ADVERTISEMENT

ಶಿವ ಮೆಚ್ಚದ ಡಯಟ್‌!

ರೋಹಿಣಿ ಮುಂಡಾಜೆ
Published 24 ಫೆಬ್ರುವರಿ 2017, 2:57 IST
Last Updated 24 ಫೆಬ್ರುವರಿ 2017, 2:57 IST
ಶಿವ ಮೆಚ್ಚದ ಡಯಟ್‌!
ಶಿವ ಮೆಚ್ಚದ ಡಯಟ್‌!   
ಧ್ಯಾನ ಉಪವಾಸದ ಮೂಲಕ ದೇಹ ದಂಡನೆ ಮಾಡುತ್ತಾ ಉಪಾಸನೆ ಮಾಡುವುದು ಮಹಾಶಿವರಾತ್ರಿಯ ಅಜೆಂಡಾ.  ಶಿವನನ್ನು ಒಲಿಸಿಕೊಳ್ಳಬೇಕಾದರೆ ಉಪವಾಸದೊಂದಿಗೆ ಧ್ಯಾನ ಮಾಡಬೇಕು. ರಾತ್ರಿ ಕಳೆದು ಮೂರನೇ ಯಾಮದ ಪೂಜೆವರೆಗೂ ಕಣ್ಣೆವೆ ಮುಚ್ಚಬಾರದು ಎಂಬ ಖಡಕ್‌ ಕಂಡಿಷನ್‌ಗಳನ್ನು ಹಾಕಿಕೊಂಡು ಶಿವರಾತ್ರಿಗೆ ಕೆಲವರು ಸಜ್ಜಾಗುತ್ತಿರಬಹುದು.
 
ಆದರೆ, ಆರೋಗ್ಯದ ಸಮಸ್ಯೆ ಇರುವವರು, ವಯೋವೃದ್ಧರು ಹೀಗೆ ಮಾಡುವುದು ಸರಿಯಲ್ಲ. ಅದರಲ್ಲೂ ರಕ್ತದೊತ್ತಡ, ಮಧುಮೇಹ, ಅನೀಮಿಯಾ, ಜ್ವರ, ಹೃದಯ ಸಂಬಂಧಿ ತೊಂದರೆ ಇರುವವರು, ಗರ್ಭಿಣಿಯರ ಹೊಟ್ಟೆ ದಿನವಿಡೀ ಬಣಬಣ ಅಂದರೆ ಮರುದಿನ ಅನಾರೋಗ್ಯದಿಂದ ಬಳಲುವುದು ಶತಸಿದ್ಧ ಎಂಬುದು ವೈದ್ಯರ  ಕಿವಿಮಾತು. ಅವರ ಪ್ರಕಾರ, ಇದು ಶಿವ ಮೆಚ್ಚದ ಡಯಟ್‌.
 
ಗಿರಿನಗರದ ‘ಆರೋಗ್ಯ ಮಂದಿರ’ದ  ಡಾ.ಜ್ಯೋತಿ ಅವರ ಪ್ರಕಾರ, ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರು ತರಕಾರಿ ಮತ್ತು ಆಯ್ದ ಹಣ್ಣುಗಳ ರಸಗಳ ಸೇವನೆಯೊಂದಿಗೆ ಧ್ಯಾನ ಮಾಡುವುದು ಉತ್ತಮ. ಇದು ಧಾರ್ಮಿಕ ಮತ್ತು ಚಿಕಿತ್ಸಾತ್ಮಕ ಉಪಾಸನೆಯಾಗುತ್ತದೆ.
 
‘ನಮ್ಮ ಶರೀರ ಪ್ರತಿದಿನ ನಿಗದಿತ ವೇಳೆಯಲ್ಲಿ ಆಹಾರ ಸೇವನೆ ಮತ್ತು ಜೀರ್ಣಕ್ರಿಯೆಗೆ ಹೊಂದಿಕೊಂಡಿರುತ್ತದೆ. ಹಠಾತ್ತನೆ ಕಠಿಣ ಉಪವಾಸ ಇರುತ್ತೇವೆ ಎಂದರೆ ಶರೀರದ ಜೈವಿಕ ವ್ಯವಸ್ಥೆ ಏರುಪೇರು ಆಗುತ್ತದೆ. ಹೊಟ್ಟೆ ಬಣಬಣ ಎಂದರೆ ವಾಯು ತುಂಬಿಕೊಳ್ಳುತ್ತದೆ. ಮಧುಮೇಹ, ರಕ್ತದೊತ್ತಡ, ಹೃದಯದ ತೊಂದರೆ ಇರುವವರು ಮತ್ತು ಗರ್ಭಿಣಿಯರಿಗೆ ಆಹಾರ ಸೇವನೆಗೆ ಶಿಸ್ತು ಇರುತ್ತದೆ. ಉಪವಾಸ ಎಂದು ಕೆಲವರು ಔಷಧಿ ಕೂಡಾ ಸೇವಿಸುವುದಿಲ್ಲ. ಇದು ಖಂಡಿತಾ ತಪ್ಪು. ಇದರಿಂದ ತಲೆಸುತ್ತು, ವಾಂತಿ, ವಾಕರಿಕೆ, ವಾಯುಪ್ರಕೋಪ, ನಿಶ್ಶಕ್ತಿ ಹೀಗೆ ಬೇರೆ ಬೇರೆ ಸಮಸ್ಯೆಗಳನ್ನು ನಾವಾಗಿ ಎಳೆದುಕೊಂಡಂತಾಗುತ್ತದೆ’ ಎಂಬುದು ಅವರು ನೀಡುವ ಎಚ್ಚರಿಕೆ.
 
ಸೌತೆಕಾಯಿ, ನವಿಲುಕೋಸು, ಕ್ಯಾರೆಟ್‌ ಜ್ಯೂಸ್‌ ಸೇವನೆ ಮಾಡುತ್ತಾ ಶಿವಧ್ಯಾನ ಮಾಡುವುದು ಒಳ್ಳೆಯದು. ಉಪವಾಸ ಇರುವಾಗ ಹಣ್ಣು ಮಾತ್ರ ಸೇವನೆ ಮಾಡಬಹುದು ಎಂದು ಕೆಲವರು  ನಂಬಿದ್ದಾರೆ. ಆದರೆ ಹಣ್ಣಿಗಿಂತಲೂ ತರಕಾರಿ ರಸ ಸೇವನೆ ಶ್ರೇಷ್ಠ. ಸೌತೆಕಾಯಿಯನ್ನು ತೆಳುವಾಗಿ ಕತ್ತರಿಸಿ ಒಂದು ಪಾತ್ರೆಗೆ ಅಥವಾ ಜಗ್‌ಗೆ ಹಾಕಿಟ್ಟು ಅದಕ್ಕೆ ಸಿಪ್ಪೆ ತೆಗೆದ ಏಲಕ್ಕಿಯನ್ನು  ಹಾಕಿಡಬೇಕು. ದಾಹ ಅಥವಾ ಹಸಿವು ಎನಿಸಿದಾಗ ಈ ನೀರನ್ನು ರಾಕ್‌ಸಾಲ್ಟ್‌/ ಹಿಮಾಲಯನ್‌ ಸಾಲ್ಟ್‌ ಬೆರೆಸಿ ಸೇವಿಸಬೇಕು ಎಂಬುದು ಅವರ ಸಲಹೆ.
 
ಉಪವಾಸದ ವೇಳೆ ಕಾಫಿ ಸೇವನೆ ಬಿಲ್‌ಕುಲ್‌ ಬೇಡ ಎನ್ನುತ್ತಾರೆ ಡಾ. ಜ್ಯೋತಿ. ಇದರಿಂದ ಹೊಟ್ಟೆ ಉರಿ,  ಗ್ಯಾಸ್‌ಟ್ರಬಲ್‌ ಹೆಚ್ಚುತ್ತದೇ ವಿನಾ ಆರೋಗ್ಯಕಾರಿ ಅಲ್ಲ ಎಂಬುದು ಅವರ ವಿವರಣೆ.
 
ಹಣ್ಣುಗಳ ಪೈಕಿ ಪಪಾಯ (ಪರಂಗಿ) ಹೊರತು ಇತರ ಹಣ್ಣುಗಳ ಸೇವನೆ ಓಕೆ.  ಪರಂಗಿಹಣ್ಣು  ಹಸಿವನ್ನು ಹೆಚ್ಚಿಸುತ್ತದೆ, ಏನಾದರೂ ತಿನ್ನಬೇಕು ಎಂದು ಪ್ರಚೋದಿಸುತ್ತದೆ ಎಂಬುದು ಇದಕ್ಕೆ ಕಾರಣ.
 
ಶಿವೋಪಾಸನೆಯಿಂದ ನಮ್ಮಲ್ಲಿನ ತಾಮಸ ಗುಣಕ್ಕೆ (ನೆಗೆಟಿವಿಟಿ) ಕಡಿವಾಣ ಮತ್ತು ಸಾತ್ವಿಕ (ತಾಳ್ಮೆ/ ಪಾಸಿಟಿವಿಟಿ) ಗುಣದ ವೃದ್ಧಿ ಎಂದು ಹಿರಿಯರು ಹೇಳುತ್ತಾರೆ. ಹಸಿವನ್ನು ಸಹಿಸಿಕೊಳ್ಳಲು ಸಾಧ್ಯವಾಗದೇ ಹೋದಾಗ ಮನಸ್ಸು ಪ್ರಕ್ಷುಬ್ಧವಾಗಲಾರಂಭಿಸುತ್ತದೆ. ಇದರಿಂದ   ಜಾಗರಣೆ ಮತ್ತು ಉಪವಾಸದ ಏಕಾಗ್ರತೆಗೆ ಭಂಗ ಬರುತ್ತದೆ.
 
