ADVERTISEMENT

‘ಅದ್ಭುತ’ದಲ್ಲಿ ಅಂಜನಾ ಛಾಪು

​ಪ್ರಜಾವಾಣಿ ವಾರ್ತೆ
Published 29 ಜುಲೈ 2016, 19:30 IST
Last Updated 29 ಜುಲೈ 2016, 19:30 IST
‘ಅದ್ಭುತ’ದಲ್ಲಿ ಅಂಜನಾ ಛಾಪು
‘ಅದ್ಭುತ’ದಲ್ಲಿ ಅಂಜನಾ ಛಾಪು   

ರುಕ್ಮಿಣಿಯಿಂದಾಗಿ ಕೃಷ್ಣ ವಿದ್ಯಾವಂತನಾಗುವ ಕಥೆ ಕೇಳಿದ್ದೀರಾ? ಅರೆ! ಇದ್ಯಾವ ಪುರಾಣದಲ್ಲಿ ಬರುತ್ತದೆ. ಕೃಷ್ಣನಿಗೆ ಇಂಥದ್ದೊಂದು ಚರಿತ್ರೆಯೂ ಇದೆಯಾ ಎಂದು ಹುಬ್ಬೇರಿಸಬೇಡಿ.

ಇವನು ದ್ವಾಪರಯುಗದ ಕೃಷ್ಣನಲ್ಲ, ಕಲಿಯುಗದವನು. ಸುವರ್ಣ ಟಿ.ವಿ.ಯಲ್ಲಿ ಪ್ರಸಾರವಾಗುತ್ತಿದ್ದ ‘ಕೃಷ್ಣ ರುಕ್ಮಿಣಿ’ ಧಾರಾವಾಹಿಯ ಪಾತ್ರಧಾರಿ. ಕೃಷ್ಣನಲ್ಲಿ ಬದಲಾವಣೆ ತರುವ ರುಕ್ಮಿಣಿ ಪಾತ್ರದಲ್ಲಿ ಗಮನ ಸೆಳೆದವರು ಅಂಜನಾ. ಬಟ್ಟಲುಗಣ್ಣಿನ ಈ ಸುಂದರಿ ಈಗ ‘ಅದ್ಭುತ’ ಎಂಬ ಹಾರರ್ ಮತ್ತು ಥ್ರಿಲ್ಲರ್ ಚಿತ್ರದ ಮೂಲಕ ‘ಚಂದನವನ’ ಪ್ರವೇಶಿಸಿದ್ದಾರೆ.

ಕೋಲಾರ ಜಿಲ್ಲೆ ಚಿಂತಾಮಣಿ ಮೂಲದ ಅಂಜನಾ ಬೆಳೆದಿದ್ದು, ಓದಿದ್ದು ಬೆಂಗಳೂರಿನಲ್ಲಿಯೇ. ತಾತ ನಾಟಕ ಕಲಾವಿದರಾಗಿದ್ದರಿಂದ, ನಟನೆಯ ಚುಂಗು ರಕ್ತಗತವಾಗಿಯೇ ಹರಿದು ಬಂದಿತ್ತು.

ತಂದೆ ಶ್ರೀನಿವಾಸ್ ಸಹ ರಂಗಭೂಮಿ ಹಿನ್ನೆಲೆಯವರು. ಆಕಾಶವಾಣಿಗೆ ಹಲವು ನಾಟಕಗಳನ್ನು ಮಾಡಿಸಿದ ಅನುಭವ ಹೊಂದಿದ್ದರು. ಚಿಕ್ಕಂದಿನಲ್ಲಿ ನಾಟಕಗಳಲ್ಲಿ ನಟಿಸಿದ್ದ ತಾಯಿ ರಾಧಾ ಮದುವೆ ನಂತರ ಅಭಿನಯಕ್ಕೆ ಗುಡ್‌ ಬೈ ಹೇಳಿದ್ದರು. ಅವರೆಲ್ಲರ ಬಳುವಳಿಯಾಗಿ ಕಿರುತೆರೆಯಲ್ಲಿ ಛಾಪು ಮೂಡಿಸಿದ್ದ ಅಂಜನಾ ಈಗ ಹಿರಿತೆರೆಗೆ ಬಂದಿದ್ದಾರೆ.

