ADVERTISEMENT

ಸವಿಯೋಣ ಬನ್ನಿ ಖರ್ಜೂರ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 19:30 IST
Last Updated 22 ಜೂನ್ 2017, 19:30 IST
ಸವಿಯೋಣ ಬನ್ನಿ ಖರ್ಜೂರ
ಸವಿಯೋಣ ಬನ್ನಿ ಖರ್ಜೂರ   

ಪವಿತ್ರ ಮಾಸ ರಂಜಾನ್‌ನಲ್ಲಿ ಖರ್ಜೂರ ಹಣ್ಣಿಗೆ ಬಹಳ ಮಹತ್ವವಿದೆ. ಉಪವಾಸ ತೊರೆಯುವ ಕ್ರಮ ಇಫ್ತಾರ್ ಮಾಡುವಾಗ ಮೊದಲು ಬೇಕಾಗುವ ಹಣ್ಣು ಇದು. ಆ ನಂತರವಷ್ಟೇ ದ್ರವ ರೂಪದ ಆಹಾರವನ್ನು ಮುಸ್ಲಿಮರು ಸೇವಿಸುತ್ತಾರೆ.

ಖರ್ಜೂರ ಹಣ್ಣು ಎಲ್ಲಾ ಋತುಗಳಲ್ಲೂ ಲಭ್ಯವಿದ್ದರೂ ರಂಜಾನ್‌ ಮಾಸದಲ್ಲಿ ಅದಕ್ಕೆ ಬೇಡಿಕೆ ಹೆಚ್ಚು. ಕೇವಲ ಇಫ್ತಾರ್ ಮಾತ್ರವಲ್ಲದೇ, ದಾನ ನೀಡುವಾಗಲೂ ಈ ಹಣ್ಣಿಗೆ ಹೆಚ್ಚು ಒತ್ತು ನೀಡಲಾಗಿದೆ.

ಮರುಭೂಮಿಯಲ್ಲಿ ಹೆಚ್ಚಾಗಿ ಬೆಳೆಯುವ ಈ ಹಣ್ಣಿನ ಮೂಲ ಮಧ್ಯಪ್ರಾಚ್ಯ ದೇಶಗಳು. ಸೌದಿ ಅರೇಬಿಯಾ, ಕತಾರ್, ಕುವೈಟ್‌, ಇರಾಕ್, ಇರಾನ್‌ ಮರುಭೂಮಿಗಳಲ್ಲಿ ಖರ್ಜೂರ ಹಣ್ಣು ಹೆಚ್ಚಾಗಿ ಬೆಳೆಯಲಾಗುತ್ತದೆ. ಹಾಗಾಗಿ, ಖರ್ಜೂರ ರಫ್ತು ಮಾಡುವುದರಲ್ಲಿ ಈ ದೇಶಗಳು ಮುಂಚೂಣಿಯಲ್ಲಿವೆ.

ADVERTISEMENT

ಭಾರತಕ್ಕೆ ಬರುವ ಬಹುಪಾಲು ಖರ್ಜೂರ ಹಣ್ಣುಗಳು ಅರಬ್‌ ದೇಶಗಳಿಂದಲೇ ಆಮದಾಗುತ್ತಿದೆ. ಖರ್ಜೂರ ಹಣ್ಣುಗಳಲ್ಲಿ ಮೂರು ಮುಖ್ಯ ವಿಧ. ಮೃದು ಖರ್ಜೂರ, ಒಣ ಖರ್ಜೂರ, ಹಸಿ ಖರ್ಜೂರ. ಗುಣಮಟ್ಟದ ಅಧಾರದಲ್ಲಿ ಇನ್ನೂ ಹಲವು ವಿಧಗಳಿವೆ. ಒಂದು ಕೆ.ಜಿ. ಖರ್ಜೂರಕ್ಕೆ ₹ 80 ರಿಂದ ₹ 2 ಸಾವಿರವರೆಗೂ ಬೆಲೆ ಇದೆ. ಖರ್ಜೂರ ಮಳಿಗೆಗಳು ಇಂದು ದೊಡ್ಡ ದೊಡ್ಡ ಮಾಲ್‌ಗಳಲ್ಲೂ ತಲೆಯೆತ್ತುತ್ತಿವೆ.

ವೈದ್ಯಕೀಯ ಲೋಕದಲ್ಲಿ ಖರ್ಜೂರ ಹಣ್ಣಿಗೆ ಬಹಳ ಮಹತ್ವವಿದೆ. ಆಹಾರದ ಪಚನ ಕ್ರಿಯೆಯಲ್ಲಿ ಸಹಕಾರಿಯಾಗುವ ಹಾಗೂ ಹೆಚ್ಚು ಖನಿಜಾಂಶಗಳಿರುವ ಖರ್ಜೂರ ಹಣ್ಣು ಎಲ್ಲರಿಗೂ ಅಚ್ಚುಮೆಚ್ಚು. ಇದರಲ್ಲಿ ಗ್ಲೂಕೋಸ್‌ ಅಂಶಗಳು ಹೆಚ್ಚಿರುವುದರಿಂದ ನಿಶ್ಯಕ್ತಿ ಸಮಸ್ಯೆ ಎದುರಿಸುವವರಿಗೆ ಈ ಹಣ್ಣು ಶಕ್ತಿವರ್ಧಕವಾಗಿಯೂ ಕೆಲಸ ಮಾಡಬಲ್ಲದು.

ನಿತ್ರಾಣವಾದಾಗ ನಾಲ್ಕಾರು ಖರ್ಜೂರ ತಿಂದರೆ ಸಾಕು, ಮತ್ತೆ ಉಲ್ಲಾಸತನ ಮೂಡುತ್ತದೆ. ನಿಯಮಿತ ಖರ್ಜೂರ ಬಳಕೆ ಹೃದಯಾಘಾತ ಸಮಸ್ಯೆಗಳಿಂದ ದೂರವಿರಿಸಬಲ್ಲದು.
ಚಿತ್ರ ಬರಹ: ಇರ್ಷಾದ್‌ ಮಹಮ್ಮದ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.