ADVERTISEMENT

ವಿಭಿನ್ನ ಪರಿಕಲ್ಪನೆಯ ಕಲಾಕುಂಚ

ಕಲಾಪ

ರೇಷ್ಮಾ ಶೆಟ್ಟಿ
Published 26 ಆಗಸ್ಟ್ 2016, 19:30 IST
Last Updated 26 ಆಗಸ್ಟ್ 2016, 19:30 IST
ಶ್ರೀನಾಥ ಬಿದರೆ ಅವರ ಕಲಾಕೃತಿ
ಶ್ರೀನಾಥ ಬಿದರೆ ಅವರ ಕಲಾಕೃತಿ   

ಅದೊಂದು ಕಪ್ಪುಬಿಳುಪಿನ ಚಿತ್ರ.  ಸಾಮಾನ್ಯ ಕಣ್ಣಿಗೆ ಆ ಚಿತ್ರಗಾರನ ಕಲ್ಪನೆ ಅರ್ಥವಾಗುವುದು ಕಷ್ಟವಾದರೂ ಚಿತ್ರದೊಳಗಿನ ಸಾರ ಮಾತ್ರ ಭಿನ್ನ. ಚಾಪೆಯ ನೇಯ್ಗೆಯಂತೆ ಕಾಣುವ ಚಿತ್ರ ಆಕಾಶಕ್ಕೆ ಚಾಪೆ ಹಿಡಿದಂತೆ ಕಾಣುತ್ತಿದೆ.

ಇನ್ನೊಂದು ಚಿತ್ರದಲ್ಲಿ ಕುದುರೆಯ ಮೇಲೆ ಹೆಣ್ಣು ಇದು ಕಲಾವಿದನ ಕಲ್ಪನೆಯಲ್ಲಿ ಮೂಡಿಬಂದ ಹೆಣ್ಣು ಹಾಗೂ ಕುದುರೆಯ ಸಾಮ್ಯತೆಯನ್ನು ತಮ್ಮದೇ ಪರಿಕಲ್ಪನೆಯಲ್ಲಿ ಚಿತ್ರಿಸಿದ್ದಾರೆ. ಈ ಚಿತ್ರಗಳೆಲ್ಲಾ ಕಂಡು ಬಂದಿದ್ದು ನಗರದ ವೆಂಕಟಪ್ಪ ಆರ್ಟ್‌ ಗ್ಯಾಲರಿಯಲ್ಲಿ.

ಆಗಸ್ಟ್‌ 30ರವರೆಗೆ ನಡೆಯಲಿರುವ ಈ ಚಿತ್ರಕಲಾ ಪ್ರರ್ದಶನದಲ್ಲಿ ಶ್ರೀನಾಥ ಬಿದರೆ ಹಾಗೂ ದೀಪಕ್ ಸುತ್ತಾರ್ ಅವರ ಕಲಾಕೃತಿಗಳು ಪ್ರದರ್ಶನಗೊಂಡಿವೆ.
ಹವ್ಯಾಸಿ ಕಲಾವಿದರಾದ ಈ ಇಬ್ಬರು ಕಲಾವಿದರು ಜಾಹೀರಾತು ವಿಭಾಗದಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರಕೃತಿ ಹಾಗೂ ಪ್ರಾಣಿ–ಪಕ್ಷಿಗಳು ಇವರ ಕಲಾಕೃತಿಗಳಲ್ಲಿ  ಅವರದೇ ಆದ ಮನೋಪರಿಕಲ್ಪನೆಯಲ್ಲಿ ಮೂಡಿಬಂದಿವೆ.

ಬೆಂಗಳೂರಿನವರೇ ಆದ ಶ್ರೀನಾಥ ಬಿದರೆ ದಾವಣಗೆರೆಯ ಲಲಿತಕಲಾ ಮಹಾವಿದ್ಯಾಲಯದಲ್ಲಿ  ಕಲಾಪದವಿ ಪಡೆದವರು. ಅವರ ತಾಯಿಗೆ ಸಂಗೀತ ಹಾಗೂ ಕಲೆಯಲ್ಲಿ ವಿಶೇಷ ಆಸಕ್ತಿ ಇತ್ತು. ಹಾಗಾಗಿ ಶ್ರೀನಾಥ ಅವರ ಒಲವು ಕಲೆಯೆಡೆಗೆ ಆಕಸ್ಮಿಕವಾಗಿ ಹರಿಯಿತಾದರೂ ಕೂಡ ಅವರು ಸ್ವ ಆಸಕ್ತಿಯಿಂದ ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿವರು.

ಪ್ರಕೃತಿಯ ವಿವಿಧ ಆಯಾಮಗಳನ್ನೇ ಮುಖ್ಯವಾಗಿ ಚಿತ್ರಿಸುವ ಇವರು  ಈ ಬಾರಿ ಕಪ್ಪುಬಿಳುಪಿನ ಚಿತ್ರಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಸಂಗೀತ ಹಾಗೂ ರಾಗದ ಪರಿಕಲ್ಪನೆ ಇವರ ಚಿತ್ರಗಳಲ್ಲಿ ಕಾಣಬಹುದು. ಹೇರ್ ಡೈ ಮಾಧ್ಯಮವನ್ನು ಸತೀಶ್ ತಮ್ಮ ಚಿತ್ರಗಳಲ್ಲಿ ಅಳವಡಿಸಿರುವುದು ಅವರ ವಿಶೇಷ. ಇವರು ಇಲ್ಲಿಯವರೆಗೆ ಸುಮಾರು 5 ಪ್ರದರ್ಶನಗಳಲ್ಲಿ ತಮ್ಮ ಚಿತ್ರಗಳನ್ನು ಪ್ರದರ್ಶಿಸಿದ್ದಾರೆ.

ಮತ್ತೊಬ್ಬ ಕಲಾವಿದ ದೀಪಕ್ ಸುತ್ತಾರ್‌ ಅವರ ಕುಟುಂಬದವರು ಮರದ ಕೆತ್ತನೆಯ ಕೆಲಸ ಮಾಡುತ್ತಿದ್ದವರು. ಮೂಲತಃ ಬಡಗಿಗಳಾದ ಇವರ ಕುಟುಂಬದವರು ಮರದ ತುಂಡಿನಲ್ಲಿ ಅನೇಕ ವಿನ್ಯಾಸಗಳನ್ನು ಮಾಡುತ್ತಿದ್ದರು. ಇದನ್ನೇ ನೋಡುತ್ತಾ ಬೆಳೆದ ದೀಪಕ್‌ ಅವರಿಗೆ ಕಲೆ ತಾನಾಗಿ ಒಲಿದಿತ್ತು.

ಅಲ್ಲದೇ ಅವರ ತಂದೆ ಪೇಪರ್ ಡ್ರಾಯಿಂಗ್ ಕೂಡ ಮಾಡುತ್ತಿದ್ದರು. ಬಾಲ್ಯದಿಂದಲೇ ಚಿತ್ರಕಲೆಯಲ್ಲಿ  ಇದ್ದ ಆಸಕ್ತಿ ಇಂದಿಗೂ ಅವರು ಚಿತ್ರಕಲೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವಂತೆ ಮಾಡಿದೆ.

ಕುದುರೆ ಮತ್ತು ಮಹಿಳೆಯನ್ನು ಮುಖ್ಯ ಪರಿಕಲ್ಪನೆಯಾಗಿಸಿಕೊಂಡು ಇವರು ಚಿತ್ರ ರಚಿಸಿದ್ದಾರೆ. ಹೆಣ್ಣು ಮತ್ತು ಕುದುರೆಯ ನಡುವೆ ಒಂದು ಸಾಮತ್ಯೆ ಇದೆ. ಅಲ್ಲದೇ ಹೆಣ್ಣು ಹಾಗೂ ಕುದುರೆ ಎರಡರಲ್ಲೂ ಒಂದು ಗೌಪ್ಯ ಶಕ್ತಿಯಿದೆ. ಹಾಗಾಗಿ, ಹೆಣ್ಣು ಹಾಗೂ ಕುದುರೆ ಎರಡನ್ನು ಒಂದೇ ಚಿತ್ರದಲ್ಲಿ ಸಮೀಕರಿಸಿ ಚಿತ್ರಿಸಿದ್ದೇನೆ ಎಂದು ತಮ್ಮ ಚಿತ್ರಗಳ ಪರಿಕಲ್ಪನೆಯನ್ನು ತಿಳಿಸುತ್ತಾರೆ.

ಯುಎಸ್‌ (ಯೂನಿಕ್ ಸ್ಟ್ರೋಕ್‌ ಎಂಬ ಹೆಸರಿನ ಈ ಚಿತ್ರಕಲಾ ಪ್ರದರ್ಶನದಲ್ಲಿ ಒಂದು ಭಿನ್ನ ನೋಟದ  ಚಿತ್ರಗಳು ನೋಡುಗರ ಗಮನ ಸೆಳೆಯುತ್ತದೆ.

ಹೆಣ್ಣಿನ ಒಳ ಮನಸ್ಸು, ಸಂಗೀತದ ಆಲಾಪದ ಸೆಲೆಯ ಚಿತ್ರಗಳು ಶ್ರೀನಾಥ್ ಹಾಗೂ ದೀಪಕ್ ಅವರ ಕಲೆಯ ಅಭಿರುಚಿಯನ್ನು ಚಿತ್ರೀಕರಿಸುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.