ADVERTISEMENT

ಹಬ್ಬದಲ್ಲಿ ಚಪ್ಪರಿಸಲು ತಿಂಡಿ ಮೇಳ

ನಯನಾ ಎಸ್.
Published 23 ಡಿಸೆಂಬರ್ 2016, 19:30 IST
Last Updated 23 ಡಿಸೆಂಬರ್ 2016, 19:30 IST
ಹಬ್ಬದಲ್ಲಿ ಚಪ್ಪರಿಸಲು ತಿಂಡಿ ಮೇಳ
ಹಬ್ಬದಲ್ಲಿ ಚಪ್ಪರಿಸಲು ತಿಂಡಿ ಮೇಳ   
ಕ್ರಿಸ್‌ಮಸ್‌ ಹಬ್ಬದ ಮೆನುವಿನಲ್ಲಿ ‘ಕುಸ್ವಾರ್‌’ಗೆ ಅಗ್ರಸ್ಥಾನ. ಹಬ್ಬ ಹತ್ತಿರವಾಗಿದೆ. ಆದರೆ ಈ ತಿಂಡಿ ತಯಾರಿ ಶುರುವಾಗಿ ಎರಡು ಮೂರು ವಾರಗಳೇ ಕಳೆದಿವೆ. ಮಕ್ಕಳು, ಪುರುಷರು ಮನೆಯಲ್ಲಿ ಗೋದಲಿ, ದೀಪಗಳ ಅಲಂಕಾರದಲ್ಲಿ ನಿರತರಾದರೆ, ಮಹಿಳೆಯರಿಗೆ ತಿಂಡಿ ಮಾಡುವ ಗಡಿಬಿಡಿ.
 
 ಚಕ್ಕುಲಿ, ಕರ್ಜಿಕಾಯಿ, ಉಂಡೆ, ಶಂಕರಪೋಳಿ, ಸೇವು, ಕೋಡುಬಳೆ, ಇತರ ತಿಂಡಿಗಳು ಕ್ರಿಸ್‌ಮಸ್ ಹಬ್ಬದ ಸಂದರ್ಭದಲ್ಲಿ  ಪ್ರತಿ ಕ್ರೈಸ್ತರ ಮನೆಯಲ್ಲೂ ಸಿದ್ಧಗೊಳ್ಳುತ್ತವೆ. ಈ ತಿಂಡಿಗಳ ಮೇಳವನ್ನು ದಕ್ಷಿಣ ಕನ್ನಡದ ಕೊಂಕಣಿ ಕ್ರೈಸ್ತರು ‘ಕುಸ್ವಾರ’ ಎಂದು ಕರೆಯುತ್ತಾರೆ. ಉತ್ತರ ಕನ್ನಡದವರು ‘ಕುಸ್ವಾದ’ ಎನ್ನುತ್ತಾರೆ. ಬೆಂಗಳೂರಿನ ಕನ್ನಡ ಕ್ರೈಸ್ತರು ‘ಕ್ರಿಸ್‌ಮಸ್ ತಿಂಡಿ’ ಎಂದು ಹೇಳುತ್ತಾರೆ. 
 
ಕರಾವಳಿ, ಮಲೆನಾಡಿನ ಮಹಿಳೆಯರು ಚಕ್ಕುಲಿ ತಯಾರಿಗಾಗಿ ಅಕ್ಕಿ, ಉದ್ದನ್ನು ತೊಳೆದು ಒಣಗಿಸಿ, ಹಿಟ್ಟು ಮಾಡಿಟ್ಟುಕೊಂಡಿರುತ್ತಾರೆ. ಕ್ರಿಸ್‌ಮಸ್‌ಗೆ ವಾರವಿದೆ ಎನ್ನುವಾಗ ಮುಂಜಾನೆ ಬೇಗನೆ ಎದ್ದು, ಸಿಹಿ ಹೂರಣ ಸಿದ್ಧಪಡಿಸಿ,  ಹಿಟ್ಟು ಕಲಸಿ, ಕರ್ಜಿಕಾಯಿ ಮಾಡುತ್ತಾರೆ. ಕಾದ ಎಣ್ಣೆಯಲ್ಲಿ ಕರ್ಜಿಕಾಯಿ ಕೆಂಪಗೆ ಕರಿಯುತ್ತಿದ್ದಂತೆ ‘ನತಾಲಾಂಚೆ ನೆವ್ರಿ’ (ನತಾಲ ಎಂದರೆ ಕೊಂಕಣಿ ಕ್ರೈಸ್ತರ ಆಡುಮಾತಿನಲ್ಲಿ ಕ್ರಿಸ್‌ಮಸ್. ನತಾಲ್‌ ಎಂಬುದು ಇಂಗ್ಲಿಷ್‌ನ ‘NEW’ ಪದದ ಅಪಭ್ರಂಶ ಆಗಿರಬಹುದು. ನೆವ್ರಿ ಎಂದರೆ ಕೊಂಕಣಿ ಭಾಷೆಯಲ್ಲಿ ಕರ್ಜಿಕಾಯಿ) ಎಂದು ಹಬ್ಬದ ಆಚರಣೆಗೆ ಮುನ್ನಡಿ ಇಡುತ್ತಾರೆ. ಅಂದರೆ ಹಬ್ಬದ ಆರಂಭವಾಗುವುದು ಇಲ್ಲಿಂದಲೇ.
 
