ADVERTISEMENT

ವೀಣಾ ಚತುರೆಯ ಸಂಗೀತ ಸಂವಾದ

ಪ್ರಜಾವಾಣಿ ವಿಶೇಷ
Published 22 ಮೇ 2014, 19:30 IST
Last Updated 22 ಮೇ 2014, 19:30 IST
ಜಯಂತಿ ಕುಮರೇಶ್‌ ಚಿತ್ರ: ಎಸ್.ಕೆ.ದಿನೇಶ್‌
ಜಯಂತಿ ಕುಮರೇಶ್‌ ಚಿತ್ರ: ಎಸ್.ಕೆ.ದಿನೇಶ್‌   

ಪಾಶ್ಚಾತ್ಯ ಸಂಗೀತಕ್ಕೆ ವಯಲಿನ್‌, ಕೊಳಲು ಮತ್ತಿತರ ವಾದ್ಯ ಸಂಗೀತೋಪಕರಣಗಳು ಒಗ್ಗಿಕೊಂಡಷ್ಟು ವೀಣೆ ಒಗ್ಗಿಕೊಂಡಿಲ್ಲ. ಅದು ಭಾರತೀಯ ಶಾಸ್ತ್ರೀಯ ಸಂಗೀತದ ಪಾರಂಪರಿಕ ಕೊಂಡಿಯಾಗಿ ಸಾಂಪ್ರದಾಯಿಕ ಚೌಕಟ್ಟಿನೊಳಗೆ ಉಳಿದಿರುವುದೇ ಹೆಚ್ಚು. ಈಗಿನ ಮಕ್ಕಳು ಇತರ ವಾದ್ಯೋಪಕರಣಗಳನ್ನು ಕಲಿಯಲು ತೋರುವ ಆಸಕ್ತಿಯನ್ನು ವೀಣೆ ಕಲಿಕೆಗೆ ತೋರುತ್ತಿಲ್ಲ ಎಂಬ ಆರೋಪವೂ ಇದೆ. ಆದರೆ ಜಯಂತಿ–ಕುಮರೇಶ್‌ ದಂಪತಿ ವೀಣೆ, ವಯಲಿನ್‌ ಅಷ್ಟೇ ಅಲ್ಲ ಕೊಳಲು, ಕೀಬೋರ್ಡ್‌, ನಾಗಸ್ವರ ಮುಂತಾದುವುಗಳ ಕಲಿಕೆ ಮತ್ತು ಕಮ್ಮಟಗಳಿಗೂ ನಿರಂತರ ಪ್ರೋತ್ಸಾಹ ನೀಡುತ್ತಿರುವುದು ಗಮನಾರ್ಹ.

ಪ್ರಸ್ತುತ, ಭೂಮಿಜಾ ಸಂಸ್ಥೆ ಹಮ್ಮಿಕೊಳ್ಳಲಿರುವ ‘ಜಾಕ್‌ಫ್ರೂಟ್‌’ ವಾದ್ಯ ಸಂಗೀತೋತ್ಸವಕ್ಕೆ ದೇಶದೆಲ್ಲೆಡೆಯಿಂದ ವಿದ್ಯಾರ್ಥಿಗಳನ್ನು ಕಲೆಹಾಕಿಕೊಟ್ಟ ಖುಷಿಯಲ್ಲಿದ್ದಾರೆ ಈ ದಂಪತಿ. ಈ ಹಿನ್ನೆಲೆಯಲ್ಲಿ ಜಯಂತಿ ಅವರೊಂದಿಗೆ ನಡೆದ ಮೆಟ್ರೊ ಮಾತು...

