ADVERTISEMENT

‘ಲವ್ ಇಂಡಿಯಾ’ದ ಪ್ರೀತಿ ಸೇತುವೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2017, 19:30 IST
Last Updated 13 ಫೆಬ್ರುವರಿ 2017, 19:30 IST
‘ಲವ್ ಇಂಡಿಯಾ’ದ ಪ್ರೀತಿ ಸೇತುವೆ
‘ಲವ್ ಇಂಡಿಯಾ’ದ ಪ್ರೀತಿ ಸೇತುವೆ   

‘ನಗರದಲ್ಲಿ ಪ್ರೀತಿಸಿ ಮದುವೆಯಾದವರು ಬಹಳಷ್ಟಿದ್ದಾರೆ. ಕೆಲವರು ಮನೆಯವರನ್ನು ಒಪ್ಪಿಸಿ ಮದುವೆಯಾದರೆ, ಎಲ್ಲವನ್ನೂ, ಎಲ್ಲರನ್ನೂ ಧಿಕ್ಕರಿಸಿ  ಮದುವೆಯಾದವರೂ ಇದ್ದಾರೆ. ಮತ್ತೆ ಕೆಲವರಿಗೆ ಪ್ರೀತಿಸಲೂ ಹಕ್ಕಿಲ್ಲದಂತೆ ನಡೆಸಿಕೊಳ್ಳಲಾಗುತ್ತಿದೆ.

ಇದೆಲ್ಲವನ್ನೂ ಗಮನಿಸಿ, ಪ್ರೀತಿಸುವ ಮನಸುಗಳಿಗೆ ಆತ್ಮವಿಶ್ವಾಸ ತುಂಬಲು, ಸುತ್ತಲಿನ ಸಮಾಜದಲ್ಲಿ ಪ್ರೀತಿ ಪಸರಿಸುವ ಉದ್ದೇಶದಿಂದ ‘ಲವ್‌ ಇಂಡಿಯಾ’ ಎನ್ನುವ ಸಂಘಟನೆ ಆರಂಭಿಸಿದೆವು’  ಎನ್ನುತ್ತಾರೆ ಸಂಘಟನೆಯ ಪದಾಧಿಕಾರಿ ಕಾವ್ಯಾ ಅಚ್ಯುತ.

‘ನಾವು ಆಚರಿಸುವ ಪ್ರೇಮಿಗಳ ದಿನಾಚರಣೆಯಲ್ಲಿ ಯಾರು ಬೇಕಾದರೂ ಮುಕ್ತವಾಗಿ ಪಾಲ್ಗೊಳ್ಳಬಹುದು. ಭಾರತೀಯ ಸಮಾಜದಲ್ಲಿ ಪ್ರೀತಿಗೆ ಮುಕ್ತ ಅವಕಾಶವಿದೆ. ಅದನ್ನು ಕೆಲವರು ತಪ್ಪಾಗಿ ಅರ್ಥೈಸುತ್ತಿದ್ದಾರೆ ಅಷ್ಟೇ. ನಮ್ಮ ಸುತ್ತಮುತ್ತಲಿನ ಜನರಲ್ಲಿ ಮನುಷ್ಯ ಪ್ರೀತಿಯ ಬಗ್ಗೆ ಅರಿವು ಮಾಡಿಸುವುದೇ ನಮ್ಮ ಉದ್ದೇಶ’ ಎನ್ನುತ್ತದೆ ಲವ್ ಇಂಡಿಯಾ.

‘ಕಳೆದ ವರ್ಷದಿಂದ ನಾವು ಪ್ರೇಮಿಗಳ ದಿನ ಆಚರಿಸುತ್ತಿದ್ದೇವೆ. ಕಳೆದ ಬಾರಿ ಕರ್ನಾಟಕ ಚಿತ್ರಕಲಾ ಪರಿಷತ್‌ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ 200 ಮಂದಿ ಬಂದಿದ್ದರು. ಅಂತರ್ಜಾತೀಯ ವಿವಾಹಿತರು ತಮ್ಮ ಪ್ರೇಮಕಥನದ ಅನುಭವ ಹಂಚಿಕೊಂಡಿದ್ದರು.

ತೃತೀಯ ಲಿಂಗಿಗಳೂ ತಮ್ಮ ಪ್ರೀತಿಯ ಸಂಕಷ್ಟವನ್ನು ಹೇಳಿಕೊಂಡಿದ್ದರು. ಅದಕ್ಕೆಲ್ಲಾ ನಮ್ಮ ಸಂಘಟನೆ ವೇದಿಕೆಯಾಗಿದೆ ಎಂಬುದೇ ನಮ್ಮ ಹೆಮ್ಮೆ’ ಎನ್ನುತ್ತಾರೆ ಸಂಘಟಕರಾದ ಅಬ್ಬಾಸ್ ಕಿಗ್ಗ.

‘ನಮ್ಮ ಜತೆ ಸಾಹಿತಿಗಳು, ಸಿನಿಮಾ ನಟರು, ಪತ್ರಕರ್ತರು, ಅಂತರ್ಜಾತಿ ವಿವಾಹಿತರು, ಹೋರಾಟಗಾರರು, ಅಭಿಮತ, ಭೂಮ್ತಾಯಿ ಬಳಗ, ಮಾನವ ಮಂಟಪ, ಮಾನವ ಬಂಧುತ್ವ, ಪರಿವರ್ತನಾ ಸೇರಿದಂತೆ ಅನೇಕ ಸಂಘಟನೆಗಳೂ ಕಾರ್ಯಕ್ರಮಕ್ಕೆ ಕೈಜೋಡಿಸುತ್ತವೆ.

ಪ್ರತಿವರ್ಷ ಪ್ರೇಮಿಗಳ ದಿನದಂದು ಸಂಜೆ ಎಲ್ಲರೂ ಒಂದೆಡೆ ಸೇರಿ ಹಾಡಿ, ಕುಣಿದು, ನಲಿದು, ಪರಸ್ಪರ ಪ್ರೀತಿ–ಪ್ರೇಮದ ಮಾತುಗಳನ್ನು ಹಂಚಿಕೊಂಡು, ಊಟ ಮಾಡಿ ಬೀಳ್ಕೊಡುತ್ತೇವೆ. 

ಈ  ಕಾರ್ಯಕ್ರಮದಲ್ಲಿ ನೆಲ ಸಂಸ್ಕೃತಿಯ ದೇಸಿ ಪ್ರೇಮದ ಹಾಡುಗಳಿರುವುದು ವಿಶೇಷ. ‘ದ್ವೇಷದ ಗೋಡೆಗಳ ಕೆಡವೋಣ, ಪ್ರೀತಿಯ ಸೇತುವೆ ನಿರ್ಮಿಸೋಣ, ಬನ್ನಿ ಶತ್ರುಗಳಿಗೂ ಪ್ರೀತಿ ಕಲಿಸೋಣ’ ಎಂಬುದು ಲವ್ ಇಂಡಿಯಾದ ಉದ್ದೇಶ ಎನ್ನುತ್ತಾರೆ ಸಂಘಟನೆಯ ಪದಾಧಿಕಾರಿಗಳು. 

ಪ್ರೇಮಿಗಳ ದಿನಾಚರಣೆ: ಆಯೋಜನೆ– ಲವ್ ಇಂಡಿಯಾ, ಸ್ಥಳ: ಕರ್ನಾಟಕ ಚಿತ್ರಕಲಾ ಪರಿಷತ್ತು, ಕುಮಾರಕೃಪಾ ರಸ್ತೆ ಮಂಗಳವಾರ ಸಂಜೆ 5.30

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.