ಗುರು ಪ್ರೇರಣೆ
ಶಾಲಾ ದಿನಗಳಿಂದಲೂ ನಾಟಕ, ನೃತ್ಯ ಸೇರಿ ಹಲವು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಅಂಜನಾ ಮುಂದಿದ್ದರು. ಕಾಲೇಜು ಮೆಟ್ಟಿಲು ಹತ್ತಿದಾಗಲೂ ಅದನ್ನು ಮುಂದುವರೆಸಿಕೊಂಡು ಬಂದಿದ್ದ ಅವರು, ತಮ್ಮ ಸೌಂದರ್ಯ ಮತ್ತು ಮೈಮಾಟದಿಂದ ಹುಡುಗರ ನಿದ್ದೆಗೆಡಿಸಿದ್ದರು.

ತನ್ನ ಶಿಷ್ಯೆಯ ಪ್ರತಿಭೆಯನ್ನು ಗುರುತಿಸಿದ್ದ ಶಿಕ್ಷಕಿಯೊಬ್ಬರು, ‘ನೋಡಲು ತುಂಬಾ ಅಂದವಾಗಿದ್ದೀಯಾ. ನಟನೆ ಮತ್ತು ನೃತ್ಯವನ್ನೂ ಕಲಿತಿದ್ದೀಯಾ. ನೀನ್ಯಾಕೆ ಧಾರಾವಾಹಿ ಮತ್ತು ಸಿನಿಮಾಗಳಿಗೆ ಪ್ರಯತ್ನಿಸಬಾರದು’ ಎಂದು ಸಲಹೆ ನೀಡಿದ್ದರು.

‘ನಮ್ಮ ಮೇಡಂ ನೀಡಿದ ಸಲಹೆಯಂತೆ, ಪೋಟೊ ಶೂಟ್ ಮಾಡಿಸಿ ಕೆಲವರಿಗೆ ತೋರಿಸಿದೆ. ಈ ವೇಳೆ ರವಿ ಆರ್‌. ಗರಣಿ ಅವರ ‘ಕೃಷ್ಣ– ರುಕ್ಮಿಣಿ’ ಧಾರಾವಾಹಿಯ ಪ್ರಮುಖ ಪಾತ್ರಕ್ಕೆ ಆಡಿಷನ್‌ಗೆ ಕರೆ ಬಂತು. ಮೊದಲ ಆಡಿಷನ್‌ನಲ್ಲೇ ರುಕ್ಮಿಣಿ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿದರು’ ಎಂದು ತನ್ನ ಕಿರುತೆರೆಯ ಪಯಣ ಕುರಿತು ಹೇಳುವ ಅಂಜನಾ, ‘ಗುರು ನೀಡಿದ ಸಲಹೆ ನನ್ನನ್ನು ಇಲ್ಲಿಯವರೆಗೆ ತಂದು ನಿಲ್ಲಿಸಿದೆ’ ಎಂದು ಕೃತಜ್ಞತೆ ಸಲ್ಲಿಸುತ್ತಾರೆ.

