ADVERTISEMENT

‘ಸಿಕ್ಸ್‌ಪ್ಯಾಕ್‌ ಮೋಹಿ’

ಪ್ರಜಾವಾಣಿ ವಿಶೇಷ
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಮಾಡೆಲಿಂಗ್‌ ಹಾಗೂ ನಟನಾಸಕ್ತಿ ಬೆಳೆಸಿಕೊಂಡ ಕುಂದಾಪುರದ ಹುಡುಗ ವಿಶಾಲ್‌ ಕುಮಾರ್‌ ತಮ್ಮ ಪಯಣದ ಏಳು ಬೀಳುಗಳ ಬಗ್ಗೆ ಮಾತನಾಡಿದ್ದಾರೆ.

ಕುಂದಾಪುರ ನನ್ನೂರು. ಕಳೆದ ಎರಡು ವರ್ಷಗಳಿಂದ ಮಾಡೆಲಿಂಗ್‌ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದೇನೆ. ಫೋಟೊಶೂಟ್‌, ಮಾಡೆಲಿಂಗ್‌, ಸಿನಿಮಾ, ಧಾರಾವಾಹಿ, ಜಾಹೀರಾತು, ಹಿಪ್‌ಹಾಪ್ ನೃತ್ಯ, ಜಿಮ್‌ ಹೀಗೆ ಸದಾ ಒಂದಿಲ್ಲೊಂದು ಕೆಲಸದಲ್ಲಿ ತೊಡಗಿಕೊಳ್ಳುವ ನನಗೆ ಮುಂದೊಂದು ದಿನ ಸೂಪರ್‌ ಮಾಡೆಲ್‌, ಉತ್ತಮ ನಟ ಎಂದು ಗುರುತಿಸಿಕೊಳ್ಳುವ ಹಂಬಲ.

ಹತ್ತಾರು ವರ್ಷಗಳಿಂದಲೂ ದೇಹಸಿರಿ ತೋರುವ, ನಟನಾ ಕೌಶಲ ಮೆರೆಯುವ  ನಟ ಹಾಗೂ ರೂಪದರ್ಶಿಯರ ಬಗ್ಗೆ ವಿಶೇಷ ಒಲವು ಮೂಡಿತ್ತು. ನನ್ನೂರು ಕುಂದಾಪುರದಲ್ಲಿ ಅಂಥ ಅವಕಾಶಗಳಿಲ್ಲದ ಕಾರಣ ಬೆಂಗಳೂರನ್ನು ಅರಸಿ ಬಂದೆ. ಶಿಕ್ಷಣಕ್ಕಿಂತಲೂ ಕಠಿಣ ಪರಿಶ್ರಮ ಮುಖ್ಯ ಎಂದು ಅಮ್ಮನೊಂದಿಗೆ ವಾದ ಮಾಡಿ ಬಂದಿದ್ದ ನನಗೆ ಬೆಂಗಳೂರು ಸತ್ಯದರ್ಶನ ಮಾಡಿಸಿತ್ತು. ಇಲ್ಲಿ ಬಂದು ಬೆಂಗಳೂರು ವಿವಿಯಲ್ಲಿ ಬಿ.ಕಾಂ. ಮುಗಿಸಿದೆ. ನಂತರ 3.5 ಸಾವಿರ ರೂಪಾಯಿ ಕೆಲಸವನ್ನು ಹೇಗೋ ಗಿಟ್ಟಿಸಿಕೊಂಡೆ. ಪ್ರತಿನಿತ್ಯ ಸವಾಲಿನ ಬದುಕು ಸವೆಸಿದೆ. ನಂತರ ಎಲ್‌ಜಿ, ನೋಕಿಯಾ, ಆ್ಯಪಲ್‌ನಂಥ ಸಂಸ್ಥೆಗಳಲ್ಲಿ ಟೆಕ್ನಿಕಲ್‌ ಟ್ರೇನರ್‌ ಆಗಿ ಕೆಲಸ ಮಾಡಿದೆ. ನಾಲ್ಕೇ ವರ್ಷಗಳಲ್ಲಿ ₨60–70 ಸಾವಿರದಷ್ಟು ಸಂಪಾದನೆ ಮಾಡಲಾರಂಭಿಸಿದೆ.

ಒಂದು ದಿನ ಅದೃಷ್ಟ ಕೈಕೊಟ್ಟಿತು. ಕೆಲಸ ಇಲ್ಲವಾಯಿತು. ಆಗಾಗ ಮನಸ್ಸು ಆಶಿಸುತ್ತಿದ್ದ ಮಾಡೆಲಿಂಗ್‌ ಬದುಕಿಗೆ ಕಾಲಿಡಲು ಇದೇ ಸುಸಮಯ ಎಂದುಕೊಂಡೆ. ಒಂದು ವರ್ಷ ತುಂಬ ಕಷ್ಟದ ದಿನಗಳನ್ನು ಕಂಡೆ. ಮಾಡೆಲಿಂಗ್‌ ಕ್ಷೇತ್ರದಲ್ಲಿ ಯಾರೂ ಪರಿಚಯದವರಿರಲಿಲ್ಲ. ಫಿಟ್‌ನೆಸ್‌ ಕಾಯ್ದುಕೊಳ್ಳಲು ಜಿಮ್‌ ಮೊರೆಹೋಗಲೇಬೇಕಾದ ಅನಿವಾರ್ಯತೆ ಇತ್ತು. ಆದರೆ ಕೆಲಸವಿಲ್ಲದ ನಾನು ಹಣ ಹೊಂದಿಸಿಕೊಳ್ಳಲು ತುಂಬಾ ಹೆಣಗಾಡುತ್ತಿದ್ದೆ. ಅದೂ ಅಲ್ಲದೆ ತಿಂಗಳಿಗೆ ಒಂದೋ ಎರಡು ಫ್ಯಾಷನ್‌ ಷೋನಲ್ಲಿ ಭಾಗವಹಿಸುವ ಅವಕಾಶ ದೊರೆಯುತ್ತಿತ್ತು. ಅಂಥ ಸಮಯದಲ್ಲಿ ನನ್ನ ತಂದೆ–ತಾಯಿ ಬೆನ್ನೆಲುಬಾಗಿ ನಿಂತರು.

ನಿಧಾನವಾಗಿ ರ್‍ಯಾಂಪ್‌ ಏರುವ ಅವಕಾಶ ನನ್ನ ಪಾಲಿಗೆ ದಕ್ಕಿತು. ಫೋಟೊಶೂಟ್‌ಗಳಲ್ಲೆಲ್ಲಾ ಮನ್ನಣೆ ಸಿಗುತ್ತಿತ್ತಾದರೂ ನಿನ್ನದು ಸಿನಿಮಾ ಲುಕ್‌. ಅಲ್ಲೇ ಪ್ರಯತ್ನಿಸು, ಭವಿಷ್ಯ ಚೆನ್ನಾಗಿದೆ ಎನ್ನುತ್ತಿದ್ದರು. ದೊಡ್ಡ ಕೆಲಸ, ದೊಡ್ಡ ಸಂಬಳದ ಕಾರ್ಪೊರೇಟ್‌ ಬದುಕು ನಡೆಸುತ್ತಿದ್ದವನಿಗೆ ಕೆಲಸವೇ ಇಲ್ಲದ ಬದುಕು ತುಂಬಾ ಪೀಡಿಸಿದೆ. ಮಾನಸಿಕವಾಗಿ ತುಂಬ ನೋಯಿಸಿದೆ. ನನ್ನೆಲ್ಲಾ ಸಿಟ್ಟು, ನೋವು, ಖಿನ್ನತೆಯನ್ನು ಜಿಮ್‌ನಲ್ಲಿ ಬೆವರಿಳಿಸುವ ಮೂಲಕ ತಕ್ಕ ಮಟ್ಟಿಗೆ ನಿವಾರಿಸಿಕೊಳ್ಳುತ್ತಿದ್ದೆ.

ಸೋಲು ಎಷ್ಟೇ ಪೀಡಿಸಿದರೂ ಪ್ರಯತ್ನ ಬಿಡಬಾರದು ಎನ್ನುವ ಮನಸ್ಥಿತಿ ನನ್ನದಾಗಿದ್ದರಿಂದ ಅದೇ ಹಾದಿಯಲ್ಲಿ ನಡೆದೆ. ಇದುವರೆಗೆ 50ಕ್ಕೂ ಹೆಚ್ಚು ರ್‍ಯಾಂಪ್‌ ಶೋಗಳನ್ನು ಮಾಡಿದ್ದೇನೆ. ಬೆಂಗಳೂರು ಫ್ಯಾಷನ್‌ ವೀಕ್‌, ಕೊಯಮತ್ತೂರು ಫ್ಯಾಷನ್‌ ವೀಕ್‌ ಸೇರಿದಂತೆ ಅನೇಕ ಪ್ರತಿಷ್ಠಿತ ಫ್ಯಾಷನ್‌ ಷೋಗಳಲ್ಲಿ ಅವಕಾಶ ಗಿಟ್ಟಿಸಿಕೊಂಡೆ.

ಬೆಂಗಳೂರು, ಚೆನ್ನೈ ನಾನಾ ಕಡೆ ರೂಪದರ್ಶಿಯಾಗಿ ಗುರುತಿಸಿಕೊಂಡೆ. ನ್ಯೂಟ್ರಿಸ್ಲಿಮ್‌ ಜಾಹೀರಾತಿನಲ್ಲಿ ಕಾಣಿಸಿಕೊಂಡೆ. ಛಾಯಾಚಿತ್ರ ಕಾರ್ಯಾಗಾರಗಳಲ್ಲಿ ಮಾಡೆಲ್‌ ಆಗುತ್ತೇನೆ. ‘ಶುಭವಿವಾಹ‌’ ಧಾರಾವಾಹಿಯಲ್ಲಿ ಪೊಲೀಸ್‌ ಪಾತ್ರದಲ್ಲಿ ಕಾಣಿಸಿಕೊಂಡೆ. ಸಿನಿಮಾ ಒಂದಕ್ಕೆ ಬಣ್ಣಹಚ್ಚಿದ್ದೇನೆ. ಕೆಲ ನಟನಾ ಅವಕಾಶಗಳು ಬಂದಿವೆ. ಹಿಪ್‌ಹಾಪ್‌ ಶೈಲಿಯ ನೃತ್ಯವನ್ನು ಚೆನ್ನಾಗಿ ಮಾಡಬಲ್ಲೆ. ಸಂಯೋಜಕನಾಗಿಯೂ ಕೆಲಸ ಮಾಡುತ್ತೇನೆ. ಸದ್ಯ ಕಲಾಸಕ್ತಿಯ ಒಂದಿಲ್ಲೊಂದು ಕೆಲಸದಲ್ಲಿ  ಮಗ್ನನಾಗಿದ್ದೇನೆ.

ಈ ವೃತ್ತಿಯಲ್ಲಿ ಶ್ರದ್ಧೆ, ನಿತ್ಯ ವ್ಯಾಯಾಮ ಹಾಗೂ ಡಯೆಟ್‌ ತುಂಬ ಮುಖ್ಯ. ರೂಪದರ್ಶಿ ಎನಿಸಿಕೊಂಡವನು ನೋಡಲು ಚೆನ್ನಾಗಿರುವುದರ ಜೊತೆಗೆ ಫಿಟ್‌ ಆಗಿರಬೇಕು. ಬಟ್ಟೆ ಇರಲಿ ಬಿಡಲಿ ಮಾಡೆಲ್‌ ತುಂಬಾ ಸೆಕ್ಸಿಯಾಗಿ ಕಾಣಬೇಕು ಎಂದು ನಂಬಿದವ ನಾನು. ಹೀಗಾಗಿ ಪ್ರತಿನಿತ್ಯ ಜಿಮ್‌ನಲ್ಲಿ ದೇಹ ದಂಡಿಸುತ್ತೇನೆ. ನನಗೆ ಬೇಕಾಗುವ ಆಹಾರವನ್ನು ನಾನೇ ತಯಾರಿಸಿಕೊಳ್ಳುತ್ತೇನೆ. ಚಿಕನ್‌ ತುಂಬ ಇಷ್ಟ. ನೀರು ದೋಸೆ ಇನ್ನೂ ಇಷ್ಟ.

ರಾಘವೇಂದ್ರ ಸ್ವಾಮಿ ಹಾಗೂ ಬಾಬಾನ ಭಕ್ತ ನಾನು. ಪ್ರತಿನಿತ್ಯ ಪೂಜೆ, ದೇವಸ್ಥಾನಕ್ಕೆ ಭೇಟಿ ನೀಡುವುದನ್ನು ತಪ್ಪಿಸುವುದಿಲ್ಲ. ಮಾಡೆಲ್‌ ಎಲ್ಲ ಬಗೆಯ ದಿರಿಸು ಧರಿಸ ಬೇಕಿದ್ದರೂ ನನಗೆ ಬಣ್ಣಬಣ್ಣದ ಬನಿಯನ್‌, ಡೀಪ್‌ ವಿ ನೆಕ್‌ ಟೀಶರ್ಟ್ಸ್‌, ಟೋನ್ಡ್‌ ಜೀನ್ಸ್‌, ಲೆದರ್‌ ಜಾಕೆಟ್‌ ತುಂಬ ಇಷ್ಟ.

ಫ್ಯಾಷನ್‌ ಕ್ಷೇತ್ರದಲ್ಲಿ ಮಿಂಚಲು ಮಹಿಳೆಯರಿಗೆ ಅವಕಾಶ, ಆಯ್ಕೆ ಎರಡೂ ಹೇರಳವಾಗಿದೆ. ಆದರೆ ಪುರುಷರಿಗೆ ಫಿಟ್‌ನೆಸ್‌, ಗುಡ್‌ಲುಕ್‌ ಬೇಕೇ ಬೇಕು. ಸ್ಪರ್ಧೆ ಕೂಡ ಹೆಚ್ಚಾಗಿರುವುದರಿಂದ ಮೆಂಟರ್‌ ಒಬ್ಬರಿದ್ದರೆ ಈ ಕ್ಷೇತ್ರದಲ್ಲಿ ಗುರುತಿಸಿಕೊಳ್ಳುವುದು ಸುಲಭ.  ಒಳ್ಳೆಯ ಫ್ಯಾಷನ್‌ ಷೋಗಳಿಗೆ ಹೋದರೆ ಆಗಾಗ ಅಗತ್ಯ ಟಿಪ್ಸ್‌ ಸಿಗುತ್ತವೆ.

ನಾನು ಜಾನ್‌ ಅಬ್ರಾಹಂ, ಅರ್ಜುನ್‌ ರಾಮ್‌ಪಾಲ್‌ ಹಾಗೂ ಉಪೇಂದ್ರ ಅವರ ಅಭಿಮಾನಿ. ಫಿಟ್‌ನೆಸ್‌ ಬಗ್ಗೆ ಹೆಚ್ಚು ಪ್ರೀತಿ ಇರುವ ನಾನು, ಫ್ಯಾಷನೆಬಲ್‌ ಆಗಿಯೇ ಇರುತ್ತೇನೆ. ಒಂದೊಮ್ಮೆ ಯಾರಾದರೂ ಹೇಗೆ ಸಾಯಲು ಇಷ್ಟಪಡುತ್ತೀಯಾ ಎಂದರೆ ‘ಸಾಯುವಾಗ ಸಿಕ್ಸ್‌ಪ್ಯಾಕ್‌ ನನಗಿರಬೇಕು’ ಎಂದು ಬಯಸುತ್ತೇನೆ. ಒಟ್ಟಿನಲ್ಲಿ ಅವಮಾನ, ಅನುಮಾನ, ಸನ್ಮಾನದ ದಿಶೆಯಲ್ಲಿ ಹೆಜ್ಜೆ ಹಾಕುತ್ತಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT