ADVERTISEMENT

ರಾಜ್ ಯೋಗಾಯೋಗ

ಪ್ರಕಾಶ್‌.ಎನ್‌.ಜೆ.
Published 23 ಏಪ್ರಿಲ್ 2014, 19:30 IST
Last Updated 23 ಏಪ್ರಿಲ್ 2014, 19:30 IST
ರಾಜ್  ಯೋಗಾಯೋಗ
ರಾಜ್ ಯೋಗಾಯೋಗ   

‘ರಂಗಭೂಮಿಗೆ ಬಂದಾಗಲೇ ದೇಹವನ್ನು ಸಣ್ಣ ಪುಟ್ಟ ಕಸರತ್ತುಗಳಿಂದ ಸಪೂರವಾಗಿಟ್ಟುಗೊಂಡಿದ್ದೆ. ಯೋಗಾಭ್ಯಾಸಕ್ಕೆ ತೊಡಗಿದ ಮೇಲಂತೂ ನನ್ನ ಜೀವನ ವಿಧಾನವೇ ಬದಲಾಗಿ ಹೋಯಿತು,  ನೋಡಿ’ ಎಂದು ಹೇಳಿ ನಸುನಕ್ಕಿದ್ದರು ಡಾ.ರಾಜ್‌ಕುಮಾರ್.

ಕರ್ನಾಟಕ ವಾರ್ತಾ ಇಲಾಖೆಯು ನವದೆಹಲಿಯಲ್ಲಿ ೧೯೯೦ರ ದಶಕದಲ್ಲಿ ಏರ್ಪಡಿಸಿದ್ದ ರಾಜ್ಯೋತ್ಸವ ಸಮಾರಂಭದಲ್ಲಿ ಪಾಲ್ಗೊಳ್ಳಲು ಮುಂಚಿತವಾಗಿಯೇ ಬಂದು ಕರ್ನಾಟಕ ಭವನದಲ್ಲಿ ಅಭಿಮಾನಿ ಬಂಧುಗಳೊಂದಿಗೆ ಮಾತಿಗಿಳಿದಿದ್ದ ಡಾ.ರಾಜ್ ತಮ್ಮ ಯೋಗಪಯಣವನ್ನು ಕೆಲವೇ ಮಾತುಗಳಲ್ಲಿ ಬಿಡಿಸಿಟ್ಟಿದ್ದ ಸಂದರ್ಭ ಅದು.

‘ಬೇಡರ ಕಣ್ಣಪ್ಪ’, ‘ರಣಧೀರ ಕಂಠೀರವ’ ಮುಂತಾದ ಚಿತ್ರಗಳಲ್ಲಿ ಅಭಿನಯಿಸುವಾಗಲೂ ಅವರ ದೇಹ ಕಟ್ಟುಮಸ್ತಾಗಿಯೇ ಇತ್ತು. ‘ನನ್ನನ್ನು ನೋಡುತ್ತಲೇ ಇದ್ದ ಯೋಗ ಗುರುಗಳೊಬ್ಬರು ನೀವು ಯೋಗ ಕಲಿಯಿರಿ ಎಂದು ಸಲಹೆ ಇತ್ತರು. ಮೊದಲಿಗೆ ಅದರ ಬಗೆಗೆ ಅಷ್ಟೇನು ಒಲವಿರಲಿಲ್ಲ. ಯೋಗಾಯೋಗ ಇರಬೇಕು, ಎಚ್.ಎಫ್.ನಾಯ್ಕರ್ ಎಂಬ ಯೋಗ ನಿಪುಣರು ನನ್ನ ಜೀವನದಲ್ಲಿ ಪ್ರವೇಶಿಸಿದರು. ಕೊನೆಗೆ ಯೋಗ ನನ್ನನ್ನೇ ಆವರಿಸಿಬಿಟ್ಟಿತು’ ಎನ್ನುತ್ತ ಇನ್ನಷ್ಟು ಸುದೀರ್ಘ ಮಾತುಕತೆಗೆ ರಾಜ್‌ಕುಮಾರ್‌ ನಮ್ಮನ್ನೆಲ್ಲಾ ಎಳೆದಿದ್ದರು.

ಅವರ ಮಾತು ಅಷ್ಟಕ್ಕೇ ನಿಲ್ಲಲಿಲ್ಲ. ಮುಂದುವರಿಸಿ, ಅವರು ಹೇಳಿದ್ದಿಷ್ಟು: ‘ಶುರುವಿನಲ್ಲಿ ಮೈಯಲ್ಲಾ ನೋವಾಗತೊಡಗಿತು. ಕ್ರಮೇಣ ಇದು ಹದಕ್ಕೆ ಬಂತು.  ನಂತರವಂತೂ ಯೋಗದಿಂದ ಆದ ಸಂತೋಷ ಮೈಕೈಗೆ ಮಾತ್ರವಲ್ಲ ಮನಸ್ಸಿಗೂ ಹಬ್ಬಿತು. ಬಹಳ ಮಂದಿ ಯೋಗ ದೇಹವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಲು ಅನುಕೂಲ ಅಂತ ತಿಳಿದಿದ್ದಾರೆ. ಆದರೆ ಅದರ ಉಪಯೋಗ ಹಲವು ಬಗೆಯದ್ದು ಎಂಬುದನ್ನು ಅನುಭವವೇ ಸ್ಪಷ್ಟಪಡಿಸುತ್ತದೆ. ಯಾವುದೇ ಕೆಲಸ ಮಾಡಬೇಕಾದರೂ ಏಕಾಗ್ರತೆ ಮುಖ್ಯ.

ಯೋಗವನ್ನು ದಕ್ಕಿಸಿಕೊಂಡರೆ ಇದು ಬಹಳ ಸುಲಭ. ನಾನಂತೂ ಯೋಗಚಕ್ರದಲ್ಲಿ ಸಿಕ್ಕಿಕೊಂಡ ಮೇಲೆ ದೇಹ ಗಾಳಿಯಲ್ಲಿ ತೇಲಾಡಿದಂತಾಗುತ್ತದೆ. ಮನಸ್ಸು ಸದಾ ಪ್ರಫುಲ್ಲವಾಗಿರುತ್ತೆ. ಅಂದುಕೊಂಡ ಯಾವುದೇ ಕೆಲಸವನ್ನಾದರೂ ಸುಗಮವಾಗಿ ಸುಲಲಿತವಾಗಿ  ಮುಗಿಸುವ ಹುಮ್ಮಸ್ಸು. ಗುರುಗಳಾದ ನಾಯ್ಕರ್ ಅವರು ಸುಮಾರು ಆಸನಗಳನ್ನು ಹೇಳಿಕೊಟ್ಟರು. ಮೊದಮೊದಲಿಗೆ ೫೦–-೬೦ ಆಸನಗಳನ್ನು ನೀರು ಕುಡಿದಂತೆ ಮಾಡುತ್ತಿದ್ದೆ. ಈಗ ಸ್ವಲ್ಪ ಕಡಿಮೆ ಮಾಡಿದ್ದೇನೆ. ಯೋಗದಿಂದ ಮನಸ್ಸು ಅಧ್ಯಾತ್ಮದ ಕಡೆಗೂ ಹೊರಳಿತು’.

ಕೆಲವು ಸಂದರ್ಭಗಳಲ್ಲಿ ಡಾ.ರಾಜ್‌ಕುಮಾರ್ ಅವರನ್ನು ಹತ್ತಿರದಿಂದ ನೋಡಿದ್ದಿದೆ. ಅದು ಸಭೆ, -ಸಮಾರಂಭಗಳಾಗಿರಬಹುದು, ಚಲನಚಿತ್ರ ಕಾರ್ಯಕ್ರಮ ಆಗಿರಬಹುದು. ದೆಹಲಿಯ ಆ ಭೇಟಿ ಮಾತ್ರ ಸದಾ ಹಸಿರು. ಇದು ಯೋಗ ಮಹಿಮೆ ಇರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT