ADVERTISEMENT

ಸಪ್ತಭಾಷಾ ನಟನಿಗೆ 70ರ ಸಂಭ್ರಮ

ರೋಹಿಣಿ ಮುಂಡಾಜೆ
Published 21 ಆಗಸ್ಟ್ 2017, 19:30 IST
Last Updated 21 ಆಗಸ್ಟ್ 2017, 19:30 IST
ಅನಂತನಾಗ್‌
ಅನಂತನಾಗ್‌   

ಮಾತಿಗಿಂತ ಮೌನ ಮೌಲಿಕ ಅನ್ನುವ ಮಾತು ಹಿರಿಯ ನಟ ಅನಂತನಾಗ್‌ ಅವರಿಗೆ ಹೆಚ್ಚು ಸಲ್ಲುತ್ತದೆ. ಸಂಭಾಷಣೆಗಿಂತ ಕಣ್ಣ ನೋಟ, ಮೂಗು ಮತ್ತು ಹಣೆಯ ಮೇಲಿನ ನೆರಿಗೆಗಳು ಮತ್ತು ಹುಬ್ಬಿನ ಸಣ್ಣ ಕದಲಿಕೆಯ ಮೂಲಕವೇ ಪ್ರೇಕ್ಷಕರಿಗೆ ಭಾವವನ್ನು ಪ್ರಭಾವಶಾಲಿಯಾಗಿ ದಾಟಿಸಲು ಈ ನಟನಷ್ಟು ಇನ್ಯಾರಿಗೂ ಸಾಧ್ಯವೇ ಇಲ್ಲವೇನೋ. ಅಂತಲೇ, ಅವರ ಅಭಿಮಾನಿಗಳ ಪಾಲಿಗೆ ಅವರು ‘ಕನ್ನಡದ ಅಮಿತಾಭ್‌’.

ವಿಕಿಪಿಡಿಯ ಹೇಳುವಂತೆ ಅನಂತನಾಗ್‌ ಅವರ ಜನ್ಮ ದಿನಾಂಕ 1948ರ ಸೆಪ್ಟಂಬರ್‌ 4. ಆದರೆ ಅವರು ಈ ಬಾರಿ ಆಗಸ್ಟ್‌ 22ರಂದು ಧಾರ್ಮಿಕ ವಿಧಿವಿಧಾನದ ಮೂಲಕ ಹಾಗೂ 23ರಂದು ಆತ್ಮೀಯರೊಂದಿಗೆ ಜನ್ಮ ದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

1973ರಲ್ಲಿ ಪಿ.ವಿ.ನಂಜರಾಜ ಅರಸ್‌ ಅವರ ‘ಸಂಕಲ್ಪ’ ಚಿತ್ರದ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಅನಂತನಾಗ್‌, ಸದ್ಯದಲ್ಲೇ ಬಿಡುಗಡೆಯಾಗಲಿರುವ ‘ಮಾರ್ಚ್‌ 22’ ಸಿನಿಮಾದವರೆಗೂ ಹೊಸತನವನ್ನು ಉಳಿಸಿಕೊಂಡು ಬಂದಿರುವುದು ದಾಖಲಾರ್ಹ ಸಂಗತಿ.

ADVERTISEMENT

ದೇಹಕ್ಕೆ ವಯಸ್ಸಾದರೂ ನಟನೆಯಲ್ಲಿ ಚಿರಯೌವ್ವನ ಕಾಪಾಡಿಕೊಳ್ಳುವುದು, ಒಳಗೊಬ್ಬ ವಿದ್ಯಾರ್ಥಿಯ ಕುತೂಹಲ ಮತ್ತು ಲವಲವಿಕೆಯನ್ನು ಉಳಿಸಿಕೊಳ್ಳುವುದು ಅನುಕರಣೀಯ. ಬೇರೆ ಯಾವುದೋ ಕಲಾವಿದರು ಮಾಡಿದ ಪಾತ್ರವನ್ನು, ‘ಅಯ್ಯೋ ಈ ಪಾತ್ರವನ್ನು ಅನಂತನಾಗ್‌ ಅವರು ಮಾಡಬೇಕಿತ್ತು’ ಎಂದು ಪ್ರೇಕ್ಷಕರು ಆಸೆಪಡುವಷ್ಟು ‘ಅನಂತ್ ಪ್ರಭೆ’ ಚಿತ್ರರಂಗದಲ್ಲಿದೆ.

ಅನಂತನಾಗ್‌ ಏಳು ಭಾಷೆಗಳ ಚಿತ್ರರಂಗದಲ್ಲಿ ತಮ್ಮ ನಟನೆಯಿಂದ ವಿಜೃಂಭಿಸಿದವರು. ಶ್ಯಾಮ್‌ ಬೆನಗಲ್‌ ಅವರ ‘ಅಂಕುರ್‌’ ಅವರ ಮೊದಲ ಚಿತ್ರ. ನಂತರ ಕನ್ನಡ, ಹಿಂದಿ, ಮರಾಠಿ, ತೆಲುಗು, ಮಲಯಾಳಂ ಮತ್ತು ಇಂಗ್ಲಿಷ್‌ ಸಿನಿಮಾಗಳಲ್ಲಿಯೂ ತಮ್ಮ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದವರು.

