ADVERTISEMENT

ಸಿಂಪಲ್ ಸುನಿ ಹೇಳಿದ ‘ಅಲಮೇಲಮ್ಮ’ ಕಥೆ

ವಿಜಯ್ ಜೋಷಿ
Published 20 ಜುಲೈ 2017, 19:30 IST
Last Updated 20 ಜುಲೈ 2017, 19:30 IST
ಸಿಂಪಲ್ ಸುನಿ ಹೇಳಿದ ‘ಅಲಮೇಲಮ್ಮ’ ಕಥೆ
ಸಿಂಪಲ್ ಸುನಿ ಹೇಳಿದ ‘ಅಲಮೇಲಮ್ಮ’ ಕಥೆ   

ಸಿಂಪಲ್ಲಾಗ್ ಒಂದು ಲವ್ ಸ್ಟೋರಿ ಹೇಳಿ ಯಶಸ್ಸು ಕಂಡ ಸಿಂಪಲ್ ಸುನಿ ಈಗ ಹೊಸ ಕಥೆ ಹೇಳಲು ಹೊರಟಿದ್ದಾರೆ. ಅವರು ನಿರ್ದೇಶಿಸಿರುವ ಸಿನಿಮಾ 'ಆಪರೇಷನ್ ಅಲಮೇಲಮ್ಮ' ಇಂದು (ಜುಲೈ21) ತೆರೆಗೆ ಬರುತ್ತಿದೆ. ಸಸ್ಪೆನ್ಸ್ ಹಾಗೂ ಹಾಸ್ಯಗಳೆರಡರ ಹದವಾದ ಪಾಕ ಇದು ಎನ್ನುತ್ತಾರೆ ಸುನಿ.

ಸಿನಿಮಾ ಬಿಡುಗಡೆಯ ಗಡಿಬಿಡಿಯಲ್ಲೇ ಅವರು ‘ಮೆಟ್ರೊ’ ಜೊತೆ ಮಾತನಾಡಿದರು. ಸಿನಿಮಾ ಕುರಿತು ಒಂದೆರಡು ವಿವರ ನೀಡಿದರು. ‘ಪ್ರತಿ ಬಾರಿಯೂ ವಿಭಿನ್ನ ಬಗೆಯ ಸಿನಿಮಾ ಮಾಡುವ ಬಯಕೆ ನನ್ನದು. ಹಾಗಾಗಿ ಈ ಬಾರಿ ಇಂತಹ ಸಿನಿಮಾ ಮಾಡಿದ್ದೇನ’ ಎಂದು ಮಾತು ಆರಂಭಿಸಿದರು ಸುನಿ.

ಒಂದು ಮಗುವನ್ನೋ ಅಥವಾ ದೊಡ್ಡವರನ್ನೋ ದುಷ್ಕರ್ಮಿಗಳು ಅಪಹರಣ ಮಾಡುವುದು, ನಂತರ ಅವರನ್ನು ಬಿಡುಗಡೆ ಮಾಡಲು ಇಂತಿಷ್ಟು ಹಣ ಕೊಡಬೇಕು, ಹಣವನ್ನು ಇಂಥ ಸ್ಥಳಕ್ಕೆ ತರಬೇಕು ಎನ್ನುವ ಬೇಡಿಕೆ ಇಡುವ ಕಥೆಗಳು ಹಲವು ಸಿನಿಮಾಗಳಲ್ಲಿ ಬಂದಿವೆ. ಹಾಗೆಯೇ, ಪೊಲೀಸರು ಇಂಥ ಅಪಹರಣಕಾರರನ್ನು ಪತ್ತೆ ಮಾಡುವುದೂ ಸಿನಿಮಾ ಕಥೆಗಳಲ್ಲಿ ಹೊಸದಲ್ಲ. ಆದರೆ ಈ ಸಿನಿಮಾದಲ್ಲಿ ವಿಭಿನ್ನವಾದ ಇಂಥದ್ದೊಂದು ಕಥೆಯನ್ನು ಹೇಳಲಾಗಿದೆ ಎಂದರು ಅವರು.

