ADVERTISEMENT

ಲಾಲ್‌ಬಾಗ್‌ ಬಂಡೆಗೆ ಕಸದ ರಾಶಿಯ ಚೆಲ್ಲಿ!

ಸತೀಶ ಬೆಳ್ಳಕ್ಕಿ
Published 27 ಏಪ್ರಿಲ್ 2015, 19:30 IST
Last Updated 27 ಏಪ್ರಿಲ್ 2015, 19:30 IST

ಸಂದರ್ಭ– 1
‘ಭಾರತವೇ ಒಂದು ತೋಟ ಎನ್ನುವುದಾದರೆ ಬೆಂಗಳೂರಿನ ಲಾಲ್‌ಬಾಗ್‌ ಅದರ ಹೃದಯ’– ಎಂದು ಕಾವ್ಯಮಯವಾಗಿ ಲಾಲ್‌ಬಾಗ್‌ನ ಸೌಂದರ್ಯವನ್ನು ಕೊಂಡಾಡಿದ್ದು ಯುಗೋಸ್ಲಾವಿಯಾದ ಅಧ್ಯಕ್ಷ ಮಾರ್ಷಲ್‌ ಟಿಟೊ. ಅವರು 1955ರಲ್ಲಿ ಉದ್ಯಾನ ನಗರಿಗೆ ಭೇಟಿ ನೀಡಿದ್ದರು.

ಸಂದರ್ಭ– 2
ಪರ್ಯಾಯ ಭಾಗದ ಪರಿಮಿಶ್ರ ಜಾತಿಯ ಶಿಲೆಗಳನ್ನು ಭೂವಿಜ್ಞಾನಿಗಳು ‘ಪೆನಿನ್‌ಸುಲರ್‌ ನೈಸ್‌’ ಎಂದು ಕರೆಯುತ್ತಾರೆ. 1916ರಲ್ಲಿ ಮೈಸೂರಿನ ಭೂವಿಜ್ಞಾನಿಯಾಗಿದ್ದ ಡಾ. ಡಬ್ಲ್ಯೂ. ಎಫ್‌.ಸ್ಮಿತ್‌ ಅವರು ಈ ಮಾದರಿಯ ಶಿಲೆಗೆ ಈ ಹೆಸರನ್ನು ನೀಡಿದ್ದರು. ಲಾಲ್‌ಬಾಗ್‌ನಲ್ಲಿರುವ ಪೆನಿನ್‌ಸುಲರ್‌ ಬಂಡೆ ಸುಮಾರು 300 ಕೋಟಿ ವರ್ಷಗಳ ಹಿಂದೆಯೇ ಉತ್ಪನ್ನವಾಗಿರುವುದು ಎಂದು ಸಂಶೋಧನೆಯಿಂದ ದೃಢಪಟ್ಟಿದೆ.

ಸೃಷ್ಟಿಯಲ್ಲಿನ ಅತಿ ಪ್ರಾಚೀನ ಶಿಲಾ ರೂಪಗಳಲ್ಲಿ ಇದೂ ಒಂದು. ಈ ಬಗೆಯ ಶಿಲೆಗಳ ಪುರಾತನತೆಯು ಪ್ರಪಂಚದ ಅನೇಕ ಭೂವಿಜ್ಞಾನಿಗಳ ಗಮನ ಸೆಳೆದಿದೆ. ಅನೇಕ ವೈಜ್ಞಾನಿಕ ಲೇಖನಗಳಿಗೆ ಆಧಾರವಾಗಿವೆ. ಹಾಗೆಯೇ, ಭೂಗರ್ಭ ವಿಜ್ಞಾನದ ವಿವಿಧ ವಿಭಾಗಗಳ ಸಂಶೋಧನೆಗಳಿಗೆ ಸ್ಫೂರ್ತಿಯಾಗಿದೆ. – ಈ ಮೇಲಿನ ಎರಡು ಮಾತುಗಳೂ ಲಾಲ್‌ಬಾಗ್‌ ಹಾಗೂ ಅಲ್ಲಿರುವ ಬಂಡೆಯ ಹಿರಿಮೆಯನ್ನು ಎತ್ತಿಹಿಡಿಯುತ್ತವೆ.