ತೆಲುಗಲ್ಲೂ ಮೋಡಿ
‘ಕೃಷ್ಣ– ರುಕ್ಮಿಣಿ’ ನಂತರ ಅಂಜನಾಗೆ ತೆಲುಗಿನ ‘ಗೋರಂತ ದೀಪಂ’ ಎಂಬ ಧಾರಾವಾಹಿಯಲ್ಲಿ ನಟಿಸುವ ಅವಕಾಶ ಸಿಕ್ಕಿತ್ತು. ವಿ.ವಿ.ವರಾಂಜನೇಯಲು ನಿರ್ದೇಶನದ ನಾಯಕಿ ಕೇಂದ್ರಿತ ಈ ಧಾರಾವಾಹಿಯೂ ಅವರಿಗೆ ಹೆಸರು ತಂದು ಕೊಟ್ಟಿತು. ಇದರ ಬೆನ್ನಲ್ಲೇ ಟಾಲಿವುಡ್‌ನ ‘ಮಲ್ಲಿಗಾಡು ಮ್ಯಾರೇಜ್ ಬ್ಯುರೋ’ ಚಿತ್ರದಲ್ಲಿ ನಟಿಸುವ ಅವಕಾಶ ಒಲಿದು ಬಂತು.

‘ಶ್ರೀಕಾಂತ್ ನಾಯಕರಾಗಿದ್ದ ಆ ಚಿತ್ರದಲ್ಲಿ ಕಾಣಿಸಿಕೊಂಡ ಬಳಿಕ, ತಮಿಳಿನ ‘ಉಯಿರ್ ಕುಡಿ’ ಮತ್ತು ಕನ್ನಡದ ‘ಅದ್ಭುತ’ ಎಂಬ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾದೆ. ಎರಡೂ ಚಿತ್ರಗಳ ಶೂಟಿಂಗ್ ಮುಗಿದಿದೆ. ಈ ಪೈಕಿ ತಮಿಳು ಸಿನಿಮಾದ ಪೋಸ್ಟ್‌ ಪ್ರೊಡಕ್ಷನ್ ಕೆಲಸ ನಡೆಯುತ್ತಿದ್ದರೆ ಕನ್ನಡ ಸಿನಿಮಾ ಕೆಲ ವಾರಗಳಲ್ಲೇ ತೆರೆಗೆ ಬರಲಿದೆ’ ಎಂದು ಅಂಜನಾ ತಮ್ಮ ಸಿನಿಮಾಯಾನ ಕುರಿತು ಹೇಳುತ್ತಾರೆ. ಅಂದ ಹಾಗೆ ಅವರೀಗ ತಮಿಳು ಮತ್ತು ಕನ್ನಡದ ಚಿತ್ರವೊಂದಕ್ಕೆ ಸಹಿ ಹಾಕಿದ್ದಾರೆ.

ಸದ್ಯದಲ್ಲೇ ಬಿಡುಗಡೆಯಾಗಲಿರುವ ತಮ್ಮ ‘ಅದ್ಭುತ’ ಸಿನಿಮಾ ಶೀರ್ಷಿಕೆಯಷ್ಟೇ ಅದ್ಭುತವಾಗಿರಲಿದ್ದು ಎಲ್ಲರಿಗೂ ಇಷ್ಟವಾಗಲಿದೆ ಎನ್ನುವ ಅಂಜನಾ, ಚಿತ್ರದಲ್ಲಿ ಕಾಲೇಜು ಹುಡುಗಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರಂತೆ.

‘ತೆಲುಗು ಸಿನಿಮಾ ಮುಗಿಸಿಕೊಂಡು ಬಂದ ನಂತರ ಕನ್ನಡದಲ್ಲಿ ಮೊದಲಿಗೆ ಸಿಕ್ಕ ಚಿತ್ರವಿದು. ಲವರ್ ಪಾತ್ರಕ್ಕೆ ಸೆಂಟಿಮೆಂಟ್ ಟಚ್ ಕೊಟ್ಟಿದ್ದಾರೆ ನಿರ್ದೇಶಕರು. ಎರಡು ಹಾಡುಗಳ ಪೈಕಿ ನನಗೂ ಒಂದು ಹಾಡಿದೆ. ಕುತೂಹಲ ಕೆರಳಿಸುವ ನನ್ನ ಪಾತ್ರವನ್ನು ಎಲ್ಲರೂ ಮೆಚ್ಚಿಕೊಳ್ಳುತ್ತಾರೆ’ ಎಂಬ ವಿಶ್ವಾಸ ಅವರದು.

