ADVERTISEMENT

ಸ್ತ್ರೀ ಎಂದರೆ ಅಷ್ಟೇ ಸಾಕೆ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2014, 19:30 IST
Last Updated 24 ಅಕ್ಟೋಬರ್ 2014, 19:30 IST

ನಿತ್ಯ ಜೀವನದಲ್ಲಿ ಮಹಿಳೆ ಪಾತ್ರ ಮಹತ್ವದ್ದು. ಸಾಂಸ್ಕೃತಿಕವಾಗಿ, ಸಾಮಾ­ಜಿಕ­­ವಾಗಿ ಪ್ರತಿ ಹಂತದಲ್ಲೂ ಮಹಿಳೆ ತನ್ನದೇ ಆದ ಛಾಪು ಮೂಡಿಸಿದ್ದಾಳೆ. ಕುಟುಂಬವನ್ನು ನಡೆಸುವುದರೊಂದಿಗೆ ಸಮಾಜದೊಂದಿಗೂ ತನ್ನನ್ನು ತಾನು ಗುರುತಿಸಿಕೊಳ್ಳುವುದರಲ್ಲಿ ಆಕೆ ಎಂದೂ ಹಿಂದೆ ಬಿದ್ದಿಲ್ಲ. ರಾಜಕೀಯ, ಪೊಲೀಸ್‌, ಬಾಹ್ಯಾಕಾಶ ಹೀಗೆ ಎಲ್ಲೆಡೆಯೂ ತನ್ನ ಅಸ್ಮಿತೆಯನ್ನು ಕಾಪಿಟ್ಟುಕೊಂಡಿದ್ದಾಳೆ.

ಮನೆಯಲ್ಲಿ, ಹೊರಗಡೆ ಬಿಡುವಿಲ್ಲದಂತೆ ದುಡಿಯುವ ಮಹಿಳೆಯನ್ನು ಕುಂಚದಲ್ಲಿ ಮರುಸೃಷ್ಟಿಸುವ ಪ್ರಯತ್ನಕ್ಕೆ ಕೈಹಾಕಿರುವ ಕೆಲ ಕಲಾವಿದರ ಚಿತ್ರಗಳ ಪ್ರದರ್ಶನವನ್ನು ನಗರದ ಜಯನಗರದಲ್ಲಿ ಮ್ಯಾಗ್ನಿಟ್ಯೂಡ್‌ ಗ್ಯಾಲರಿ ಆಯೋಜಿಸಿದೆ.

ಪ್ರತಿ ತಿಂಗಳು ಒಂದೊಂದು ವಿಷಯವನ್ನು ಆಧರಿಸಿ ಚಿತ್ರಕಲೆಗಳನ್ನು ಪ್ರದರ್ಶಿಸುವ ಆಶಯವನ್ನು ಹೊಂದಿರುವ ಮ್ಯಾಗ್ನಿಟ್ಯೂಡ್‌ ಗ್ಯಾಲರಿ ಈ ಬಾರಿ ‘ವುಮೆನ್‌ ಇಂಪ್ರೆಷನ್‌’ ವಿಷಯವನ್ನು ಆಯ್ಕೆ ಮಾಡಿಕೊಂಡಿದೆ.  

ಈ ಪ್ರದರ್ಶನದಲ್ಲಿ ಬೆಳಗಾವಿ ಮೂಲದ ನೀಲಂ, ಬೆಂಗಳೂರಿನ ಮಂಜುಳ, ಗುಲ್ಬರ್ಗ­ದ ವೆನಿಲ್ಲಾ ಹಾಗೂ ಇನ್ನಿತರ ಕಲಾವಿದರ ಚಿತ್ರಗಳನ್ನು ಪ್ರದರ್ಶನ­ಕ್ಕಿಡಲಾಗಿದೆ.
ಬೆಳಿಗ್ಗೆ ಎದ್ದಾಗಿನಿಂದ ಪ್ರಾರಂಭವಾಗುವ ಮಹಿಳೆಯ ಕೆಲಸಗಳು ದಿನಪೂರ್ತಿ ನಿಲ್ಲದ ಎಂಜಿನ್‌ನಂತೆ ಸಾಗುತ್ತಿರುತ್ತವೆ. ಇದನ್ನು ಕುಂಚದಲ್ಲಿ ಅರಳಿಸಿರುವ ಕಲಾವಿ­ದರು ಅತ್ಯಂತ ಮನೋಜ್ಞವಾಗಿ ಹಳ್ಳಿ ಹೆಣ್ಣುಮಕ್ಕಳನ್ನು ಚಿತ್ರಿಸಿದ್ದಾರೆ. ಮುಂಜಾವಿನಲ್ಲೇ ಎದ್ದು ಮನೆಯಂಗಳವನ್ನು ಅಚ್ಚು­ಕಟ್ಟಾಗಿ ಸಾರಿಸಿ ರಂಗೋಲಿ ಇಡುವ ಚಿತ್ತಾರ ಸಾಮಾನ್ಯ ಎನ್ನಿಸಿದರೂ ಅತ್ಯಂತ್ಯ ವಿಶಿಷ್ಟ ಎನ್ನಿಸುತ್ತದೆ.

