನಾಗಿರುತ್ತೆ. ಸಾಧ್ಯವಾದಷ್ಟೂ ನೀರು ಕುಡಿಯಿರಿ, ಹಸಿರು ತರಕಾರಿಗಳನ್ನು ಹೆಚ್ಚು ಹೆಚ್ಚು ಸೇವಿಸಿ ಚರ್ಮಕ್ಕೆ ಒಳ್ಳೆಯದು’ ಎಂದು ಆರೋಗ್ಯ ರಕ್ಷಣೆಯ ಟಿಪ್ಸ್‌ ನೀಡುತ್ತಾರೆ.

ಮುಖದ ಸೌಂದರ್ಯಕ್ಕಾಗಿ ಐಶಾನಿ ಯಾವತ್ತೂ ಬ್ಯೂಟಿ ಪಾರ್ಲರ್‌ಗಳ ಬಾಗಿಲು ತಟ್ಟಿಲ್ಲ. ‘ರಾಸಾಯನಿಕಗಳನ್ನೆಲ್ಲಾ ಬಳಿದುಕೊಂಡು ಮುಖದ ಚರ್ಮ ಹಾಳುಮಾಡಿಕೊಳ್ಳುವುದಕ್ಕಿಂತ ಮನೆಯಲ್ಲಿ ಇರುವ ಹಾಲು, ಮೊಸರು ಬಳಸುವುದೇ ಮುಖದ ಅಂದಕ್ಕೆ ಒಳ್ಳೆಯದು. ಹೊರಗೆ ಹೋಗಿ ಬಂದಾಗ ಒಂದಷ್ಟು ಮೊಸರು ಹಚ್ಚಿಕೊಂಡು ಅರ್ಧಗಂಟೆ ಬಿಟ್ಟು ಮುಖ ತೊಳೆದುಕೊಳ್ಳುತ್ತೇನೆ. ಮೊಸರಿಗೆ ಸ್ವಲ್ಪ ಕಡಲೇಹಿಟ್ಟು, ನಿಂಬೆ ಹಣ್ಣಿನ ರಸ ಸೇರಿಸಿ ಕೈ, ಕಾಲು. ಮುಖಕ್ಕೆ ಲೇಪಿಸಿಕೊಳ್ಳುವುದರಿಂದ ಚರ್ಮ ಮೃದುವಾಗುತ್ತದೆ’ ಎನ್ನುತ್ತಾರೆ ಐಶಾನಿ.

ಓದು, ಸಿನಿಮಾ, ಸಂಗೀತ ‘ಒಂದಷ್ಟು ಪುಸ್ತಕ ಓದಿ, ಒಂದೊಳ್ಳೆ ಸಿನಿಮಾ, ನಾಟಕ ನೋಡಿದರೆ ಮನಸ್ಸು ಖುಷಿಯಾಗಿರುತ್ತದೆ. ಆ ಖುಷಿ ಮುಖದ ಮೇಲೆ ಪ್ರತಿಬಿಂಬವಾಗುತ್ತದೆ. ಒತ್ತಡದಲ್ಲೂ ಮುಗುಳ್ನಗುವುದಕ್ಕೆ ಪ್ರಯತ್ನ ಮಾಡಿ. ಆಗ ಸಮಸ್ಯೆ ಅರ್ಧದಷ್ಟು ಕಡಿಮೆಯಾಗುತ್ತದೆ’ ಎಂದು ಮಾನಸಿಕ ಆರೋಗ್ಯದ ಕುರಿತು ಸಲಹೆ ನೀಡುವ ಇವರಿಗೆ ನಟನೆ, ನಾಟಕದ ಸಂಗೀತವೆಂದರೆ ತುಂಬಾ ಪ್ರೀತಿ.

