ADVERTISEMENT

‘ಕೆಲಸದ ಮೋಹವೇ ಇಷ್ಟೆಲ್ಲಾ ಬೆಳೆಸಿದೆ’

ಪ್ರಜಾವಾಣಿ ವಿಶೇಷ
Published 30 ಜುಲೈ 2015, 19:34 IST
Last Updated 30 ಜುಲೈ 2015, 19:34 IST

* 92.7 ಬಿಗ್‌ ಎಫ್‌ಎಂನ ಬೆನಡ್ರಿಲ್‌ ಬಿಗ್‌ ಗೋಲ್ಡನ್‌ ವಾಯ್ಸ್‌ ಜೊತೆಗಿನ ನಿಮ್ಮ ಸಹಯೋಗ ಕುರಿತು ಹೇಳಿ?
92.7 ಬಿಗ್‌ ಎಫ್‌ಎಂ ಜೊತೆಗಿನ ಪ್ರಯಾಣ ಅದ್ಭುತವಾಗಿದೆ. ಬೆನಡ್ರಿಲ್‌ ಬಿಗ್‌ ಗೋಲ್ಡನ್‌ ವಾಯ್ಸ್‌ ಕಾರ್ಯಕ್ರಮದ  ಜೊತೆಗೆ ನಾನು ಕೈಜೋಡಿಸಿರುವುದು ಇದು ಎರಡನೇ ಬಾರಿ. ಅದ್ಭುತ ಕಂಠದ ಪ್ರತಿಭೆಗಳನ್ನು ಹೆಕ್ಕಿ ತೆಗೆಯುವ ವಿಶಿಷ್ಟ  ಕಾರ್ಯಕ್ರಮವಿದು. ಬೇರೆಲ್ಲ ಕಾರ್ಯಕ್ರಮಗಳಿಗಿಂತಲೂ ಇದು  ತುಂಬ ಭಿನ್ನ ಎನ್ನುವುದು ನನ್ನ ಅನಿಸಿಕೆ.  ಇದು ಟೀವಿ ಕಾರ್ಯಕ್ರಮ ಅಲ್ಲವಾದ್ದರಿಂದ ಇಲ್ಲಿ ಕ್ಯಾಮೆರಾ ಮತ್ತು ಲೈಟ್‌ಗಳ ಸಪ್ಪಳವಿಲ್ಲ.  ಸ್ಪರ್ಧಿಗಳು ಹೇಗಿದ್ದಾರೆ ಎಂದು ನೋಡಲು ಸಾಧ್ಯವಿಲ್ಲ.  ಇಲ್ಲಿ ಅಪ್ಪಟ ಸಂಗೀತವಿದೆ ಮತ್ತು ಆ ಸಂಗೀತಕ್ಕೆ ಕೇಳಿದವರ ಮನಸ್ಸನ್ನು ಉಲ್ಲಸಿತಗೊಳಿಸುವ ಶಕ್ತಿ ಇದೆ. 

* ನೀವು ಈ ಕಾರ್ಯಕ್ರಮದ ಸೆಲಬ್ರಿಟಿ ತೀರ್ಪುಗಾರ ಮತ್ತು ಮೆಂಟರ್‌. ಈ ಎರಡೂ ಸ್ಥಾನಗಳನ್ನು ನಿಭಾಯಿಸುವಾಗ ನಿಮಗೆ ಎದುರಾಗುವ ಅತ್ಯಂತ ಕ್ಲಿಷ್ಟ ಸವಾಲು ಯಾವುದು?
ಸ್ಪರ್ಧೆಯಲ್ಲಿ ಭಾಗವಹಿಸುವವರ ಸಂಖ್ಯೆ  ತುಂಬ ದೊಡ್ಡದಿದೆ. ಅವರಲ್ಲಿ ಅತ್ಯುತ್ತಮ ಗಾಯಕರನ್ನು ಹೆಕ್ಕಿ ತೆಗೆಯಬೇಕಾದ್ದು ನಮ್ಮ ಕರ್ತವ್ಯ. ಇಂತಹ ಸಂದರ್ಭದಲ್ಲಿ ಕೆಲವು ಉತ್ತಮ ಗಾಯಕರನ್ನೂ ನಾವು ಸ್ಪರ್ಧೆಯಿಂದ ಹೊರಗೆ ಕಳುಹಿಸಬೇಕಾಗುತ್ತದೆ. ಏಕೆಂದರೆ, ಅವರಿಗಿಂತಲೂ ಚೆನ್ನಾಗಿ ಹಾಡುವ  ಪ್ರತಿಭೆಗಳು ಸಿಕ್ಕಾಗ ಅವರನ್ನು ಸ್ಪರ್ಧೆಯಿಂದ ಕೈಬಿಡುವುದು ಅನಿವಾರ್ಯ. ಇಂತಹ ಸಂದರ್ಭ ನಮ್ಮನ್ನು ಭಾವನಾತ್ಮಕವಾಗಿ ತುಂಬ ಇಕ್ಕಟ್ಟಿಗೆ ಸಿಲುಕಿಸುತ್ತದೆ. ಹಾಗಾಗಿ,  ಸ್ಪರ್ಧಿಗಳನ್ನು ಎಲಿಮಿನೇಟ್‌ ಮಾಡುವುದೇ ನನಗೆ ಸವಾಲಿನ ಕೆಲಸ.

