ADVERTISEMENT

ಸಿರ್ಸಿ ವೃತ್ತದಿಂದ ಬಸವನಗುಡಿವರೆಗೆ..

ಶಾರ್ಟ್‌ ಕಟ್‌ -7

ಜಯಸಿಂಹ ಆರ್.
Published 1 ಸೆಪ್ಟೆಂಬರ್ 2014, 19:30 IST
Last Updated 1 ಸೆಪ್ಟೆಂಬರ್ 2014, 19:30 IST

ಬಹುಶಃ ಏಳು ವರ್ಷದ ಹಿಂದೆ ಇರಬಹುದು. ನಮ್ಮಕ್ಕ ಅಂತಿಮ ಪದವಿ ವಿದ್ಯಾರ್ಥಿನಿ. ತರಗತಿಗಳು ಶುರುವಾಗಿ ನಾಲ್ಕೈದು ದಿನಗಳು ಕಳೆದಿತ್ತಷ್ಟೆ. ಅಷ್ಟರಲ್ಲೇ ಹಿಂದೆಂದೋ ಸರ್ಕಾರಿ ನೌಕರಿಗೆ ಹಾಕಿದ್ದ ಅರ್ಜಿಗೆ ಫಲ ದೊರೆತಿತ್ತು.

ಕೆಲಸ ಬೆಂಗಳೂರಿನಲ್ಲಿ ಆದ್ದರಿಂದ ನೇಮಕಾತಿ ಆದೇಶ ಸಿಕ್ಕ ಮರುದಿನವೇ ಡ್ಯೂಟಿಗೆ ರಿಪೋರ್ಟ್ ಮಾಡಿಕೊಂಡಿದ್ದರು. ಚೆನ್ನಾಗಿ ಓದುತ್ತಿದ್ದ ಅಕ್ಕ, ಓದು ಮುಂದುವರಿಸಬೇಕಿತ್ತು.

ಈಗ ಪದವಿ ವ್ಯಾಸಂಗ ಮಾಡುತ್ತಿದ್ದ ರೆಗ್ಯುಲರ್ ಕಾಲೇಜಿನಲ್ಲಂತೂ ಓದು ಮುಂದುವರೆಸಲು ಸಾಧ್ಯವಿರಲಿಲ್ಲ. ಹೀಗಾಗಿ ಕಾಲೇಜಿನಿಂದ ವರ್ಗಾವಣೆ ಪತ್ರ ಪಡೆದು, ಸಂಜೆ ಕಾಲೇಜಿಗೆ ಹುಡುಕಾಟ ಆರಂಭಿಸಿದೆವು. ಮರುದಿನವೇ ಸಿಕ್ಕ ಆಚಾರ್ಯ ಪಾಠಶಾಲೆಯಲ್ಲಿ ದಾಖಲು ನೀಡಲು ಒಪ್ಪಿದರು.

ಆದರೆ ಒಂದು ಸಮಸ್ಯೆಯಿತ್ತು. ಕಾಲೇಜು ಬದಲಾವಣೆಗೆ ವಿಶ್ವವಿದ್ಯಾಲಯದಿಂದ ಅನುಮತಿ ಪಡೆಯಬೇಕಿತ್ತು. ದಂಡ ಶುಲ್ಕ ಸಹಿತ ದಾಖಲಾತಿಗಳನ್ನು ಕೊಡಲು ಅಂದೇ ಕೊನೆ ದಿನ. ಈ ವಿಚಾರ ತಿಳಿದಾಗ ಅದಾಗಲೇ ಮಧ್ಯಾಹ್ನ ಎರಡು ಗಂಟೆ ಕಳೆದಿತ್ತು. ಬಸವನಗುಡಿಯಿಂದ ವಿಶ್ವವಿದ್ಯಾಲಯಕ್ಕೆ ತೆರಳಿ, ಪರೀಕ್ಷಾ ವಿಭಾಗದಿಂದ ಅನುಮತಿ ಪತ್ರ ಪಡೆದು, ಕಾಲೇಜಿಗೆ ಸಂಜೆ 5ರ ಒಳಗೆ ನೀಡಬೇಕಿತ್ತು. ಸಂಜೆ ಕಾಲೇಜಾದರೂ ಆಡಳಿತ ಕೆಲಸವೆಲ್ಲಾ ಸಂಜೆ 5ಕ್ಕೆ ಕೊನೆಗೊಳ್ಳುತ್ತಿತ್ತು.

