ADVERTISEMENT

ಸ್ಪಂದಿಸುವ ‘ಸ್ಪಂದನ’

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2017, 19:30 IST
Last Updated 18 ಆಗಸ್ಟ್ 2017, 19:30 IST
ಸ್ಪಂದಿಸುವ ‘ಸ್ಪಂದನ’
ಸ್ಪಂದಿಸುವ ‘ಸ್ಪಂದನ’   

-ಸುಕೃತ ಎಸ್‌.

*

ತಮ್ಮ ಸುತ್ತಮುತ್ತಲಿನ ಮಕ್ಕಳಿಗಾದರೂ ಉತ್ತಮ ಶಿಕ್ಷಣ ದೊರೆಯುವಂತೆ ಆಗಬೇಕು ಎನ್ನುವ ದೃಷ್ಟಿಯಿಂದ ಗೆಳೆಯರು ಸೇರಿ 2001ರಲ್ಲಿ ಹುಟ್ಟುಹಾಕಿದ ಸಂಸ್ಥೆ ‘ಸ್ಪಂದನ’. ಇಬ್ಬರು ಗೆಳೆಯರ ಯೋಚನೆ ಹಾಗೂ ಯೋಜನೆ ಮೂಲಕ ಜನ್ಮತಾಳಿದ ಈ ಸಂಸ್ಥೆ ಈಗ ಆರು ಗೆಳೆಯರೊಂದಿಗೆ ಮುನ್ನಡೆಯುತ್ತಿದೆ.

ADVERTISEMENT

ಸಂಸ್ಥೆಯ ನಿರ್ವಾಹಕ ಟ್ರಸ್ಟಿಯಾಗಿರುವ ಪ್ರಶಾಂತ ಬಿ.ಎನ್ ಸಂಸ್ಥೆಯ ಹುಟ್ಟಿನ ಬಗ್ಗೆ ಹೇಳುತ್ತಾ, ‘ನಮ್ಮ ಮನೆಯ ಹತ್ತಿರ ಪುಟ್ಟೇನಹಳ್ಳಿ ಸರ್ಕಾರಿ ಶಾಲೆ ಇದೆ. ಆ ಶಾಲೆಯ ಮಕ್ಕಳು ಹರಿದ ಬಟ್ಟೆ, ಹರಿದ ಶೂ ಹಾಕಿಕೊಂಡು ಓಡಾಡುವ ದೃಶ್ಯ ನನ್ನನ್ನು ಕಾಡುತ್ತಿತ್ತು. ನಮ್ಮ ಹಾಗೆ ಇವರೂ ಯಾಕೆ ಒಳ್ಳೆಯ ಬಟ್ಟೆ, ಒಳ್ಳೆಯ ಶೂ ಹಾಕಿಕೊಳ್ಳಬಾರದು ಎಂದು ಸಣ್ಣವನಿರುವಾಗಲೇ ಯೋಚಿಸುತ್ತಿದ್ದೆ. ಕಾಲೇಜು ದಿನಗಳಲ್ಲಿ ಈ ಯೋಜನೆಗೆ ಸ್ಪಷ್ಟ ರೂಪ ಸಿಕ್ಕಿತು. ಹೀಗಾಗಿ ‘ಸ್ಪಂದನ’ ಶುರು ಮಾಡಿದೆವು’ ಎನ್ನುತ್ತಾರೆ.

ಸರ್ಕಾರ, ರಾಜಕಾರಣಿ ಅಥವಾ ಉದ್ಯಮಿಗಳಿಂದ ಹಣ ಸಹಾಯ ಪಡೆಯದೆ ತಂಡದ ಗೆಳೆಯರೇ ವರ್ಷಕ್ಕೆ ಸರಾಸರಿ ನಲವತ್ತು ಸಾವಿರ ರೂಪಾಯಿಗಳನ್ನು ಸಂಸ್ಥೆಯ ಕಾರ್ಯಚಟುವಟಿಕೆಗೆ ಮೀಸಲಿಡುತ್ತಾರೆ. ಒಂದು ಶಾಲೆಯಿಂದ ಪ್ರಾರಂಭವಾದ ಇವರ ‘ಸ್ಪಂದನೆ’ ಈಗ ಆರು ಶಾಲೆಗಳಿಗೆ ವಿಸ್ತರಿಸಿಕೊಂಡಿದೆ. ತಮ್ಮ ಆದಾಯದಲ್ಲೇ ಎಲ್ಲವನ್ನೂ ನಿರ್ವಹಿಸುತ್ತಿರುವುದರಿಂದ ಬಹಳ ಜಾಗರೂಕತೆಯಿಂದ ಆಯ್ಕೆ ‍ಪ್ರಕ್ರಿಯೆ ನಡೆಸುತ್ತಾರೆ. ಈ ಸಂಸ್ಥೆ ಒಟ್ಟು ನಾಲ್ಕು ವಿಭಾಗಗಳಲ್ಲಿ ಕೆಲಸ ಮಾಡುತ್ತಿದೆ– ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿವೇತನ, ಪುಸ್ತಕ, ಭೂಪಟ ವಿತರಣೆ, ವೃತ್ತಿ ಶಿಕ್ಷಣದ ಓದಿಗಾಗಿ ವಿದ್ಯಾರ್ಥಿಗಳಿಗೆ ಬಡ್ಡಿ ರಹಿತ ಸಾಲದ ಜೊತೆಗೆ ಶಾಲೆಗಳಿಗೆ ಕಂಪ್ಯೂಟರ್‌ಗಳನ್ನು ನೀಡುತ್ತಾ ಬಂದಿದ್ದಾರೆ.