ವೀಣೆಯನ್ನು ತಪಸ್ಸಿನಷ್ಟು ಶ್ರದ್ಧೆಯಿಂದ ಕಲಿತವರು ನೀವು. ಈಗಿನ ಮಕ್ಕಳು ವೀಣೆ ಕಲಿಕೆಗೆ ಅಷ್ಟಾಗಿ ಆಸಕ್ತಿ ತೋರುತ್ತಿಲ್ಲ ಎಂಬ ಆರೋಪವಿದೆಯಲ್ಲ?
ಇಲ್ಲ. ವೀಣೆಗೂ ಇತರ ಸಂಗೀತೋಪಕರಣಗಳಿಗೆ ಸಿಗುವಷ್ಟೇ ಆದ್ಯತೆ ಸಿಗುತ್ತಿದೆ. ಈಗಿನ ಮಕ್ಕಳಿಗೆ ಅಕಾಡೆಮಿಕ್‌ ಶಿಕ್ಷಣದ ಒತ್ತಡವೇ ಹೆಚ್ಚಿರುತ್ತದೆ. ಹಾಗಾಗಿ ಒಂದೋ ಎರಡೋ ಪಠ್ಯೇತರ ಚಟುವಟಿಕೆಗಳನ್ನು ಆಯ್ದುಕೊಳ್ಳುವ ಕಾರಣ ಹೊರಗಿನಿಂದ ಗಮನಿಸುವವರಿಗೆ ಹಾಗನಿಸಬಹುದು.

ಆದರೆ ಫ್ಯೂಷನ್‌ ಮ್ಯೂಸಿಕ್‌ನಲ್ಲಿ ವಯಲಿನ್‌ ಬಳಕೆಯಾದಷ್ಟು ವೀಣೆ ಬಳಕೆಯಾಗಿಲ್ಲ ಅಲ್ವೇ?
ಹಾಗೇನಿಲ್ಲ. ವೀಣೆಯೂ ಬಳಕೆಯಾಗಿದೆ. ಆದರೆ ವೀಣೆಯನ್ನು ಅದೇ ಸಾಂಪ್ರದಾಯಿಕ ಚೌಕಟ್ಟಿನಲ್ಲಿಯೇ ನಾವು ನೋಡುತ್ತಿದ್ದೇವೆ.

ರಿಯಾಲಿಟಿ ಷೋಗಳು ನೃತ್ಯ ಮತ್ತು ಗಾಯನ ಕೇಂದ್ರಿತವಾಗುತ್ತಿವೆ. ವಾದ್ಯ ಸಂಗೀತದ ಬಗ್ಗೆ ಷೋಗಳು ಬರದಿರಲು ನಿಮ್ಮ ಪ್ರಕಾರ ಕಾರಣವೇನು?
ನಿಜ. ವಾದ್ಯ ಸಂಗೀತವನ್ನೇ ಕೇಂದ್ರವಾಗಿಟ್ಟುಕೊಂಡು ರಿಯಾಲಿಟಿ ಷೋ ನಡೆದಿಲ್ಲ. ನಾನೂ ಕುಮರೇಶ್‌ ಈ ಬಗ್ಗೆ ಸಾಕಷ್ಟು ಬಾರಿ ಚರ್ಚಿಸಿದ್ದಿದೆ. ಅಷ್ಟೇ ಅಲ್ಲ ಕೆಲವೊಂದು ವಾಹಿನಿಗಳನ್ನು ನಾವು ಖುದ್ದಾಗಿ ಸಂಪರ್ಕಿಸಿ ಅಂತಹುದೊಂದು ಷೋ ಯಾಕೆ ಮಾಡಬಾರದು ಎಂದು ವಿನಂತಿಸಿದ್ದೇವೆ. ಆದರೆ ಅಂತಹ ಷೋಗೆ ಎಷ್ಟು ಜಾಹೀರಾತು ಸಂಪಾದಿಸಬಹುದು ಮತ್ತು ಅದು ತಮ್ಮ ಟಿಆರ್‌ಪಿ ಹೆಚ್ಚಿಸಲು ಹೇಗೆ ಸಹಕಾರಿಯಾದೀತು ಎಂಬ ಕಮರ್ಷಿಯಲ್‌ ಪ್ರಶ್ನೆಯನ್ನು ಮುಂದಿಟ್ಟರು!

ನಮ್ಮ ಬೇಸರವನ್ನು ಗಮನಿಸಿ ಸ್ಪಿಕ್‌ಮೆಕೆಯವರು ವಾದ್ಯ ಸಂಗೀತಕ್ಕೆಂದೇ ರಾಷ್ಟ್ರೀಯ ಮಟ್ಟದ ಸ್ಪರ್ಧೆ ಏರ್ಪಡಿಸಿದರು. ಅಷ್ಟರಮಟ್ಟಿಗೆ ಸಮಾಧಾನವಾಯಿತು.