ಮುಂದಿನ 45 ನಿಮಿಷದಲ್ಲಿ ವಿ.ವಿಯಲ್ಲಿದ್ದೆವು. ಆದರೆ ಅನುಮತಿ ಮತ್ತು ನಿರಾಕ್ಷೇಪಣಾ ಪತ್ರ ಪಡೆಯುವಷ್ಟರಲ್ಲಿ ನಾಲ್ಕೂ ಮೂವತ್ತು ಕಳೆದಿತ್ತು. ಆಗ ಬೈಕ್ ಇರಲಿಲ್ಲ. ಬಸ್‌ಗಾಗಿಯೇ ಕಾಯಬೇಕಿತ್ತು. ನಮ್ಮ ಅದೃಷ್ಟಕ್ಕೆ ನಿಲ್ದಾಣಕ್ಕೆ ಬಂದ ತಕ್ಷಣವೇ ಬಸ್‍ ಸಿಕ್ಕಿತು. ಮುಂದಿನ 30 ನಿಮಿಷದಲ್ಲಿ ಸಿರ್ಸಿ ವೃತ್ತದಲ್ಲಿದ್ದೆವು. ಅಲ್ಲಿ ಇಳಿದು ಆಟೊ ಹತ್ತಬೇಕಿತ್ತು. ಏನು ಮಾಡುವುದು, ಒಂದೂ ಆಟೊ ಸಿಗುತ್ತಿಲ್ಲ. ಸಿಕ್ಕರೂ ಬಸವನಗುಡಿಯ ಕಡೆ ಬರಲು ಆಟೊ ಚಾಲಕರು ಸಿದ್ಧರಿಲ್ಲ. ಬಸ್ಸೂ ಬರುತ್ತಿಲ್ಲ. ದಿಕ್ಕೇ ತೋಚಲಿಲ್ಲ. ಈ ಪರದಾಟದಲ್ಲಿಯೇ ಐದು ನಿಮಿಷ ಕಳೆದಿತ್ತು.

ಅಷ್ಟರಲ್ಲಿ ಅಕ್ಕನ ಹಿರಿಯ ಸ್ನೇಹಿತರೊಬ್ಬರು ಎದುರಾದರು. ಅವರ ಬಳಿ ಕಾರಿತ್ತು. ನಮ್ಮ ಸ್ಥಿತಿಯನ್ನು ಮನವರಿಕೆ ಮಾಡಿಕೊಡುವಷ್ಟರಲ್ಲಿ ಮತ್ತೆ ಐದು ನಿಮಿಷ ಕಳೆದಿತ್ತು. ಕಾರು ಹತ್ತಿ ಕುಳಿತರೂ ದುಗುಡ ಕಡಿಮೆಯಾಗಿರಲಿಲ್ಲ. ಏಕೆಂದರೆ, ಚಾಮರಾಜಪೇಟೆ ರಾಮಮಂದಿರ ರಸ್ತೆ ದಾಟಿ, ಅಲ್ಲಿ ಸಿಗ್ನಲ್‌ನಲ್ಲಿ ನಿಂತು, ಉಮಾ ಥಿಯೇಟರ್ ಬಳಿ ವಾಹನ ದಟ್ಟಣೆಯ ಮಧ್ಯೆ ನುಸುಳಿ, ಬುಲ್ ಟೆಂಪಲ್ ರಸ್ತೆಯಲ್ಲಿ ಸಾಗಬೇಕಿತ್ತು. ನಂತರ ರಾಮಕೃಷ್ಣಾಶ್ರಮದ ಬಳಿ ರಸ್ತೆ ದಾಟಿ, ಗಾಂಧಿ ಬಜಾರ್ ತಲುಪಿ, ಕಾಲೇಜು ಮುಟ್ಟಬೇಕಿತ್ತು. ಇದಕ್ಕೆಲ್ಲಾ ಕನಿಷ್ಠ 12ರಿಂದ 15 ನಿಮಿಷವಾದರೂ ಬೇಕಿತ್ತು.

