ADVERTISEMENT

ಸಾಮಾಜಿಕ ಕಳಕಳಿಗಾಗಿ ‘ಸೆಲ್ಫಿ’

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2016, 19:30 IST
Last Updated 29 ಆಗಸ್ಟ್ 2016, 19:30 IST
ದೀಪಾ ಗೌಡ
ದೀಪಾ ಗೌಡ   

‘ಸೆಲ್ಫಿ’–ಬಹುತೇಕ ಸಾಫ್ಟ್‌ವೇರ್‌ ಉದ್ಯೋಗಿಗಳೇ ನಿರ್ಮಿಸಿ ನಟಿಸಿರುವ ಚಿತ್ರ. ಉದ್ಯೋಗ ಒತ್ತಡದ ಮಧ್ಯೆಯೇ ಸಿನಿಮಾಪ್ರೇಮವನ್ನು ಬೆಳೆಸಿಕೊಂಡಿರುವ ಚಿತ್ರತಂಡವಿದು. ಎಲ್ಲರೂ ಬಿಡುವಿರುವ ವಾರಾಂತ್ಯದ ದಿನಗಳಂದೇ ಸಿನಿಮಾದ ಚಿತ್ರೀಕರಣ ನಡೆದಿರುವುದು ವಿಶೇಷ. ಸಿನಿಮೋಹಿ ಗುಂಪು ಒಂದೂವರೆ ವರ್ಷ ಹರಿಸಿದ ಬೆವರಿನಿಂದಾಗಿ ಚಿತ್ರ ಇದೀಗ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ಫಣಿ ಕೊಟಪ್ರೊಲು ಈ ಚಿತ್ರದ ನಿರ್ದೇಶಕ. ಕಥೆ, ಚಿತ್ರಕಥೆ, ಸಂಕಲನದ ಜತೆಗೆ ಛಾಯಾಗ್ರಹಣವೂ ಅವರದ್ದೆ. ಫಣಿ ಸ್ನೇಹಿತ ನವೀನ್ ಕೈಪು ಈ ಚಿತ್ರದ ನಿರ್ಮಾಪಕ.

‘ಸೆಲ್ಫಿಯಲ್ಲಿ ಹಾರರ್‌ ಮಿಶ್ರಿತ ಮರ್ಡರ್ ಮಿಸ್ಟ್ರಿಯನ್ನು ಹೇಳುತ್ತಿದ್ದೇವೆ. ಸಾಫ್ಟ್‌ವೇರ್‌ ಉದ್ಯೋಗಿಗಳ ಚಿತ್ರದ ಕಥೆ ನಡೆಯುವುದು ಕೂಡ ಐ.ಟಿ ಕಂಪೆನಿಯಲ್ಲೇ. ಸೆಲ್ಫಿ ಕ್ಲಿಕ್‌ಗೆ ಕೊಲೆಯ ಲಿಂಕ್‌ ಕೊಟ್ಟು ಚಿತ್ರಕಥೆ ಹೆಣೆಯಲಾಗಿದ್ದು, ಆರಂಭದಿಂದ ಕಡೆಯವರೆಗೆ ಕುತೂಹಲ ಕಾಯ್ದುಕೊಳ್ಳುತ್ತದೆ’ ಎಂದು ಫಣಿ ಕಥೆಯ ಎಳೆಯೊಂದನ್ನು ಹಂಚಿಕೊಂಡರು.