ಲಾಲ್‌ಬಾಗ್‌ನಲ್ಲಿರುವ ಗಿಡ–ಮರಗಳ ಪೋಷಣೆ ತಕ್ಕಮಟ್ಟಿಗೆ ಚೆನ್ನಾಗಿದೆ. ಆದರೆ, ಇಲ್ಲಿರುವ ಬಂಡೆಗೆ ಈಗ ಆಪತ್ತು ಎದುರಾಗಿದೆ. 300 ಕೋಟಿ ವರ್ಷಗಳಷ್ಟು ಹಳೆಯದಾದ ಈ ಬಂಡೆಯ ಮಹತ್ವದ ಬಗ್ಗೆ ಅರಿವಿಲ್ಲದವರು ಅದರ ಮೇಲೆ ಕಟ್ಟಡ ತ್ಯಾಜ್ಯ ಹಾಗೂ ಕಸ ಸುರಿಯಲು ಅನುವು ಮಾಡಿಕೊಟ್ಟು ತಿಪ್ಪೆಗುಂಡಿ ಮಾಡುತ್ತಿದ್ದಾರೆ. ಇದು ಹೀಗೆಯೇ ಮುಂದುವರಿದರೆ ಮುಂದೊಂದು ದಿನ ಇಡೀ ಬಂಡೆ ಕಟ್ಟಡ ಒಡೆದ ತ್ಯಾಜ್ಯದಿಂದ ಮುಚ್ಚಿಹೋಗುವ ಅಪಾಯವಿದೆ. ಆಗ ಕೊನೆಯಲ್ಲಿ ಉಳಿಯುವುದು ಬಂಡೆಯ ಭೂಶಿರ ಮಾತ್ರ. 

ಲಾಲ್‌ಬಾಗ್‌ನಲ್ಲಿ ನಡೆಯುವ ಫಲಪುಷ್ಪ ಪ್ರದರ್ಶನ ಲಕ್ಷಾಂತರ ಜನರನ್ನು ಆಕರ್ಷಿಸಿರುವಂತೆ, ಇಲ್ಲಿರುವ ಬೃಹತ್‌ ಬಂಡೆಯೂ ಸೂಕ್ಷ್ಮ ಸಂವೇದನೆಯುಳ್ಳ ಪರಿಸರಪ್ರಿಯರ ಮನಗೆದ್ದಿದೆ. ಇಲ್ಲಿಗೆ ನಿತ್ಯ ವಾಯುವಿಹಾರಕ್ಕೆಂದು ಬರುವ ಜನರು ಅಭಿಪ್ರಾಯಪಡುವಂತೆ, ಪ್ರಕೃತಿಪ್ರಿಯರು ಬೆಳ್ಳಂಬೆಳಿಗ್ಗೆ ಇಲ್ಲಿಗೆ ಬಂದು ಸೂರ್ಯೋದಯದ ಸಮಯದಲ್ಲಿ ಸೃಷ್ಟಿಯಾಗುವ ಚೆಲುವನ್ನು ಕಣ್ಣಲ್ಲೇ ಸೂರೆಗೊಂಡು, ಹೃದಯಕ್ಕಿಳಿಸಿಕೊಂಡು ಹಿಗ್ಗುತ್ತಾರೆ. ಫಿಟ್‌ನೆಸ್‌ ಕಾಳಜಿಯುಳ್ಳ ಜನರು ಇಲ್ಲಿ ಕಸರತ್ತು ನಡೆಸುತ್ತಾರೆ.