ಸ್ವಂತ ದೊಡ್ಡಮ್ಮನ ಮನೆಯಲ್ಲಿ ಗುರುಕುಲ ಪದ್ಧತಿಯಲ್ಲಿ ಕಲಿತವರು ನೀವು. ಹೇಗಿತ್ತು ಅನುಭವ?
ಹೌದು. ನಾನು ಆಗಿನ್ನೂ ಮೂರು ವರ್ಷದ ಮಗು. ಆಗಲೇ ನನ್ನನ್ನು ಪದ್ಮಾವತಿ ದೊಡ್ಡಮ್ಮನ ಕೈಗೆ ಶಿಷ್ಯೆಯಾಗಿ ಒಪ್ಪಿಸಿದರು ನಮ್ಮಮ್ಮ. ನಮ್ಮದು ಏಳು ತಲೆಮಾರಿನ ಸಂಗೀತ ಕುಟುಂಬ. ಸಂಗೀತವೆನ್ನುವುದು ನಮ್ಮ ರಕ್ತದಲ್ಲೇ ಬಂದಿತ್ತು. ಆದರೂ ಮೂರೇ ವರ್ಷಕ್ಕೆ ದೊಡ್ಡಮ್ಮನ ಮನೆಗೆ ಬಂದವಳಿಗೆ ಗುರುಕುಲ ಪದ್ಧತಿಯಲ್ಲಿ ಕಲಿಕೆ ಶುರುವಾಯ್ತು. ತಂತಿಯನ್ನು ಹೇಗೆ ಮೀಟಿದೆನೋ ಗೊತ್ತಿಲ್ಲ. 18 ವರ್ಷ ಅವರಲ್ಲಿ ಕಲಿತೆ. ಅದೊಂದು ತಪಸ್ಸು.

ದೈವಿಕ ವಾದ್ಯ ವೀಣೆಯನ್ನು ರಾಕ್ಷಸರಂತೆ ಕಲೀಬೇಕು ಅಂತ ನಿಮ್ಮ ಗುರು ಡಾ.ಎಸ್.ಬಾಲಚಂದರ್ ಹೇಳುತ್ತಿದ್ದರಂತೆ?
ಬಾಲಚಂದರ್‌ ಅವರು ಶ್ರೇಷ್ಠ ವೈಣಿಕ. ಪದ್ಮಾವತಿ ದೊಡ್ಡಮ್ಮನ ಗುರುಗಳು. ಅವರ ಪಾಂಡಿತ್ಯ, ನುಡಿಸಾಣಿಕೆಯಲ್ಲಿನ ಸೊಬಗು ಬಲ್ಲ ದೊಡ್ಡಮ್ಮ ಬಾಲಚಂದರ್‌ ಸರ್‌ ಅವರ ಶಿಷ್ಯತ್ವ ನನಗೂ ಪ್ರಾಪ್ತಿಯಾಗಬೇಕು ಎಂದು ಬಯಸಿ ಅವರಲ್ಲಿ ಕರೆದುಕೊಂಡು ಹೋದರು. ವೀಣಾ ವಾದನದಲ್ಲಿನ ತಂತ್ರಗಾರಿಕೆ ಮತ್ತು ಆವಿಷ್ಕಾರಗಳಿಗೆ ಜಗತ್ಪ್ರಸಿದ್ಧರಾದವರು.

ಇಬ್ಬರೂ ಒಂದೇ ವೇದಿಕೆಯಲ್ಲಿ ಒಬ್ಬರಿಗೊಬ್ಬರು ಸಾಥ್‌ ಕೊಡುವ ಸಂದರ್ಭದಲ್ಲಿ ಕುಮರೇಶ್‌ ಅವರನ್ನು ಯಾವ ಭಾವದಲ್ಲಿ ಕಾಣುತ್ತೀರಿ?
ಕುಮರೇಶ್‌ ಒಬ್ಬ ಕಲಾವಿದರಾಗಿಯಷ್ಟೇ ನನ್ನ ಕಣ್ಣಿಗೆ ಕಾಣುತ್ತಾರೆ. ಗಂಡ ಹೆಂಡತಿ ಅನ್ನೋ ಭಾವ ಒಳಗಿದ್ದರೂ ವೇದಿಕೆಯಲ್ಲಿ ಆ ಆಕರ್ಷಣೆ ಅಥವಾ ಪ್ರಭಾವ ಬಾಧಿಸುವುದಿಲ್ಲ. ಇದು ಇಬ್ಬರಿಗೂ ಅನ್ವಯವಾಗುವ ಮಾತು.

