ADVERTISEMENT

‘ಬಿಗ್‌ಬಾಸ್‌’ನಿಂದ ಹೊರಬಿದ್ದ ರಾಹುಲ್‌ ಮಹಾಜನ್‌

​ಪ್ರಜಾವಾಣಿ ವಾರ್ತೆ
Published 26 ಜನವರಿ 2015, 19:30 IST
Last Updated 26 ಜನವರಿ 2015, 19:30 IST
‘ಬಿಗ್‌ಬಾಸ್‌’ನಿಂದ ಹೊರಬಿದ್ದ ರಾಹುಲ್‌ ಮಹಾಜನ್‌
‘ಬಿಗ್‌ಬಾಸ್‌’ನಿಂದ ಹೊರಬಿದ್ದ ರಾಹುಲ್‌ ಮಹಾಜನ್‌   

ವಿಚಿತ್ರ ವರ್ತನೆ ಹಾಗೂ ನೃತ್ಯದಿಂದ ಜನರ ಮೊಗದಲ್ಲಿ ನಗು ಮೂಡಿಸುವ ರಾಹುಲ್‌ ಮಹಾಜನ್‌ ಅವರ ಮುಖದಲ್ಲಿ ಈಗ ದುಃಖ ಆವರಿಸಿದೆ. ಇದಕ್ಕೆ ಕಾರಣ ಹಿಂದಿ ಅವತರಣಿಕೆಯ ‘ಬಿಗ್‌ಬಾಸ್‌ ಹಲ್ಲಾ ಬೋಲ್‌’ ಸರಣಿಯಿಂದ ಭಾನುವಾರ ಹೊರಬಿದ್ದಿರುವುದು.
ಇತರ ಸ್ಪರ್ಧಿಗಳಾದ ಸಂಭಾವನಾ ಸೇಠ್‌, ಡಿಂಪಿ ಮತ್ತು ಅಲಿ ಕುಲಿ ಮಿರ್ಜಾ ಅವರ ಹೆಸರುಗಳನ್ನು ಎಲಿಮಿನೇಷನ್‌ಗೆ ಸೂಚಿಸಲಾಗಿತ್ತು. ಆದರೆ, ಇವರ ಪೈಕಿ ರಾಹುಲ್‌ ಹೊರನಡೆದರು.

ಬಿಗ್‌ಬಾಸ್‌ ಎರಡನೇ ಅವತರಣಿಕೆಯಲ್ಲಿ ಸಾಕಷ್ಟು ರಂಜಿಸಿದ್ದ ರಾಹುಲ್‌ ಅದೇ ಉತ್ಸಾಹದಿಂದ ಈಗಲೂ ಪಾಲ್ಗೊಂಡಿದ್ದರು. ಆದರೆ, ಕಾರ್ಯಕ್ರಮದ ಮಧ್ಯದಲ್ಲಿ ಅದೇಕೊ ಕಳೆಗುಂದಿದ್ದರು. ರಾಹುಲ್‌ ಈ ಬಾರಿ ಬಿಗ್‌ಬಾಸ್‌ ಮನೆಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದಾರೆ. ‘ರಾಹುಲ್‌ ಫ್ಲರ್ಟ್‌ ಮಾಡಿದ್ದಾರೆ’ ಎಂದು ಇನ್ನೊಬ್ಬ ಸ್ಪರ್ಧಿ ಕರಿಷ್ಮಾ ತನ್ನಾ ಮಹಾಜನ್‌ ವಿರುದ್ಧ ನೇರ ಆರೋಪ ಮಾಡಿ ಬಾಂಬ್‌ ಸಿಡಿಸಿದ್ದರು.

ರಾಹುಲ್‌ ಅವರ ವಿಚ್ಛೇದಿತ ಪತ್ನಿ ಡಿಂಪಿ ಕೂಡ ಸ್ಪರ್ಧಿಯಾಗಿ ಬಿಗ್‌ಬಾಸ್‌ ಮನೆ ಸೇರಿದ್ದರಿಂದಲೂ ಎಲ್ಲರ ಗಮನ ಅವರ ಮೇಲೆ ನೆಟ್ಟಿತ್ತು. ಪತಿ-– ಪತ್ನಿ ಬೇರೆಯಾಗಿದ್ದರೂ ಕಾರ್ಯಕ್ರಮದಲ್ಲಿ ಮಾತ್ರ ಪರಸ್ಪರ ಅನೋನ್ಯತೆ ಹಾಗೂ ಪ್ರೀತಿಯಿಂದ ಇದ್ದರು.
‘ಬಿಗ್‌ಬಾಸ್‌ ಹಲ್ಲಾ ಬೋಲ್‌’ ಸರಣಿ, ಈ ಹಿಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಐವರು ಸ್ಪರ್ಧಿಗಳು ಹಾಗೂ ಎಂಟನೇ ಆವೃತ್ತಿಯ ಐದು ಜನರ ನಡುವಿನ ಸ್ಪರ್ಧೆಯೊಂದಿಗೆ ಆರಂಭಗೊಂಡಿತ್ತು. ‘ಕಲರ್ಸ್’ ಚಾನೆಲ್‌ನಲ್ಲಿ ಮೂಡಿಬರುತ್ತಿರುವ ಈ ಕಾರ್ಯಕ್ರಮವನ್ನು ಸದ್ಯ ನಿರ್ಮಾಪಕಿ ಫರ್‌್ಹಾ ಖಾನ್‌ ನಡೆಸಿಕೊಡುತ್ತಿದ್ದಾರೆ.

ಕಳೆದ ಗುರುವಾರವಷ್ಟೇ ನಟಿ ಮಹೇಕ್‌ ಚಹಾಲ್‌ ಕೂಡ ಕಾರ್ಯಕ್ರಮದಿಂದ ಹೊರಬಿದ್ದಿದ್ದರು. ಈಗ ಅಂತಿಮ ಘಟ್ಟದಲ್ಲಿ ರಾಹುಲ್‌ ಕೂಡ ಹೊರಬಿದ್ದಿದ್ದಾರೆ. ಯಾರು ವಿಜೇತರಾಗಿ ಹೊರಹೊಮ್ಮಲಿದ್ದಾರೆ ಎನ್ನುವ ಕುತೂಹಲಕ್ಕೆ ಜನವರಿ ೩೧ರಂದು ತೆರೆ ಬೀಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.