ವಿದ್ಯಾರ್ಥಿ ವೇತನದ ಜೊತೆಗೆ ಪ್ರಶಸ್ತಿಯನ್ನು ಮೂರು ವಿಭಾಗಗಳಲ್ಲಿ ನೀಡುತ್ತಿದೆ. ಒಂದು ‘ಚಿಗುರು’. ಏಳನೇ ಹಾಗೂ ಹತ್ತನೇ ತರಗತಿಯಲ್ಲಿ ಪ್ರತಿ ವಿಷಯದಲ್ಲೂ ಹೆಚ್ಚಿನ ಅಂಕ ಪಡೆದ ಮೂರು ವಿದ್ಯಾರ್ಥಿಗಳಿಗೆ, ಎರಡನೆಯದು ‘ಏಕಲವ್ಯ’. ಇದು ಕ್ರೀಡೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ. ಮೂರನೆಯದು ‘ಕಲಾ ಸಾಮ್ರಾಟ್’. ಇದು ಸೃಜನಶೀಲ ವಿದ್ಯಾರ್ಥಿಗಳಿಗೆ. ಈ ಎಲ್ಲರಿಗೂ ಪ್ರಮಾಣಪತ್ರ, ಹಣ ಹಾಗೂ ಪುಸ್ತಕಗಳನ್ನು ನೀಡಲಾಗುತ್ತದೆ. ಇಲ್ಲಿಯವರೆಗೂ 558 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನವನ್ನು ನೀಡಲಾಗಿದೆ. ಜೊತೆಗೆ 11 ವಿದ್ಯಾರ್ಥಿಗಳಿಗೆ ವೃತ್ತಿ ಶಿಕ್ಷಣ ಕೋರ್ಸುಗಳಿಗೆ ಸಾಲವನ್ನು ನೀಡಿದೆ. ಸಾಲವನ್ನು ನೀಡಲು ಸಂಸ್ಥೆ ಹಲವಾರು ಮಾನದಂಡವನ್ನು ಹಾಕಿಕೊಂಡಿದೆ.

‘ಶಾಲೆಗಳಿಗೆ ಗ್ರಂಥಾಲಯ ಸೌಲಭ್ಯ, ವಿಜ್ಞಾನ ಪ್ರಯೋಗಾಲಯವನ್ನು ಒದಗಿಸಿದ್ದೇವೆ. ಶಾಲೆಗಳ ಶಿಕ್ಷಕರಿಗೆ ಕಂಪ್ಯೂಟರ್ ಬಳಕೆ, ವಿಜ್ಞಾನ ಹಾಗೂ ಗಣಿತ ಪಠ್ಯ ಬೋಧನಾ ಉಪಕರಣಗಳ ಬಗ್ಗೆ ಮಾಹಿತಿ ಶಿಬಿರಗಳನ್ನು ಆಯೋಜಿಸುವುದು ನಮ್ಮ ಮುಂದಿನ ಯೋಜನೆ‘ ಎನ್ನುತ್ತಾರೆ, ಖಜಾಂಚಿ ಹಾಗೂ ಟ್ರಸ್ಟಿ ಮಧುಸೂದನ್ ಐತಾಳ್.

ಸಂಸ್ಥೆಯ ಬಗ್ಗೆ ಇನ್ನಷ್ಟು ಮಾಹಿತಿಗೆ: www.spandana.ngo

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.