ADVERTISEMENT

ಹಬ್ಬಕ್ಕೂ, ಬೇಗೆಗೂ ತಂಪೆರೆಯುವ ಶ್ಯಾವಿಗೆ

ಮಂಜುಶ್ರೀ ಎಂ.ಕಡಕೋಳ
Published 24 ಮಾರ್ಚ್ 2017, 19:30 IST
Last Updated 24 ಮಾರ್ಚ್ 2017, 19:30 IST
ಹಬ್ಬಕ್ಕೂ, ಬೇಗೆಗೂ ತಂಪೆರೆಯುವ ಶ್ಯಾವಿಗೆ
ಹಬ್ಬಕ್ಕೂ, ಬೇಗೆಗೂ ತಂಪೆರೆಯುವ ಶ್ಯಾವಿಗೆ   

ಸುಡುಸುಡು ನೆತ್ತಿ ಸುಡುವ ಬೇಸಿಗೆಗೆ ಮಧ್ಯಕರ್ನಾಟಕದವರು ಯುಗಾದಿ ನಿಮಿತ್ತ ಕಂಡುಕೊಂಡದ್ದು ತಂಪನೆಯ ಬಸಿದ ಶ್ಯಾವಿಗೆ.

ಬಿಸಿಲ ಬೇಗೆಗೆ ದಣಿದ ದೇಹಕ್ಕೆ ಶ್ಯಾವಿಗೆ ತಂಪೆರೆಯುವ ಗುಣ ಹೊಂದಿದೆ. ದಣಿವಾರಿಸಿಕೊಳ್ಳಲು ಶ್ಯಾವಿಗೆ ಪಾಯಸಕ್ಕಿಂತ ಮತ್ತೊಂದು ಸಿಹಿ ಬೇಕೆ ಎನ್ನುತ್ತಾರೆ ಶ್ಯಾವಿಗೆ ರುಚಿ ಬಲ್ಲವರು. ಬಸಿದ ಶ್ಯಾವಿಗೆ ಇಷ್ಟಪಡದವರಿಗೆ ಒಣ ಹಣ್ಣುಗಳಿಂದ ಅಲಂಕೃತಗೊಂಡ ಶ್ಯಾವಿಗೆ ಪಾಯಸ ಇದ್ದೇಇದೆ. ಹಳೇ ತಲೆಮಾರಿನ ಬಹುತೇಕರು  ಮನೆಗಳಲ್ಲಿ ಶ್ಯಾವಿಗೆಯನ್ನು ಮನೆಯಲ್ಲೇ ತಯಾರಿಸಿಕೊಳ್ಳುವುದು ವಾಡಿಕೆಯಾದರೆ, ಹೊಸ ತಲೆಮಾರಿನ ಗೃಹಿಣಿಯರು ರೆಡಿಮೇಡ್ ಶ್ಯಾವಿಗೆ ಮೊರೆ ಹೋಗುತ್ತಾರೆ.

ದಾವಣಗೆರೆ–ಹರಿಹರ, ಹಾವೇರಿ, ಶಿವಮೊಗ್ಗದ ಗಡಿ ಪ್ರದೇಶಗಳಲ್ಲಿ  ಯುಗಾದಿ ಹಬ್ಬದಂದು ಶ್ಯಾವಿಗೆಗೆ ಕಾಯಂ ಸ್ಥಾನ.

ADVERTISEMENT

ಬೇಕಾಗುವ ಸಾಮಗ್ರಿಗಳು

ಶ್ಯಾವಿಗೆ  (ಉದ್ದನೆಯದ್ದಾದರೆ ಒಂದು ಕಟ್ಟು), ರೆಡಿಮೇಡ್ ಆದರೆ ಒಂದು ಜಾಮೂನು ಬಟ್ಟಲಿನಷ್ಟು. ಒಂದು ದೊಡ್ಡಲೋಟ ಹಾಲು, ಎರಡು ಚಮಚ ಸಕ್ಕರೆ, ಪುಡಿ ಬೇವುಬೆಲ್ಲ.

ಮಾಡುವ ವಿಧಾನ

ದಪ್ಪ ತಳದ ಪಾತ್ರೆಯಲ್ಲಿ ನೀರು ಕುದಿಸಿರಿ. ನಂತರ ಶ್ಯಾವಿಗೆ ಹಾಕಿ ಬೇಯಿಸಬೇಕು. ಶ್ಯಾವಿಗೆ ಬೆಂದ ನಂತರ ಹೆಚ್ಚುವರಿ ನೀರನ್ನು ಬಸಿಯಬೇಕು. ಹೀಗೆ ಬಸಿದ ಶ್ಯಾವಿಗೆಗೆ ಹಾಲು ಸಕ್ಕರೆ ಅಥವಾ ಪುಡಿಬೇವುಬೆಲ್ಲವನ್ನು ಹಾಕಿ ಸವಿಯಬಹುದು.

ಶ್ಯಾವಿಗೆ ಪಾಯಸ

ಬೇಕಾಗುವ ಸಾಮಗ್ರಿಗಳು

ಶ್ಯಾವಿಗೆ  1/2 ಕಪ್,  ಸಕ್ಕರೆ 1 ಕಪ್‌, ತುಪ್ಪ 2 ಟೀ ಚಮಚ, ದ್ರಾಕ್ಷಿ–ಗೋಡಂಬಿ, ಬಾದಾಮಿ ಚೂರು, ಹಾಲು 1 ದೊಡ್ಡ ಲೋಟ, ಪುಡಿ ಮಾಡಿದ ಏಲಕ್ಕಿ ಒಂದು ಟೀ ಚಮಚ.