ಬಳಿಕ ಚಕ್ಕುಲಿ, ಶಂಕರಪೋಳಿ, ಅತ್ರಸ, ಸೇವು ತಯಾರಿ. ಹಿಟ್ಟಿನಲ್ಲಿ ದಕ್ಷಿಣ ಕನ್ನಡದ ಕ್ರೈಸ್ತರು ತಯಾರಿಸುವ ಕೀಡೆ (ಹುಳದ ಆಕೃತಿ), ಬೋರಾಂ (ಬೋರೆ ಹಣ್ಣಿನ ಆಕೃತಿ) ತಿಂಡಿಗಳು ಅಪ್ಪಟ ಸ್ಥಳೀಯ ಸಂಸ್ಕೃತಿಯನ್ನು ಅರಹುತ್ತವೆ. 
 
ಅಕ್ಕಿಯನ್ನು ನುಣ್ಣಗೆ ರುಬ್ಬಿ, ಅಚ್ಚಿಗೆ ಹೊಯ್ದು ಬಳಿಕ ಎಣ್ಣೆಯಲ್ಲಿ ಕರಿಯುವ ‘ಕೊಕ್ಕಿಸಾಂ’ ಎಂಬ ಹೂವಿನ ಆಕೃತಿಯ ತಿಂಡಿ ವಿಶೇಷ ಕಳೆ ನೀಡುತ್ತದೆ. ಇವೆಲ್ಲ ಎಣ್ಣೆಯಲ್ಲಿ ಕರಿದ ತಿಂಡಿಗಳು. ಚಳಿಗಾಲಕ್ಕೆ ಮುದ ನೀಡುವಂಥವು. ಜೊತೆಗೆ ಅಕ್ಕಿ ಹಿಟ್ಟಿನ ಉಂಡೆ, ರವೆ ಉಂಡೆಯನ್ನು ಮಾಡುತ್ತಾರೆ.
 
ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿ, ಮಲೆನಾಡಿನ ಕ್ರೈಸ್ತರು ಈ ತಿಂಡಿಗಳನ್ನು ಇಲ್ಲೂ ಸಿದ್ಧಪಡಿಸುತ್ತಾರೆ.  ಇಲ್ಲಿನ ಕನ್ನಡ ಕ್ರೈಸ್ತರು ಕ್ರಿಸ್‌ಮಸ್‌ ತಿಂಡಿಯಲ್ಲಿ ಆದ್ಯತೆ ನೀಡುವುದು ಸಿಹಿಗೆ. ಅವುಗಳಲ್ಲಿ ಕಜ್ಜಾಯ, ಕರ್ಜಿಕಾಯಿ, ಗಲಗಲಿ ಮತ್ತು ಅಕ್ಕಿರವೆ ಹಾಗೂ ಬಿಳಿಬೆಲ್ಲ ಬೆರೆಸಿ ಮಾಡಿದ ಸಿಹಿಕಡುಬು ಮುಖ್ಯವಾದವು. ಇವುಗಳ ಜೊತೆಗೆ ಚಕ್ಕುಲಿ, ಕರ್ಜಿಕಾಯಿ, ಕುಕಿಗಳನ್ನು ಅವರು ತಯಾರಿಸುತ್ತಾರೆ. 
 
‘ಪ್ರತಿ ವರ್ಷ ಹಬ್ಬಕ್ಕೂ ಮುನ್ನ ಕುಸ್ವಾರ ತಯಾರಿಸಲೆಂದೇ ಸಮಯ ಮೀಸಲಿರಿಸುತ್ತೇನೆ’ ಎನ್ನುತ್ತಾರೆ, ಜೆ.ಪಿ.ನಗರ 9ನೇ ಹಂತದಲ್ಲಿ ವಾಸವಿರುವ ಮಂಗಳೂರು ಮೂಲದ ರೀಟಾ ಡಿಸೋಜಾ.
 
‘ಕನಕಪುರದ ಸೋಮನಹಳ್ಳಿಯ ಆಲೆಮನೆಯಲ್ಲಿ ಸಿದ್ಧವಾಗುತ್ತಿದ್ದ ಬೆಲ್ಲದಿಂದ ತಯಾರಿಸಿದ ಕಡುಬಿನ ಸವಿ ವಿಶೇಷ ಎನಿಸುತ್ತಿತ್ತು. ಆ ಬೆಲ್ಲ ಈಗ ಸಿಗುತ್ತಿಲ್ಲ. ಹಿಂದೆ ಒಲೆಯ ಮೇಲೆ ಮಣ್ಣಿನ ಗಡಿಗೆಯಲ್ಲಿ ಹಿಟ್ಟು ಬೇಯಿಸಲು ಇಟ್ಟು, ಮುಚ್ಚಳದ ಮೇಲೆ ಬಿಸಿ ಮರಳನ್ನಿಟ್ಟು ಅದರ ಮೇಲೆ ಇನ್ನೊಂದು ಗಡಿಗೆಯನ್ನಿಟ್ಟು ಕೇಕ್‌ ತಯಾರಿಸಲಾಗುತ್ತಿತ್ತು’ ಎಂದು ನೆನಪಿಗೆ ಜಾರುತ್ತಾರೆ ಮಲ್ಲೇಶ್ವರದ ಎ.ಶಾಂತುರಾಜ್‌.
 
**
ಹಿಂದೆ ಕ್ರಿಸ್‌ಮಸ್‌ ತಿಂಡಿ ಕುಸ್ವಾರವನ್ನು ಅಲಂಕೃತ ಬುಟ್ಟಿಗಳಲ್ಲಿ ತುಂಬಿ ಎತ್ತಿನ ಬಂಡಿಗಳ ಮೂಲಕ ಬೀಗರ ಮನೆ, ಗಾಡ್‌ ಮದರ್‌, ಗಾಡ್‌ ಫಾದರ್‌ ಮನೆಗೆ ಕಳುಹಿಸಲಾಗುತ್ತಿತ್ತು.
-ನಾ.ಡಿಸೋಜಾ
ಸಾಹಿತಿ

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.