ನಂದಿಬೆಟ್ಟ ಬಲು ಇಷ್ಟ
ಚಿಕ್ಕಂದಿನಲ್ಲಿ ಮನೆಯವರು ನಂದಿಬೆಟ್ಟಕ್ಕೆ ಕರೆದುಕೊಂಡು ಹೋಗಿ, ಹೆಗಲು ಮೇಲೆ ಕೂರಿಸಿಕೊಂಡು ಅಲ್ಲಿನ ಸೊಬಗನ್ನು ತೋರಿಸಿದ ನೆನಪುಗಳನ್ನು ಮೆಲುಕು ಹಾಕುವ ಅಂಜನಾಗೆ ಈ ಬೆಟ್ಟವೆಂದರೆ ಬಲು ಇಷ್ಟವಂತೆ.

‘ನಂದಿಬೆಟ್ಟಕ್ಕೂ ನನಗೂ ವಿಶೇಷ ಅನುಬಂಧ. ಬಿಡುವಾದಾಗಲೆಲ್ಲ ಅಮ್ಮ ಮತ್ತು ತಂಗಿಯರ ಜತೆ ಅಲ್ಲಿಗೆ ಹೋಗಿ ಬರುತ್ತೇನೆ. ಎಷ್ಟು ಬೇಸರವಿದ್ದರೂ, ಅಲ್ಲಿಗೆ ಹೋಗಿ ಕೆಲ ಹೊತ್ತು ಸುತ್ತಾಡಿದರೆ ಮನಸ್ಸಿಗೆ ಸಮಾಧಾನವಾಗುತ್ತದೆ’ ಎಂದು ನುಡಿಯುತ್ತಾರೆ.

‘ನನಗೆ ಚಿಕನ್ ಅಚ್ಚುಮೆಚ್ಚು. ಡಯಟ್‌ನಲ್ಲಿ ಇದ್ದಾಗ ಅಮ್ಮ ಚಿಕನ್ ತಿನ್ನಲು ಬಿಡುವುದಿಲ್ಲ’ ಎಂದು ದೂರುವ ಅಂಜನಾ, ಅಮ್ಮನ ಕೈ ಅಡುಗೆಯಷ್ಟು ರುಚಿ ಬೇರಾವುದು ಇಲ್ಲ ಎನ್ನುತ್ತಾರೆ.

ಫಿಟ್‌ನೆಸ್‌ಗಾಗಿ ನಿತ್ಯ ಬೆಳಿಗ್ಗೆ ಯೋಗಾಭ್ಯಾಸ, ಜಿಮ್‌ನಲ್ಲಿ ವರ್ಕೌಟ್‌ ಮಾಡುತ್ತಾರೆ. ಬಿಡುವಾದಾಗ ಬ್ಯಾಡ್ಮಿಂಟನ್ ಆಡುತ್ತಾರೆ. ಅಂದಹಾಗೆ ಅಂಜನಾರ ನೆಚ್ಚಿನ ಆರಾಧ್ಯ ದೈವ ಆಂಜನೇಯ. ಅದು ಅವರ ಮನೆ ದೇವರು ಕೂಡ.

‘ನನಗೆ ಚಿಕ್ಕಂದಿನಿಂದಲೂ ಆಂಜನೇಯ ಸ್ವಾಮಿ ಎಂದರೆ ಇಷ್ಟ. ಹಾಗಾಗಿ ಆಂಜನೇಯನ ತಾಯಿಯ ಹೆಸರನ್ನೇ ನನಗೆ ಇಟ್ಟಿದ್ದಾರೆ. ಹನುಮಂತನ ಭಾವಚಿತ್ರ ಸದಾ ನನ್ನ ಪರ್ಸ್‌ನಲ್ಲಿ ಇರುತ್ತದೆ. ನಾ ಮಾಡುವ ಕೆಲಸಗಳಿಗೆ ಆತನೇ ಸ್ಫೂರ್ತಿ’ ಎನ್ನುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.