ತಯಾರಿಸುವ ವಿಧಾನ

ದಪ್ಪ ತಳದ ಅಗಲವಾದ ಬಾಣಲೆಯಲ್ಲಿ ಶ್ಯಾವಿಗೆಯನ್ನು ತುಪ್ಪು ಹಾಕಿ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಿ. ದ್ರಾಕ್ಷಿ, ಗೋಡಂಬಿ ಹಾಗೂ ಚೂರು ಮಾಡಿದ ಬಾದಾಮಿಯನ್ನು ತುಪ್ಪದಲ್ಲಿ ಹುರಿದಿಟ್ಟುಕೊಳ್ಳಿ. ಹುರಿದ ಶ್ಯಾವಿಗೆಯನ್ನು ತಟ್ಟೆಯೊಂದರಲ್ಲಿ ತೆಗೆದಿಟ್ಟು, ಅದೇ ಬಾಣಲೆಯಲ್ಲಿ ಹಾಲು ಮತ್ತು ಸ್ವಲ್ಪ ನೀರು ಹಾಕಿ ಕಾಯಲು ಬಿಡಿ, ಹಾಲು ಕುದಿಯುತ್ತಿರುವ ಸಮಯದಲ್ಲಿ ಸಕ್ಕರೆ ಹಾಕಿ, ಸಕ್ಕರೆ ಕರಗಿದ ಮೇಲೆ ಹುರಿದಿಟ್ಟ ಶ್ಯಾವಿಗೆಯನ್ನು ಹಾಕಿ ಚೆನ್ನಾಗಿ ತಿರುವುತ್ತಿರಬೇಕು. ಶ್ಯಾವಿಗೆ ಬೆಂದಿದೆಯೇ ಇಲ್ಲವೇ ಎಂದು ನೋಡಿ, ಹಾಲು ಕಡಿಮೆ ಎನಿಸಿದಲ್ಲಿ ಮತ್ತಷ್ಟು ಹಾಲು ಸೇರಿಸಿ.

ಶ್ಯಾವಿಗೆ ಬೆಂದ  ಮೇಲೆ ಕೊನೆಯಲ್ಲಿ  ಹುರಿದಿಟ್ಟುಕೊಂಡ ದ್ರಾಕ್ಷಿ, ಗೋಡಂಬಿ ಮತ್ತು ಬಾದಾಮಿ ಚೂರುಗಳನ್ನು ಹಾಕಿ, ಕೇಸರಿ ದಳಗಳನ್ನೂ ಹಾಕಬಹುದು. ಕೊನೆಗೆ ಪುಡಿ ಮಾಡಿದ ಏಲಕ್ಕಿಯನ್ನು ಹಾಕಿ ಬಿಸಿಬಿಸಿ ಶ್ಯಾವಿಗೆ ಪಾಯಸವನ್ನು ಸರ್ವ್ ಮಾಡಿ.

***

ಗೋಧಿ ಹುಗ್ಗಿ ತಿಂದು ಹಿಗ್ಗಿ

ಯುಗಾದಿ ಊಟದಲ್ಲಿ ಕೆಲವು ಪ್ರದೇಶಗಳಲ್ಲಿ ಗೋಧಿ ಹುಗ್ಗಿ ಕಡ್ಡಾಯ. ಬಾಯಿಗೂ ರುಚಿ, ಆರೋಗ್ಯಕ್ಕೂ ಉತ್ತಮ. ಅದನ್ನು ಮಾಡೋದು ಹೀಗೆ...

ಬೇಕಾಗುವ ಸಾಮಗ್ರಿಗಳು: ಒಂದು ಸೇರು ಗೋಧಿ. ಬೆಲ್ಲ, ಏಲಕ್ಕಿ, ಗೋಡಂಬಿ, ಒಣದ್ರಾಕ್ಷಿ.

ಮಾಡುವ ವಿಧಾನ: ಗೋಧಿಯನ್ನು 10 ನಿಮಿಷ ನೀರಿನಲ್ಲಿ ನೆನೆಸಿ ನಂತರ ನೆರಳಿನಲ್ಲಿ ಕೆಲ ಕಾಲ ಒಣಗಿಸಿ. ನಂತರ ಒರಳಿನಲ್ಲಿ ಕುಟ್ಟಿ ಮೊರದಲ್ಲಿ ಹೊಟ್ಟು ಬೇರ್ಪಡುವಂತೆ ಕೇರಿಕೊಳ್ಳಿ.

ಕುಕ್ಕರ್‌ಗೆ ಎರಡು ಲೀಟರ್‌ ನೀರು ಹಾಕಿ, ನಂತರ ಕುಟ್ಟಿ ತಯಾರು ಮಾಡಿಟ್ಟುಕೊಂಡಿರುವ ಗೋಧಿ ಹಾಕಿ ನಾಲ್ಕು ಸೀಟಿ ಊದುವವರೆಗೆ ಕಾಯಿರಿ. ನಂತರ ಕುಕ್ಕರ್‌ಗೆ ಬೆಲ್ಲ ಹಾಕಿ ಐದು ನಿಮಿಷ ತಿರುವಿ. ಕುಕ್ಕರ್‌ ಇಳಿಸುವ ಮುನ್ನ ಏಲಕ್ಕಿ ಪುಡಿ, ತುಪ್ಪದಲ್ಲಿ ಕರಿದ ದ್ರಾಕ್ಷಿ, ಗೋಡಂಬಿ ಸೇರಿಸಿ.

ಗೋಧಿ ಹುಗ್ಗಿ ಹಾಲು, ತುಪ್ಪದೊಂದಿಗೆ  ಸವಿಯಲು ಚಂದ.

-ರೇಣುಕಾ ಚಂದ್ರಶೇಖರ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.