ಜುಗಲ್‌ಬಂದಿಯಲ್ಲಿ?
ಜುಗಲ್‌ಬಂದಿ ಎನ್ನುವುದು ಇಬ್ಬರು ಕಲಾವಿದರ ಪಾಂಡಿತ್ಯ, ಪರಿಣತಿಯನ್ನು ಪ್ರಸ್ತುತಪಡಿಸುವ ಅವಕಾಶವಾಗಿ ಪರಿಣಮಿಸುವುದೇ ಹೆಚ್ಚು. ಅಂತಹುದೊಂದು ಭಾವ ಇಬ್ಬರಲ್ಲಿ ಒಬ್ಬರಿಗೆ ಬಂದರೂ ಅಲ್ಲಿ ಸಂವಾದಿ ಪ್ರಸ್ತುತಿಯ ನೆಪದಲ್ಲಿ ಪಾಂಡಿತ್ಯದ  ಮೇಲಾಟವಾಗುತ್ತದೆ. ಆದರೆ ನಮ್ಮಿಬ್ಬರಲ್ಲಿ ಅಂತಹ ಇಗೋ ಕ್ಲ್ಯಾಶ್‌ ಎಂದೂ ಆಗಿಲ್ಲ. ಯಾಕೆಂದರೆ ಮೊದಲು ನಾವಿಬ್ಬರೂ ಸರಸ್ವತಿಯ ಆರಾಧಕರು. ನಂತರ ಗಂಡ ಹೆಂಡತಿ.

ಕುಮರೇಶ್‌ ಮತ್ತು ನಾನು ಜುಗಲ್‌ಬಂದಿ ಕಛೇರಿ ನಡೆಸುವಾಗ ಅವರ ನುಡಿಸಾಣಿಕೆ ಶ್ರೀಮಂತವಾಗಿ ಮೂಡಿಬಂದರೆ ನಾನು ಕಣ್ಣಲ್ಲೇ, ಹುಬ್ಬಿನಲ್ಲೇ ಅಭಿನಂದಿಸುತ್ತೇನೆ. ತಲೆಯಾಡಿಸಿ ಭೇಷ್‌ ಭೇಷ್‌ ಅಂತ ಹುರಿದುಂಬಿಸುತ್ತೇನೆ. ನನ್ನ ವಿಚಾರದಲ್ಲಿ ಅವರೂ ಹಾಗೇ ಮಾಡುತ್ತಾರೆ. ಅದನ್ನು ‘ಸಂವಾದ’ ಅನ್ನುತ್ತೇವೆ.

ಬೆಂಗಳೂರಿನಲ್ಲಿ ಬದುಕು ಹೇಗಿದೆ?
ಅಬ್ಬಾ ಚೆನ್ನೈನಷ್ಟು ಸೆಕೆ ಇಲ್ಲ. ಬೆಂಗಳೂರಿನಲ್ಲಿ ಸಾಂಸ್ಕೃತಿಕ ವಾತಾವರಣ ವ್ಯಾಪಕವಾಗುತ್ತಿದೆ.  ಇಲ್ಲಿ ನಡೆಯುವಷ್ಟು ಸಾಂಸ್ಕೃತಿಕ ಚಟುವಟಿಕೆಗಳು ಅದರಲ್ಲೂ ಸಂಗೀತ ಸಂಬಂಧಿ ಕಾರ್ಯಕ್ರಮಗಳು, ಕಾರ್ಯಾಗಾರಗಳು ಚೆನ್ನೈನಲ್ಲೂ ನಡೆಯುತ್ತಿರಲಿಲ್ಲ. ಇಲ್ಲಿನವರ ಶ್ರದ್ಧೆ, ಬದ್ಧತೆಗೆ ತಲೆಬಾಗಲೇಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.