ಚಿತ್ರದಲ್ಲಿ ತ್ರಿಲೋಕ್ ಶ್ರಾಫ್ ನಾಯಕ. ದೀಪಾ ಗೌಡ ಮತ್ತು ಪೂಜಾ ಕಾಮತ್‌ ಚಿತ್ರದ ನಾಯಕಿಯರು. ‘ಉಗ್ರಂ’ ಚಿತ್ರದಲ್ಲಿ ಸಣ್ಣ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ತ್ರಿಲೋಕ್‌ಗೆ ನಾಯಕನಾಗಿ ಇದು ಮೊದಲ ಚಿತ್ರ.; ಪೂಜಾ ಕಾಮತ್‌ಗೂ ಕೂಡ. ಸಾಫ್ಟ್‌ವೇರ್‌ ಉದ್ಯೋಗಿಯಾಗಿರುವ ದೀಪಾ ಈಗಾಗಲೇ ಹಲವು ಚಿತ್ರಗಳಲ್ಲಿ ನಟಿಸಿದ ಅನುಭವವಿದ್ದರೂ, ಸಾಫ್ಟ್‌ವೇರ್‌ ತಂಡದ ಜತೆಗಿನ ಕೆಲಸ ತುಂಬಾ ಖುಷಿ ಕೊಟ್ಟಿದೆಯಂತೆ.

‘ಕ್ಯಾಮೆರಾ ಸೇರಿದಂತೆ ಚಿತ್ರದಲ್ಲಿ ಬಳಸಿರುವ ಎಲ್ಲ ಸಲಕರಣೆಗಳನ್ನು  ಹೊರದೇಶಗಳಲ್ಲಿ ನೆಲೆಸಿರುವ ಮಿತ್ರರ ಮೂಲಕ ನಾವೇ ಖರೀದಿಸಿದ್ದೇವೆ. ಬಾಡಿಗೆ ಪಡೆಯದ ಸ್ಥಳಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ’ ಎಂದು ನವೀನ್ ಕೈಪು ಹೇಳಿದರು. ಅಂದಹಾಗೆ ಚಿತ್ರದ ಆದಾಯದಲ್ಲಿ ಶೇ 20ರಷ್ಟನ್ನು ಶಂಕರ ಕ್ಯಾನ್ಸರ್ ಪ್ರತಿಷ್ಠಾನಕ್ಕೆ ಕೊಡಲು ಚಿತ್ರತಂಡ ನಿರ್ಧರಿಸಿದೆ.

ಚಿತ್ರಕ್ಕಾಗಿ ಐದು ಹಾಡುಗಳನ್ನು ಬರೆದು, ಸಂಗೀತ ಸಂಯೋಜಿಸಿದ್ದಾರೆ ಅರ್ಜುನ್ ರಾಮ್. ಸಾಮಾಜಿಕ ಕಳಕಳಿಯೊಂದಿಗೆ ಸಾಫ್ಟ್‌ವೇರ್‌ ಉದ್ಯೋಗಿಗಳೇ ಸೇರಿ ನಿರ್ಮಾಣ ಮಾಡಿರುವ ಈ ಚಿತ್ರ ಸೆಪ್ಟೆಂಬರ್ 2ರಂದು ಬಿಡುಗಡೆಯಾಗಲಿದೆ.

ಕೈಪು ಸ್ನೇಹಿತರೂ ಆದ ಜಾಕ್ ಮಂಜು ಚಿತ್ರ ವಿತರಣೆಯ ಹೊಣೆ ಹೊತ್ತಿದ್ದು, ಎಲ್ಲ ಮಲ್ಟಿಫ್ಲೆಕ್ಸ್‌ಗಳಲ್ಲಿ ಚಿತ್ರ ಬಿಡುಗಡೆ ಮಾಡಲು ಯೋಜನೆ ಹಾಕಿಕೊಂಡಿದ್ದಾರೆ. ನಟರಾದ ಸುದೀಪ್, ದ್ವಾರಕೀಶ್, ರಾಗಿಣಿ ದ್ವಿವೇದಿ, ನಿರ್ದೇಶಕ ಪವನ್ ಕುಮಾರ್ ‘ಸೆಲ್ಫಿ’ಗೆ ಶುಭ ಕೋರಿದ ವಿಡಿಯೋ ಜತೆಗೆ, ಚಿತ್ರದ ಟ್ರೇಲರ್‌ ಕೂಡ ಪ್ರದರ್ಶಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.