ಹೊಲದಲ್ಲಿ ಕೆಲಸ ಮಾಡುವ ಮಹಿಳೆಯರು ಹೊರೆ­ ಹೊತ್ತು ಸಾಗುವ ದೃಶ್ಯ ಕ್ಯಾನ್ವಾಸ್‌ ಮೇಲೆ ಒಡಮೂಡಿದೆ. ಹೀಗೆ ಎಲ್ಲೆಡೆ ಮಹಿಳೆ ತನ್ನನ್ನು ಗುರುತಿಸಿಕೊಂಡು ಪುರುಷರಿಗೆ ಸಮಾನವಾಗಿ ಸಾಗುತ್ತಿದ್ದಾಳೆ ಎನ್ನುವುದು ಪ್ರದರ್ಶನ­ ಆಶಯವಾಗಿದ್ದು, ಇದು ಎಲ್ಲಾ  ಚಿತ್ರಗಳಲ್ಲೂ ಗೋಚರಿಸುತ್ತಿತ್ತು.

ಇಲ್ಲಿ ಬರೀ ಗ್ರಾಮೀಣ ಮಹಿಳೆಯರ ಚಿತ್ರಣ ಅಲ್ಲದೆ ನಗರದ ವನಿತೆಯರೂ ಕಾಣಸಿಗುತ್ತಾರೆ. ಪುರುಷ­ರಿಗೆ ಸರಿಸಮನಾಗಿ ಕೆಲಸ ಮಾಡುವ ಸ್ತ್ರೀಯರ ಚಿತ್ರಣ ಕಲಾವಿದರ ಕುಂಚದಲ್ಲಿ ಅನಾವರಣಗೊಂಡಿದೆ. ಇಲ್ಲಿ ಒಟ್ಟಾರೆ ಗ್ರಾಮೀಣ, ನಗರ, ಸ್ವತಂತ್ರ­ವಾಗಿ ಬದುಕುವ ಮತ್ತು ಕಠಿಣ ಕೆಲಸಗಳಿಗೂ ಸೈ ಎನ್ನುವ ಮಹಿಳೆಯೂ ­ಕಲಾವಿದನ ಕಲ್ಪನೆ ಸಿಲುಕಿ ಚಿತ್ತಾರಗೊಂಡಿದ್ದಾಳೆ.

‘ಮಹಿಳೆ ಈಗ ಎಲ್ಲಾ ಸ್ತರಗಳಲ್ಲೂ ಕಾಣಿಸಿಕೊಳ್ಳುತ್ತಿದ್ದಾಳೆ. ಆಕೆಯ ಮಹತ್ವದ ಸ್ವರೂಪಗಳನ್ನು ಕಲೆಯಲ್ಲಿ ಅಭಿವ್ಯಕ್ತಿಸಬೇಕೆನ್ನುವ ಆಶಯದೊಂದಿಗೆ ಈ ವಿಷಯವನ್ನು ಆಯ್ದುಕೊಂಡೆವು. ಮಹಿಳೆ ಕುಟುಂಬವನ್ನು ಸಲಹುತ್ತಲೇ ಅನೇಕ ಸಾಧನೆಗಳನ್ನು ಮಾಡಿದ್ದಾಳೆ. ಸುಪ್ತ ಪ್ರತಿಭೆಯನ್ನು ಹೊಂದಿರುವ ಆಕೆ ಎಲ್ಲದರಲ್ಲೂ ಸೈ ಎನ್ನಿಸಿಕೊಂಡಿದ್ದಾಳೆ. ಆಕೆಯ ನಾನಾ ಮಜಲುಗಳ ಚಿತ್ತಾರವನ್ನು ಇಲ್ಲಿ ಪ್ರದರ್ಶಿಸಿದ್ದೇವೆ’ ಎನ್ನುತ್ತಾರೆ ಮ್ಯಾಗ್ನಿಟ್ಯೂಡ್‌ ಗ್ಯಾಲರಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಎಸ್‌.ಆರ್‌. ಮಗರ್‌.

ಸ್ಥಳ: ಮ್ಯಾಗ್ನಿಟ್ಯೂಡ್‌ ಗ್ಯಾಲರಿ, ನಂ 140/13, 27ನೇ ಅಡ್ಡರಸ್ತೆ, 13ನೇ ಮುಖ್ಯ ರಸ್ತೆ, 3ನೇ ಬ್ಲಾಕ್‌ ಜಯನಗರ ರಸ್ತೆ. ಪ್ರದರ್ಶನ 31ನೇ ಅಕ್ಟೋಬರ್‌ ಶುಕ್ರವಾರ ಮುಕ್ತಾಯವಾಗಲಿದೆ.
–ಯೋಗಿತಾ ಆರ್.ಜೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.