ADVERTISEMENT

ರೇಖೆಗಳಲ್ಲಿ ಅಭಿವ್ಯಕ್ತಿ ನೆಲೆ ಅನಾವರಣ

ಸುಬ್ರಹ್ಮಣ್ಯ ಎಚ್.ಎಂ
Published 28 ಏಪ್ರಿಲ್ 2017, 19:30 IST
Last Updated 28 ಏಪ್ರಿಲ್ 2017, 19:30 IST
ರೇಖೆಗಳಲ್ಲಿ  ಅಭಿವ್ಯಕ್ತಿ ನೆಲೆ ಅನಾವರಣ
ರೇಖೆಗಳಲ್ಲಿ ಅಭಿವ್ಯಕ್ತಿ ನೆಲೆ ಅನಾವರಣ   

ಆಯಾ ದೇಶಗಳ ಸಮಕಾಲೀನ ಸಮಸ್ಯೆ, ವಸ್ತು ವಿಷಯ,  ವ್ಯಕ್ತಿಗಳ ವಿಡಂಬನೆ ಕುರಿತ ವ್ಯಂಗ್ಯಚಿತ್ರಗಳು   ಕಲಾವಿದರ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರುಹುಗಳಾಗಿವೆ. 

ಅಂತಹ ಅಪರೂಪದ ವ್ಯಂಗ್ಯಚಿತ್ರಗಳ ಪ್ರದರ್ಶನವನ್ನು ನಾರ್ವೆ ದೇಶದ ‘ಟೂನ್ಸ್ ಮ್ಯಾಗ್’ ಪತ್ರಿಕೆಯ ಸಹಕಾರದೊಂದಿಗೆ ಭಾರತೀಯ ವ್ಯಂಗ್ಯಚಿತ್ರಕಾರರ ಸಂಸ್ಥೆಯು  ಏಪ್ರಿಲ್ 29ರಂದು ಏರ್ಪಡಿಸಿದೆ. ಎಂ.ಜಿ ರಸ್ತೆಯಲ್ಲಿರುವ ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿಯಲ್ಲಿ ನಡೆಯುವ ಈ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಪ್ರದರ್ಶನ ಹೆಸರು ‘ಅಭಿವ್ಯಕ್ತಿ ಸ್ವಾತಂತ್ರ್ಯ’.

ವ್ಯಂಗ್ಯಚಿತ್ರಗಳ ಮೂಲಕ, ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವ ಜನರಿಗೆ ತಿಳಿಸಿ ಅದನ್ನು ಕಾಪಾಡಿಕೊಳ್ಳುವ ಜವಾಬ್ದಾರಿಯ ಬಗ್ಗೆ ಜಾಗೃತಿ ಮೂಡಿಸಲು ಈ ವ್ಯಂಗ್ಯಚಿತ್ರಗಳ ಮೂಲಕ  ಪ್ರಯತ್ನಿಸಲಾಗಿದೆ. ನಾರ್ವೆ ದೇಶದ ‘ಟೂನ್ಸ್‌ ಮ್ಯಾಗ್‍’ ಎಂಬ ಜಗತ್ತಿನ ಪ್ರಥಮ ಆನ್‌ಲೈನ್ ಪತ್ರಿಕೆಯು ಇತ್ತೀಚೆಗೆ ಎರಡನೇ ಅಂತರರಾಷ್ಟ್ರೀಯ ವ್ಯಂಗ್ಯಚಿತ್ರ ಸ್ಪರ್ಧೆ ಏರ್ಪಡಿಸಿತ್ತು.

ADVERTISEMENT

ಸ್ಪರ್ಧೆಗೆ ಭಾರತ ಸೇರಿದಂತೆ ಬಾಂಗ್ಲಾದೇಶ, ಚೀನಾ, ಇಂಡೋನೇಷ್ಯಾ, ಕ್ಯೂಬಾ, ಫ್ರಾನ್ಸ್,  ಜರ್ಮನಿ, ಟರ್ಕಿ,  ಬೆಲ್ಜಿಯಂ, ಬ್ರೆಜಿಲ್, ಬಲ್ಗೇರಿಯಾ, ಈಜಿಪ್ಟ್, ಟರ್ಕಿ, ಇರಾನ್, ಅಸ್ಟ್ರೀಯಾ, ಆಫ್ಘಾನಿಸ್ತಾನ, ಪೆರು, ರುಮೇನಿಯಾ ಸೇರಿದಂತೆ 83 ದೇಶಗಳಿಂದ 518 ವ್ಯಂಗ್ಯಚಿತ್ರಕಾರರು 1556 ಪ್ರವೇಶಗಳನ್ನು ಕಳಿಸಿದ್ದರು. ಅವುಗಳಲ್ಲಿ 51 ದೇಶದ 75 ಆಯ್ದ ವ್ಯಂಗ್ಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗಿದೆ. 