* ಸಂಗೀತ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವಿಕೆ, ಸಿನಿಮಾಕ್ಕೆ ಹಾಡುವುದು, ಗೀತ ರಚನೆ, ಆಲ್ಬಂ ತಯಾರಿಕೆ ಹೀಗೆ ಏಕಕಾಲದಲ್ಲಿ ಅನೇಕ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತೀರಿ. ಇದು ಹೇಗೆ ಸಾಧ್ಯ?
ಸಂಗೀತ ನನ್ನ ಪ್ಯಾಷನ್‌. ನಮ್ಮ ಕೆಲಸದ ಬಗ್ಗೆ ನಾವು ವಿಪರೀತ ಮೋಹ ಬೆಳೆಸಿಕೊಂಡಾಗ ಎಲ್ಲವನ್ನೂ ಸಾಧಿಸಬಹುದು ಎಂದು ನಂಬಿದವನು ನಾನು. ನಮ್ಮಲ್ಲಿ ಈ ಭಾವನೆ ಇದ್ದಾಗ ‘ಸಮಯ ಸಿಗುವುದಿಲ್ಲ’ ಎಂಬ ಪದ ನಮ್ಮ ಮನಸ್ಸಿನಲ್ಲಿ  ಸುಳಿಯುವುದಿಲ್ಲ. ಕೆಲಸ ತಪ್ಪಿಸಿಕೊಳ್ಳಲು ಕಾರಣ ಹುಡುಕುವುದಿಲ್ಲ. 

* ನಿಮ್ಮ ಪ್ರಕಾರ ಸಂಗೀತ ಅಂದರೆ...
ಸಂಗೀತ ನನ್ನ ವ್ಯಕ್ತಿತ್ವದ ಹರವು ವಿಸ್ತರಿಸಿದೆ. ಸಂಗೀತ ಮತ್ತು ನಾನು ಬೇರೆ ಬೇರೆ ಎಂದು ನಾನು ಯಾವತ್ತಿಗೂ ಭಾವಿಸಿಲ್ಲ.  ಸಂಗೀತವನ್ನು ನಾನು ಉಸಿರಾಡುತ್ತಿದ್ದೇನೆ. ಅದು ನನ್ನನ್ನು ಪ್ರತಿದಿನವೂ ಮತ್ತಷ್ಟು, ಮಗದಷ್ಟು ಬೆಳೆಸುತ್ತಿದೆ.

* ನಿಮ್ಮ ಮಕ್ಕಳಿಬ್ಬರೂ ಒಳ್ಳೆಯ ಹಾಡುಗಾರರಂತೆ?
ನನ್ನ ಇಬ್ಬರು ಮಕ್ಕಳು ಪುಟ್ಟ ವಯಸ್ಸಿನಲ್ಲೇ ಸಂಗೀತದ ಕುರಿತು ಅಪರಿಮಿತ ಒಲವು ಬೆಳೆಸಿಕೊಂಡಿದ್ದಾರೆ.  ನೀವು ಸಂಗೀತ ಕಲಿಯಿರಿ ಎಂದು ನಾನು ಅವರ ಮೇಲೆ ಯಾವತ್ತೂ ಒತ್ತಡ ಹೇರಲಿಲ್ಲ. ಸಿದ್ಧಾರ್ಥ್‌ ಸಾಕಷ್ಟು ಸಿನಿಮಾಗಳಿಗೆ ಹಾಡಿದ್ದಾನೆ. ಆತನ ಧ್ವನಿ ಸಂಗೀತವಲಯದಲ್ಲಿ ಮೋಡಿ ಮಾಡಿದೆ. ನಾನು ನೀಡುವ ಸಂಗೀತ ಕಾರ್ಯಕ್ರಮದಲ್ಲಿ ವೇದಿಕೆ ಮೇಲೆ ನಿಂತು ನನ್ನ ಮಗ ಹಾಡಿದ ಹಿಟ್‌ ಸಾಂಗ್‌ ಅನ್ನು ಹಾಡುವಾಗ ನನ್ನಲ್ಲಿ ವಿಶೇಷ ಪುಳಕ ಮೂಡುತ್ತದೆ. ಯಾವ ತಂದೆಗಾದರೂ ಸರಿ ಅಂತಹ ಕ್ಷಣಗಳು ಧನ್ಯತಾ ಭಾವ ಮೂಡಿಸುತ್ತವೆ.

* ನೀವು ಸಿಕ್ಕಾಪಟ್ಟೆ ಫುಡ್ಡಿ ಅಂತೆ, ನಿಜಾನಾ?
ಹೌದು, ನಿಜ.

* ‘ಬ್ರೆಥ್‌ಲೆಸ್‌’ನಂತಹ ಜನಪ್ರಿಯ ಆಲ್ಬಂ ಅನ್ನು ನಿಮ್ಮಿಂದ ಮತ್ತೆ ಯಾವಾಗ ನಿರೀಕ್ಷಿಸಬಹುದು?
ಆ ಬಗೆಯ ಮತ್ತೊಂದು ಆಲ್ಬಂ ಅನ್ನು ರೂಪಿಸುವ ಬಗ್ಗೆ ನಾನು ಇನ್ನೂ ಯೋಚಿಸಿಲ್ಲ. ಅಂತಹವುಗಳನ್ನು ಜೀವನದಲ್ಲಿ ಒಮ್ಮೆ ಮಾತ್ರ ಮಾಡಲು ಸಾಧ್ಯ. ಈಗ ಅದಕ್ಕಿಂತಲೂ ಭಿನ್ನವಾದುದನ್ನು ಮಾಡುವ ಬಗ್ಗೆ ಯೋಚಿಸುತ್ತಿದ್ದೇನೆ. ಯಾಕೆಂದರೆ ನನಗೆ ಜನಪ್ರಿಯತೆ ತಂದುಕೊಟ್ಟ ‘ಬ್ರೆಥ್‌ಲೆಸ್‌’ಗೆ ಯಾವಾಗಲೂ ಮೊದಲ ಸ್ಥಾನ ಇರುತ್ತದೆ.

* ನಿಮ್ಮ ಮುಂದಿನ ಯೋಜನೆಗಳು?
ಈಗ ನಾನು ‘ಕಟ್ಟಿ ಬಟ್ಟಿ’ ಸಿನಿಮಾಕ್ಕೆ ಕೆಲಸ ಮಾಡುತ್ತಿದ್ದೇನೆ. ನಿಖಿಲ್‌ ಅಡ್ವಾಣಿ ನಿರ್ದೇಶನದ ಈ ಚಿತ್ರ ಸೆಪ್ಟೆಂಬರ್‌ನಲ್ಲಿ ತೆರೆಕಾಣಲಿದೆ. ಬೆನಡ್ರಿಲ್‌ ಬಿಗ್‌ ಗೋಲ್ಡನ್‌ ವಾಯ್ಸ್‌ನ ಕಳೆದ ವರ್ಷದ ವಿಜೇತ ಕೂಡ ಈ ಚಿತ್ರದಲ್ಲಿ ಹಾಡಿದ್ದಾರೆ. ಕಂಗನಾ ರನೋಟ್‌ ಮತ್ತು ಇಮ್ರಾನ್‌ ಖಾನ್‌ ಈ ಚಿತ್ರದ ಮುಖ್ಯ ಭೂಮಿಕೆಯಲ್ಲಿದ್ದಾರೆ. ಇದರ ಜೊತೆಗೆ ‘ರಾಕ್‌ಆನ್‌ 2’ ಚಿತ್ರಕ್ಕೂ ಕೆಲಸ ಮಾಡುತ್ತಿದ್ದೇನೆ.

* ಸ್ಯಾಂಡಲ್‌ವುಡ್‌ ಸಂಗೀತದ ಬಗ್ಗೆ ನಿಮ್ಮ ಅಭಿಪ್ರಾಯ?
ಸ್ಯಾಂಡಲ್‌ವುಡ್‌ನಲ್ಲಿ ಅದ್ಭುತವೆನಿಸುವಂತಹ ಸಂಗೀತ ಸಂಯೋಜಕರಿದ್ದಾರೆ. ನಾನು ಕನ್ನಡ ಚಿತ್ರಗಳ ಅನೇಕ ಸೂಪರ್‌ಹಿಟ್‌ ಗೀತೆಗಳಿಗೆ ದನಿಯಾಗಿದ್ದೇನೆ. ಹಂಸಲೇಖ ಸರ್‌, ಅರ್ಜುನ್‌ ಜನ್ಯ ಮತ್ತು ಹರಿಕೃಷ್ಣ ನನ್ನ ಅಚ್ಚುಮೆಚ್ಚಿನ ಸಂಗೀತ ನಿರ್ದೇಶಕರು. ಅವರೊಂದಿಗೆ ಕೆಲಸ ಮಾಡುವುದಕ್ಕೆ, ಹಾಡುವುದಕ್ಕೆ ನನಗೆ ತುಂಬ ಖುಷಿ ಆಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.