ADVERTISEMENT

ವಿಜಯನಗರ ಕಲಾ ಶೈಲಿಯೂ ಭಕ್ತಿಭಾವವೂ...

ಅಭಿಲಾಷ್ ಎಸ್‌.ಡಿ.
Published 23 ಜುಲೈ 2017, 19:30 IST
Last Updated 23 ಜುಲೈ 2017, 19:30 IST
ವಿಜಯನಗರ ಕಲಾ ಶೈಲಿಯೂ ಭಕ್ತಿಭಾವವೂ...
ವಿಜಯನಗರ ಕಲಾ ಶೈಲಿಯೂ ಭಕ್ತಿಭಾವವೂ...   

ಮೈಸೂರು ರಾಜ್ಯದಲ್ಲಿ ರಾಜರ ಆಡಳಿತವಿದ್ದಾಗ ಅಂದಿನ ಅರಸ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಮತ್ತು ತಮ್ಮ ವಂಶಸ್ಥರ ಭಾವಚಿತ್ರಗಳನ್ನು ಬರೆಸಲು ನಿರ್ಧರಿಸಿದ್ದರು. ಅದರಂತೆ ತಂಜಾವೂರಿನ ಹಲವು ಜನ ಪ್ರಸಿದ್ಧ ಕಲಾವಿದರಿಗೆ ಆಹ್ವಾನ ನೀಡಿದರು. ಒಡೆಯರ ಕರೆಗೆ ಓಗೊಟ್ಟು ರಾಜ್ಯ ಬಿಟ್ಟು ಮೈಸೂರಿಗೆ ಬಂದ ಕಲಾವಿದರಿಗೆಲ್ಲಾ ಶ್ರೀರಂಗಪಟ್ಟಣ ಬಳಿಯ ಗಂಜಾಂನಲ್ಲಿ ವಸತಿ ಕಲ್ಪಿಸಿಕೊಡಲಾಯಿತು.

ಕಲಾವಿದರ ಕಸುಬುಗಾರಿಕೆ ಶುರುವಾದ ಕೆಲವೇ ದಿನಗಳಲ್ಲಿ ಅರಮನೆಯ ಗೋಡೆಗಳ ಮೇಲೆ ರಾಜರ ಚಿತ್ರಗಳು ಬಣ್ಣದಲ್ಲಿ ರಾರಾಜಿಸತೊಡಗಿದವು. ಇದರಿಂದ ಪುಳಕಿತರಾದ ಒಡೆಯರು ಕಲಾವಿದರಿಗೆ ಸಕಲ ಗೌರವವನ್ನೂ ನೀಡಿ ಸತ್ಕರಿಸಿದರು.

ಅರಮನೆ ಗೋಡೆಗಳಲ್ಲಿನ ಚಿತ್ರಪಟಗಳಲ್ಲಿ ಮೂಡಿದ್ದ ಕಲಾವಿದರ ಕೈಚಳಕದ ಮೇಲೆ ಜನ ಸಾಮಾನ್ಯರ ಕಣ್ಣು ಬಿದ್ದ ನಂತರ ಚಿತ್ರ ಬರಹಕ್ಕೆ ಮತ್ತೊಂದು ವೇದಿಕೆ ಸಿದ್ದವಾಯಿತು. ವ್ಯಕ್ತಿ ಚಿತ್ರಕ್ಕಷ್ಟೇ ಸೀಮಿತವಾದಂತೆ ಇದ್ದ ಈ ಕಲೆಯಲ್ಲಿ ಶಕ್ತಿ ದೇವತೆಗಳೂ ಅರಳಬೇಕೆಂದು ಒತ್ತಾಯಿಸಿದರು. ನಂತರ ನಿಧಾನವಾಗಿ ಶ್ರೀರಾಮಚಂದ್ರನ ಪಟ್ಟಾಭಿಷೇಕದಿಂದ ಆರಂಭವಾಗಿ ಸಂಪೂರ್ಣವಾಗುವ ತನಕ ರಾಮಾಯಣದ ಒಂದೊಂದೇ ಪ್ರಸಂಗಗಳು ಚಿತ್ರಕಲೆಯಲ್ಲಿ ಮೇಳೈಸತೊಡಗಿದವು. ಇದರೊಂದಿಗೆ ಈ ಕಲೆ ಮೈಸೂರು ಭಾಗದಲ್ಲಿ ಪಸರಿಸಿತು.

ADVERTISEMENT

–ಚಿತ್ರಕಲಾ ಪರಿಷತ್‌ನಲ್ಲಿ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಮೇಳವನ್ನು ಆಯೋಜಿಸಿರುವ ವಿಷ್ಣು ಆರ್ಟ್ಸ್‌ನ ವಿಠಲ್‌ ಅವರು ತಾಂಜಾವೂರು ಶೈಲಿಯ ಚಿತ್ರಕಲೆ ಬೆಳೆದು ಬಂದ ಬಗೆಯನ್ನು ವಿವರಿಸಿದ್ದು ಮೇಲಿನಂತೆ.

ಈ ಪ್ರಕಾರದ ಕಲೆಯ ಮೂಲ ವಿಜಯನಗರ ಸಾಮ್ರಾಜ್ಯ ಎನ್ನುವ ಇವರು ಮುಂಬೈ, ಚೆನ್ನೈ ಸೇರಿದಂತೆ ಒಟ್ಟು 8 ಬಾರಿ ಮೇಳ ಆಯೋಜಿಸಿದ್ದಾರೆ. ಕಲಾವಿದರಾದ ಟಿ.ನರಸೀಪುರದ ಶ್ರೀಹರಿ, ಮೈಸೂರಿನ ರಾಮಕೃಷ್ಣ ಮತ್ತು ದಿನೇಶ್ ಅವರು ರಚಿಸಿದ ಚಿತ್ರಪಟಗಳು ಈ ಬಾರಿ ನಗರದ ಚಿತ್ರಕಲಾ ಪರಿಷತ್ ಆವರಣದಲ್ಲಿ ಪ್ರದರ್ಶನಕ್ಕಿವೆ.

ಜಲವರ್ಣದಲ್ಲಿ ರಚಿಸಲಾಗಿರುವ 85ಕ್ಕೂ ಹೆಚ್ಚು ಚಿತ್ರಗಳು ಇಲ್ಲಿದ್ದು, ಮಹಿಷಾಸುರನನ್ನು ಕೊಂದ ನಾಡದೇವತೆ ಚಾಮುಂಡೇಶ್ವರಿಯ ಆವೇಶಕ್ಕೂ, ಭಗವಂತನನ್ನೇ ಗೇಲಿ ಮಾಡಲು ಕಾಮಬಾಣ ಹೂಡಿದ ಮನ್ಮಥನ ತುಂಟತನಕ್ಕೂ, ಸಾಯಿಬಾಬಾರ ದಿವ್ಯಮೌನಕ್ಕೂ ಕುಂಚದ ರೇಖೆಗಳು ರೂಪಕೊಟ್ಟಿವೆ.

ಜತೆಗೆ ರಾಮಾಯಣ, ಮಹಾಭಾರತ, ಸಮುದ್ರ ಮಂಥನದಂತಹ ಪುರಾಣ ಕಥೆಗಳನ್ನೂ ಹೇಳುತ್ತಾ ಭಕ್ತಿ ಭಾವವನ್ನು ಮೂಡಿಸುತ್ತವೆ. ಪ್ರತಿ ಚಿತ್ರದಲ್ಲಿರುವ ದೇವರ ಮೈಮೇಲಿನ ಆಭರಣಗಳು ಶುದ್ಧ ಚಿನ್ನದ ಲೇಪನ ಹೊಂದಿದ್ದು ಹಾಳಾಗುವುದಿಲ್ಲ ಎಂಬುದು ಇವುಗಳ ಮುಖ್ಯ ಆಕರ್ಷಣೆ.

*

ಕೊನೆಯ ದಿನ: ಜುಲೈ, 24

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.