ಆದರೆ ಅಕ್ಕನ ಸ್ನೇಹಿತರಾದ ಶಿವು ಸಿರ್ಸಿ ವೃತ್ತದಿಂದ ಹೊರಟವರೇ, ಬಸ್‍ ಮಾರ್ಗದಲ್ಲೇ ಬಲಕ್ಕೆ ತಿರುವು ಪಡೆದರು. ನಂತರ ಮುಂದೆ ಸಾಗಿ ಕುರಿ ಮೈದಾನದ ಬಳಿ ಎಡಕ್ಕೆ ಹೊರಳಿ ನೇರವಾಗಿ ಸಾಗಿದರು. ಮುಂದಿನ 5ನೇ ತಿರುವಿನಲ್ಲಿ ಬಲಕ್ಕೆ ತಿರುಗಿದರು. ಅದು, ಸುಲ್ತಾನ್ ರೋಡ್. ರಾಯನ್ ವೃತ್ತದಿಂದ ಶಂಕರಮಠದ ಕಡೆಗೆ ಸಾಗುತ್ತದಲ್ಲ ಆ ರಸ್ತೆ. ಈ ರಸ್ತೆಯಲ್ಲಿ ನೇರವಾಗಿ ಸಾಗಿ, ಮಕ್ಕಳ ಕೂಟದ ಕಡೆ ಸಾಗುವ ರಸ್ತೆ ಹಾದು ಕಾರು ಮುನ್ನಡೆಸಿದರು.

ಅದೇ ರಸ್ತೆಯಲ್ಲಿ ಮುಂದಿನ ಎರಡನೇ ತಿರುವಿನಲ್ಲಿ ಎಡಕ್ಕೆ ತಿರುಗಿ, ಶಂಕರ ಮಠ ರಸ್ತೆಯಲ್ಲಿ ಬಲಕ್ಕೆ ತಿರುಗಿ ಬಸವನಗುಡಿಯತ್ತ ಸಾಗಿದರು. ನಾರ್ತ್ ರಸ್ತೆಯಲ್ಲಿ ಒಂದು ನಿಮಿಷದ ಸಿಗ್ನಲ್ ಕಳೆದು ಗಾಂಧಿ ಬಜಾರ್ ರಸ್ತೆ ಮುಟ್ಟಿದಾಗ ಏಳು ನಿಮಿಷ ಕಳೆದಿತ್ತಷ್ಟೆ. ಯಾವ ತಿರುವೂ ಪಡೆಯದೆ ನೇರವಾಗಿ ಸಾಗಿ, ಬ್ಯೂಗಲ್ ರಾಕ್ ರಸ್ತೆಗೆ ಕಾರು ಹೊರಳಿಸಿದರು.

ನಂತರ ಮಲ್ಲಿಕಾರ್ಜುನ ದೇವಾಲಯದ ಬಳಿ ಬಲಕ್ಕೆ ತಿರುಗಿ ಕಾಲೇಜು ಗೇಟು ಮುಟ್ಟಿದಾಗ ಸಂಜೆ 4.49. ಕಚೇರಿಯ ಕಡತಗಳನ್ನೆಲ್ಲಾ ಕಟ್ಟಿಡುತ್ತಿದ್ದ ಸಿಬ್ಬಂದಿ ‘ಇನ್ನೈದು ನಿಮಿಷ ಆಗಿದ್ದರೆ ನಿಮ್ಮ ಅಡ್ಮಿಷನ್ ಆಗ್ತಿರಲಿಲ್ಲ’ ಎಂದರು. ಅದಾಗಲೇ ಹೊರಟಿದ್ದ ಶಿವು ಅವರಿಗೆ ಮನದಲ್ಲೇ ಧನ್ಯವಾದ ಹೇಳಿದೆವು.

ಸಿರ್ಸಿ ವೃತ್ತದಿಂದ ಬ್ಯೂಗಲ್ ರಾಕ್ ಉದ್ಯಾನದವರೆಗೆ ಶಿವು ಒಂಬತ್ತು ನಿಮಿಷದಲ್ಲಿ ಕರೆದುಕೊಂಡು ಬಂದಿದ್ದರು, ಅದೂ ಕಾರಿನಲ್ಲಿ. ಬೈಕ್‌ನಲ್ಲಾದರೆ ಮತ್ತೊಂದೆರಡು ನಿಮಿಷ ಕಡಿಮೆ ಆಗುತ್ತದೆ. ಅಂದಿನಿಂದ  ಚಾಮರಾಜಪೇಟೆ ರಾಮಮಂದಿರ ರಸ್ತೆ, ಬುಲ್ ಟೆಂಪಲ್ ರಸ್ತೆಯನ್ನು ನೋಡೇ ಇಲ್ಲ. ಬಸವನಗುಡಿಯತ್ತ ಸಾಗುವಾಗೆಲ್ಲಾ ಈ ಶಾರ್ಟ್ ಕಟ್‌ ಮಾರ್ಗವೇ ರಹದಾರಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.