ಇನ್ನು, ವಯಸ್ಸಾದವರು ತಮ್ಮ ಮೆತ್ತನೆಯ ಪಾದಗಳನ್ನು ಬಂಡೆಯ ಗಟ್ಟಿ ಮೈಮೇಲೆ ಊರುತ್ತಾ ಆರೋಗ್ಯ ಗಟ್ಟಿ ಮಾಡಿಕೊಳ್ಳುತ್ತಾರೆ. ಬಂಡೆಯ ಸುತ್ತಮುತ್ತ ಇರುವ ಮರಗಳಲ್ಲಿ ಹದ್ದು, ಪಾರಿವಾಳಗಳು ವಾಸ ಮಾಡುತ್ತವೆ. ನಾಯಿಗಳು ಬಂಡೆ ಮೇಲೆ ಹೊರಳಾಡುತ್ತವೆ, ಮಲಗಿ ಮೈ ಕಾಯಿಸಿಕೊಳ್ಳುತ್ತವೆ. ಹೀಗೆ ಇಲ್ಲಿ ಬಂಡೆ, ಮನುಷ್ಯ, ಪಕ್ಷಿ ಹಾಗೂ ಪ್ರಾಣಿಗಳನ್ನೊಂಡಂತೆ ಒಂದು ಭಾವನಾತ್ಮಕ ಸರಪಳಿ ನಿರ್ಮಾಣಗೊಂಡಿದೆ.

ಬಂಡೆ ಸಂರಕ್ಷಣೆಯ ಜರೂರು
ಲಾಲ್‌ಬಾಗ್‌ನಲ್ಲಿರುವ ಬಂಡೆ ಅಪೂರ್ವವಾದದ್ದು. ಆದರೆ, ಅದರ ಅರಿವು ಅನೇಕರಿಗಿಲ್ಲ. ಈ ಬಗೆಯ ಬಂಡೆ ಏನಾದರೂ ಪಾಶ್ಚಿಮಾತ್ಯ ದೇಶದಲ್ಲಿ ಇದ್ದಿದ್ದರೆ ಅದನ್ನು ಮುಂದಿನ ಪೀಳಿಗೆಗಾಗಿ ಜತನದಿಂದ ಕಾಯ್ದು ಕೊಳ್ಳುತ್ತಿದ್ದರು. ಸಂಶೋಧನೆಗೆ ಪ್ರೇರಣೆಯಾಗಿಸಿ ಕೊಳ್ಳುತ್ತಿದ್ದರು. ‘ಇದು 300 ಕೋಟಿ ವರ್ಷದ ಬಂಡೆ ಎಂದು ತಿಳಿದಿದ್ದರೂ ಅದನ್ನು ರಕ್ಷಿಸುವ ನಿಟ್ಟಿನಲ್ಲಿ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ. ಕಾವಲು ಗೋಪುರದ ಹಿಂಬದಿಯಲ್ಲಿರುವ ದೊಡ್ಡ ಹಳ್ಳ ಅವರಿಗೆ ಅಂದಗೆಟ್ಟ ತಾಣ ಎಂದೆನ್ನಿಸಿದೆ.

ಬೆಳಗಿನ ಹೊತ್ತು ಈ ಸ್ಥಳಕ್ಕೆ ಬಂದು ನಿಂತರೆ ಅಲ್ಲಿ ಸೃಷ್ಟಿಯಾಗುವ ಚೆಲುವು ಜೀವಕ್ಕೆ ಮುದ ನೀಡುತ್ತದೆ. ನಾನು ಕಳೆದ ಮೂವತ್ತು ವರ್ಷಗಳಿಂದ ಈ ಸ್ಥಳಕ್ಕೆ ವಾಕಿಂಗ್‌ಗೆ ಬರುತ್ತಿದ್ದೇನೆ. ವಾಕಿಂಗ್‌ ಮಾಡುವ ಹಾದಿಯಲ್ಲೆಲ್ಲಾ ಪುಟ್ಟ ಪುಟ್ಟ ಕೀಟಗಳು ಪರೇಡ್‌ ನಡೆಸುತ್ತಿದ್ದವು. ಪ್ರಾಣಿ ಪಕ್ಷಿಗಳು ಸ್ವಚ್ಛಂದವಾಗಿ ವಿಹರಿಸುತ್ತಿದ್ದವು. ಆದರೆ, ಈಗ ಇಲ್ಲಿನ ಚಿತ್ರಣ ಸಂಪೂರ್ಣ ಬದಲಾಗಿದೆ.

ಬಂಡೆಯ ಮಹತ್ವ ತಿಳಿಯದವರು, ಸೂಕ್ಷ್ಮ ಸಂವೇದನೆ ಇಲ್ಲದವರು ಇದೊಂದು ಯಕಃಶ್ಚಿತ್‌ ಬಂಡೆ, ಅದರ ಪಕ್ಕದಲ್ಲಿ ಇರುವುದೆಲ್ಲವೂ ಹಾಳು ಜಾಗ ಎಂದು ನಿರ್ಧರಿಸಿ ಅಲ್ಲಿ ಕಟ್ಟಡ ತ್ಯಾಜ್ಯ ಸುರಿಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಇದನ್ನು ಈ ಕೂಡಲೇ ನಿಲ್ಲಿಸಬೇಕು. ಕೋಟ್ಯಂತರ ವರ್ಷಗಳ ಇತಿಹಾಸವಿರುವ ಬಂಡೆಯನ್ನು ಸಂರಕ್ಷಿಸ ಬೇಕು’ ಎನ್ನುತ್ತಾರೆ ಹಿರಿಯ ನಾಗರಿಕ ಪುರುಷೋತ್ತಮ್‌ ದಾಸ್‌.

ಸಸ್ಯಕಾಶಿ ಪಕ್ಷಿಕಾಶಿಯೂ ಆಗಲಿ
ಬೆಂಗಳೂರಿನ ಭೌಗೋಳಿಕ ನೆಲೆ ಸಮುದ್ರ ಮಟ್ಟದಿಂದ 1000 ಮೀಟರ್‌ ಎತ್ತರದಲ್ಲಿರುವುದರಿಂದ ಇಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ತಂಪು ಹವೆ ಇದೆ. ಇವೆಲ್ಲವೂ ತೋಟಗಾರಿಕೆಗೆ, ಉದ್ಯಾನಗಳ ಅಭಿವೃದ್ಧಿಗೆ ನಿಸರ್ಗ ನೀಡಿರುವ ಕೊಡುಗೆ. ಬೆಂಗಳೂರನ್ನು ಆಳಿದವರು ಈ ಭೌಗೋಳಿಕ ಅನುಕೂಲಗಳನ್ನು ಮನಗಂಡು ಇಲ್ಲಿ ಉದ್ಯಾನಗಳನ್ನು ಮಾಡಿ ಸೌಂದರ್ಯ ಸಾಧನೆಯ ಪರಂಪರೆ ಬೆಳೆಸಿದರು.

ಸಸ್ಯಕಾಶಿಯಾಗಿರುವ ಲಾಲ್‌ಬಾಗ್‌ ಅನ್ನು ಪಕ್ಷಿಕಾಶಿಯಾಗಿಸುವ ನಿಟ್ಟಿನಲ್ಲೂ ಯೋಚಿಸಬೇಕಿದೆ. ವಿವಿಧ ಪಕ್ಷಿಗಳು ಸಾವಿರಾರು ಮೈಲು