ADVERTISEMENT

ಈ ಸಿನಿಮಾದ ನಾಯಕನಿಗೆ ಬ್ರ್ಯಾಂಡೆಡ್ ವಸ್ತುಗಳ ಬಗ್ಗೆ ತೀವ್ರ ಕುತೂಹಲ. ಚಹಾ ಕುಡಿಯುವ ವೇಳೆ ಕಾಣಿಸುವ ಬ್ರ್ಯಾಂಡೆಡ್ ಬ್ಯಾಗೊಂದರಲ್ಲಿ ಏನಿದೆ ಎಂಬುದನ್ನು ನೋಡಲು ಹೋಗಿ ಈತ ಪೊಲೀಸರ ಕೈಗೆ ಸಿಕ್ಕಿಬೀಳುತ್ತಾನೆ. ಪೊಲೀಸರು ಇವನನ್ನು ಠಾಣೆಗೆ ಕರೆದೊಯ್ಯುತ್ತಾರೆ.

ಅದಾದ ನಂತರ ಪ್ರಕರಣಕ್ಕೆ ಒಂದು ಟ್ವಿಸ್ಟ್ ಸಿಗುತ್ತದೆ ಎಂಬ ವಿವರಣೆ ನೀಡಿದರು. ಇಲ್ಲಿ ಸಿಗುವ ಟ್ವಿಸ್ಟ್‌, ಈ ಸಿನಿಮಾವನ್ನು ವಿಭಿನ್ನವಾಗಿಸಿರಬೇಕು. ಅದೇನು ಎಂಬುದನ್ನು ಚಿತ್ರಮಂದಿರಕ್ಕೆ ಹೋಗಿಯೇ ತಿಳಿಯಬೇಕು. ನಾಯಕನ ಪ್ರೀತಿ ಹಾಗೂ ಕುಟುಂಬದ ಕಥೆಯೂ ಸಿನಿಮಾದಲ್ಲಿ ಬರುತ್ತದೆ.

ಇಂಥದ್ದೊಂದು ಕಥೆಯ ಎಳೆ ಸಿಕ್ಕಿದ್ದು ಎಲ್ಲಿ ಎಂಬ ಪ್ರಶ್ನೆಗೆ ಸುನಿ ವಿಭಿನ್ನವಾದ ಉತ್ತರವನ್ನೇ ನೀಡಿದರು. ‘ಇದು ಸಂಪೂರ್ಣ ಕಾಲ್ಪನಿಕ ಕಥೆ. ನಾನು ನನ್ನ ಸ್ನೇಹಿತ ಅಭಿ ಜೊತೆ ಮಲ್ಲೇಶ್ವರದಲ್ಲಿ ಬೆಣ್ಣೆ ಗುಲ್ಕನ್ ತಿಂದು ಬರುವ ವೇಳೆಗೆ ನಮ್ಮ ದ್ವಿಚಕ್ರ ವಾಹನವನ್ನು ಯಾರೋ ಎತ್ತೊಯ್ದಿದ್ದರು. ಅದನ್ನು ಕೊಂಡೊಯ್ದವರು ಸಂಚಾರ ಪೊಲೀಸರು ಎಂಬುದು ನಮಗೆ ಆಗ ಗೊತ್ತಾಗಿರಲಿಲ್ಲ. ನಾವು ಪೊಲೀಸರಿಗೆ ವಿಚಾರ ತಿಳಿಸೋಣ ಎಂದು ಠಾಣೆ ಕಡೆ ನಡೆದು ಹೋಗುತ್ತಿದ್ದ ವೇಳೆಯಲ್ಲಿ ಹೊಳೆದ ಎಳೆ ಇದು’ ಎಂದರು.

‘ಒಬ್ಬ ಅಮಾಯಕನನ್ನು ಪೊಲೀಸರು ಠಾಣೆಗೆ ಕರೆದೊಯ್ದು, ಪ್ರಕರಣವೊಂದರಲ್ಲಿ ಸಿಲುಕಿಸಿದಾಗ ಆತನಲ್ಲಿ ಉಂಟಾಗುವ ತಳಮಳಗಳ ಬಗ್ಗೆ ಈ ಚಿತ್ರ ಮಾತನಾಡುತ್ತದೆ’ ಎಂದು ಹೇಳಿದರು. ಈ ಚಿತ್ರವನ್ನು ಬೆಂಗಳೂರಿನಲ್ಲೇ ಚಿತ್ರೀಕರಿಸಲಾಗಿದೆಯಂತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.