ಹಿಂದಿಯ ‘ನಿಶಾಂತ್‌’, ‘ಕಲಿಯುಗ್‌’, ‘ಗೆಹ್ರಾಯಿ’,  ‘ಭೂಮಿಕಾ’, ‘ಮಂಗಳಸೂತ್ರ’, ‘ಯುವ’, ‘ಕೊಂಡುರಾ’, ‘ಉತ್ಸವ್‌’ ಅವರ ನಟನೆಯ ಪ್ರಮುಖ ಹಿಂದಿ ಚಿತ್ರಗಳು. ಮರಾಠಿಯ ‘ಅನಾಹತ್‌’ ಮತ್ತು ಮಲಯಾಳಂನ ‘ಸ್ವಾತಿ ತಿರುನಾಳ್‌’, ತೆಲುಗಿನ ‘ಅನುಗ್ರಹಂ’, ಹಾಲಿವುಡ್‌ನ ‘ಸ್ಟಂಬಲ್‌’,  ಆಯಾ ಚಿತ್ರರಂಗಗಳಲ್ಲಿ ಅಭಿಮಾನಿಗಳನ್ನು ಸೃಷ್ಟಿಸಿದ ಸಿನಿಮಾಗಳು.

ಅನಂತನಾಗ್‌ ಅವರ ವಿಶೇಷತೆ ಎಂದರೆ, ಚಲನಚಿತ್ರಗಳೊಂದಿಗೆ ರಂಗಭೂಮಿ ಮತ್ತು ಸಾಹಿತ್ಯದ ಸಾಂಗತ್ಯ ಅವರಿಗಿರುವುದು. ಅವರು ನಟಿಸಿದ ‘ಹಂಸಗೀತೆ’ ಅವರನ್ನು ಕಲೆ ಮತ್ತು ಸಾಂಸ್ಕೃತಿಕ ಲೋಕಕ್ಕೆ ಹತ್ತಿರವಾಗಿಸಿತು. ಸಿನಿಮಾ ಪೋಸ್ಟರ್‌ಗಳಲ್ಲಿ ‘ಅನಂತನಾಗ್‌–ಲಕ್ಷ್ಮೀ’ ಎಂಬ ಹೆಸರು ಚಿತ್ರರಂಗದತ್ತ ಜನಸಾಗರವನ್ನೇ ಕರೆದೊಯ್ಯುವಷ್ಟು ಪ್ರಭಾವಿ ಜೋಡಿಯಾಗಿತ್ತು.

ಗಂಭೀರ ಪಾತ್ರಕ್ಕಿಂತಲೂ ಹಾಸ್ಯಪಾತ್ರಗಳಲ್ಲಿ ಅನಂತನಾಗ್‌ ಒಂದು ತೂಕ ಹೆಚ್ಚೇ ಬೆಳಗುವುದು ಅವರ ಹೆಗ್ಗಳಿಕೆ. ಪ್ರೇಕ್ಷಕ ಬಿದ್ದೂ ಬಿದ್ದು ನಗುವಂತೆ ಮಾಡುವುದು ಹಾಸ್ಯ ನಟನಾ ಸಾಮರ್ಥ್ಯ. ಮುಖ್ಯವಾಹಿನಿಯ ನಟನಾಗಿ ಹೆಸರು ಮಾಡಿದ ಕಲಾವಿದರು ಹೀಗೆ ಭರಪೂರ ಹಾಸ್ಯವನ್ನು ಉಣಬಡಿಸುವುದು ವಿರಳ. ಇಷ್ಟಾದರೂ ಅವರು ಪೋಷಕ ಪಾತ್ರಗಳಲ್ಲಿಯೂ ಸಮರ್ಥವಾಗಿ ಅಭಿನಯಿಸುವುದು ಅವರ ಮತ್ತೊಂದು ಹೆಚ್ಚುಗಾರಿಕೆ.

ಕಿರುತೆರೆಯಲ್ಲಿ ‘ಪ್ರೀತಿ ಇಲ್ಲದ ಮೇಲೆ’, ‘ಗರ್ವ’, ‘ದುರ್ಗಾ’ ಮತ್ತು ‘ಮಾಲ್ಗುಡಿ ಡೇಸ್‌’ ಧಾರಾವಾಹಿಗಳು ಅವರನ್ನು ಕನ್ನಡಿಗರಿಗೆ ಇನ್ನಷ್ಟು ಹತ್ತಿರವಾಗಿಸಿದವು. ರಾಜಕೀಯ ಕ್ಷೇತ್ರದಲ್ಲಿಯೂ ಅನಂತನಾಗ್‌ ಅದೃಷ್ಟ ಪರೀಕ್ಷೆ ಮಾಡಿ ಗೆದ್ದಿದ್ದಾರೆ. ಇತ್ತೀಚಿನ ‘ರಾಜಕುಮಾರ’ದಲ್ಲಿ ನಟಿಸಿರುವ ಅವರು ‘ಮಾರ್ಚ್‌ 22’ರ ಬಿಡುಗಡೆಯನ್ನು ಎದುರು ನೋಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.