‘ನಾಲ್ಕನೇ ತರಗತಿಯಿಂದ ಎಂಟನೇ ತರಗತಿವರೆಗೆ ವೀಣೆ ಕ್ಲಾಸ್‌ಗೆ ಮಿಸ್‌ ಮಾಡದೇ ಹೋಗುತ್ತಿದ್ದೆ, ಇನ್ನೇನು ಜೂನಿಯರ್‌ ಪರೀಕ್ಷೆ ಕಟ್ಟಬೇಕು ಎನ್ನುವಾಗ ನನ್ನ ವೀಣೆ ಟೀಚರ್‌ ತೀರಿಹೋದರು. ಆಗ ತುಂಬ ಬೇಸರವಾಗಿತ್ತು. ಇಂದು ನಾನು ವೀಣೆ ನುಡಿಸುತ್ತೇನೆ. ಆದರೆ ಜೂನಿಯರ್‌ ಪರೀಕ್ಷೆ ಕಟ್ಟಲು ಆಗಲೇ ಇಲ್ಲ’ ಎಂದು ಬೇಸರ ವ್ಯಕ್ತಪಡಿಸುತ್ತಾರೆ.
ಕಾಲೇಜಿನಲ್ಲಿ ಅವರದೇ ಒಂದು ಸಂಗೀತ ತಂಡವನ್ನು ಕಟ್ಟಿಕೊಂಡಿದ್ದಾರೆ. ಅದರ ಹೆಸರು ‘ಟೀಮ್‌’. ಯಾವುದೇ ಸಂಗೀತ ವಾದ್ಯಗಳ ಸಾಥ್ ಇಲ್ಲದೆ ಹಾಡುವುದು ಈ ತಂಡದ ವಿಶೇಷ.
ಸಂಗೀತದ ಜತೆಗೆ ಕತೆ, ಕವನಗಳನ್ನು ಬರೆಯುವ ಹವ್ಯಾಸ ಐಶಾನಿ ಅವರಲ್ಲಿದೆ.

ಯಾವುದಾದರೂ ಊರಿಗೆ ಹೋದಾಗ ಅಲ್ಲಿ ಸಿಗುವ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಾರೆ. ಒಮ್ಮೆ ಜರ್ಮನಿಯಲ್ಲಿರುವ ಅವರ ಗೆಳೆಯರು ಇಲ್ಲಿಗೆ ಬಂದಾಗ ಇವರಿಗೆ ಒಂದು ಸಕ್ಕರೆ ಪ್ಯಾಕೆಟ್‌ ನೀಡಿ ‘ಇದರ ಸಿಹಿಯಂತೆಯೇ ಖುಷಿ ಹಂಚುತಿರು’ ಎಂದಿದ್ದರಂತೆ. ಹಾಗಾಗಿ ಆ ಸಕ್ಕರೆ ಪ್ಯಾಕೆಟ್‌ ಅನ್ನು ಜೋಪಾನವಾಗಿ ಇಟ್ಟುಕೊಂಡಿದ್ದಾರೆ. 

ಊರಿನ ಸೆಳೆತ
ಬಿಡುವು ಸಿಕ್ಕಾಗಲೆಲ್ಲಾ ನಗರದಿಂದ ದೂರ ಹೋಗಿ ಪ್ರಕೃತಿ ಮಡಿಲಲ್ಲಿ ಕಾಲ ಕಳೆಯುವುದು ಐಶಾನಿಗೆ ಇಷ್ಟ. ‘ಮಳೆಗಾಲದಲ್ಲಿ ಮಂಗಳೂರು ತುಂಬಾ ಚೆನ್ನಾಗಿರುತ್ತದೆ. ಬೆಳಿಗ್ಗೆ ಎದ್ದಾಗ ಕೇಳುವ ಹಕ್ಕಿಗಳ ಚಿಲಿಪಿಲಿ, ಬಿಡುವಿಲ್ಲದೇ ಸುರಿಯುವ ಮಳೆ, ಹೆಂಚಿನ ಮನೆಯ ಮೇಲೆ ಬೀಳುವ ಆ ಮಳೆ ಶಬ್ದವನ್ನು ಕೇಳುವುದೇ ಹಿತಕರ. ಮಳೆಯಲ್ಲಿ ನೆನೆಯುವುದು ನನಗೆ ತುಂಬ ಇಷ್ಟ’ ಎಂದು ಮಳೆನಂಟನ್ನು ನೆನೆದು ಖುಷಿಗೊಳ್ಳುವ ಐಶಾನಿಗೆ ಅವರ ಅಜ್ಜಿಯೇ ರೋಲ್ ಮಾಡೆಲ್‌.

‘ಎಷ್ಟೇ ಕಷ್ಟವಿದ್ದರೂ ಅವರ ಮುಖದಲ್ಲಿ ಮಾಸದ ಮಂದಹಾಸವೊಂದು ಇರುತ್ತಿತ್ತು. ಅದೇ ನನಗೆ ಸ್ಫೂರ್ತಿ’ ಎಂದು ನೆನೆಯುವ  ಐಶಾನಿ ಅವರಲ್ಲಿ ಬಣ್ಣದ ಲೋಕದಲ್ಲಿ ಬೇರೂರುವ ಲಕ್ಷಣಗಳು ಸ್ಪಷ್ಟವಾಗಿಯೇ ಕಾಣುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.