ವೈದ್ಯರು ಹೇಳುವ ಪ್ರಕಾರ, ಸೊಗದೆ ಬೇರಿನ ರಸ, ಮಜ್ಜಿಗೆ ಡಯಟ್‌, ಬೇಲದ ಹಣ್ಣಿನ ರಸದ ಸೇವನೆ ಶಿವೋಪಾಸನೆ ವೇಳೆ ಶ್ರೇಷ್ಠ. ಬೇಸಿಗೆಯ ಬೇಗೆಗೆ ಹೊಟ್ಟೆ ಉರಿ, ಉಬ್ಬರ ಹಾಗೂ ಪಿತ್ಥ ಪ್ರಕೋಪ ಹೆಚ್ಚುವ ಕಾರಣ ಎಳನೀರಿಗೆ ನಿಂಬೆರಸ, ಏಲಕ್ಕಿ ಮತ್ತು ರಾಕ್‌ಸಾಲ್ಟ್‌ ಬೆರೆಸಿ ಕುಡಿಯುವುದರಿಂದಲೂ ಹೆಚ್ಚಿನ ಉಪಯೋಗವಿದೆ.
 
ಕೆಲವರು ಸಾಯಾಂಕಾಲ ಪೂಜೆ ಮುಗಿಸಿ ಪ್ರಸಾದ ತಿಂದು ಗಸಗಸೆ ಪಾಯಸ ಕುಡಿಯುವ ಮೂಲಕ ಉಪವಾಸ ಮುಗಿಸುತ್ತಾರೆ. ಅಲ್ಲದೆ ಸಿಹಿಕುಂಬಳಕಾಯಿ ಪ್ಯಾನ್ ಕೇಕ್ ಮತ್ತು ಸೋರೆಕಾಯಿ ಹಲ್ವಾ ಸೇವಿಸುವುದೂ ಇದೆ. ಒಟ್ಟಿನಲ್ಲಿ, ಅನಾರೋಗ್ಯ ಹಾಗೂ  ಉಪವಾಸ ಮಾಡಬಾರದ ಪರಿಸ್ಥಿತಿಯಲ್ಲಿ  ದೇಹ ದಂಡನೆಯ ಉಪವಾಸ ಸೂಕ್ತವಲ್ಲ ಎಂಬುದು ವೈದ್ಯರ ಕಾಳಜಿ.
 
ಕೊಬ್ಬೂ ಕರಗಿಸಿಕೊಳ್ಳಿ
ಶಿವಾರಾಧನೆಯನ್ನು ಆರೋಗ್ಯಕರ ರೀತಿಯಲ್ಲಿ ಮಾಡುವುದೇ ಸೂಕ್ತ. ಜಾಗರಣೆ, ಉಪವಾಸದ ವೇಳೆ ಘನ ಆಹಾರ ಸೇವನೆ, ಧಾನ್ಯಗಳ ಆಹಾರ ಬಹುತೇಕ ನಿಷಿದ್ಧ. ಆದರೆ ದ್ರವಾಹಾರವನ್ನು ಯಾರು ಬೇಕಾದರೂ ಸೇವಿಸಬಹುದು ಎನ್ನುತ್ತಾರೆ ವೈದ್ಯರು.

ಅದರಲ್ಲೂ ಕೊಬ್ಬನ್ನೂ ಕರಗಿಸಿಕೊಂಡು ಉಪವಾಸ ಮಾಡಲು ಬಯಸುವವರು ಹಸಿವು, ನಿಶ್ಶಕ್ತಿ ಅನಿಸಿದಾಗಲೆಲ್ಲ ಮಜ್ಜಿಗೆ ಸೇವಿಸಿದರೆ ಸಾಕು! ಕೊಲೆಸ್ಟರಾಲ್ ಕರಗಿಸುವ ಗುಣ ಮಜ್ಜಿಗೆಗಿದೆ. ಮಜ್ಜಿಗೆ ಡಯಟ್‌ ಮಾಡಿದ ಮರುದಿನ ದೇಹ ಹಗುರವಾದ ಅನುಭವವಾಗದಿದ್ದರೆ ಕೇಳಿ ಎಂಬುದು ಅವರ ಸವಾಲು!
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.