ದೂರದಿಂದ ಸಂತಾನಾಭಿವೃದ್ಧಿಗೆಂದು ರಂಗನತಿಟ್ಟಿಗೆ ಬರುತ್ತವೆ. ಅಲ್ಲಿ ಪಕ್ಷಿಗಳ ಸಂತಾಭಿವೃದ್ಧಿಗೆ ಪೂರಕವಾಗುವ ವಾತಾವರಣವಿದೆ. ಅದೇ ರೀತಿ, ಲಾಲ್‌ಬಾಗ್‌ನಲ್ಲಿರುವ ಕೆರೆಗೆ ಹೊಂದಿಕೊಂಡಂತೆ ಪಕ್ಷಿಗಳ ಸಂತಾನಾಭಿವೃದ್ಧಿಗೆ ಪೂರವಾಗುವ ವಾತಾವರಣ ನಿರ್ಮಿಸಬೇಕು. ಆ ನಿಟ್ಟಿನಲ್ಲಿ ಅಧ್ಯಯನ ನಡೆಸಬೇಕು. ಒಂದು ವೇಳೆ ಇಲ್ಲಿ ಪಕ್ಷಿಗಳಿಗೆ ಅನುಕೂಲವಾಗುವಂತಹ ವಾತಾವರಣ ಸೃಷ್ಟಿಸಿದ್ದೇ ಆದರೆ, ಲಾಲ್‌ಬಾಗ್‌ನಲ್ಲೂ ವಿದೇಶಿ ಪಕ್ಷಿಗಳ ಮರಿಗಳ ಚಿಲಿಪಿಲಿ ಸದ್ದು ಅನುರಣಿಸುತ್ತದೆ. 

ಹಣ್ಣಿನ ಗಿಡ ಬೆಳೆಸುವತ್ತ ಯೋಚಿಸಬೇಕು
ಲಾಲ್‌ಬಾಗ್‌ನಲ್ಲಿ ಹಣ್ಣಿನ ಮರಗಳನ್ನು ಬೆಳೆಸಬೇಕು. ಮರ ಹತ್ತಿ ಹಣ್ಣು ಕಿತ್ತು ತಿನ್ನುವ ಹುಡುಗರ ಸಂಖ್ಯೆ ಈಗ ಕಡಿಮೆ ಇದೆ. ಹಾಗಾಗಿ, ಇಲ್ಲಿ ಹಣ್ಣಿನ ಗಿಡಗಳನ್ನು ಬೆಳೆಸಿದರೆ ಅದರಿಂದ ಹಕ್ಕಿ ಪಕ್ಷಿಗಳಿಗೆ ಊಟವೂ ಸಿಗುತ್ತದೆ. ಉದ್ಯಾನದ ಚೆಲುವೂ ಇಮ್ಮಡಿಸುತ್ತದೆ. ಅದೇರೀತಿ, ವಾರಾಂತ್ಯಗಳಲ್ಲಿ ಕುಟುಂಬ ಸಮೇತರಾಗಿ ಲಾಲ್‌ಬಾಗ್‌ಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಿದೆ. ಆದರೆ, ಇಲ್ಲಿ ಮಕ್ಕಳಿಗೆ ಆಟವಾಡಲು ಬೇಕಿರುವ ಆಟದ ಸಾಮಗ್ರಿಗಳೇ ಇಲ್ಲ.

ಹಾವು–ಏಣಿ, ಉಯ್ಯಾಲೆ, ಜಾರುಬಂಡೆಗಳನ್ನು ನಿರ್ಮಿಸಿದರೆ ಮಕ್ಕಳು ಖುಷಿ ಪಡುತ್ತಾರೆ. ಒಟ್ಟಾರೆಯಾಗಿ, ಲಾಲ್‌ಬಾಗ್‌ ಉದ್ಯಾನ ಹಾಗೂ ಅಲ್ಲಿರುವ ಬಂಡೆಗೆ ಅಪ್ರತಿಮ ನೈಸರ್ಗಿಕ ಚೆಲುವಿದೆ. ಅದನ್ನು ಕಾಯ್ದುಕೊಳ್ಳುವ ಹೊಣೆಗಾರಿಯನ್ನು ಎಲ್ಲರೂ ಪ್ರದರ್ಶಿಸಬೇಕಿದೆ. ಬಂಡೆಯ ಸುತ್ತಮುತ್ತ ಖಾಲಿ ಜಾಗವಿದೆ ಮಣ್ಣು ತುಂಬಿಸಿ ಅದನ್ನು ಮಟ್ಟಮಾಡುವುದು ಸರಿಯಲ್ಲ. ಪರಿಸರ ಪ್ರೀತಿ ಇಲ್ಲದ ನಿರ್ಭಾವುಕರು ಮಾತ್ರ ಇಂತಹ ಕೆಲಸ ಮಾಡುತ್ತಾರೆ.

