ADVERTISEMENT

ರುಕ್ಕು, ಕ್ಲೈಮ್ಯಾಕ್ಸ್‌ ಮತ್ತು ಕೋಕಿಲ!

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2014, 19:30 IST
Last Updated 19 ನವೆಂಬರ್ 2014, 19:30 IST

‘ನಿಜವಾದ ಸಿನಿಮಾ ಇರುವುದು ಕ್ಲೈಮ್ಯಾಕ್ಸ್‌ನಲ್ಲಿ. ಅದೇ ನಮ್ಮ ಚಿತ್ರದ ಜೀವ’ ಎಂದು ನಿರ್ದೇಶಕ ಬಸವರಾಜ್ ಬಳ್ಳಾರಿ ಹೇಳಿಕೊಂಡರು. ‘ಹಾಗಿದ್ದರೆ ಅಲ್ಲಿಯವರೆಗೆ ಪ್ರೇಕ್ಷಕರನ್ನು ಹೇಗೆ ಹಿಡಿದಿಟ್ಟುಕೊಳ್ಳುತ್ತೀರಿ’ ಎಂದು ಸುದ್ದಿಮಿತ್ರರು ಪ್ರಶ್ನಿಸಿದಾಗ, ‘ಸಾಧು ಕೋಕಿಲಾ ಇರುತ್ತಾರೆ’ ಎಂಬ ಉತ್ತರ ಅವರಿಂದ ತಕ್ಷಣವೇ ಬಂತು!

ಹಾಗೆಂದು ಸಾಧು ಕೋಕಿಲಾ ಇದರಲ್ಲಿ ನಾಯಕನಲ್ಲ. ‘ರುಕ್ಕು’ ಸಿನಿಮಾದೊಂದಿಗೆ ಶ್ರೇಯಸ್ ಎಂಬ ಕುಡಿಮೀಸೆ ಯುವಕ ನಾಯಕನಾಗಿ ಬಣ್ಣದ ಲೋಕಕ್ಕೆ ಬರುತ್ತಿದ್ದಾರೆ. ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಅವರ ತಂದೆ ಆರ್. ರಾಜಣ್ಣ ಸಿನಿಮಾದ ನಿರ್ಮಾಪಕರು. ಬೆಂಗಳೂರಿನ ಆರ್.ಟಿ. ನಗರದ ಸಾಯಿಬಾಬಾ ದೇವಸ್ಥಾನದಲ್ಲಿ ಇತ್ತೀಚೆಗೆ ಮುಹೂರ್ತ ನೆರವೇರಿತು.

‘ಸೀನ’ ಹಾಗೂ ‘ಬಿಳಿಹಾಳೆ’ ಎಂಬ ಎರಡು ಚಿತ್ರಗಳ ಬಳಿಕ ‘ರುಕ್ಕು’ ಚುಕ್ಕಾಣಿ ಹಿಡಿದಿದ್ದಾರೆ ನಿರ್ದೇಶಕ ಬಸವರಾಜ್ ಬಳ್ಳಾರಿ. ‘ಅದ್ದೂರಿಯಿಲ್ಲ. ಆದರೆ ಅದ್ಭುತ ಚಿತ್ರ ಇದಾಗಲಿದೆ’ ಎಂಬ ಅಪರಿಮಿತ ವಿಶ್ವಾಸ ಅವರದು. ಆಶ್ರಮವೊಂದರಲ್ಲಿ ಕೆಲಸ ಮಾಡುವ ನಾಯಕ ಹಾಗೂ ನಾಯಕಿ ಮಧ್ಯೆ ಪ್ರೀತಿ, ಆ ಬಳಿಕ ಏನಾಗುತ್ತದೆ ಎಂಬುದನ್ನು ತೆರೆ ಮೇಲೆ ನೋಡಬೇಕು ಎಂದರು.

ಆಶ್ರಮಕ್ಕೆ ಸೇರಿ ಪರಿವರ್ತನೆಯಾಗುವ ಜಮೀನ್ದಾರನ ಮಗನ ಪಾತ್ರ ತಮ್ಮದು ಎಂದು ಶ್ರೇಯಸ್ ಹೇಳಿದರು. ಬಳ್ಳಾರಿ ಮೂಲದವರೇ ಆದ ನಾಯಕಿ ರಶ್ಮಿತಾ ಅವರಿಗೆ ಇದು ಎರಡನೇ ಸಿನಿಮಾ. ಚಿತ್ರದಲ್ಲಿ ರುಕ್ಮಿಣಿ ಪಾತ್ರ ಅವರದು. ಈ ಪಾತ್ರವೇ ಪ್ರಮುಖವಾಗಿರುವುದರಿಂದ, ‘ರುಕ್ಕು’ ಎಂಬ ಶೀರ್ಷಿಕೆ ಇಡಲಾಗಿದೆ.

ಥ್ರಿಲ್ಲರ್ ಮಂಜು ಎರಡು ಹೊಡೆದಾಟದ ದೃಶ್ಯ ಸಂಯೋಜಿಸಲಿದ್ದಾರೆ. ನಾಗೇಂದ್ರ ಅರಸ್ ಸಂಕಲನ, ರೇಣು ಛಾಯಾಗ್ರಹಣದ ಹೊಣೆ ಹೊತ್ತಿದ್ದಾರೆ. ಜಯಂತ ಕಾಯ್ಕಿಣಿ, ಯೋಗರಾಜ ಭಟ್, ಧನಂಜಯ ಬರೆದ ಹಾಡುಗಳಿಗೆ ರವೀಶ ರಾಜ್ ಸಂಗೀತ ಸಂಯೋಜಿಸಿದ್ದಾರೆ. ಬೆಂಗಳೂರು ಹಾಗೂ ಮಡಿಕೇರಿಯಲ್ಲಿ ಚಿತ್ರೀಕರಣ ನಡೆಸಲಾಗುವುದು ಎಂಬ ಮಾಹಿತಿ ಚಿತ್ರತಂಡದಿಂದ ಸಿಕ್ಕಿತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.