ಇಲ್ಲಿನ ಬಹುತೇಕ ವ್ಯಂಗ್ಯಚಿತ್ರಗಳು ಅಭಿವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ಭಿನ್ನ ಒಳನೋಟಗಳನ್ನು ನೀಡುತ್ತವೆ. ಅಭಿವ್ಯಕ್ತಿ ಸ್ವಾತಂತ್ರ್ಯವು ಸಮಾಜದ ಆರೋಗ್ಯಕರ ವಿಕಾಸಕ್ಕೆ ಪೂರಕವಾಗಿ ಕೆಲಸ ಮಾಡುತ್ತದೆ. ವಿಜ್ಞಾನ ಮತ್ತು ತಂತ್ರಜ್ಞಾನ ಹೇಗೆ ಕಾಲ ಕಾಲಕ್ಕೆ ವಿಕಾಸಗೊಳ್ಳುತ್ತದೆಯೋ ಹಾಗೆಯೇ ಅದನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ನಮ್ಮ ಪ್ರಜ್ಞೆಯನ್ನು ವಿಕಾಸಗೊಳಿಸಬೇಕಾಗಿದೆ.

ಸದಾ ವಿಕಾಸಗೊಳ್ಳುವ ಸಾಮರ್ಥ್ಯವನ್ನು ಪಡೆದಿರುವ ಮಾನವ ಪ್ರಜ್ಞೆಯು ಸಾಮಾಜಿಕ ಜಾಗೃತಿಯನ್ನು ಮತ್ತು ಮಾನವೀಯತೆ ಉಳಿಸಿಕೊಳ್ಳುವ ಗುರಿಯನ್ನು ಪಡೆಯಬೇಕಾಗಿದೆ ಎಂಬ ಸರಳ ಸತ್ಯವನ್ನು ವಿವಿಧ ದೇಶಗಳ ವ್ಯಂಗ್ಯಚಿತ್ರಕಾರರು ತಮ್ಮ ವ್ಯಂಗ್ಯಚಿತ್ರದ ಮೂಲಕ ಬಿಂಬಿಸಿದ್ದಾರೆ.
ಬೌದ್ಧಿಕ ನೆಲೆಯಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ವ್ಯಾಖ್ಯಾನಿಸುವಾಗ ಸೃಜನಶೀಲತೆ ಮತ್ತು ಮಾನವೀಯ ಸಂವೇದನೆಯನ್ನು ಕಡೆಗಣಿಸಲಾಗುವುದಿಲ್ಲ.

ಇಲ್ಲಿನ ವ್ಯಂಗ್ಯಚಿತ್ರಗಳು  ಕೇವಲ ಸಾಂವಿಧಾನಿಕ ಕಾನೂನು ಚೌಕಟ್ಟಿಗೆ ಒಳಪಟ್ಟಿಲ್ಲ. ಆಯಾ ದೇಶಗಳು ನೀಡಿರುವ ಸಂವಿಧಾನ ಹಕ್ಕು, ಅದರ ದಮನ, ಜನರ ಬಂಡಾಯ ಪ್ರವೃತ್ತಿ, ಸಮಾಜದ ಅಂಕುಡೊಂಕುಗಳನ್ನು ಪ್ರತಿನಿಧಿಸುತ್ತವೆ.  ಕಾಲ ಮತ್ತು ದೇಶದ ಗೊಡವೆ ಇಲ್ಲದೆ ಈ ವ್ಯಂಗ್ಯಚಿತ್ರಗಳು ಸಮಾಜದ ಪ್ರತಿಬಿಂಬಗಳಾಗಿ ಎಲ್ಲರ ಗಮನ ಸೆಳೆಯುತ್ತವೆ.  

ಕಲಾವಿದರು: ವಿವಿಧ ದೇಶಗಳ ವ್ಯಂಗ್ಯಚಿತ್ರಕಾರರು
ಉದ್ಘಾಟನೆ: ಏಪ್ರಿಲ್ 29ರಂದು
ಬೆಳಿಗ್ಗೆ 11.30ಕ್ಕೆ
ಸ್ಥಳ: ಭಾರತೀಯ ವ್ಯಂಗ್ಯಚಿತ್ರ ಗ್ಯಾಲರಿ,
        ಎಂ.ಜಿ. ರಸ್ತೆ, ಟ್ರಿನಿಟಿ ವೃತ್ತದ ಬಳಿ
ಸಮಯ: ಬೆಳಿಗ್ಗೆ 11ರಿಂದ ಸಂಜೆ 5
ಅವಧಿ: ಮೇ 20ರವರೆಗೆ ಪ್ರದರ್ಶನ
ಪ್ರವೇಶ: ಉಚಿತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.