ತ್ಯಾಜ್ಯ ತುಂಬುತ್ತಲೇ ಹೋದರೆ ಕೊನೆಗೊಂದು ದಿನ ಇಡೀ ಬಂಡೆಯೇ ಗೋರಿ ಆಗಿಬಿಡುತ್ತದೆ. ಹಾಗಾಗುವ ಮುನ್ನ ಎಚ್ಚೆತ್ತುಕೊಳ್ಳಬೇಕು. 300 ಕೋಟಿ ವರ್ಷಗಳ ಬಂಡೆಯನ್ನು ಮುಂದಿನ ಪೀಳಿಗೆಗೆ ಸಂರಕ್ಷಿಸಿ ಇಡಬೇಕು ಎಂಬ ಅರಿವು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ಮನಸ್ಸಿನಲ್ಲಿ ಈಗಲಾದರೂ ಮೂಡುವುದೇ? ಕಾಯ್ದು ನೋಡೋಣ.

ಭಿನ್ನ ಹೇಳಿಕೆಗಳು
‘ಲಾಲ್‌ಬಾಗ್‌ನಲ್ಲಿರುವ ಕೆಂಪೇಗೌಡ ಗೋಪುರದ ಹಿಂಬದಿಯ ಬಂಡೆಯ ಬಳಿ ಕಟ್ಟಡ ತ್ಯಾಜ್ಯ ಅಥವಾ ಕಸ ತಂದು ಸುರಿಯಲು ಯಾರಿಗೂ ಅವಕಾಶ ಮಾಡಿಕೊಟ್ಟಿಲ್ಲ. 2003ರಲ್ಲಿ ಲಾಲ್‌ಬಾಗ್‌ ಕೆರೆಯ ಹೂಳೆತ್ತಲು ಕ್ರಮ ಕೈಗೊಳ್ಳಲಾಗಿತ್ತು. ಆ ಸಂದರ್ಭದಲ್ಲಿ ದೊರೆತ ಹೂಳನ್ನು ತಂದು ಅಲ್ಲಿ ಸುರಿಯಲಾಗಿತ್ತಷ್ಟೇ. ಆನಂತರದಲ್ಲಿ ಅಲ್ಲಿಗೆ ಯಾವುದೇ ರೀತಿಯ ಕಸ ಸುರಿದಿಲ್ಲ’ ಎನ್ನುತ್ತಾರೆ  ಲಾಲ್‌ಬಾಗ್‌ನ ಉದ್ಯಾನ ವಿಭಾಗದ ಡೆಪ್ಯುಟಿ ಡೈರೆಕ್ಟರ್‌ ಗುಣವಂತ. 

ಆದರೆ, ಪುರುಷೋತ್ತಮ ದಾಸ್‌ ಅವರು ಹೇಳುವುದೇ ಬೇರೆ. ‘ಮೊನ್ನೆ ಮೊನ್ನೆಯವರೆಗೂ ಇಲ್ಲಿಗೆ ತ್ಯಾಜ್ಯ ತಂದು ಸುರಿಯುತ್ತಿದ್ದಾರೆ.  ಯಾವ್ಯಾವ ದಿನಗಳಲ್ಲಿ ಇಲ್ಲಿಗೆ ಕಸ ತಂದು ಸುರಿದಿದ್ದಾರೆ ಎಂಬ ಬಗ್ಗೆ ನನ್ನ ಬಳಿ ಚಿತ್ರಸಹಿತ ದಾಖಲೆಗಳಿವೆ’ ಎನ್ನುತ್ತಾರೆ ಅವರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT